ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ | 'ಭ್ರೂಣ ಹತ್ಯೆ ತಡೆಗೆ ಆದ್ಯತೆ ನೀಡಲು ಸೂಚನೆ'

Published 29 ಜೂನ್ 2024, 16:19 IST
Last Updated 29 ಜೂನ್ 2024, 16:19 IST
ಅಕ್ಷರ ಗಾತ್ರ

ಕೊಪ್ಪಳ: ‘ಜಿಲ್ಲೆಯಲ್ಲಿ ಭ್ರೂಣ ಹತ್ಯೆ ಮತ್ತು ಲಿಂಗ ಅಸಮಾನತೆ ತಡೆಯುವುದು ಪಿ.ಸಿ. ಮತ್ತು ಪಿ.ಎನ್.ಡಿ.ಟಿ ಕಾಯ್ದೆಯ ಮೂಲ ಉದ್ದೇಶವಾಗಿದ್ದು, ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ನಮ್ಮೆಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕು’ ಎಂದು ಡಿಎಚ್‌ಒ ಡಾ.ಲಿಂಗರಾಜು ಟಿ. ಹೇಳಿದರು.

ಶುಕ್ರವಾರ ಡಿಎಚ್‌ಒ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ‘ಮೊದಲ ಮಗು ಹೆಣ್ಣಾದಲ್ಲಿ ಎರಡನೇ ಮಗು ಗಂಡಾಗಬೇಕೆಂದು ಬಹಳಷ್ಟು ಪೋಷಕರು, ಕುಟುಂಬದವರು ಬಯಸುತ್ತಾರೆ. ಇದರ ಬಗ್ಗೆ ಮುಂಚಿತವಾಗಿ ತಿಳಿಯಲು ಗರ್ಭಿಣಿ ಸ್ಕ್ಯಾನಿಂಗ್ ಸಮಯದಲ್ಲಿ ರೇಡಿಯೋಲಾಜಿಸ್ಟ್‌ಗಳಿಗೆ ಮನವಿ ಮಾಡಬಹುದು. ಕೆಲ ಸ್ಕ್ಯಾನಿಂಗ್‌ ಕೇಂದ್ರಗಳಲ್ಲಿ ಪ್ರಸವ ಪೂರ್ವ ಲಿಂಗಪತ್ತೆ ಕಾರ್ಯ ನಡೆಯುತ್ತಿರಬಹುದು. ಇದನ್ನು ಪತ್ತೆಹಚ್ಚಲು ಸಕ್ರಿಯರಾಗಬೇಕು’ ಎಂದರು.

‘ಜಿಲ್ಲಾ ಮಟ್ಟದ ಸಲಹಾ ಸಮಿತಿಯ ಸದಸ್ಯರು ತಂಡವಾಗಿ ಅಥವಾ ವೈಯಕ್ತಿಕವಾಗಿ ಗೌಪ್ಯ ಕಾರ್ಯಾಚರಣೆ ನಡೆಸಿ ನೈಜತೆ ಪರೀಕ್ಷೆ ಮಾಡಬಹುದು. ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಹಾಗೂ ಭ್ರೂಣ ಹತ್ಯೆ ಕಾನೂನು ಬಾಹಿರ ಗಂಭೀರ ಅಪರಾಧವಾಗಿದೆ. ಈ ಬಗ್ಗೆ ಎಲ್ಲ ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ಭಿತ್ತಿಪತ್ರದ ಮೂಲಕ ಜಾಗೃತಿ ಮೂಡಿಸಲಾಗಿದೆ. ಆದಾಗ್ಯೂ ಅಲ್ಲಲ್ಲಿ ಕಾಯ್ದೆ ವಿರುದ್ಧವಾದ ಆರೋಪಗಳು ಕೇಳಿ ಬರುತ್ತವೆ. ಇದಕ್ಕಾಗಿ ಕೇವಲ ಸಮಿತಿ ಸದಸ್ಯರಷ್ಟೇ ಅಲ್ಲದೆ ಸಾರ್ವಜನಿಕರು ಗೌಪ್ಯ ಕಾರ್ಯಾಚರಣೆ ಮೂಲಕ ಸಾಕ್ಷಿ ಸಮೇತ ಪ್ರಕರಣವನ್ನು ಪತ್ತೆ ಹಚ್ಚಬಹುದು’ ಎಂದರು. 

ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರವೀಂದ್ರನಾಥ ಎಂ.ಎಚ್ ಮಾತನಾಡಿ ‘ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಸ್ಕ್ಯಾನಿಂಗ್‌ ಕೇಂದ್ರಗಳಲ್ಲಿ ಅಗತ್ಯ ದಾಖಲಾತಿಗಳ ನಿರ್ವಹಣೆ ಕಡ್ಡಾಯ. ನೋಂದಣಿ ಅವಧಿ ಪೂರ್ಣಗೊಳ್ಳುವುದಕ್ಕಿಂತ ಮೂರು ತಿಂಗಳ ಮುಂಚೆ ಅರ್ಜಿ ಸಲ್ಲಿಸಿ ನವೀಕರಣ ಮಾಡಿಕೊಳ್ಳಬೇಕು’ ಎಂದು ಸೂಚಿಸಿದರು.

ಜಿಲ್ಲೆಯ ವಿವಿಧ ಸರ್ಕಾರಿ ಹಾಗೂ ಖಾಸಗಿ ಆರೋಗ್ಯ ಸಂಸ್ಥೆಗಳ ನೋಂದಣಿ, ನವೀಕರಣ ಹಾಗೂ ಹೊಸ ಅರ್ಜಿಗಳಿಗೆ ಅನುಮತಿ ಕುರಿತಂತೆ ಚರ್ಚಿಸಲಾಯಿತು. ಸಭೆಯಲ್ಲಿ ಸಮಿತಿಯ ಸದಸ್ಯರಾದ ಡಾ.ಈಶ್ವರ ಸವಡಿ, ಡಾ.ಶಶಿಕಾಂತ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ.ಶ್ರೀನಿವಾಸ ಹ್ಯಾಟಿ, ಜಿಲ್ಲಾ ಯೂನಿಸೆಫ್ ಸಂಯೋಜಕ ಹರೀಶ್ ಜೋಗಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಪಿ.ಸಿ. ಮತ್ತು ಪಿ.ಎನ್.ಡಿ.ಟಿ ಕಾಯ್ದೆ ಅನುಷ್ಠಾ ಪರಿಣಾಮಕಾರಿಯಾಗಿ ಇರಬೇಕು. ಇದಕ್ಕಾಗಿ ಎಲ್ಲ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು.

-ಡಾ. ಲಿಂಗರಾಜು ಟಿ. ಡಿಎಚ್‌ಒ ಕೊಪ್ಪಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT