ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ ವಿಧಾನಸಭಾ ಕ್ಷೇತ್ರ: ಅಂತಿಮ ಹಂತದಲ್ಲಿ ಬಿಜೆಪಿ ಟಿಕೆಟ್‌ ಕಸರತ್ತು

ನನಗೇ ಟಿಕೆಟ್‌ ಕೊಡಿ ಎಂದು ಕೇಳಿದ್ದೇನೆ: ಸಂಸದ ಸಂಗಣ್ಣ ಕರಡಿ
Last Updated 8 ಏಪ್ರಿಲ್ 2023, 9:48 IST
ಅಕ್ಷರ ಗಾತ್ರ

ಕೊಪ್ಪಳ: ದಿನಗಳು ಉರುಳಿದಂತೆ ಕೊಪ್ಪಳ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಕುತೂಹಲ ಹೆಚ್ಚಾಗುತ್ತಲೇ ಇದ್ದು, ಮೂರು ಹೆಸರುಗಳನ್ನು ಕೇಂದ್ರ ಸಂಸದೀಯ ಮಂಡಳಿಗೆ ಶಿಫಾರಸು ಮಾಡಲಾಗಿದೆ. ಹೀಗಾಗಿ ಮೂವರಲ್ಲಿ ಯಾರಿಗೆ ಟಿಕೆಟ್‌ ನೀಡಲಾಗುತ್ತದೆ ಎನ್ನುವ ಚರ್ಚೆ ಕ್ಷೇತ್ರದಲ್ಲಿ ಜೋರಾಗಿ ನಡೆಯುತ್ತಿದೆ.

ಸಂಸದ ಸಂಗಣ್ಣ ಕರಡಿ, ಅವರ ಪುತ್ರ ಗವಿಸಿದ್ದಪ್ಪ ಕರಡಿ ಮತ್ತು ಬಿಜೆಪಿ ಮುಖಂಡ ಸಿ.ವಿ. ಚಂದ್ರಶೇಖರ್‌ ಅವರ ಹೆಸರುಗಳನ್ನು ಶಿಫಾರಸು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

‘ನಾನು ಟಿಕೆಟ್‌ ಕೇಳಿಲ್ಲ. ಪಕ್ಷ ಅವಕಾಶ ಕೊಟ್ಟರೆ ಸ್ಪರ್ಧೆ ಮಾಡುವೆ’ ಎಂದು ಇಷ್ಟು ದಿನ ಹೇಳುತ್ತಿದ್ದ ಸಂಗಣ್ಣ ಕರಡಿ ಅವರು ಈಗ ಮುಕ್ತವಾಗಿಯೇ ‘ನಾನೇ ಟಿಕೆಟ್‌ ಕೇಳಿದ್ದೇನೆ. ನನಗೆ ಕೊಟ್ಟರೆ ಕ್ಷೇತ್ರದಲ್ಲಿ ಪಕ್ಷ ಗೆಲ್ಲುವ ಸಾಧ್ಯತೆ ಅಧಿಕವಾಗಿದೆ’ ಎನ್ನುತ್ತಿದ್ದಾರೆ. ಈ ವಿಷಯವನ್ನು ಅವರು ವರಿಷ್ಠರ ಮುಂದೆಯೂ ಹೇಳಿದ್ದಾರೆ. ಈ ಮೂಲಕ ಅವರು ರಾಜ್ಯ ರಾಜಕಾರಣಕ್ಕೆ ಮರಳಿ ಬರುವ ಇಂಗಿತವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದಾರೆ.

ಶತಾಯು ಗತಾಯು ಟಿಕೆಟ್‌ ಗಿಟ್ಟಿಸಿಕೊಳ್ಳಲೇಬೇಕು ಎನ್ನುವ ಲೆಕ್ಕಾಚಾರದಿಂದ ಸಂಗಣ್ಣ ಹಾಗೂ ಚಂದ್ರಶೇಖರ್‌ ಅವರು ಈಗಾಗಲೇ ಪಕ್ಷದ ಪ್ರಮಖರನ್ನು ಭೇಟಿಯಾಗಿದ್ದಾರೆ. ಇಬ್ಬರಿಗೂ ವರಿಷ್ಠರೂ ಅಭಯ ನೀಡಿದ್ದಾರೆ. ಆದರೆ, ಯಾರಿಗೆ ಟಿಕೆಟ್‌ ಎನ್ನುವ ಗುಟ್ಟು ಮಾತ್ರ ಬಿಟ್ಟುಕೊಟ್ಟಿಲ್ಲ.

ಸಂಗಣ್ಣ 1994ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಮೊದಲ ಬಾರಿಗೆ ವಿಧಾನಸೌಧ ಪ್ರವೇಶಿಸಿದ್ದ ಸಂಗಣ್ಣ 1999ರಲ್ಲಿ ಜೆಡಿಯು, 2008ರಲ್ಲಿ ಜನತಾದಳ, 2011ರ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಗೆಲುವು ಸಾಧಿಸಿದರು. 2004 ಮತ್ತು 2013ರಲ್ಲಿ
ಬಿಜೆಪಿಯಿಂದ ಸ್ಪರ್ಧಿಸಿ ಸೋತರು. 2014ರಲ್ಲಿ ಮೊದಲ ಬಾರಿಗೆ ಬಿಜೆಪಿಯಿಂದ ಸಂಸದರಾಗಿ, 2019ರಲ್ಲಿ ಪುನರಾಯ್ಕೆಯಾದರು.

ಸಂಗಣ್ದ ಕರಡಿ ಅವರ ಇನ್ನೊಬ್ಬ ಪುತ್ರ ಅಮರೇಶ ಕರಡಿ 2018ರ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು. ಈ ಬಾರಿ ಸಂಸದರು ‘ನನಗೇ ಟಿಕೆಟ್ ಕೊಡಬೇಕು’ ಎಂದಿದ್ದಾರೆ. ಮೂಲಗಳ ಪ್ರಕಾರ ತಮ್ಮ ಇನ್ನೊಬ್ಬ ಪುತ್ರ ಗವಿಸಿದ್ದಪ್ಪ ಕರಡಿ ಹೆಸರು ಕೇಳಿಬರುತ್ತಿದೆ. ಹಿಂದಿನ ಎರಡು ಅವಧಿಯಲ್ಲಿ ಶಾಸಕರಾಗಿದ್ದ ಕಾಂಗ್ರೆಸ್‌ನ ರಾಘವೇಂದ್ರ ಹಿಟ್ನಾಳ ಅವರನ್ನು ಅಭ್ಯರ್ಥಿ ಎಂದು ಈಗಾಗಲೇ ಪಕ್ಷ ಘೋಷಣೆ ಮಾಡಿದ್ದು, ಪ್ರಚಾರ ಕಾರ್ಯವನ್ನೂ ಶುರು ಮಾಡಿದ್ದಾರೆ.

ಹೀಗಾಗಿ ಬಿಜೆಪಿ ಅಭ್ಯರ್ಥಿ ಯಾರು ಎನ್ನುವುದು ನಿರ್ಧಾರವಾದ ಬಳಿಕ ಕಣ ರಂಗೇರಲಿದೆ. ಹೀಗಾಗಿ ಎಲ್ಲರ ಚಿತ್ತ ‘ಯಾರ ಕುಟುಂಬಕ್ಕೆ ಟಿಕೆಟ್‌’ ಎನ್ನುವುದರತ್ತ ಇದೆ.

ನನಗೆ ಟಿಕೆಟ್‌ ಕೊಡುವುದರಿಂದ ಪಕ್ಷಕ್ಕೆ ಅನುಕೂಲವಾಗುತ್ತದೆ ಎಂದು ವರಿಷ್ಠರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಏನು ತೀರ್ಮಾನವಾಗುತ್ತದೆ ಎಂದು ಕಾದು ನೋಡಬೇಕಿದೆ.

-ಸಂಗಣ್ಣ ಕರಡಿ, ಸಂಸದ

ಕೊಪ್ಪಳ ಕ್ಷೇತ್ರದ ಟಿಕೆಟ್‌ ನನಗೇ ಸಿಗುತ್ತದೆ. ಮೊದಲ ಪಟ್ಟಿಯಲ್ಲಿ ನನ್ನ ಹೆಸರು ಘೋಷಣೆಯಾಗಲಿದೆ ಎನ್ನುವ ವಿಶ್ವಾಸವಿದೆ. ಮೂರು ಹೆಸರುಗಳನ್ನು ಶಿಫಾರಸು ಮಾಡಲಾಗಿದೆ.

-ಸಿ.ವಿ. ಚಂದ್ರಶೇಖರ್‌, ಟಿಕೆಟ್‌ ಆಕಾಂಕ್ಷಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT