ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಗಿರಿ ತಾಲೂಕಿನ ಹುಲಿಹೈದರ ಘರ್ಷಣೆ: ಮತ್ತೆ 12 ಜನ ಆರೋಪಿಗಳ ಬಂಧನ

Last Updated 13 ಆಗಸ್ಟ್ 2022, 9:46 IST
ಅಕ್ಷರ ಗಾತ್ರ

ಕೊಪ್ಪಳ: ಕನಕಗಿರಿ ತಾಲ್ಲೂಕಿನ ಹುಲಿಹೈದರ ಗ್ರಾಮದಲ್ಲಿ ಎರಡು ದಿನಗಳ ಹಿಂದೆ ನಡೆದ ಗುಂಪು ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ 12 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಹೀಗಾಗಿ ಬಂಧಿತರ ಒಟ್ಟು ಸಂಖ್ಯೆ 22ಕ್ಕೆ ಏರಿಕೆಯಾಗಿದೆ.

ಘರ್ಷಣೆಯಲ್ಲಿ ಹುಲಿಹೈದರ ಗ್ರಾಮದ ಪಾಷವಲಿ ಮಾಳಿಗದ್ದಿ ಹಾಗೂ ಯಂಕಪ್ಪ ತಳವಾರ ಎಂಬುವರು ಮೃತಪಟ್ಟಿದ್ದರು. ಗಂಭೀರವಾಗಿ ಗಾಯಗೊಂಡಿರುವ ಧರ್ಮಣ್ಣ ನಾಗೇಂದ್ರಪ್ಪಗೆ ಹುಬ್ಬಳ್ಳಿಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.

ಮೊಹರಂ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಅಲ್ಲಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಅದರಲ್ಲಿ ಘಟನೆಯ ಬಹಳಷ್ಟು ದೃಶ್ಯಾವಳಿಗಳು ದಾಖಲಾಗಿವೆ. ಅವುಗಳ ಆಧಾರದ ಮೇಲೆ ಪೊಲೀಸರು ಆರೋಪಿಗಳನ್ನು ಬಂಧಿಸುತ್ತಿದ್ದಾರೆ. ಬಂಧನದ ಭೀತಿಯಿಂದ ಊರು ತೊರೆದಿರುವ ಹಲವರ ಪತ್ತೆಗಾಗಿ ಪೊಲೀಸರು ಅಕ್ಕಪಕ್ಕದ ಜಿಲ್ಲೆಗಳು ಹಾಗೂ ನೆರೆ ರಾಜ್ಯಗಳಲ್ಲಿ ಹುಡುಕಾಟ ನಡೆಸಿದ್ದಾರೆ.

ಹುಲಿಹೈದರ ಗ್ರಾಮದಲ್ಲಿ ಶನಿವಾರ ಮಾಧ್ಯಮಗಳ ಜೊತೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ‘ಪಾಶಾವಲಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ 12 ಮತ್ತು ಯಂಕಪ್ಪ ಕೊಲೆಗೆ ಸಂಬಂಧಿಸಿ 10 ಜನರನ್ನು ಬಂಧಿಸಲಾಗಿದೆ. ವಿಚಾರಣೆಗಾಗಿ ಇನ್ನಷ್ಟು ಜನರನ್ನು ವಶಕ್ಕೆ ಪಡೆಯಲಾಗುವುದು’ ಎಂದು ತಿಳಿಸಿದರು.

ಭಯಬೇಡ: ಪೊಲೀಸರು ಬಂಧಿಸುತ್ತಾರೆ ಎನ್ನುವ ಕಾರಣಕ್ಕೆ ಅನೇಕರು ಊರು ತೊರೆದು ಹೋಗಿದ್ದಾರೆ. ಘಟನೆಯಲ್ಲಿ ಭಾಗಿಯಾಗದೇ ಇರುವವರನ್ನು ಬಂಧಿಸುವುದಿಲ್ಲ. ವಿನಾಕಾರಣ ಆತಂಕ ಬೇಡ. ಸಂಶಯಾಸ್ಪದ ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ ಅಷ್ಟೇ. ಶುಕ್ರವಾರ ವಶಕ್ಕೆ ಪಡೆದಿದ್ದ 15 ಜನರಲ್ಲಿ ಕೆಲವರು ವಾಪಸ್‌ ಕಳುಹಿಸಲಾಗಿದೆ ಎಂದು ಹೇಳಿದರು.

ಘಟನೆ ಕುರಿತು ಎರಡು ಪ್ರಕರಣಗಳು ದಾಖಲಾಗಿದ್ದು ಒಟ್ಟು 58 ಜನ ಆರೋಪಿಗಳು ಹೆಸರು ಇದೆ. ಆಗಸ್ಟ್‌ 20ರ ವರೆಗೆ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT