ಶುಕ್ರವಾರ, ಜನವರಿ 24, 2020
17 °C

ಆರೋಗ್ಯವೇ ನಿಜವಾದ ಸಂಪತ್ತು: ಗವಿಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಪ್ರತಿಯೊಬ್ಬರು ದುಡಿಮೆಯ ಜೊತೆಗೆ ಉತ್ತಮವಾದ ಆರೋಗ್ಯ ಕಾಪಾಡಿಕೊಳ್ಳಬೇಕು. ಆರೋಗ್ಯವೇ ನಿಜವಾದ ಸಂಪತ್ತು ಎಂದು ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ಅವರು ಸೋಮವಾರ ನಗರದ 3ನೇ ವಾರ್ಡ್‍ನಲ್ಲಿ ಕರ್ನಾಟಕ ಒನ್ ಸಹಯೋಗದೊಂದಿಗೆ ಹಾಗೂ ಆರೋಗ್ಯ ಕರ್ನಾಟಕ ಆಯುಷ್ಮಾನ್ ಭಾರತ್ ಗುರುತಿನ ಚೀಟಿ ವಿತರಣಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಮನುಷ್ಯ ಜೀವನದಲ್ಲಿ ದುಡಿದು ದುಡ್ಡು ಗಳಿಸುವತ್ತ ಕಾಳಜಿ ವಹಿಸಿ ಆರೋಗ್ಯ ಕಳೆದುಕೊಳ್ಳಬಾರದು. ಆರೋಗ್ಯದ ಕಡೆ ಕಾಳಜಿ ಇರಬೇಕು. ಯಾವುದೇ ಚಿಂತೆ ಮಾಡದೇ ದುಡಿಮೆ ಜೊತೆ ಊಟ, ನಿದ್ದೆ ಮಾಡಿ ಪ್ರತಿಯೊಬ್ಬರು ಆರೋಗ್ಯವಂತರಾಗಿರಬೇಕು ಎಂದರು.

ಕಾರ್ಯಕ್ರಮದಲ್ಲಿ ಆರೋಗ್ಯ ಕರ್ನಾಟಕ ಆಯುಷ್ಮಾನ್ ಭಾರತ್ ಗುರುತಿನ ಚೀಟಿ ವಿತರಿಸಿ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಮಾತನಾಡಿ, ಪ್ರತಿಯೊಬ್ಬರು ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು, ಇಂತಹ ಆರೋಗ್ಯ ಕರ್ನಾಟಕ ಆಯುಷ್ಮಾನ್ ಭಾರತ್ ಗುರುತಿನ ಚೀಟಿಯಿಂದ 5 ಲಕ್ಷ ದವರೆಗೆ ವೈದ್ಯಕೀಯ ಸೌಲಭ್ಯವನ್ನು ಉಚಿತವಾಗಿ ಪಡೆಯಬಹುದು. ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರು ಜೀವ ಉಳಿಸಿಕೊಳ್ಳಬಹುದು ಎಂದು ಹೇಳಿದರು.

ಜಿಲ್ಲಾಸ್ಪತ್ರೆಯಲ್ಲಿ ಈಗ ಎಲ್ಲ ವೈದ್ಯರು ಇದ್ದು, ಎಲ್ಲ ಸೌಲಭ್ಯಗಳನ್ನು ಹೊಂದಿದೆ. 450 ಬೆಡ್ ಆಸ್ಪತ್ರೆಯನ್ನು 1000ಕ್ಕೆ ಹೆಚ್ಚಿಸಲಾಗಿದೆ. ಜೊತೆಗೆ ಮಕ್ಕಳ ಸಾವಿನ ಸಂಖ್ಯೆಯನ್ನು ಕಡಿಮೆಗೊಳಿಸಲು ಮದರ್‌ ಕೇರ್ ಆಸ್ಪತ್ರೆಯನ್ನು ಹೊಂದಿದೆ. 3ನೇ ವಾರ್ಡ್‌ ಅತ್ಯಂತ ದೊಡ್ಡ ವಾರ್ಡ್‍ವಾಗಿದ್ದು, ಹೀಗಾಗಿ ಇಲ್ಲಿ ಹೆಚ್ಚು ಅನುದಾನ ನೀಡಿ ಉತ್ತಮ ರಸ್ತೆ, ಅಂಗನವಾಡಿ ಕಟ್ಟಡ, ವಸತಿ ನಿಲಯ ಸೇರಿದಂತೆ ಸೌಲಭ್ಯ ಒದಗಿಸಲಾಗಿದೆ ಎಂದರು.

ನಗರಸಭೆ ಸದಸ್ಯ ಅಮ್ಜದ್ ಪಟೇಲ್ ಮಾತನಾಡಿ, ವಾರ್ಡಿನಲ್ಲಿ ಪ್ರತಿಯೊಬ್ಬರು ತಮ್ಮ ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಂಡು ಯಾವುದೇ ರೋಗ-ರುಜಿನ ಬಾರದಂತೆ ಎಚ್ಚರ ವಹಿಸಿ ಸರ್ಕಾರ ನೀಡಿದ ಯೋಜನೆಗಳನ್ನು ಪ್ರತಿಯೊಬ್ಬರು ಸದುಪಯೋಗಪಡಿಸಿಕೊಳ್ಳಬೇಕು. ವಾರ್ಡಿನ ಅಭಿವೃದ್ದಿಗೆ ಶ್ರಮಿಸುತ್ತೇನೆ ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಟಿ.ಲಿಂಗರಾಜ್ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಭೂಮರೆಡ್ಡಿ ಮಾತನಾಡಿದರು. ಲಿಯಾಕತ್ ಮುಧೋಳ, ಜಾಫರಸಾಬ್ ಗೊಂಡಬಾಳ, ನಾಗರಾಜ್ ಮೇಟಿ, ಶಿವಮೂರ್ತಿ ಗುತ್ತೂರು, ಪರಶುರಾಮ ಕೆರಳ್ಳಿ, ಗವಿಸಿದ್ದಪ್ಪ ಬಣಕಾರ, ಬಷೀರ್ ಅತ್ತಾರ್, ಮಕ್ಬೂಲ್ ಹೂಗಾರ, ಅಕ್ಬರ್ ಇದ್ದರು.

ಪ್ರತಿಕ್ರಿಯಿಸಿ (+)