ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸೋದ್ಯಮ ಅಭಿವೃದ್ಧಿಗೆ ಸಿಗುವುದೇ ಆದ್ಯತೆ?

ಜಿಲ್ಲೆಯಲ್ಲಿವೆ ಹೇರಳ ತಾಣಗಳು, ಅಂಜನಾದ್ರಿ, ವಿಜಯಾದ್ರಿ, ಹುಲಿಗಿ, ಇಟಗಿ ನೋಡಲು ಪ್ರವಾಸಿಗರ ದಂಡು
Last Updated 20 ನವೆಂಬರ್ 2022, 20:10 IST
ಅಕ್ಷರ ಗಾತ್ರ

ಕೊಪ್ಪಳ: ಕೃಷಿ ಹಾಗೂ ಕಲೆಯಿಂದಾಗಿ ದೇಶ, ವಿದೇಶಗಳಲ್ಲಿ ಖ್ಯಾತಿ ಗಳಿಸಿರುವ ಕೊಪ್ಪಳ ಜಿಲ್ಲೆ ಈಗ ಪ್ರವಾಸೋದ್ಯಮದ ಹಬ್‌ ಆಗಿಯೂ ಪ್ರಗತಿ ಕಾಣಬೇಕಾದ ಅಗತ್ಯವಿದೆ. ಜಿಲ್ಲೆಯಲ್ಲಿ ಹೇರಳ ಪ್ರವಾಸಿ ತಾಣಗಳಿದ್ದು, ಅವುಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರ ಆದ್ಯತೆ ಮೇರೆಗೆ ಅಭಿವೃದ್ಧಿ ಪಡಿಸಬೇಕಿದೆ.

ರಾಜ್ಯದ ಭತ್ತದ ಕಣಜ, ಕೇಸರ್‌ ಮಾವು, ಭಾಗ್ಯನಗರ ಬ್ರ್ಯಾಂಡ್‌ ಸೀರೆಗಳು, ಕೂದಲೋದ್ಯಮ, ಕಿನ್ನಾಳ ಕಲೆ ಹೀಗೆ ಅನೇಕ ವೈಶಿಷ್ಟಗಳೊಂದಿಗೆ ಜಿಲ್ಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಈಗ ಪ್ರವಾಸೋದ್ಯಮ ಅಭಿವೃದ್ಧಿಗೆ ಉತ್ತಮ ಅವಕಾಶವಿದೆ.

ಆಂಜನೇಯ ಜನಿಸಿದ ನಾಡು ಎನಿಸಿರುವ ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ವಿದೇಶಗಳಲ್ಲಿಯೂ ಖ್ಯಾತಿ ಪಡೆದಿದ್ದು, ಮೇಲಿಂದ ಮೇಲೆ ದೇಶ–ವಿದೇಶಗಳ ಗಣ್ಯರು ಭೇಟಿ ನೀಡುತ್ತಲೇ ಇರುತ್ತಾರೆ. ಸರ್ಕಾರವೂ ಈ ಕ್ಷೇತ್ರವನ್ನು ಆದ್ಯತೆ ಮೇರೆಗೆ ಅಭಿವೃದ್ಧಿ ಮಾಡುವುದಾಗಿ ಘೋಷಿಸಿದೆ.

ಅಂಜನಾದ್ರಿ ದೇವಸ್ಥಾನ ಬೆಟ್ಟದ ಮೇಲೆ ಇರುವುದು, ಬೆಟ್ಟದ ಸುತ್ತಲಿನ ಮನಮೋಹಕ ಪರಿಸರ, ಅಂಜನಾದ್ರಿ ಸಮೀಪವೇ ವಿಜಯನಗರ ಸಾಮ್ರಾಜ್ಯದ ಸ್ಮಾರಕಗಳು ಇರುವುದು, ಆನೆಗೊಂದಿಯಲ್ಲಿ ಕೃಷ್ಣದೇವರಾಯನ ಸಮಾಧಿ, ಸಮೀಪದ ತುಂಗಭದ್ರ ನದಿಯ ಮಧ್ಯದಲ್ಲಿ ನವ ವೃಂದಾವನ, ವಿರೂಪಾಪುರ ಗಡ್ಡೆಯಲ್ಲಿ ಕಲ್ಲಿನ ಸೇತುವೆ, ಸಾಣಾಪುರ ಕೆರೆ, ಸಾಣಾಪುರ ಫಾಲ್ಸ್‌, ಕಿಷ್ಕೆಂಧೆ ಪ್ರದೇಶ ಹಾಗೂ ರಾಮಾಯಣದ ಭಾಗವಾದ ಋಷಿಮುಖಿ ಪರ್ವತ ಈ ಎಲ್ಲಾ ಕಾರಣಗಳಿಂದಾಗಿ ಅಂಜನಾದ್ರಿಯ ಮಹತ್ವ ಹೆಚ್ಚಾಗಿದೆ.

ದೇವಾಲಯಗಳ ಚಕ್ರವರ್ತಿ ಎಂದೇ ಖ್ಯಾತಿಯಾದ ಕುಕನೂರು ತಾಲ್ಲೂಕಿನ ಇಟಗಿಯ ‘ಮಹಾದೇವ ದೇವಾಲಯ’ ಕ್ರಿ.ಶ. 1,112ರಲ್ಲಿ ಕಲ್ಯಾಣ ಚಾಲುಕ್ಯರ ದೊರೆಯಿಂದ ನಿರ್ಮಾಣವಾಗಿದೆ. 6ನೇ ವಿಕ್ರಮಾದಿತ್ಯನ ಮಹಾಮಂತ್ರಿಯಾಗಿದ್ದ ಇಟಗಿಯ ಮಹಾದೇವ ದಂಡನಾಯಕನಿಂದ ಸ್ಥಾಪನೆಯಾಗಿದ್ದು, ಸಂಕೀರ್ಣ ಮತ್ತು ಸೂಕ್ಷ್ಮವಾದ ಕಲಾತ್ಮಕ ಕೆತ್ತನೆಗಳಿಗೆ ಹೆಸರುವಾಸಿಯಾಗಿದೆ.

ಕಪ್ಪು ಮತ್ತು ನೀಲಿ ಮಿಶ್ರಿತ ಬಣ್ಣದ ಕ್ಲೋರಿಟಿಕ್‌ನಿಂದ ನಿರ್ಮಾಣವಾಗಿದ್ದು, ಪ್ರಾಚ್ಯವಸ್ತು ಇಲಾಖೆ ನಿರ್ಮಿಸಿರುವ ಸುಂದರ ಉದ್ಯಾನ ಅಕರ್ಷಣೆವಾಗಿದೆ. ಗೋಪುರ, ಕಂಬಗಳ ಮೇಲೆ ಮೇಣದಂತೆ ಸರಾಗವಾಗಿ ಕೆತ್ತಲ್ಪಟ್ಟ ಚಿಕ್ಕ ಗೊಂಬೆಗಳು, ಆಕರ್ಷಿಸುವ ಮೂರ್ತಿಗಳು, ಶಿಲಾಬಾಲಕಿಯರು ಹಾಗೂ ಡೋಲು ಡಮರುಗ ಹಿಡಿದು ನರ್ತಿಸುವ ನರ್ತಕಿಯರ ಚಿತ್ರ, ಗಮನ ಸೆಳೆಯುವ ಪುಷ್ಕರಣಿ, ನಾರಾಯಣ ದೇವಾಲಯ, ಕಲ್ಯಾಣಿ ಚಾಲುಕ್ಯರ ಶಿಲಾಶಾಸನಗಳು, ಎಂಟೂ ದಿಕ್ಕಿನಲ್ಲಿ ಒಂದೊಂದು ಲಿಂಗ ಮಂಟಪ ಮತ್ತು ಮುಖ ಮಂಟಪದ ಚಾವಣಿಯಲ್ಲಿ ಕಲ್ಲರಳಿ ಹೂವಾಗಿರುವಂತೆ ಕೆತ್ತಲ್ಪಟ್ಟ ಶೈಲಿಯ ಚಿತ್ರಗಳು ಇಟಗಿ ದೇವಾಲಯದ ವಿಶೇಷ.

ಪ್ರಾಕೃತಿಕವಾಗಿ ಸುಂದರ ಪರಿಸರ ಹೊಂದಿರುವ ಕೊಪ್ಪಳದ ಗವಿಸಿದ್ದೇಶ್ವರ ಮಠ ಭಾವೈಕ್ಯದ ತಾಣವೆನಿಸಿದೆ. ಉತ್ತರ ಕರ್ನಾಟಕದಲ್ಲಿ ಖ್ಯಾತಿ ಹೊಂದಿರುವ ದೇವಾಲಯಗಳಲ್ಲಿ ಹುಲಗಿಗೆ ಆದ್ಯತೆಯಿದೆ. ಹುಲಿಗಿಯ ದೇವಸ್ಥಾನದ ಅಭಿವೃದ್ಧಿಗೆ ₹50 ಕೋಟಿ ಹಣವಿದ್ದರೂ ಅಲ್ಲಿ ಭಕ್ತರಿಗೆ ಮೂಲಸೌಕರ್ಯಗಳನ್ನು ಕಲ್ಪಿಸಲು ಆದ್ಯತೆ ಸಿಕ್ಕಿಲ್ಲ. ಪ್ರತಿ ಮಂಗಳವಾರ, ಶುಕ್ರವಾರ ಹಾಗೂ ಹುಣ್ಣಿಮೆಯ ದಿನಗಳಂದು ಲಕ್ಷಾಂತರ ಭಕ್ತರು ಇಲ್ಲಿಗೆ ಬರುತ್ತಾರೆ. ಉಳಿದುಕೊಳ್ಳಲು ಮೂಲ ಸೌಕರ್ಯಗಳ ಕೊರತೆಯ ಕಾರಣದಿಂದ ಭಕ್ತರು ಪ್ರತಿಬಾರಿಯೂ ಪರದಾಡುತ್ತಾರೆ.

ಕೊಪ್ಪಳ ತಾಲ್ಲೂಕಿನ ಕಾಸನಕಂಡಿ ಸಮೀಪ ಇತ್ತೀಚೆಗೆ ನಿರ್ಮಾಣವಾದ ವಿಜಯಾದ್ರಿ ಪರ್ವತ ಹೊರರಾಜ್ಯಗಳ ಭಕ್ತರನ್ನು ಸೆಳೆಯುತ್ತಿದೆ. ಪರ್ವತದ ಸುತ್ತಲೂ ಇರುವ ತುಂಗಭದ್ರಾ ಹಿನ್ನೀರಿನ ಮನಮೋಹಕ ಚಿತ್ರಣ, ಸುಂದರ ಪರಿಸರ ಆಕರ್ಷಿಸುತ್ತದೆ. ನೆರೆಯ ಜಿಲ್ಲೆಯ ವಿಜಯನಗರದಲ್ಲಿ ಹಂಪಿ ಸೇರಿದಂತೆ ಅನೇಕ ಐತಿಹಾಸಿಕ ಸ್ಮಾರಕಗಳು ಇವೆ. ವಿಜಯನಗರ ಸಾಮ್ರಾಜ್ಯದ ರಾಜಧಾನಿಯನ್ನು ನೋಡಲು ವರ್ಷಪೂರ್ತಿ ಪ್ರವಾಸಿಗರು ಬರುತ್ತಲೇ ಇರುತ್ತಾರೆ. ಅದರ ಜೊತೆಜೊತೆಗೆ ಕೊಪ್ಪಳ ಜಿಲ್ಲೆಯಲ್ಲಿಯೂ ‍ಪ್ರವಾಸೋದ್ಯಮ ಅಭಿವೃದ್ಧಿಯಾದರೆ ಆರ್ಥಿಕ ವಹಿವಾಟು ಹೆಚ್ಚಿಲು, ಉದ್ಯೋಗದ ಅವಕಾಶ ಸೃಷ್ಟಿಯಾಗಲು ಅನುಕೂಲವಾಗುತ್ತದೆ.

ಇವುಗಳಷ್ಟೇ ಅಲ್ಲದೆ ಪಂಪಾ ಸರೋವರ, ಆನೆಗೊಂದಿ, ಗಗನ ಮಹಲ್‌, 64 ಕಂಬಗಳ ಕೃಷ್ಣದೇವರಾಯನ ಸಮಾಧಿ, ನವ ಬೃಂದಾವನ, ಗವಿ ರಂಗನಾಥ ದೇವಸ್ಥಾನ, ಶಿಲೆಯಲ್ಲಿ ಕೆತ್ತಿರುವ ಸಂಪೂರ್ಣ ರಾಮಾಯಣ ಮೊದಲಾದ ಅಪೂರ್ವ ಶಿಲ್ಪಕಲಾ ಕೆತ್ತನೆಯ ಬೀಡಾಗಿರುವ ಹುಚ್ಚಪ್ಪಯ್ಯನ ಮಠ, ಕನಕಗಿರಿಯ ಕನಕಾಚಲಪತಿ ದೇವಸ್ಥಾನ, ಕುಷ್ಟಗಿ ತಾಲ್ಲೂಕಿನ ತಾವರಗೇರಾ ಸಮೀಪದಲ್ಲಿರುವ ಒಂದು ಕೋಟಿ ಲಿಂಗಗಳ ಊರು ಪುರದ ಸೋಮೇಶ್ವರ ದೇವಸ್ಥಾನ ಪ್ರಮುಖವಾಗಿವೆ. ಸೋಮನಾಥ ದೇವಾಲಯವನ್ನು ಕ್ರಿ.ಶ.1469 ರಲ್ಲಿ ಪ್ಲವಂಗನಾಮ ಸಂವತ್ಸರದ ಪುಷ್ಯ ಬಹುಳ ಬಿದಿಗೆ ದಿನ ವಿಜಯನಗರದ ಎರಡನೇ ದೊರೆ ವೀರಪ್ರತಾಪ ಸದಾಶಿವರಾಯ ಕಟ್ಟಿಸಿದನು ಎಂದು ಶಾಸನ ಮೂಲಕ ತಿಳಿದಿದೆ.

ಕುಕನೂರಿನ ಮಹಾಮಾಯಿ ದೇವಸ್ಥಾನ, ಯಲಬುರ್ಗಾ ತಾಲ್ಲೂಕಿನ ಕಲ್ಲೂರಿನಲ್ಲಿರುವ ಕಲ್ಯಾಣಿ ಚಾಲುಕ್ಯರ ದೊರೆ ವಿಕ್ರಮಾದಿತ್ಯ ಕಟ್ಟಿಸಿದ ಕಲ್ಲಿನಾಥೇಶ್ವರ ದೇವಸ್ಥಾನ, ಕೊಪ್ಪಳದ ಮಳೆ ಮಲ್ಲೇಶ್ವರ ಬೆಟ್ಟ (ಇಂದ್ರಕೀಲ ಪರ್ವತ), ಕುಷ್ಟಗಿ ತಾಲ್ಲೂಕಿನ ಹನುಮಸಾಗರ ಬಳಿ ಇರುವ ಕಪಿಲತೀರ್ಥ ಜಲಾಶಯ, ಏಳು ಸುತ್ತಿನ ಕೊಪ್ಪಳ ಕೋಟೆ, ಅಂಜನಾದ್ರಿ ಸಮೀಪದಲ್ಲಿರುವ ಕಿಷ್ಕಂಧ ರೆಸಾರ್ಟ್‌ ಹೀಗೆ ಅನೇಕ ಪ್ರದೇಶಗಳು ಮತ್ತು ಐತಿಹಾಸಿಕ ಸ್ಮಾರಕಗಳು ಜಿಲ್ಲೆಯಲ್ಲಿವೆ. ಇವುಗಳ ಅಭಿವೃದ್ಧಿ ಮತ್ತು ಸ್ಮಾರಕಗಳ ಉಳಿವಿಗೆ ಸರ್ಕಾರ ತ್ವರಿತವಾಗಿ ಸ್ಪಂದಿಸಬೇಕಾಗಿದೆ.

ರಾಜ್ಯದ ಹಲವು ದೇವಾಲಯಗಳನ್ನು ಅಭಿವೃದ್ಧಿ ಪಡಿಸಲು ಯೋಜನೆಗಳನ್ನು ರೂಪಿಸಲಾಗಿದ್ದು, ಇದರಲ್ಲಿ ಕೊಪ್ಪಳ ಜಿಲ್ಲೆಯ ಹುಲಿಗಿ ದೇವಸ್ಥಾನವೂ ಸೇರಿದೆ.

ಶಶಿಕಲಾ ಜೊಲ್ಲೆ, ಮುಜುರಾಯಿ ಖಾತೆ ಸಚಿವ

ಪೂರಕ ಮಾಹಿತಿ: ಕೆ.ಶರಣಬಸವ ನವಲಹಳ್ಳಿ, ಮಂಜುನಾಥ ಎಸ್‌. ಅಂಗಡಿ, ವಿಜಯ ಎನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT