ಮಂಗಳವಾರ, ಸೆಪ್ಟೆಂಬರ್ 21, 2021
29 °C
ಕೊಪ್ಪಳ ಜಿಲ್ಲೆಗೆ ಸ್ವತಂತ್ರ ವಿಶ್ವವಿದ್ಯಾಲಯ ರಚನೆಗೆ ತಜ್ಞರ ಸಮಿತಿ ಭೇಟಿ, ಚರ್ಚೆ

ಕೊಪ್ಪಳ: ‘ಸಾಧಕ– ಬಾಧಕ ಪರಿಶೀಲಿಸಿ ವರದಿ ಸಲ್ಲಿಕೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: 'ಜಿಲ್ಲೆಯಲ್ಲಿ ಹೊಸದಾಗಿ ವಿಶ್ವ ವಿದ್ಯಾಲಯ ಸ್ಥಾಪಿಸಲು ಉದ್ದೇಶಿಸಿದ್ದು, ಸಾಧಕ-ಬಾಧಕ ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು' ಎಂದು ಬಳ್ಳಾರಿ ವಿಜಯನಗರ ವಿವಿ ಕುಲಪತಿ ಹಾಗೂ ತಜ್ಞರ ಸಮಿತಿ ಅಧ್ಯಕ್ಷ ಪ್ರೊ.ಸಿದ್ದು.ಪಿ.ಅಲಗೂರ ಹೇಳಿದರು.

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿಶ್ವವಿದ್ಯಾನಿಲಯ ಸ್ಥಾಪನೆ ಕುರಿತ ಅಧ್ಯಯನಕ್ಕಾಗಿ ರಚಿಸಿದ ತಜ್ಞರ ಸಮಿತಿ, ಜಿಲ್ಲೆಯ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಆಯೋಜಿಸಿದ್ದ ಅವರು ಸಭೆಯಲ್ಲಿ ಮಾತನಾಡಿದರು.

ಜಿಲ್ಲೆಯು ಕಲ್ಯಾಣ ಕರ್ನಾಟಕ ವ್ಯಾಪ್ತಿಗೆ ಒಳಪಟ್ಟಿದ್ದು, ಇಲ್ಲಿನ ವಿದ್ಯಾರ್ಥಿ ಗಳಿಗೆ ಹಾಗೂ ಈ ಭಾಗದ ಅಭಿವೃದ್ಧಿಯ ಹಿತದೃಷ್ಠಿಯಿಂದ ಜಿಲ್ಲೆಯಲ್ಲಿ ಹೊಸ ವಿವಿ ಸ್ಥಾಪಿಸಲು ಉದ್ದೇಶಿಸಿದೆ. ಈ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಶೈಕ್ಷಣಿಕ ಮಹತ್ವವನ್ನು ನೀಡುವ ಸದುದ್ದೇಶದಿಂದ ಸರ್ಕಾರ ತಜ್ಞರ ಸಮಿತಿ ರಚಿಸಿದೆ. ಜಿಲ್ಲೆಯ ವಿವಿಧ ಕಾಲೇಜಿನ ಪ್ರಾಚಾರ್ಯರು, ಶಿಕ್ಷಣ ತಜ್ಞರು, ಅಧಿಕಾರಿಗಳು, ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ, ಅಗತ್ಯವಿರುವ ಮೂಲಸೌಕರ್ಯ ಅಧ್ಯಯನ ಮಾಡಿ ವರದಿ ಸಲ್ಲಿಸಲಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಜಾರಿ ಮಾಡಿರುವ ರಾಷ್ಟ್ರೀಯ ಶಿಕ್ಷಣ ನೀತಿ-2020 ಅನ್ನು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸಲು ಉನ್ನತ ಶಿಕ್ಷಣ ಇಲಾಖೆ ಮಹತ್ವದ ಯೋಜನೆ ಹಮ್ಮಿಕೊಂಡಿದೆ. ಅದರನ್ವಯ ಜಿಲ್ಲೆಯಲ್ಲಿ ಹೊಸ ವಿವಿ ಸ್ಥಾಪನೆಗೆ ನಿಗದಿತ ಅಂಶ ಅಧ್ಯಯನ ಮಾಡಬೇಕಾಗಿದೆ ಎಂದರು.

ಯಲಬುರ್ಗಾ ಶಾಸಕರಾದ ಹಾಲಪ್ಪ ಆಚಾರ್ ಮಾತನಾಡಿ, 2016 ರಲ್ಲಿ ಜಿಲ್ಲೆಯಲ್ಲಿ ಬಳ್ಳಾರಿ ವಿವಿ ಕೊಪ್ಪಳ, ಗಂಗಾವತಿ, ಯಲಬುರ್ಗಾ ತಾಲ್ಲೂಕುಗಳಲ್ಲಿರುವ ಈ ಕೇಂದ್ರಗಳಲ್ಲಿ ಸುಮಾರು 1300 ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಇದು ನಮ್ಮ ಜಿಲ್ಲೆಯಲ್ಲಿ ಉನ್ನತ ಶಿಕ್ಷಣ ಮಾಡಲು ಬಯಸುವ ವಿದ್ಯಾರ್ಥಿಗಳ ಸಂಖ್ಯೆ ಮತ್ತು ಆಸಕ್ತಿ ತೋರಿಸುತ್ತದೆ ಎಂದರು.

ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಮಾತನಾಡಿ, ವಿವಿ ಸ್ಥಾಪನೆಯಿಂದ ಜಿಲ್ಲೆಯಲ್ಲಿರುವ ಕೈಗಾರಿಕೆಗಳಲ್ಲಿ ಉನ್ನತ ತಾಂತ್ರಿಕ ಹುದ್ದೆಗಳಿಗೆ ಸ್ಥಳೀಯ ವಿದ್ಯಾರ್ಥಿಗಳೇ ಆಯ್ಕೆಯಾಗಬಹುದು. ಆದ್ದರಿಂದ ಎಲ್ಲ ರೀತಿಯ ಅಭಿವೃದ್ಧಿಗೆ ಪೂರಕವಾದ ವಿಷಯ ಹೊಂದಿರುವ ವಿವಿ ಜಿಲ್ಲೆಯಲ್ಲಿ ಸ್ಥಾಪನೆಯಾಗಬೇಕು ಎಂದು ಹೇಳಿದರು.

ಸಮಿತಿ ಸದಸ್ಯರಾದ ವಿಜಯಪುರದ ಅಕ್ಕಮಹಾದೇವಿ ವಿವಿ ವಿಶ್ರಾಂತ ಕುಲಪತಿ ಡಾ.ಮೀನಾ ಚಂದಾವರ್‌ಕರ್, ಧಾರವಾಡದ ವಿವಿ ಕುಲಪತಿ ಪ್ರೊ.ಕೆ.ಬಿ.ಗುಡಸಿ, ರಾಜ್ಯ ಉನ್ನತ ಶಿಕ್ಷಣ ಪರಿಷತ್‌ನ ಕಾರ್ಯನಿರ್ವಾಹಕ ನಿರ್ದೇಶಕ ಇದ್ದರು.

ಡಿಡಿಪಿಯು ದೇವೇಂದ್ರಪ್ಪ ಗಡೇದ, ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಪ್ರಶಾಂತ ಬಾರಿಗಿಡದ, ಶ್ರೀಕೃಷ್ಣ ದೇವರಾಯ ವಿವಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ.ಬಸವರಾಜ ಬೆಣ್ಣಿ, ಅಭಯ್ ಸಾಲ್ವೆಂಟ್ ಪ್ರೈ.ಲಿ.ನ ನಿರ್ದೇಶಕ ಮಹಾವೀರ್ ಮೆಹ್ತಾ ಅಭಿಪ್ರಾಯ ತಿಳಿಸಿದರು.

ಸಭೆಯಲ್ಲಿ  ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ತಳಕಲ್ ಎಂಜಿನಿಯರಿಂಗ್ ಕಾಲೇಜಿನ ಬಸವರಾಜ ಡಂಬಳ, ಪೂಜಾರ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಗಂಗಾಧರ ದೊಡ್ಡಮನಿ, ಲೋಕೋಪಯೋಗಿ ಇಲಾಖೆ ಎಇಇ ತಿರುಮಲರಾವ ಕುಲಕರ್ಣಿ, ಕೌಶಲ ಅಭಿವೃದ್ಧಿ ಅಧಿಕಾರಿ ಪ್ರಾಣೇಶ ಹಾಗೂ ಇತರರು ಇದ್ದರು.

***

ಜಿಲ್ಲೆಯಲ್ಲಿ ಹೆಚ್ಚಿನ ಸಾಮರ್ಥ್ಯವಿರುವ ಮಾನವ ಸಂಪನ್ಮೂಲ, ಅಭಿವೃದ್ಧಿಗೆ ಪೂರಕವಾಗಿರುವ ಭೌಗೋಳಿಕ, ಸಾಮಾಜಿಕ ಅಂಶಗಳು ಹೆಚ್ಚಾಗಿದ್ದು, ಅದನ್ನು ಸೂಕ್ತ ಮಾರ್ಗದಲ್ಲಿ ಬಳಸಿಕೊಳ್ಳುವುದು ಮುಖ್ಯ.

- ವಿಕಾಸ್‌ ಕಿಶೋರ್‌ ಸುರಳ್ಕರ್‌, ಜಿಲ್ಲಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.