ಕೊಪ್ಪಳ: ದೇಶಕ್ಕೆ ಸ್ವಾತಂತ್ರ್ಯ ದೊರೆತ13 ತಿಂಗಳ ನಂತರ ಈ ಭಾಗಕ್ಕೆ ಹೈದರಾಬಾದಿನ ನಿಜಾಮರಿಂದ ಸ್ವಾತಂತ್ರ್ಯ ದೊರೆತಿದ್ದು, 73ನೇ ವಿಮೋಚನಾ ದಿನಕ್ಕೆ ಸಿದ್ಧರಾಗುತ್ತಿದ್ದೇವೆ. ಹೈದರಾಬಾದ್-ಕರ್ನಾಟಕ ಇಂದು ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಾಯಿಸಿಕೊಂಡಿದ್ದು, ಉತ್ಸವ ಆಚರಣೆಗೆ ಭರದ ಸಿದ್ಧತೆ ನಡೆದಿದೆ.
ಭಾರತ ಒಕ್ಕೂಟ ಸೇರಲು ನಿರಾಕರಿಸಿದ ನಿಜಾಮರ ವಿರುದ್ಧ ಮತ್ತು ರಜಾಕರ ಸೈನ್ಯದ ದಬ್ಬಾಳಿಕೆಗೆ ಜಿಲ್ಲೆಯ ಜನ ಎದೆಗೊಟ್ಟು ನಿಂತವರು. ಅಂತಹ ವೀರತ್ವಕ್ಕೆ ಸಾಕ್ಷಿಯಾಗಿ ನಿಂತಿರುವ ಕೊಪ್ಪಳದ ಕೋಟೆ ಇಂದಿಗೂ ಅಭೇದ್ಯವಾಗಿ ನಿಂತಿದೆ. ಏಳು ದಶಕದ ನಂತರವೂ ಹಿಂದುಳಿದ ಭಾಗ ಎಂದು ಕರೆಸಿಕೊಳ್ಳಲು ಮುಜುಗರ ಆಗುತ್ತದೆ ಎನ್ನುತ್ತಾರೆ ಇಲ್ಲಿಯ ಪ್ರಜ್ಞಾವಂತರು.
ಆಳುವ ಸರ್ಕಾರಗಳ ನಿರ್ಲಕ್ಷ್ಯ, ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆ, ಅಧಿಕಾರಿಗಳ ಭ್ರಷ್ಟತನದಿಂದ ಇಂದಿಗೂ ಮುಂದೆ ಬಾರದೇ ಜಿಲ್ಲೆ ಒದ್ದಾಡುತ್ತಿದೆ. ಪ್ರಾಕೃತಿಕ ಸಂಪನ್ಮೂಲಗಳು, ಉದ್ಯಮಗಳು, ಜಲಾಶಯಗಳು ಇದ್ದರೂ ಮುಂದುವರಿದವರ ಸಾಲಿನಲ್ಲಿ ಬಾರದೇ ಹಾಗೆ ಹಿಂದುಳಿದಿರುವುದಕ್ಕೆ ವಿಮೋಚನಾ ಹೋರಾಟಗಾರರು ವಿಷಾದ ವ್ಯಕ್ತಪಡಿಸುತ್ತಾರೆ.
ವಿಮೋಚನಾ ಹೋರಾಟದಲ್ಲಿ ಭಾಗವಹಿಸಿದ್ದ ಶರಣಬಸವರಾಜ ಬಿಸರಳ್ಳಿ ಅವರು, 'ಸ್ವಾತಂತ್ರ್ಯಾ ನಂತರ ಜನರಲ್ಲಿ ಮೌಲ್ಯಗಳು ಕಡಿಮೆಯಾದವು. ಅಭಿವೃದ್ಧಿ ಕಡೆ ಗಮನ ಕೊಡಲಿಲ್ಲ. ಪಕ್ಷ, ನಾಯಕರ ಹಿಂಬಾಲಕರಾಗಿ ಪ್ರತಿಷ್ಠೆ ಬೆಳೆಸಿಕೊಂಡು ಮಾದರಿ ಕಾರ್ಯ ಮಾಡಲು ಬಿಡಲಿಲ್ಲ' ಎನ್ನುತ್ತಾರೆ.
ಹೋರಾಟವನ್ನು ಹತ್ತಿರದಿಂದ ಬಲ್ಲ ಹಿರಿಯ ಸಾಹಿತಿ ಎಚ್.ಎಸ್.ಪಾಟೀಲ, 'ತನ್ನ ಪ್ರದೇಶದಲ್ಲಿಯೇ ತನ್ನ ಧರ್ಮದವರಲ್ಲದ ಜನರನ್ನು ನಿಜಾಮನ ರಜಾಕರು ಕಾಟೋ, ಲೋಟೋ, ಬಾಟೋ ಎಂದು ಹಿಂಸಿಸಲು ತೊಡಗಿದಾಗ ಜನಮಾನಸ ಆಕ್ರೋಶದಿಂದ ಪ್ರಭುತ್ವದ ವಿರುದ್ಧ ಎದ್ದು ನಿಂತು ರಣಾಂಗದಲ್ಲಿ ಕಾದಾಡಿ ಭಾರತಕ್ಕೆ ಸೇರಿಸಿದ್ದು ಅಪರೂಪದ ದಿನ ಇಂದು. ಇದು ನಮಗೆ ಉತ್ಸವವೇ' ಎನ್ನುತ್ತಾರೆ ಅವರು.
ಮಂಡಳಿ ಸಾವಿರಾರು ಕೋಟಿ ಅನುದಾನವನ್ನು ಖರ್ಚು ಮಾಡಿದರೂ ಇನ್ನೂ ಸುಧಾರಣೆ ಕಂಡಿಲ್ಲ. ಶಿಕ್ಷಣ, ಮೂಲಸೌಕರ್ಯ, ವೃತ್ತಿ ಕೌಶಲ ಉದ್ಯೋಗ ಅವಕಾಶ ದೊರೆಯುತ್ತಿಲ್ಲ. ಜಿಲ್ಲೆಯಲ್ಲಿ ನೂರಾರು ಕಾರ್ಖಾನೆಗಳು ಇದ್ದರೂ ಸ್ಥಳೀಯರಿಗೆ ಉದ್ಯೋಗ ಸಿಕ್ಕಿಲ್ಲ. ಗುಳೆ ಹೋಗುವುದು ತಪ್ಪಿಲ್ಲ.
ಸತತ ಬರಗಾಲ, ಮಳೆ ಕೊರತೆ, ಅಂತರ್ಜಲ ಕುಸಿತದಿಂದ ಕೃಷಿ ಕ್ಷೇತ್ರ ಕೂಡಾ ಸಂಕಷ್ಟದಲ್ಲಿದೆ. ನೀರಾವರಿ ಯೋಜನೆಗಳನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಿ ಜಿಲ್ಲೆಯ ಜನರಿಗೆ ನೆಮ್ಮದಿ ನೀಡಬೇಕಾಗಿದೆ. ಅಂದಾಗ ಉತ್ಸವಕ್ಕೆ ಇನ್ನಷ್ಟು ಮೆರುಗು ಬರುತ್ತದೆ ಎಂದು ಯುವಕರು ಅಭಿಪ್ರಾಯಪಡುತ್ತಾರೆ.
ಕಲ್ಯಾಣ ಕರ್ನಾಟಕ ಹೆಸರು ಬದಲಾದಂತೆ ಹಿಂದುಳಿದ ಹಣೆಪಟ್ಟಿಯೂ ಬದಲಾಗಲಿ ಎಂಬುವುದು ಇಲ್ಲಿನವರ ಆಶಯ. ಅಂದಾಗ ಮಾತ್ರ ವಿಮೋಚನಾ ಹೋರಾಟ ಕೂಡಾ ಸಾರ್ಥಕವಾದಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.