ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳದ ಹುಲಿಗೆಮ್ಮ ದೇವಿ ದೇವಸ್ಥಾನ: ಮೂಲ ಸೌಕರ್ಯ ಕಲ್ಪಿಸಲು ಬೇಕಿದೆ ವೇಗ

Published : 30 ಸೆಪ್ಟೆಂಬರ್ 2024, 4:39 IST
Last Updated : 30 ಸೆಪ್ಟೆಂಬರ್ 2024, 4:39 IST
ಫಾಲೋ ಮಾಡಿ
Comments

ಕೊಪ್ಪಳ: ಹೆಸರಾಂತ ಧಾರ್ಮಿಕ ಕ್ಷೇತ್ರಗಳಲ್ಲಿ ವರ್ಷಕ್ಕೊಮ್ಮೆಯೋ ಅಥವಾ ವಿಶೇಷ ಸಂದರ್ಭದಲ್ಲಿಯೋ ಲಕ್ಷಾಂತರ ಭಕ್ತರು ಒಂದೆಡೆ ಸೇರುವುದು ಸಹಜ. ಆದರೆ ಕೊಪ್ಪಳ ತಾಲ್ಲೂಕಿನ ಹುಲಿಗಿಯಲ್ಲಿರುವ ಹುಲಿಗೆಮ್ಮ ದೇವಿ ದರ್ಶನಕ್ಕೆ ವಾರಕ್ಕೆ ಎರಡು ಬಾರಿ ಹಾಗೂ ಪ್ರತಿ ಹುಣ್ಣಿಮೆಗೂ ಲಕ್ಷಾಂತರ ಭಕ್ತರು ಬರುವುದು ಸಾಮಾನ್ಯವಾಗಿದೆ.

ಕರ್ನಾಟಕ, ಆಂಧ್ರ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಸಾಕಷ್ಟು ಭಕ್ತರನ್ನು ಹೊಂದಿರುವ ಉತ್ತರ ಕರ್ನಾಟಕದ ಶಕ್ತಿ ದೇವತೆ ಎಂದೇ ಹೆಸರಾದ ಹುಲಿಗಿಗೆ ದೊಡ್ಡಮಟ್ಟದಲ್ಲಿ ಭಕ್ತ ಸಮೂಹವಿದೆ. ಪ್ರತಿ ತಿಂಗಳು ಸರಾಸರಿ ಕನಿಷ್ಠ ₹70 ಲಕ್ಷ ಆದಾಯ ಭಕ್ತರಿಂದಲೇ ಬರುತ್ತಿದ್ದರೂ ಅವರ ಅಗತ್ಯಕ್ಕೆ ತಕ್ಕಷ್ಟು ಸೌಲಭ್ಯಗಳಿಲ್ಲ. ಜಿಲ್ಲಾಕೇಂದ್ರದಿಂದ 20 ಕಿ.ಮೀ. ದೂರದಲ್ಲಿರುವ ಈ ದೇವಸ್ಥಾನಕ್ಕೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಶಕ್ತಿ ಯೋಜನೆ ಜಾರಿ ಬಳಿಕವಂತೂ ಮಹಿಳಾ ಭಕ್ತರ ಸಂಖ್ಯೆ ಮತ್ತಷ್ಟು ಏರಿಕೆಯಾಗಿದೆ.

ಅವರ ಅಗತ್ಯಕ್ಕೆ ತಕ್ಕಷ್ಟು ಕುಡಿಯುವ ನೀರು, ಶೌಚಾಲಯ, ತಂಗಲು ವ್ಯವಸ್ಥೆ, ಅವುಗಳ ನಿರ್ವಹಣೆ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಿಲ್ಲ. ಇದರಿಂದಾಗಿ ಎಲ್ಲೆಂದರಲ್ಲಿ ಊಟ ಮಾಡುವುದು, ದೇವಸ್ಥಾನದ ಮುಖ್ಯ ದ್ವಾರದಿಂದ ಹೋಗುವ ಮಾರ್ಗದಲ್ಲಿಯೇ ಮಲಗುವುದು, ತ್ಯಾಜ್ಯ ಚೆಲ್ಲಲಾಗುತ್ತಿದೆ. ಇದೆಲ್ಲವನ್ನು ನಿಯಂತ್ರಿಸಲು ರಾಜ್ಯ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿರುವ ದೇವಸ್ಥಾನ ಆಡಳಿತ ಮಂಡಳಿ ಹಾಗೂ ಹುಲಿಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಧಿಕಾರಿಗಳು ಪ್ರಯತ್ನಿಸುತ್ತಿದ್ದರೂ ಸಾಕಾಗುತ್ತಿಲ್ಲ.

ದೇವಸ್ಥಾನದ ಜಾಗವನ್ನು ವಿಸ್ತರಣೆ ಮಾಡಬೇಕು, ಹೊಸ ಯೋಜನೆಗಳೊಂದಿಗೆ ನವೀಕರಿಸಬೇಕು ಎನ್ನುವ ಬೇಡಿಕೆ ಹಲವು ವರ್ಷಗಳಿಂದ ಇದೆ. ಇದಕ್ಕಾಗಿ ಅನೇಕ ಬಾರಿ ನೀಲನಕ್ಷೆಗಳನ್ನು ರೂಪಿಸಿ ಪದೇ ಪದೇ ಬದಲಿಸಲಾಗಿದೆ. ಆದರೆ ಅನುಷ್ಠಾನಕ್ಕೆ ಮಾತ್ರ ಬಂದಿಲ್ಲ. ಮುಖ್ಯವಾಗಿ ಸಾರ್ವಜನಿಕರಿಗೆ ಯಥೇಚ್ಛವಾಗಿ ಸಿಗುವಂತೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕಿದೆ. ದೇವಸ್ಥಾನದ ಹಿಂಭಾಗದಲ್ಲಿರುವ ಸ್ನಾನಘಟ್ಟದ ಸ್ವಚ್ಛತೆ, ಹೆಣ್ಣುಮಕ್ಕಳು ಬಟ್ಟೆ ಬದಲಿಸಲು ನೂರಾರು ಸಂಖ್ಯೆಯಲ್ಲಿ ಸಣ್ಣ ಸಣ್ಣ ಕೊಠಡಿಗಳನ್ನು ನಿರ್ಮಿಸುವ ಅಗತ್ಯವಿದೆ.

ಈ ಸೌಲಭ್ಯಗಳಿಲ್ಲದ ಕಾರಣಕ್ಕೆ ಮಹಿಳಾ ಭಕ್ತರು ಗುಡ್ಡದ ಕಲ್ಲಿನ ಸಂದಿಯಲ್ಲಿ ಮರೆಯಾಗಿ ಬಟ್ಟೆ ಬದಲಿಸಬೇಕಾಗಿದೆ. ಬೀಸಾಡಿದ ಬಟ್ಟೆಗಳನ್ನು ಒಂದೇ ಕಡೆ ಹಾಕಲು, ದೇವಸ್ಥಾನದಲ್ಲಿ ಪೂಜೆಗಾಗಿ ತರುವ ಹೂ, ಊದಿನಕಡ್ಡಿ, ಕಾಯಿ ಸುಲಿದ ಸಿಪ್ಪೆ ಹೀಗೆ ಹಲವು ರೀತಿಯ ತ್ಯಾಜ್ಯಗಳನ್ನು ಒಂದಡೆ ಹಾಕಲು ಸೌಲಭ್ಯ ಕಲ್ಪಿಸುವ ಅಗತ್ಯವಿದೆ. ಈ ತ್ಯಾಜ್ಯವನ್ನು ಮರುಬಳಕೆ ಮಾಡುವ ಕೆಲಸವನ್ನು ಹುಲಿಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾಡಲಾಗುತ್ತಿದ್ದು, ತ್ಯಾಜ್ಯ ವೈಜ್ಞಾನಿಕ ಸಂಗ್ರಹ ಹಾಗೂ ವಿಲೇವಾರಿ ಸಾಧ್ಯವಾದರೆ ಸ್ಥಳೀಯ ಸಂಸ್ಥೆಗಳಿಗೂ ಅದಾಯ ಲಭಿಸುತ್ತದೆ.

ಕೊಪ್ಪಳ ತಾಲ್ಲೂಕಿನ ಹುಲಗಿ ಗ್ರಾಮದ ಹುಲಿಗೆಮ್ಮ ದೇವಸ್ಥಾನದಲ್ಲಿ ಹುಣ್ಣಿಮೆ ದಿನದಂದು ಸೇರುವ ಜನ
ಕೊಪ್ಪಳ ತಾಲ್ಲೂಕಿನ ಹುಲಗಿ ಗ್ರಾಮದ ಹುಲಿಗೆಮ್ಮ ದೇವಸ್ಥಾನದಲ್ಲಿ ಹುಣ್ಣಿಮೆ ದಿನದಂದು ಸೇರುವ ಜನ
  • ₹68 ಕೋಟಿ ದೇವಸ್ಥಾನದ ಖಾತೆಯಲ್ಲಿರುವ ಪ್ರಸ್ತುತ ಹಣ

  • ₹70 ಲಕ್ಷ ಮಾಸಿಕ ದೇವಸ್ಥಾನಕ್ಕೆ ಬರುವ ಸರಾಸರಿ ಆದಾಯ

ಪ್ರಾಧಿಕಾರ ಘೋಷಣೆಯಾದ ಬಳಿಕ ಮೊದಲ ಸಭೆ ಇಂದು ಹುಲಿಗಿ ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಾಧಿಕಾರ ರಚಿಸಬೇಕು ಎಂದು ಭಕ್ತರು ಹಲವು ವರ್ಷಗಳಿಂದ ಆಗ್ರಹಿಸುತ್ತಲೇ ಬಂದಿದ್ದರೂ ಹಲವು ತಿಂಗಳುಗಳ ಹಿಂದೆಯಷ್ಟೇ ಈ ಬೇಡಿಕೆ ಈಡೇರಿದೆ. ಪ್ರಾಧಿಕಾರ ಘೋಷಣೆಯಾದ ಬಳಿಕ ಮೊದಲ ಸಭೆ ಸೋಮವಾರ ಕೊಪ್ಪಳದ ಜಿಲ್ಲಾಡಳಿತ ಭವನದಲ್ಲಿ ಆಯೋಜನೆಯಾಗಿದ್ದು ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಸಭೆ ಜರುಗಲಿದೆ. ಅವರು 2023ರ ಡಿಸೆಂಬರ್‌ನಲ್ಲಿ ಹುಲಿಗಿಗೆ ಭೇಟಿ ನೀಡಿದ್ದ ಕೆಲ ದಿನಗಳಲ್ಲಿಯೇ ಪ್ರಾಧಿಕಾರ ಘೋಷಣೆಯಾಗಿತ್ತು. ಈ ಸಭೆಯಿಂದಾಗಿ ಹುಲಿಗಿ ಕ್ಷೇತ್ರದ ಚಹರೆ ಬದಲಾಗಿ ಅಭಿವೃದ್ಧಿಯಾಗಬಹುದು ಎನ್ನುವ ನಿರೀಕ್ಷೆ ಜನರದ್ದು.

ಸಿಗುವುದೇ ಮಹಾನಕ್ಷೆಗೆ ಅನುಮೋದನೆ?

ಹುಲಿಗಿಯ ಅಭಿವೃದ್ಧಿಗೆ ಹಲವು ವರ್ಷಗಳ ಹಿಂದೆಯೇ ಮಹಾನಕ್ಷೆ ರೂಪಿಸಲಾಗಿದ್ದು ಈ ಕುರಿತು ಸಚಿವರ ಅಧ್ಯಕ್ಷತೆಯಲ್ಲಿ ಚರ್ಚೆ ನಡೆಯಲಿದೆ. ಇದು ಅನುಷ್ಠಾನಕ್ಕೆ ಬರುತ್ತದೆಯೇ ಎನ್ನುವುದು ಚರ್ಚೆಗೆ ಕಾರಣವಾಗಿದೆ. ‘ಮಹಾನಕ್ಷೆಗೆ ಅನುಮೋದನೆ ಪಡೆಯುವುದು ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸುವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ. ಭಕ್ತರಿಗೆ ಅನುಕೂಲ ಕಲ್ಪಿಸಲು ಆದ್ಯತೆ ನೀಡಲಾಗುತ್ತದೆ’ ಎಂದು ಹುಲಿಗಿ ದೇವಸ್ಥಾನದ ಇಒ ಪ್ರಕಾಶ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT