ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ ಚುನಾವಣೆ | ಪ್ರಚಾರಕ್ಕೆ ಹೋದ ಮೊದಲ ದಿನವೇ ಶಾಸಕ ಹಿಟ್ನಾಳಗೆ ತರಾಟೆ

Last Updated 3 ಏಪ್ರಿಲ್ 2023, 11:42 IST
ಅಕ್ಷರ ಗಾತ್ರ

ಕೊಪ್ಪಳ: ಕೊಪ್ಪಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೆ. ರಾಘವೇಂದ್ರ ಹಿಟ್ನಾಳ ತಾಲ್ಲೂಕಿನ ಗುಡಗೇರಿ ಗ್ರಾಮದಲ್ಲಿ ಸೋಮವಾರ ಪ್ರಚಾರ ಕಾರ್ಯ ಆರಂಭಿಸುತ್ತಿದ್ದಂತೆ ಮೊದಲು ಗ್ರಾಮಸ್ಥರ ವಿರೋಧ ಎದುರಿಸಬೇಕಾಯಿತು.

ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಗ್ರಾಮದ ಎಸ್‌.ಸಿ. ಕಾಲೊನಿಗೆ ಮತ ಕೇಳಲು ಹೋದ ಅವರನ್ನು ಅಲ್ಲಿನ ಯುವಕರು ’ಚುನಾವಣೆ ಬಂದಿದೆ ಎನ್ನುವ ಕಾರಣಕ್ಕೆ ಈಗ ಬಂದಿದ್ದೀರಿ. ಹತ್ತು ವರ್ಷ ಶಾಸಕರಾಗಿದ್ದರೂ ಏನೂ ಅಭಿವೃದ್ಧಿ ಕೆಲಸ ಮಾಡಿಲ್ಲ. ನಿಮ್ಮ ಹಿಂಬಾಲಕರನ್ನು ಮಾತ್ರ ಕಳುಹಿಸಿದ್ದೀರಿ. ಈಗಲಾದರೂ ಯಾಕೆ ಬಂದಿದ್ದೀರಿ’ ಎಂದು ಖಾರವಾಗಿ ಪ್ರಶ್ನಿಸಿದರು.

’ಗುಡಗೇರಿ ಗ್ರಾಮದಲ್ಲಿ ರಸ್ತೆ ಸರಿಯಿಲ್ಲ. ಈ ಕಾರಣಕ್ಕೆ ಬಸ್ ಬರುವುದಿಲ್ಲ. ವಿದ್ಯಾರ್ಥಿಗಳು ಶಾಲಾ, ಕಾಲೇಜುಗಳಿಗೆ ಹೋಗಲು ಪಡಿಪಾಟಲು ಪಡಬೇಕಾಗಿದೆ. ರಸ್ತೆ ಅಭಿವೃದ್ಧಿಗೆ ಹಲವು ಸಲ ಭೂಮಿಪೂಜೆ ಮಾಡಿದ್ದೇ ಸಾಧನೆಯಾಗಿದ್ದು, ರಸ್ತೆ ಮಾತ್ರ ಆಗಲಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮನೆಮನೆಗೆ ಮತಯಾಚನೆ ಮುಗಿದ ಬಳಿಕ ನಡೆದ ಸಮಾರಂಭದಲ್ಲಿಯೂ ಗ್ರಾಮದ ಹಲವರು ಹಿಟ್ನಾಳ ವಿರುದ್ಧ ಅಸಮಾಧಾನ ಹೊರಹಾಕಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ’ಇಷ್ಟು ವರ್ಷ ಬಿಜೆಪಿ ಸರ್ಕಾರದ ಆಡಳಿತವಿತ್ತು. ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ. ಆಗ ಜನರ ಎಲ್ಲಾ ಬೇಡಿಕೆಗಳನ್ನು ಈಡೇರಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT