ಸೋಮನಾಳ (ಕಾರಟಗಿ): ಯಾದಗಿರಿಯಲ್ಲಿ ಶಂಕಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಪಿಎಸ್‌ಐ ಪರಶುರಾಮ್ ಓದಿನಲ್ಲಿಯೂ ಬುದ್ಧಿವಂತರಾಗಿದ್ದರು. ಆದರೆ, ಪ್ರಸ್ತುತ ವ್ಯವಸ್ಥೆ ಮತ್ತು ವರ್ಗಾವಣೆ ವಿಷಯದಲ್ಲಿ ಖಿನ್ನತೆಗೆ ಜಾರಿದ್ದರೇ ಎನ್ನುವ ಚರ್ಚೆ ಮುನ್ನಲೆಗೆ ಬಂದಿದ್ದರು.
ಪರಶುರಾಮ್ ಕೊಪ್ಪಳ ಜಿಲ್ಲೆ ಕಾರಟಗಿ ತಾಲ್ಲೂಕಿನ ಸೋಮನಾಳ ಗ್ರಾಮದವರು. ಒಂದು ಸರ್ಕಾರಿ ನೌಕರಿ ಪಡೆಯುವುದೇ ಕಷ್ಟವಾಗಿರುವ ಇಂದಿನ ದಿನಮಾನಗಳಲ್ಲಿ ಶ್ರಮಪಟ್ಟು ಓದಿ ಎಂಟು ಸರ್ಕಾರಿ ನೌಕರಿಯ ಒಡೆಯರಾಗಿದ್ದರು. ಗ್ರಾಮದಲ್ಲಿ ಉತ್ತಮ ಸ್ನೇಹಿತ ವಲಯವನ್ನು ಹೊಂದಿದ್ದಾರೆ.
ಅವರು ಮೃತಪಟ್ಟ ಸುದ್ದಿ ಹರಿಡುತ್ತಿದ್ದಂತೆಯೇ ಸ್ನೇಹಿತರು, ಬಂಧುಗಳು ಗ್ರಾಮಕ್ಕೆ ಭೇಟಿ ನೀಡಿ ಕಂಬನಿ ಮಿಡಿದಿದ್ದಾರೆ. ಭಾನುವಾರವೂ ಇದು ಮುಂದುವರಿದಿತ್ತು. ಗ್ರಾಮದ ಬಸ್ ನಿಲ್ದಾಣದಲ್ಲಿ ಸಮೀಪದಲ್ಲಿರುವ ಅವರ ಮನೆಗೆ ಹೋಗುವ ಮಾರ್ಗದಲ್ಲಿ ದೊಡ್ಡದಾಗಿ ಭಾವಚಿತ್ರ ಹಾಕಿ ಶ್ರದ್ದಾಂಜಲಿ ಸಂದೇಶ ಹಾಕಲಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಗ್ರಾಮಕ್ಕೆ ತೆರಳಿ ಅವರ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಪರಶುರಾಮ್ ಅವರಿಗೆ ಮಹಾದೇವಪ್ಪ ಹಾಗೂ ಹನುಮಂತಪ್ಪ ಎಂಬ ಇಬ್ಬರು ಸಹೋದರರಿದ್ದು ಸೋಮನಾಳ ಗ್ರಾಮದಲ್ಲಿ ಕೃಷಿ ಕಾಯಕದಲ್ಲಿ ತೊಡಗಿದ್ದಾರೆ. ಇವರ ಕುಟುಂಬದಲ್ಲಿ ಚೆನ್ನಾಗಿ ಓದಿ ಸರ್ಕಾರಿ ನೌಕರಿಗಳನ್ನು ಪಡೆದಿದ್ದು ಪರಶುರಾಮ್ ಮಾತ್ರ. ಇವರ ತಾಯಿ ಗಂಗಮ್ಮ ಮತ್ತು ತಂದೆ ಜನಕಮುನಿ ಅವರ ಕಣ್ಣೀರು ನಿರಂತರವಾಗಿತ್ತು. ಸಾಂತ್ವನ ಹೇಳಲು ಬಂದ ಎಲ್ಲ ನಾಯಕರು ಹಾಗೂ ಮಾಧ್ಯಮದವರ ಎದುರು ’ನಮ್ಮ ಮಗನ ಸಾವಿಗೆ ನ್ಯಾಯ ಕೊಡುಸ್ರೀ’ ಎಂದು ಗೋಗೆರೆಯುತ್ತಿದ್ದ ಚಿತ್ರಣ ಕಂಡುಬಂತು.
ಮಗನ ಸಾವಿನ ಸುದ್ದಿ ಕೇಳಿದಾಗಿನಿಂದಲೂ ಅಳುತ್ತಲೇ ಇರುವ ಗಂಗಮ್ಮ ಗಂಟಲ ಪಸೆಯೇ ಒಣಗಿ ಹೋಗಿತ್ತು. ಪರಶುರಾಮ್ ಪತ್ನಿ ಗರ್ಭಿಣಿಯಾಗಿದ್ದು ತವರಿಗೆ ಹೋಗಿದ್ದರು.
ಪರಶುರಾಮ್ ಆಪ್ತ ವಲಯದ ಸ್ನೇಹಿತ ಯರಿಸ್ವಾಮಿ ಕುಂಟೋಜಿ ’ಪರಶುರಾಮ್ ಮೃತಪಡುವ ಹಿಂದಿನ ದಿನ ಕರೆ ಮಾಡಿ ಮಾತನಾಡಿದ್ದ. ಏನೇ ಸಮಸ್ಯೆಗಳಿದ್ದರೂ ಹಂಚಿಕೊಳ್ಳುತ್ತಿದ್ದ. ಕೊನೆಯ ಬಾರಿ ಮಾತನಾಡಿದಾಗ ಆತ ಬಹಳಷ್ಟು ನೊಂದುಕೊಂಡಿದ್ದ ಎನ್ನುವುದು ಗೊತ್ತಾಗುತ್ತದೆ’ ಎಂದರು. ಕೊನೆಯ ಬಾರಿ ಮಾತನಾಡಿದ ಆಡಿಯೊ ಕೂಡ ನನ್ನ ಬಳಿಯಿದ್ದು ಅದನ್ನು ಆದಷ್ಟು ಬೇಗನೆ ಬಹಿರಂಗಪಡಿಸಲಾಗುವುದು ಎಂದೂ ಹೇಳಿದರು.
ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ, ಮಾಜಿ ಸಚಿವ ಹಾಲಪ್ಪ ಆಚಾರ್, ರಾಜ್ಯ ಉಪಾಧ್ಯಕ್ಷ ರಾಜೂಗೌಡ, ಮಾಜಿ ಸಂಸದ ಶಿವರಾಮಗೌಡ, ಜೆಡಿಎಸ್ ರಾಜ್ಯ ವಕ್ತಾರ ಸಿ.ವಿ. ಚಂದ್ರಶೇಖರ್, ಮಾಜಿ ಶಾಸಕ ಬಸವರಾಜ ದಢೇಸೂಗೂರು ಹಾಗೂ ಬಳ್ಳಾರಿ ವಿಭಾಗದ ಪ್ರಭಾರಿ ಚಂದ್ರಶೇಖರ ಹಲಗೇರಿ ಸೇರಿದಂತೆ ಅನೇಕ ನಾಯಕರು ಗ್ರಾಮಕ್ಕೆ ಭೇಟಿ ನೀಡಿದರು.
ಪರಶುರಾಮ್ ಸಾವು ಹೇಗಾಗಿದೆ ಎಂದು ವರದಿಯೇ ಬಂದಿಲ್ಲ ಆದರೂ ಗೃಹ ಸಚಿವ ಪರಮೇಶ್ವರ್ ಹೃದಯಾಘಾತದಿಂದ ಸಾವು ಎಂದು ತೀರ್ಪು ನೀಡಿದ್ದಾರೆ. ಎಫ್ಐಆರ್‌ನಲ್ಲಿ ಉಲ್ಲೇಖಿಸಿದ ಯಾದಗಿರಿ ಶಾಸಕ ಹಾಗೂ ಅವರ ಪುತ್ರನ ಬಂಧನವಾಗಲೇಬೇಕು ಇಲ್ಲವಾದರೆ ಹೋರಾಟ ಚುರುಕುಗೊಳಿಸಲಾಗುವುದು.- ಆರ್. ಅಶೋಕ್ ವಿಧಾನಸಭೆ ವಿರೋಧ ಪಕ್ಷದ ನಾಯಕ
ನನ್ನ ಸಹೋದರ ಮೃತಪಟ್ಟು 16 ತಾಸಿನ ಬಳಿಕ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ. ಕೂಡಲೇ ಬಂಧಿಸಬೇಕು. ನಮ್ಮ ಕುಟುಂಬಕ್ಕೆ ನ್ಯಾಯ ಒದಗಿಸಬೇಕು.-ಹನುಮಂತಪ್ಪ ಪರಶುರಾಮ್ ಸಹೋದರ ಸಹೋದರ
ಪರಶುರಾಮ್ ಮೃತಪಟ್ಟು 16 ತಾಸುಗಳ ಬಳಿಕ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಯಾದಗಿರಿ ಎಸ್ಪಿಗೆ ಪ್ರಭಾವಿ ಸಚಿವರೊಬ್ಬರು ಕರೆ ಮಾಡಿ ದೂರು ದಾಖಲಿಸದಂತೆ ಒತ್ತಡ ಹೇರಿದ್ದರು. ಈ ಬಗ್ಗೆ ತನಿಖೆಯಾಗಬೇಕು.ರಾಜೂಗೌಡ ಮಾಜಿ ಸಚಿವ
ಸಿಬಿಐ ತನಿಖೆಗೆ ಅಶೋಕ್ ಆಗ್ರಹ
ಕಾರಟಗಿ: ‘ಪರಶುರಾಮ್ ಮೃತಪಟ್ಟ ಪ್ರಕರಣವನ್ನು ಯಾರೂ ಆಗ್ರಹಿಸದಿದ್ದರೂ ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ನೀಡಿ ಕಣ್ಣೊರೆಸುವ ತಂತ್ರ ಮಾಡಿದೆ. ಹಿಂದಿನ ಸಿಐಡಿ ತನಿಖೆಗಳು ಏನಾಗಿವೆ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಇದರ ಮೇಲೆ ನಮಗೆ ನಂಬಿಕೆ ಇಲ್ಲ. ಆದ್ದರಿಂದ ಸಿಬಿಐ ತನಿಖೆಗೆ ವಹಿಸಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಆಗ್ರಹಿಸಿದರು. ಮಾಧ್ಯಮದವರ ಜೊತೆ ಮಾತನಾಡಿದ ಅವರು ‘ಈ ವಿಷಯದಲ್ಲಿ ರಾಜ್ಯ ಸರ್ಕಾರ ಹಾಗೂ ಪೊಲೀಸರು ನಡೆದುಕೊಂಡ ರೀತಿ ಬೇಸರ ತರಿಸುವಂಥದ್ದು. ದಲಿತ ಕುಟುಂಬದ ಹೆಣ್ಣುಮಗಳಿಗೆ (ಪರಶುರಾಮ್ ಪತ್ನಿ) ನ್ಯಾಯ ಒದಗಿಸಲು ಹೋರಾಟ ಮಾಡುತ್ತಿದ್ದೇವೆ. ನಮ್ಮ ಕ್ಷೇತ್ರದಲ್ಲಿ ದಲಿತರು ಇರಬಾರದು ಎಂದು ಯಾದಗಿರಿ ಶಾಸಕರು ಹೇಳಿದ್ದಾರೆಂದು ಪರಶುರಾಮ್ ಕುಟುಂಬದವರೇ ಆರೋಪಿಸಿದ್ದಾರೆ’ ಎಂದರು. ‘ದಲಿತ ಎನ್ನುವ ಪದ ಬಳಸಿದ ಕಾರಣಕ್ಕಾಗಿ ಸದನದಲ್ಲಿ ಮಾತಿನ ಚಕಮಕಿ ನಡೆದಿತ್ತು. ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ ಎನ್ನುವ ಮಾತಿನಂತೆ ಈಗ ಯಾದಗಿರಿಯಲ್ಲಿಯೂ ಘಟನೆ ನಡೆದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ದಲಿತ ಅಧಿಕಾರಿಗಳ ಸಾವಾಗುತ್ತಿದೆ. ಪೊಲೀಸ್ ಅಧಿಕಾರಿಗಳನ್ನು ಎರಡು ವರ್ಷದ ಒಳಗೆ ವರ್ಗಾವಣೆ ಮಾಡಬಾರದು ಎಂದು ನಾವು ಕಾನೂನು ಮಾಡಿದ್ದೆವು. ಕಾಂಗ್ರೆಸ್‌ನವರು ಇದನ್ನು ಒಂದು ವರ್ಷಕ್ಕೆ ಇಳಿಸಿದರು. ಠಾಣೆಗೆ ಬಂದು ಏಳು ತಿಂಗಳಾಗುವಷ್ಟರಲ್ಲಿಯೇ ಪರುಶುರಾಮ್ ಅವರನ್ನು ವರ್ಗಾವಣೆ ಮಾಡಿದ್ದು ಯಾಕೆ? ವರ್ಗಾವಣೆ ಮಾಡಿದ ಅಧಿಕಾರಿ ಮೇಲೂ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.