ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಾಕ್‌ಗೆ ಜೈ ಅಂದವರಿಗೆ ಜೈಲು ಗ್ಯಾರಂಟಿ: ಶಿವರಾಜ ತಂಗಡಗಿ

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿಕೆ
Published 10 ಮಾರ್ಚ್ 2024, 4:18 IST
Last Updated 10 ಮಾರ್ಚ್ 2024, 4:18 IST
ಅಕ್ಷರ ಗಾತ್ರ

ಕುಷ್ಟಗಿ: ‘ಪಾಕಿಸ್ತಾನ್‌ ಜಿಂದಾಬಾದ್‌ ಎನ್ನುವುದನ್ನು ಸರ್ಕಾರ ಸಹಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಆರೋಪಿಗಳು ಯಾರೇ ಆಗಿರಲಿ, ಎಲ್ಲಿಯೇ ಅಡಗಿದ್ದರೂ ಹೊರಗೆಳೆದು ಜೈಲಿಗೆ ಅಟ್ಟಿ ಈ ದೇಶದ ಕಾನೂನಿನ ಅನ್ವಯ ಶಿಕ್ಷೆಗೆ ಗುರಿಪಡಿಸುತ್ತೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಗಟ್ಟಿ ತಳಹದಿ ಹೊಂದಿದ್ದು, ಹಿಂದೂ–ಮುಸ್ಲಿಂ ಎಲ್ಲರನ್ನೂ ಒಳಗೊಂಡಿದೆ. ಪಾಕಿಸ್ತಾನವನ್ನು ದೂಷಿಸುವವರು ಅಲ್ಲಿಗೆ ಹೋಗಿ ಬಿರಿಯಾನಿ ತಿಂದು ಬಂದಿದ್ದೇಕೆ?’ ಎಂದು ಮೋದಿ ಹೆಸರು ಪ್ರಸ್ತಾಪಿಸದೇ ಟೀಕಿಸಿದರು.

‘ಆರು ದಶಕಗಳ ಅವಧಿಯಲ್ಲಿ ಕಾಂಗ್ರೆಸ್‌ನ ಒಬ್ಬ ಪ್ರಧಾನಿಯೂ ಪಾಕ್‌ಗೆ ಭೇಟಿ ನೀಡಿರಲಿಲ್ಲ. ಆದರೂ, ಬಿಜೆಪಿಯವರು ಪಾಕಿಸ್ತಾನದ ಹೆಸರನ್ನು ಬಳಸಿಕೊಂಡು ನಾಟಕವಾಡುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘ಹಿಂದೂ ಧರ್ಮ ಎಲ್ಲ ವರ್ಗದವರನ್ನೂ ಪ್ರೀತಿಸುವಂಥದ್ದು. ಅದಕ್ಕೆ ತನ್ನದೇ ಆದ ಗೌರವವಿದೆ. ಧರ್ಮದ ಹೆಸರಿನ ಬದಲು ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಮಾಡಬೇಕು. ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ ಕಾಂಗ್ರೆಸ್‌ ದೇಶ ಭಕ್ತಿಯ ವಿಷಯದಲ್ಲಿ ಬಿಜೆಪಿಯವರಿಂದ ಕಲಿಯುವ ಅಗತ್ಯವೇ ಇಲ್ಲ’ ಎಂದು ಖಂಡತುಂಡವಾಗಿ ಹೇಳಿದರು.

ಬೆಂಗಳೂರಿನ ರಾಮೇಶ್ವರ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ‘ಎಲ್ಲ ಕಾಲ, ಸರ್ಕಾರಗಳ ಅವಧಿಯಲ್ಲೂ ದುಷ್ಟ ಶಕ್ತಿಗಳು ಇದ್ದೇ ಇರುತ್ತವೆ. ಮಂಗಳೂರಲ್ಲಿ ಬಾಂಬ್ ಬ್ಲಾಸ್ಟ್‌ ಆಗಿದ್ದಾಗ ಬಿಜೆಪಿ ಅಧಿಕಾರದಲ್ಲಿತ್ತು. ಏನೇ ಆಗಲಿ, ಈ ಪ್ರಕರಣದಲ್ಲಿ ಭಾಗಿಯಾಗಿರುವವರನ್ನು ಪತ್ತೆಹಚ್ಚುವ ಪ್ರಯತ್ನ ರಾಜ್ಯದ ಪೊಲೀಸರು ಸಮರ್ಥವಾಗಿ ನಿಭಾಯಿಸಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಮುಖ್ಯಮಂತ್ರಿ ಬದಲಾವಣೆ ಎಂಬುದು ಅಪ್ರಸ್ತುತ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 18-20 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಲಿದೆ’ ಎಂದ ಅವರು, ‘ರಾಜ್ಯದ ಅತ್ಯಧಿಕ ಕ್ಷೇತ್ರಗಳಲ್ಲಿ ಸಂಸದರನ್ನು ಹೊಂದಿರುವ ಬಿಜೆಪಿ ಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಹೆಸರುಗಳನ್ನು ಏಕೆ ಪ್ರಕಟಿಸಿಲ್ಲ? ಬಿಜೆಪಿಗೆ ಒಳಗೊಳಗೇ ಅಳುಕು ಇರುವ ಸಾಧ್ಯತೆ ಇದೆ’ ಎಂದರು.

‘ಕಾಂಗ್ರೆಸ್‌ ಪಕ್ಷದ ಗ್ಯಾರಂಟಿ ವಿಚಾರಗಳ ಬಗ್ಗೆ ಕೇವಲ ವಿರೋಧ ಪಕ್ಷಗಳಿಂದ ಮಾತ್ರ ಟೀಕೆ ವ್ಯಕ್ತವಾಗುತ್ತಿದೆಯೇ ಹೊರತು ಜನ ಅತ್ಯಂತ ಖುಷಿಯಾಗಿದ್ದಾರೆ. ಜನರಿಗೆ ಅವುಗಳ ಬಗ್ಗೆ ವಿಶ್ವಾಸವಿದೆ ಎಂಬುದಕ್ಕೆ ಬಿಜೆಪಿ ಈಗ ಗ್ಯಾರಂಟಿ ಪದ ಬಳಕೆ ಮಾಡುತ್ತಿರುವುದೇ ಸಾಕ್ಷಿ’ ಎಂದು ಸಚಿವ ತಂಗಡಗಿ ಸಮರ್ಥಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT