ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ | ತ್ರಿಕೋನ ಸ್ಪರ್ಧೆಯಿಂದ ಕಾಂಗ್ರೆಸ್‌ಗೆ ಲಾಭ: ರಾಘವೇಂದ್ರ

ಕ್ಷೇತ್ರದಲ್ಲಿ ನೀರಾವರಿ, ಮೂಲಸೌಲಭ್ಯ ಅಭಿವೃದ್ಧಿಗೆ ಒತ್ತು ನೀಡುವೆ: ಕೊಪ್ಪಳ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಾಘವೇಂದ್ರ ಹಿಟ್ನಾಳ
Published 30 ಏಪ್ರಿಲ್ 2023, 14:02 IST
Last Updated 30 ಏಪ್ರಿಲ್ 2023, 14:02 IST
ಅಕ್ಷರ ಗಾತ್ರ

ಪ್ರಮೋದ

ಕೊಪ್ಪಳ: ಕೊಪ್ಪಳ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಈ ಬಾರಿಯೂ ಸ್ಪರ್ಧೆ ಮಾಡಿದ್ದು ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಅವರೊಂದಿಗೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನ ಇಲ್ಲಿದೆ.

* ಹೇಗಿದೆ ಚುನಾವಣಾ ಪ್ರಚಾರ. ಯಾವ ವಿಷಯಗಳನ್ನು ಮುಂದಿಟ್ಟು ಮತ ಕೇಳುತ್ತಿದ್ದೀರಿ?

ಹಿಂದಿನ ಎರಡು ಅವಧಿಗಳಲ್ಲಿ ಶಾಸಕನಾಗಿ ಮಾಡಿದ ಕೆಲಸಗಳು ಮತ್ತು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಾರಿಗೆ ತನಕ ಜನಪರ ಯೋಜನೆಗಳನ್ನು ಜನರ ಮುಂದಿಟ್ಟು ಮತ ಕೇಳುತ್ತಿರುವೆ. ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.     

* ಕ್ಷೇತ್ರದಲ್ಲಿ ಪ್ರತಿ ಬಾರಿ ಒಬ್ಬ ಪ್ರಬಲ ಎದುರಾಳಿ ಇರುತ್ತಿದ್ದರು. ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆಯಲ್ಲ?

ಹೌದು; ಇದರಿಂದ ನನಗೆ ಅನುಕೂಲವೇ ಆಗಿದ್ದು, ಗೆಲುವು ಸುಲಭವಾಗಲಿದೆ.

* ಹೇಗೆ ಅದನ್ನು ವಿಶ್ಲೇಷಿಸುತ್ತೀರಿ?

ಬಿಜೆಪಿ ಆಡಳಿತದಿಂದ ಜನ ರೋಸಿ ಹೋಗಿದ್ದಾರೆ. ಬೆಲೆ ಏರಿಕೆ, ಜೆಎಸ್‌ಟಿ, ಭ್ರಷ್ಟಾಚಾರ, ಕೋಮುವಾದ ಇವುಗಳಿಂದ ಸಾಕಾಗಿದೆ. ಇವು ಬಿಜೆಪಿಗೆ ಮುಳುವಾಗಲಿವೆ. ಪ್ರಣಾಳಿಕೆಯಲ್ಲಿ ಈಗಾಗಲೇ ನಮ್ಮ ಪಕ್ಷ ಘೋಷಣೆ ಮಾಡಿರುವ ಗ್ಯಾರಂಟಿಗಳ ಬಗ್ಗೆ ಜನ ಭರವಸೆ ಹೊಂದಿದ್ದಾರೆ. ರಾಜ್ಯದಾದ್ಯಂತ ಕಾಂಗ್ರೆಸ್‌ ಪರ ಜನ ಒಲವು ತೋರುತ್ತಿದ್ದಾರೆ.

* 10 ವರ್ಷ ಶಾಸಕರಾಗಿದ್ದರೂ ನೀರಾವರಿ ಯೋಜನೆಗಳನ್ನು ಸಂಪೂರ್ಣವಾಗಿ ಜಾರಿ ಮಾಡಿಲ್ಲವಲ್ಲ?

ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ದೊಡ್ಡ ಮೊತ್ತ ಬೇಕಾಗುತ್ತದೆ. ಬಿಜೆಪಿ ಸರ್ಕಾರ ನೀರಾವರಿ ಯೋಜನೆಗಳಿಗೆ ಒಂದೇ ಒಂದು ರೂಪಾಯಿ ಹಣ ನೀಡಲಿಲ್ಲ. ಹೀಗಾಗಿ ಯೋಜನೆಗಳು ಅಪೂರ್ಣಗೊಂಡಿದ್ದು, ಈ ಬಾರಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಬಾಕಿ ಉಳಿದ ಎಲ್ಲಾ ಯೋಜನೆಗಳನ್ನು ಪೂರ್ಣಗೊಳಿಸುತ್ತೇನೆ.

* ಕ್ಷೇತ್ರದ ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡುವುದಾಗಿ ಜೆಡಿಎಸ್‌ ಅಭ್ಯರ್ಥಿ ಸಿ.ವಿ. ಚಂದ್ರಶೇಖರ್‌ ಹೇಳುತ್ತಿದ್ದಾರಲ್ಲ?

ಜೆಡಿಎಸ್ ಪಕ್ಷದಲ್ಲಿ ಕುಟುಂಬ ರಾಜಕಾರಣವಿಲ್ಲವೇ? ಅವರ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಯಾರು? ಅವರ ಕುಟುಂಬದವರೇ ಎಷ್ಟು ಜನ ರಾಜಕಾರಣಿಗಳು ಇದ್ದಾರೆ ಎನ್ನುವುದನ್ನು ಅಭ್ಯರ್ಥಿ ತಿಳಿದುಕೊಳ್ಳಲಿ.

* ಜನರಿಗೆ ಸೌಲಭ್ಯ ದೊರಕಿಸಿಕೊಡಲು ಒಮ್ಮೆಯೂ ಇಲ್ಲಿನ ಶಾಸಕರು ಹೋರಾಟ ಮಾಡಿಲ್ಲ ಎಂದು ಸಂಸದ ಸಂಗಣ್ಣ ಕರಡಿ ಆರೋಪಿಸಿದ್ದಾರಲ್ಲ?     

ಸಂಸದರಾಗಿ ಅವರು ಎಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ? ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಶಾದಿಮಹಲ್‌ಗೆ ಅನುದಾನ, ಫಾರ್ಮ್‌ ನಂಬರ್‌ 3 ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡುವಂತೆ ಸದನದಲ್ಲಿಯೇ ಕೇಳಿದ್ದೇನೆ. ಸಂಸದರು ಹತಾಶೆಯಿಂದಾಗಿ ಮಾತನಾಡುತ್ತಿದ್ದಾರೆ.

* ಮಂಜುಳಾ ಕರಡಿ ಬಿಜೆಪಿ ಅಭ್ಯರ್ಥಿಯಾಗಿದ್ದು ನಿಮಗೆ ಅನುಕೂಲವಾಯಿತೇ?

ಎದುರಾಳಿ ಪಕ್ಷದ ಅಭ್ಯರ್ಥಿ ಯಾರೇ ಆದರೂ ತೊಂದರೆಯಿಲ್ಲ. ಖುದ್ದು ಸಂಸದರೇ ಸ್ಪರ್ಧೆ ಮಾಡಿದ್ದರೂ ಚಿಂತೆ ಇರಲಿಲ್ಲ.

* ಮತ್ತೆ ಶಾಸಕರಾಗಿ ಆಯ್ಕೆಯಾದರೆ ಯಾವ ಕೆಲಸಗಳಿಗೆ ಆದ್ಯತೆ? 

ರಸ್ತೆಗಳು, ಕುಡಿಯುವ ನೀರು, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ ಕೊಡುತ್ತೇವೆ. 450 ಹಾಸಿಗೆಗಳ ಆಸ್ಪತ್ರೆಯನ್ನು 1000 ಹಾಸಿಗೆಗಳಿಗೆ ಹೆಚ್ಚಿಸುವ ಗುರಿಯಿದೆ. ನಗರದಲ್ಲಿ 40 ಸಾವಿರ ಮನೆಗಳಿಗೆ 24X7 ಕುಡಿಯುವ ನೀರು ಒದಗಿಸುವ ಗುರಿಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT