ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಜಿಲ್ಲೆಯ ವಿವಿಧೆಡೆ ಭಾರಿ ಮಳೆ, ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು

ಹಲವೆಡೆ ಬೆಳೆ ಹಾನಿ
Last Updated 24 ಅಕ್ಟೋಬರ್ 2021, 3:46 IST
ಅಕ್ಷರ ಗಾತ್ರ

ಕೊಪ್ಪಳ: ಕಳೆದ ಎರಡು ವಾರಗಳಿಂದ ಬಿಡುವು ನೀಡಿದ್ದ ಮಳೆ ಜಿಲ್ಲೆಯ ವಿವಿಧೆಡೆ ಜೋರಾಗಿ ಸುರಿದಿದೆ.

ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಜೋರಾದ ಗುಡುಗು ಮಳೆಗೆ ಗಿಡದ ಆಶ್ರಯದಲ್ಲಿ ತೆರಳುತ್ತಿದ್ದಾಗ ಸಿಡಿಲು ಅಪ್ಪಳಿಸಿ ಸ್ಥಳದಲ್ಲಿಯೇ ಮೃತರಾಗಿದ್ದಾರೆ. ಕುಷ್ಟಗಿ ಸಮೀಪದ ಹೊಲವೊಂದರಲ್ಲಿ ಸಿಡಿಲಿಗೆ ಬಣಿವೆ ಭಸ್ಮವಾಗಿದೆ.

ಕೊಪ್ಪಳ ನಗರ ಮತ್ತು ತಾಲ್ಲೂಕಿನಲ್ಲಿ ಜಿಟಿಜಿಟಿ ಮಳೆಯಾದರೆ, ಕುಷ್ಟಗಿ, ಕುಕನೂರು, ತಾವರಗೇರಾ ಭಾಗದಲ್ಲಿ2 ಗಂಟೆ ಉತ್ತಮ ಮಳೆ ಸುರಿದಿದೆ. ಹಿಂಗಾರು ಜೋಳ ಸೇರಿದಂತೆ ವಿವಿಧ ಬಿತ್ತನೆಯಲ್ಲಿ ತೊಡಗಿದ್ದ ರೈತರು ಮಳೆಯ ನಿರೀಕ್ಷೆಯಲ್ಲಿ ಇದ್ದರು. ಒಣಬೇಸಾಯದ ಪ್ರದೇಶದ ರೈತರ ಜಮೀನುಗಳಿಗೆ ಈ ಮಳೆ ಅತ್ಯಂತ ಅವಶ್ಯವಾಗಿತ್ತು.

ಕುಷ್ಟಗಿಯಲ್ಲಿ ಮಳೆ, ಸಿಡಿಲಿನ ಅಬ್ಬರ
ಕುಷ್ಟಗಿ:
ಪಟ್ಟಣ ಸೇರಿದಂತೆ ತಾಲ್ಲೂಕಿನ ಬಹುತೇಕ ಕಡೆಗಳಲ್ಲಿ ಶನಿವಾರ ಸಂಜೆ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದಿದೆ.

ಗುಡುಗು ಸಿಡಿಲಿನ ಆರ್ಭಟದೊಂದಿಗೆ ಪಟ್ಟಣದಲ್ಲಿ ಸುಮಾರು ಒಂದೂವರೆ ತಾಸಿನವರೆಗೂ ಧಾರಾಕಾರವಾಗಿ ಮಳೆ ಬಂದಿತು. ಸುತ್ತಲಿನ ಅನೇಕ ಹಳ್ಳಿಗಳಲ್ಲಿಯೂ ಸಾಕಷ್ಟು ಮಳೆ ಸುರಿದಿದೆ. ತಗ್ಗು ಪ್ರದೇಶಗಳಲ್ಲಿ ನೀರು ಸಂಗ್ರಹವಾಗಿದ್ದು ಅನೇಕ ಹಳ್ಳಗಳಲ್ಲಿ ನೀರು ಹರಿಯಿತು ಎಂದು ಜನರು ತಿಳಿಸಿದ್ದಾರೆ.

ಪಟ್ಟಣದಲ್ಲಿ ಚರಂಡಿ ಮತ್ತು ರಸ್ತೆಗಳು ಹಳ್ಳದಂತೆ ಕಂಡುಬಂದವು. ರಾಷ್ಟ್ರೀಯ ಹೆದ್ದಾರಿಗೆ ಅಳವಡಿಸಿರುವ ಕೆಳ ಸೇತುವೆಯಲ್ಲಿ ನೀರು ಭರ್ತಿಯಾಗಿ ಎಂದಿನಂತೆ ಜನರು ರಸ್ತೆ ದಾಟಲು ಸಾಧ್ಯವಾಗದೆ ತೊಂದರೆ ಅನುಭವಿಸಿದರು. ನೀರಿನಲ್ಲಿ ಸಂಚರಿಸಲಾಗದೆ ಬೈಕ್‌ ಸವಾರರು ಪರದಾಡುತ್ತಿದ್ದುದು ಕಂಡುಬಂದಿತು.

ಜನರಿಗೆ ತೊಂದರೆಯಾಗಿರುವ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ಸರ್ಕಲ್‌ ಇನ್‌ಸ್ಪೆಕ್ಟರ್ ಎನ್‌.ಆರ್‌.ನಿಂಗಪ್ಪ ತಿಳಿಸಿದರು.

ಕಳೆದ ಒಂದು ವಾರದಿಂದಲೂ ಬೇಸಿಗೆಯ ಮಾದರಿಯಲ್ಲಿ ಬಿಸಿಲಿನ ಪ್ರಕೋಪ ಇತ್ತು. ಆದರೆ ಸಂಜೆ ಮಳೆ ಸುರಿದ ನಂತರ ವಾತಾವರಣ ತಂಪಾಗಿದೆ. ಮುಂಗಾರು ಮತ್ತು ಹಿಂಗಾರು ಹಂಗಾಮಿನ ತೊಗರಿ, ಹುರಳಿ, ಕಡಲೆ, ಜೋಳ ಮತ್ತಿತರೆ ಬೆಳೆಗಳಿಗೆ ಮಳೆಯಿಂದ ಅನುಕೂಲವಾಗಲಿದೆ ಎಂದು ರೈತರು ಹೇಳಿದರು.

ಸಾಧಾರಣ ಮಳೆ ಗಂಗಾವತಿ: ನಗರ ಹಾಗೂ ತಾಲ್ಲೂಕಿನ ಕೆಲ ಗ್ರಾಮದಲ್ಲಿ ಶನಿವಾರ ಸಂಜೆ ವೇಳೆ ಅರ್ಧ ಗಂಟೆಗಳ ಕಾಲ ಸಾಧಾರಣವಾದ ಮಳೆ ಸುರಿಯಿತು.

ಇದರಿಂದ ನಗರ ಪ್ರದೇಶದಲ್ಲಿ ಕೆಲ ಸಮಯ ಸಾರ್ವಜನಿಕರ ಹಾಗೂ ವಾಹನ ಸಂಚಾರಕ್ಕೆ ತೊಂದರೆ ಆಯಿತು.

ಇದೀಗ ತುಂಗಾಭದ್ರ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ಕಟಾವಿಗೆ ಬಂದಿದ್ದು, ಈಗಾಗಲೇ ಕೆಲ ರೈತರು ಭತ್ತವನ್ನು ಕಟಾವು ಮಾಡಿ, ಒಂದಡೆ ಸಂಗ್ರಹಿಸಿದ್ದಾರೆ.

ಕಟಾವು ಮಾಡಿದವರು ಭತ್ತ ಹೇಗೆ ಒಣಗಿಸಬೇಕು ಮಳೆಯಾದರೇ ಎನ್ನುವ ಚಿಂತೆಯಲ್ಲಿದ್ದರೆ, ಇನ್ನೂ ಕಟಾವಿಗೆ ಬಂದ ಜಮೀನಿನ ರೈತರು ಮಳೆಯಿಂದ ಬೆಳೆ ಕೈಗೆ ಸಿಗುತ್ತದೋ, ಇಲ್ಲವೋ ಎನ್ನುವ ಆತಂಕದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT