ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲಬುರ್ಗಾ ವಿಧಾನಸಭಾ ಕ್ಷೇತ್ರ: ಈ ಬಾರಿಯೂ ನೀರಾವರಿ ಯೋಜನೆ ಗಗನಕುಸುಮ?

ಯಲಬುರ್ಗಾ ವಿಧಾನಸಭಾ ಕ್ಷೇತ್ರ: ಜನರಿಂದ ಮಿಶ್ರ ಪ್ರತಿಕ್ರಿಯೆ, ಇನ್ನೂ ಇದೆ ಅಭಿವೃದ್ಧಿಯ ನಿರೀಕ್ಷೆ
Last Updated 1 ಮಾರ್ಚ್ 2023, 6:40 IST
ಅಕ್ಷರ ಗಾತ್ರ

ಯಲಬುರ್ಗಾ/ಕುಕನೂರು: ವಿಧಾನಸಭಾ ಚುನಾವಣಾ ಬಂದಾಗ ಯಲಬುರ್ಗಾ ಕ್ಷೇತ್ರದಲ್ಲಿ ಬಹುತೇಕ ಎಲ್ಲ ಪಕ್ಷದವರಿಗೆ ನೀರಾವರಿ ಯೋಜನೆಯೇ ಪ್ರಮುಖ ವಿಷಯವಾಗಿ ಕಾಣಿಸಿಕೊಳ್ಳುತ್ತಿದೆ. ಇದು ರಾಜಕೀಯ ಜಟಾಪಟಿಗೂ ಕಾರಣವಾಗುತ್ತದೆ.

ಜೊತೆಗೆ ಕೆರೆಗಳ ಅಭಿವೃದ್ಧಿ, ಶೈಕ್ಷಣಿಕ ಸುಧಾರಣೆ, ಯುವಕರಿಗೆ ಉದ್ಯೋಗ ಹಾಗೂ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಿಕೊಡುವ ಅಂಶಗಳನ್ನು ಮುಂದಿಟ್ಟುಕೊಂಡು ಚುನಾವಣೆಗಳನ್ನು ಎದುರಿಸಿಕೊಂಡು ಬರಲಾಗಿದೆ. ಆದರೆ, ಇವು ಇದುವರೆಗೂ ಪೂರ್ಣಪ್ರಮಾಣದಲ್ಲಿ ಕಲ್ಪಿಸಿಕೊಡಲು ಸಾಧ್ಯವಾಗಿಲ್ಲ. ಮಂತ್ರಕ್ಕಿಂತ ಉಗುಳೇ ಜಾಸ್ತಿ ಎನ್ನುವ ರೀತಿಯಲ್ಲಿ ಕ್ಷೇತ್ರದ ಚಿತ್ರಣವಿದೆ. ಕಳೆದ 10 ವರ್ಷಗಳಿಂದ ನೀರಾವರಿ ವಿಷಯವೇ ಬಹುಚರ್ಚಿತ ವಿಷಯವಾಗಿದೆ. ಪರ ವಿರೋಧ, ಟೀಕೆ ಟಿಪ್ಪಣೆಗಳ ಭರಾಟೆ ಜೋರಾಗಿಯೇ ಇದೆ. ಆದರೆ ನೀರಾವರಿ ಯೋಜನೆಗಳ ಅನುಷ್ಠಾನ ಮಾತ್ರ ಕ್ಷೇತ್ರದ ಪಾಲಿಗೆ ಗಗನಕುಸುಮವಾದಂತಿದೆ.

2013ರಲ್ಲಿ ‘ಕಾಂಗ್ರೆಸ್ ನಡೆಗೆ ಕೃಷ್ಣೆಯ ಕಡೆಗೆ’ ಎಂದು ಪಾದಯಾತ್ರೆ ಮಾಡಿದ್ದ ಮಾಜಿ ಸಚಿವ ಬಸವರಾಜ ರಾಯರಡ್ಡಿ ಆಗಿನ ಚುನಾವಣೆಯಲ್ಲಿ ಆಯ್ಕೆಯಾದರು. ಆದರೆ ಕೃಷ್ಣೆ ಆಲಮಟ್ಟಿಯಿಂದ ಯಲಬುರ್ಗಾ ಕ್ಷೇತ್ರದ ಕಡೆ ಬರಲಿಲ್ಲ. 2018ರ ಚುನಾವಣೆಯಲ್ಲಿಯೂ ನೀರಾವರಿಗಾಗಿ ಬಿಜೆಪಿ ಬೆಂಬಲಿಸಿ ಎಂದು ಕೋರಿದ್ದಕ್ಕೆ ಜನತೆ ವಿಶ್ವಾಸ ತೋರಿ ಹಾಲಪ್ಪ ಆಚಾರ್‌ ಅವರನ್ನು ಶಾಸಕರನ್ನಾಗಿ ಮಾಡಿದರು. ಸಚಿವರೂ ಆದರು.

ಕೃಷ್ಣಾ ನೀರಾವರಿ ಯೋಜನೆ ಜಾರಿಯಲ್ಲಿ ಕಾನೂನಿನ ತೊಡಕು ಇರುವ ಬಗ್ಗೆ ಗೊತ್ತಿದ್ದರೂ ಶೀಘ್ರದಲ್ಲಿಯೇ ಕ್ಷೇತ್ರಕ್ಕೆ ನೀರು ತರುವುದೇ ಗುರಿ ಎಂದು ಹೇಳುತ್ತಲೇ ಈಗಿನ ಸಚಿವರು ಅವಧಿ ಮುಗಿಸುವ ಹಂತಕ್ಕೆ ಬಂದಿದ್ದಾರೆ. ಅದರ ಬದಲಿಗೆ ಕೊಪ್ಪಳ ಏತ ನೀರಾವರಿ ಯೋಜನೆ ಜಾರಿಗೆ ಬದ್ಧ, ಚುನಾವಣೆ ಘೋಷಣೆಯಾಗುವ ಹೊತ್ತಿಗೆ ಇದು ಸಕಾರಗೊಳ್ಳುತ್ತದೆ ಎಂದು ಸಚಿವ ಹಾಲಪ್ಪ ಆಚಾರ್ ಹಾಗೂ ಅವರ ಬೆಂಬಲಿಗರು ಬಲವಾದ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಕೆರೆಗಳ ಅಭಿವೃದ್ಧಿ, ಭಾನಾಪುರದಲ್ಲಿ ಏಕಸ್‌ ಗೊಂಬೆ ತಯಾರಿಕಾ ಘಟಕ, ಸ್ನಾತಕೋತ್ತರ ಕೇಂದ್ರದ ಕಟ್ಟಡ, ಹೈಸ್ಕೂಲ್, ಪಿಯು ಕಾಲೇಜುಗಳ ಮಂಜೂರು, ಹೆಚ್ಚುವರಿ ಶಾಲಾ ಕೊಠಡಿಗಳ ನಿರ್ಮಾಣ, ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ಹಳ್ಳಿಗಳಲ್ಲಿ ಸಿಮೆಂಟ್ ರಸ್ತೆಗಳ ನಿರ್ಮಾಣ, ದೇವಸ್ಥಾನ ಜೀರ್ಣೋದ್ದಾರಕ್ಕೆ ಅನುದಾನ, ಸಹಕಾರ ಸಂಘಗಳ ಅಭಿವೃದ್ಧಿ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸಿ ಗ್ರಾಮೀಣಾಭಿವೃದ್ಧಿಗೆ ಒತ್ತುಕೊಟ್ಟಿದ್ದು ಈಗಿನ ಶಾಸಕರ ಸಾಧನೆ ಎಂದು ಬಿಜೆಪಿ ಪಾಳೆಯದ ಜನ ಹೇಳಿಕೊಳ್ಳುತ್ತಿದ್ದಾರೆ.

ಹಾಗೆಯೇ ಮತ್ತೆ ಕೆಲವರು ಸರ್ಕಾರದ ಯೋಜನೆಗಳು ಸಹಜವಾಗಿ ಜಾರಿಗೊಂಡಿವೆ. ಇದರಲ್ಲಿ ಸಚಿವರ ಪ್ರಯತ್ನವೇನೂ ಇಲ್ಲ, ದೊಡ್ಡ ದೊಡ್ಡ ಯೋಜನೆಗಳು ಕ್ಷೇತ್ರಕ್ಕೆ ತರುವ ಕೆಲಸ ಮಾಡಿಲ್ಲ, ಸರ್ಕಾರದಲ್ಲಿ ದೊಡ್ಡ ಸ್ಥಾನ ಹೊಂದಿದ್ದರಿಂದ ಹೆಚ್ಚಿನ ಪ್ರಗತಿಸಾಧಿಸಲು ಈಗಿನ ಶಾಸಕರಿಗೆ ಅವಕಾಶವಿತ್ತು. ಆದರೆ ಆ ನಿಟ್ಟಿನಲ್ಲಿ ಹೆಚ್ಚಿನ ಕ್ರಿಯಾಶೀಲತೆ ತೋರಿಲ್ಲ ಎಂಬ ಟೀಕೆಗಳೂ ಕೂಡ ಇವೆ.

ಭಾನಾಪುರ ಬಳಿ ಗೊಂಬೆ ತಯಾರಿಕಾ ಕ್ಲಸ್ಟರ್‌ನಿಂದ 15ರಿಂದ 20ಸಾವಿರ ಸ್ಥಳೀಯ ಯುವಕರಿಗೆ ಉದ್ಯೋಗದ ಅವಕಾಶಗಳಿರುವುದು ಮೇಲ್ನೋಟಕ್ಕೆ ಕಂಡು ಬಂದರೂ ಕ್ಷೇತ್ರದ ಯುವಕರಿಗೆ ಎಷ್ಟರ ಮಟ್ಟಿಗೆ ಅವಕಾಶಗಳು ಸಿಗುತ್ತವೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.

ಕೊಟ್ಟ ಭರವಸೆಗಳಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಕೃಷ್ಣಾ ನೀರಾವರಿ ಯೋಜನೆ ಬದಲಿಗೆ ಕೊಪ್ಪಳ ಏತ ನೀರಾವರಿ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಯುವಕರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಕ್ಷೇತ್ರದಲ್ಲಿ ದೊಡ್ಡ ಉದ್ಯಮ ನಿರ್ಮಾಣಗೊಳ್ಳುತ್ತಿದೆ. ಕರಮುಡಿ ಮತ್ತು ಸಂಕನೂರು ಭಾಗದ ಐದು ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಿದ್ದು, ಐದು ವರ್ಷಗಳ ಆಡಳಿತದ ಬಗ್ಗೆ ತೃಪ್ತಿಯಿದೆ. -ಹಾಲಪ್ಪ ಆಚಾರ್, ಸಚಿವ

ನೀರಾವರಿ ವಿಷಯದಲ್ಲಿ ಸಚಿವ ಹಾಲಪ್ಪ ಅವರು ಕ್ಷೇತ್ರದ ಜನತೆಗೆ ಸುಳ್ಳು ಹೇಳುವ ಮೂಲಕ ತಪ್ಪು ಸಂದೇಶ ನೀಡುತ್ತಿದ್ದಾರೆ. ಕೆರೆ ತುಂಬಿಸುವ ಯೋಜನೆ ಕೂಡಾ ಕಾಂಗ್ರೆಸ್ ಸರ್ಕಾರದ ಕೊಡುಗೆ. ಅದನ್ನೆ ಮುಂದಿಟ್ಟುಕೊಂಡು ನೀರಾವರಿ ಮಾಡುವುದಾಗಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ, ಕ್ಷೇತ್ರದಲ್ಲಿ ಸ್ವಜಾತಿ ಅಧಿಕಾರಿಗಳನ್ನು ನೇಮಿಸಿಕೊಂಡು ತಮ್ಮಿಷ್ಟದಂತೆ ಅಧಿಕಾರ ನಡೆಸುತ್ತಿದ್ದಾರೆ. ಆಡಳಿತದಲ್ಲಿ ಕುಟುಂಬದ ಸದಸ್ಯರು ಭಾಗಿಯಾಗಿದ್ದರಿಂದ ಆಡಳಿತ ವ್ಯವಸ್ಥೆಯ ಪಾವಿತ್ರ್ಯತೆ ಕಳೆದುಕೊಂಡಿದೆ.

–ಬಸವರಾಜ ರಾಯರಡ್ಡಿ, ಮಾಜಿ ಸಚಿವ

ಉತ್ತಮ ಆಡಳಿತ ವ್ಯವಸ್ಥೆಗಾಗಿ ಹೋಬಳಿ ರಚಿಸುವುದಾಗಿಲಿ ಹೀಗೆ ಕ್ಷೇತ್ರದ ಜನತೆಗೆ ಹೆಚ್ಚಿನ ಅನುಕೂಲವಾಗುವ ಯಾವುದೇ ಕೆಲಸ ಕಳೆದ ಎರಡು ಅವಧಿಯಿಂದಲೂ ಆಗಿಲ್ಲ. ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.

–ಮಲ್ಲನಗೌಡ ಕೋನನಗೌಡ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ, ಯಲಬುರ್ಗಾ

ಹಿಂದುಳಿದ ಪ್ರದೇಶದ ಹಿರೇವಂಕಲಕುಂಟಾ ವ್ಯಾಪ್ತಿಯಲ್ಲಿ ದೊಡ್ಡ ಯೋಜನೆಗಳು, ಕಾಮಗಾರಿಗಳು ಅನುಷ್ಠಾನಕ್ಕೆ ಮುಂದಾಗುತ್ತಿಲ್ಲ, ತಾಲ್ಲೂಕು ಕೇಂದ್ರದಿಂದ ಸುಮಾರು 35ಕಿ.ಮೀ ದೂರದಲ್ಲಿರುವ ಈ ಪ್ರದೇಶವನ್ನು ತಾಲ್ಲೂಕು ಕೇಂದ್ರ ಮಾಡಿದರೆ ಉತ್ತಮ.

–ಮಾರುತಿ ಹೆಗಡೆ, ಹಿರೇವಡ್ರಕಲ್ಲ, ಯಲಬುರ್ಗಾ ತಾಲ್ಲೂಕು

ಹೊಸ ತಾಲ್ಲೂಕು ಕೇಂದ್ರವಾಗಿ 5ವರ್ಷ ಪೂರ್ಣಗೊಳಿಸಿದರೂ ಅಭಿವೃದ್ಧಿಗೊಳಿಸಲು ಸಾಧ್ಯವಾಗಿಲ್ಲ, ಯಾವೊಂದು ಇಲಾಖೆಯ ಕಚೇರಿ ಪ್ರಾರಂಭಗೊಂಡಿಲ್ಲ, ತಹಶೀಲ್ ಕಚೇರಿ ಬಿಟ್ಟರೆ ಉಳಿದ ಇಲಾಖೆಗಳು ಇನ್ನೂ ಯಲಬುರ್ಗಾದಲ್ಲಿಯೇ ಉಳಿದಿವೆ.

–ಗೌಸುಸಾಬ್ ತಳಕಲ್ಲ, ಕುಕನೂರು

ಕ್ಷೇತ್ರದ ಸಮಗ್ರ ಅಭಿವೃದ್ಧಿಯಲ್ಲಿ ಹಾಲಪ್ಪ ಆಚಾರ್ ವಿಫಲರಾಗಿದ್ದಾರೆ. ಚುನಾವಣೆಯಲ್ಲಿ ಇದ್ದ ಧೋರಣೆಯು ಗೆಲುವು ಸಾಧಿಸಿದ ಮೇಲೆ ತೋರಲಿಲ್ಲ. ಎಲ್ಲರನ್ನೂ ನಿರ್ಲಕ್ಷಿಸಿ ತಾವು ಹೇಗೆ ಇಷ್ಟವೋ ಹಾಗೆ ಆಡಳಿತ ನಡೆಸಿದ್ದಾರೆ. ತಾವು ಅಭಿವೃದ್ಧಿಯಾಗಿದ್ದಾರೆ ಹೊರೆತು ಕ್ಷೇತ್ರ ಅಭಿವೃದ್ಧಿಯಾಗಿಲ್ಲ.

–ಶ್ರೀಕಾಂತ ಲಕಮಾಪುರ, ಕುಕನೂರು

ಐದು ವರ್ಷಗಳಲ್ಲಿ ಏನೂ ಆಗಿಲ್ಲ ಅನ್ನುವುದಕ್ಕೂ ಆಗಲ್ಲ, ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿ ಆಗಿದೆ ಎಂದು ಹೇಳುವುದಕ್ಕೂ ಆಗಲ್ಲ. ಸಾರಿಗೆ ಸಂಸ್ಥೆಯ ಘಟಕ ಇದ್ದರೂ ಹಳ್ಳಿಗಳಲ್ಲಿ ಸಾರಿಗೆ ಬಸ್‍ಗಿಂತಲೂ ಟಂಟಂ ವಾಹನಗಳ ಸೇವೆಯೇ ಹೆಚ್ಚಿನ ರೀತಿಯಲ್ಲಿ ದೊರೆಯುತ್ತಿದೆ.

–ನಾಗರಾಜ ಇಟಗಿ, ಕೃಷಿಕ, ಗೆದಗೇರಿ, ಯಲಬುರ್ಗಾ ತಾಲ್ಲೂಕು.

ಕುಕನೂರಿಗೆ ಬಣ್ಣ, ಯಲಬುರ್ಗಾಕ್ಕೆ ಸುಣ್ಣ!

ವಿಧಾನಸಭಾ ಕ್ಷೇತ್ರದಲ್ಲಿ ಯಲಬುರ್ಗಾ ಮತ್ತು ಕುಕನೂರು ಎರಡು ತಾಲ್ಲೂಕುಗಳು ಇವೆ. ಕ್ಷೇತ್ರದ ಸಮಗ್ರತೆಯ ದೃಷ್ಟಿಯಿಂದ ಕುಕನೂರು ಪ್ರದೇಶಕ್ಕೆ ಸಿಕ್ಕಷ್ಟು ಅಭಿವೃದ್ಧಿಯ ಭಾಗ್ಯ ಯಲಬುರ್ಗಾ ಭಾಗಕ್ಕೆ ಸಿಕ್ಕಿಲ್ಲ ಎಂಬ ಟೀಕೆಗಳು ಕೇಳಿ ಬರುತ್ತಿವೆ.

ಯಲಬುರ್ಗಾದಲ್ಲಿ ಎಪಿಎಂಸಿ ರಚನೆಯಲ್ಲಿ ಉದಾಸೀನತೆ, ಚಿಂಕೆವನ ನಿರ್ಮಾಣದಲ್ಲಿ ನಿರ್ಲಕ್ಷ್ಯ, ರದ್ದಾಗಿರುವ ಕುಕನೂರಿನ ಸರ್ಕಾರಿ ಪದವಿ ಕಾಲೇಜು ಮರು ಪ್ರಾರಂಭಿಸುವಲ್ಲಿ ವಿಫಲತೆ, ಬೇವೂರು ಹೋಬಳಿ ಕೇಂದ್ರವನ್ನಾಗಿ ಮಾಡದಿರುವುದು, ರಾತ್ರಿ ಸಮಯದಲ್ಲಿ ಕ್ಷೇತ್ರದಿಂದ ಬೇರೆ ಪ್ರದೇಶಗಳಿಗೆ ಪ್ರಯಾಣಿಸಲು ತೀವ್ರ ತೊಂದರೆ ಅನುಭವಿಸುತ್ತಿರುವ ಯಲಬುರ್ಗಾ ಕ್ಷೇತ್ರದ ಜನತೆಗೆ ಕಳೆದ 10 ವರ್ಷಗಳಿಂದಲೂ ಸಮರ್ಪಕ ಸಾರಿಗೆ ಸೌಲಭ್ಯ ದೊರೆಯದೇ ಇರುವುದು ಹೀಗೆ ಅನೇಕ ಸಮಸ್ಯೆಗಳು ಪರಿಹಾರ ಕಾಣದೇ ಸುಮಾರು ವರ್ಷಗಳಿಂದಲೂ ಹಾಗೆ ಅವ್ಯವಸ್ಥೆ ಮುಂದುವರೆದಿವೆ ಎಂದು ಕ್ಷೇತ್ರದ ಜನರಿಂದ ಕೇಳಿಬಂದ ಅಸಮಾಧಾನದ ಮಾತುಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT