ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಷ್ಟಗಿ: ಸರ್ಕಾರಿ ಜಾಗದಲ್ಲಿ ಅಕ್ರಮ ಗಣಿಗಾರಿಕೆ

Published 19 ಜನವರಿ 2024, 5:12 IST
Last Updated 19 ಜನವರಿ 2024, 5:12 IST
ಅಕ್ಷರ ಗಾತ್ರ

ಕುಷ್ಟಗಿ: ವಸತಿ ವಿನ್ಯಾಸದ (ಹೊಸ ಬಡಾವಣೆ) ಉದ್ದೇಶಕ್ಕೆ ಭೂ ಪರಿವರ್ತನೆಗೊಂಡಿರುವ ಮತ್ತು ರಾಜ್ಯಪಾಲರ ಹೆಸರಿನಲ್ಲಿ ನೋಂದಣಿಯಾಗಿರುವ ಸರ್ಕಾರಿ ಜಾಗದಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ನಡೆಸಿರುವುದು ಕಂಡುಬಂದಿದೆ.

ಪಟ್ಟಣದ ವ್ಯಾಪ್ತಿಯ, ಶಾಖಾಪುರ ರಸ್ತೆ ಬಳಿ ಇರುವ ಸರ್ವೆ ಸಂಖ್ಯೆ 184/1/2/3/4 ಕೃಷಿ ಜಮೀನನ್ನು ದ್ಯಾಮಣ್ಣ ಕಟ್ಟಿಹೊಲ ಎಂಬುವವರಿಗೆ ಸೇರಿದ ವಸತಿ ವಿನ್ಯಾಸದಲ್ಲಿ ಉದ್ಯಾನ (5142 ಚ.ಮೀ) ಮತ್ತು ಸಾರ್ವಜನಿಕ ಬಳಕೆ (2573 ಚ.ಮೀ ಸಿಎ ಸೈಟ್) ಗೆಂದು ಮೀಸಲಿಟ್ಟಿರುವ ಒಟ್ಟು ಪ್ರದೇಶ ರಾಜ್ಯಪಾಲರ ಹೆಸರಿನಲ್ಲಿ ನೋಂದಣಿಯಾಗಿದ್ದು ಸದ್ಯ ಇದು ಪುರಸಭೆಯ ಸೊತ್ತು ಆಗಿದೆ.

ಹಾಗಿದ್ದರೂ ವಸತಿ ವಿನ್ಯಾಸದ ಮಾಲೀಕರು ಸರ್ಕಾರಕ್ಕೆ ಸೇರಿದ ಆ ಪ್ರದೇಶದಲ್ಲಿಯೇ ಅಕ್ರಮವಾಗಿ ಗರಸು ಮಣ್ಣು ಗಣಿಗಾರಿಕೆ ನಡೆಸಿದ್ದು ಈಗಾಗಲೇ ಅಂದಾಜು ಅರ್ಧ ಎಕರೆ ಪ್ರದೇಶದಲ್ಲಿ ಸುಮಾರು 20–30 ಅಡಿ ಆಳದ ಬೃಹತ್‌ ಗುಂಡಿ ತೋಡಿ ಮಣ್ಣು ಬಗೆದಿದ್ದಾರೆ. ಅಲ್ಲದೇ ಸರ್ಕಾರಿ ಜಾಗದಲ್ಲಿ ತೆಗೆದ ಆ ಗರಸು ಮಣ್ಣನ್ನು ಅಕ್ರಮವಾಗಿ ರೈಲ್ವೆ ಕಾಮಗಾರಿಯ ಗುತ್ತಿಗೆದಾರರಿಗೆ ಮಾರಾಟ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಕುರಿತು ವಿವರಿಸಿದ ವಸತಿ ವಿನ್ಯಾಸದ ಮಾಲೀಕ ದ್ಯಾಮಣ್ಣ ಕಟ್ಟಿಹೊಲ, ನೆಲದ ತಳ ಎಷ್ಟು ಗಟ್ಟಿಯಾಗಿದೆ ಎಂಬುದನ್ನು ಪರೀಕ್ಷಿಸಲು ಉದ್ಯಾನದ ಜಾಗದಲ್ಲಿ ಗುಂಡಿ ತೋಡಿದ್ದು ನಿಜ. ಆದರೆ ದುರುದ್ದೇಶವಿಲ್ಲ. ಅಲ್ಲದೇ ಗರಸು ಮಣ್ಣನ್ನು ರೈಲ್ವೆ ಗುತ್ತಿಗೆದಾರರಿಗೆ ಮಾರಾಟ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ಸರ್ಕಾರದ ಜಾಗದಲ್ಲಿ ಗುಂಡಿ ತೋಡಿದ್ದು ಏಕೆ? ಎಂಬುದಕ್ಕೆ ಅವರು ಸಮಂಜಸ ಉತ್ತರ ನೀಡಲಿಲ್ಲ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಧರಣೇಂದ್ರಕುಮಾರ್, ‘ಉದ್ಯಾನ ಮತ್ತು ಸಿಎ ಸೈಟ್‌ದಲ್ಲಿ ಗುಂಡಿ ತೋಡಿ ಮಣ್ಣು ಬಗೆದಿದ್ದರೆ ಅದು ಅಕ್ರಮ. ಈ ಬಗ್ಗೆ ಸ್ಥಳ ಪರಿಶೀಲಿಸಿ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ನಗರ ಯೋಜನಾ ಪ್ರಾಧಿಕಾರ ಉದ್ಯಾನ ಮತ್ತು ಸಾರ್ವಜನಿಕ ಬಳಕೆ ಜಾಗ ಗುರುತಿಸಿರುವುದು
ನಗರ ಯೋಜನಾ ಪ್ರಾಧಿಕಾರ ಉದ್ಯಾನ ಮತ್ತು ಸಾರ್ವಜನಿಕ ಬಳಕೆ ಜಾಗ ಗುರುತಿಸಿರುವುದು
ಉದ್ಯಾನದ ಜಾಗದಲ್ಲಿ ಅಕ್ರಮವಾಗಿ ಗುಂಡಿ ತೋಡಿದ್ದು ಗಮನಕ್ಕೆ ಬಂದಿಲ್ಲ. ಸ್ಥಳ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
- ಕ್ಯಾ.ಮಹೇಶ ಮಾಲಗಿತ್ತಿ ಉಪ ವಿಭಾಗಾಧಿಕಾರಿ ಪುರಸಭೆ ಆಡಳಿತಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT