ಶನಿವಾರ, ಸೆಪ್ಟೆಂಬರ್ 19, 2020
22 °C
ಹೊಸಮನೆಯಲ್ಲಿ ಪತ್ನಿಯ ಪ್ರತಿಮೆ; ಉದ್ಯಮಿ ಶ್ರೀನಿವಾಸ್‌ ಗುಪ್ತಾ ಪ್ರೀತಿಗೆ ಅಪಾರ ಮೆಚ್ಚುಗೆ

ಕೊಪ್ಪಳ | ಮಡಿದ ಪತ್ನಿಯನ್ನು ‘ಮನೆತುಂಬಿಕೊಂಡ’ ಪತಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಅಪಘಾತದಲ್ಲಿ ಮೃತಪಟ್ಟ ಪತ್ನಿಯ ಪ್ರತಿಮೆಯನ್ನು ಹೊಸಮನೆಯಲ್ಲಿ ಪ್ರತಿಷ್ಠಾಪಿಸಿ ಗೃಹ ಪ್ರವೇಶ ಮಾಡಿದ ಉದ್ಯಮಿ ಶ್ರೀನಿವಾಸ್‌ ಗುಪ್ತಾ ಅವರ ‘ಪ್ರೀತಿಯ ಕಾರ್ಯ’ ಮೆಚ್ಚುಗೆಗೆ ಪಾತ್ರವಾಗಿದೆ. 

ಜನ ತಂಡೋಪ ತಂಡವಾಗಿ ತೆರಳಿ ಪ್ರತಿಮೆ ವೀಕ್ಷಿಸುತ್ತಿದ್ದು, ಗುಪ್ತಾ ಅವರ ಹೊಸಮನೆ ಈಗ ಜನಾಕರ್ಷಣೆಯ ಕೇಂದ್ರವಾಗಿ ಮಾರ್ಪಟ್ಟಿದೆ. ಇಲ್ಲಿಯ ಭಾಗ್ಯನಗರದ ಶ್ರೀನಿವಾಸ್‌ ಗುಪ್ತಾ ಉದ್ಯಮಿ. ಕೂದಲನ್ನು ರಫ್ತು ಮಾಡಿ ಹೆಸರು ಮಾಡಿದ್ದಾರೆ. 

ಶ್ರೀನಿವಾಸ್‌ ಕುಟುಂಬದಲ್ಲಿ ಪತ್ನಿ ಮಾಧವಿ, ಪುತ್ರಿಯರಾದ ಅನುಷಾ, ಸಿಂಧೂಷಾ ಇದ್ದರು. ಆದರೆ, ಮೂರು ವರ್ಷಗಳ ಹಿಂದೆ ಅಪಘಾತದಲ್ಲಿ ಮಾಧವಿ ಮೃತಪಟ್ಟರು. ಭಾಗ್ಯನಗರದ ಗುಪ್ತಾ ಅಪಾರ್ಟ್‌ಮೆಂಟ್‌ ಆವರಣದಲ್ಲಿ ಹೊಸಮನೆ ನಿರ್ಮಿಸಬೇಕು ಎಂಬು
ವುದು ಅವರ ಕನಸಾಗಿತ್ತು.

ಪತ್ನಿಯ ಬಯಕೆಯಂತೆ ಪತಿ ಹೊಸಮನೆಯನ್ನೇನೋ ಕಟ್ಟಿಸಿದರು. ಆದರೆ, ಗೃಹ ಪ್ರವೇಶದ ಸಂಭ್ರಮಕ್ಕೆ ಪತ್ನಿಯೇ ಇಲ್ಲ ಎಂಬ ಕೊರಗು. ಈ ಕೊರತೆ ನೀಗಿಸಲು ಅವರಿಗೆ ಹೊಳೆದಿದ್ದು ಪ್ರತಿಮೆ ಸ್ಥಾಪಿಸುವ ಉಪಾಯ.

‘ಮೇಣದ ಪ್ರತಿಮೆ ಸ್ಥಾಪಿಸುವ ಉದ್ದೇಶದಿಂದ ಬೆಂಗಳೂರಿನ ‘ಗೊಂಬೆಮನೆ’ಯ ಶಿಲ್ಪಿ ಶ್ರೀಧರಮೂರ್ತಿ ಅವರನ್ನು ಸಂಪರ್ಕಿಸಿದೆವು. ಕೊಪ್ಪಳದಲ್ಲಿ ತಾಪಮಾನ ಹೆಚ್ಚಿರುವುದರಿಂದ ಮೇಣದ ಪ್ರತಿಮೆ ಬೇಡ ಎಂದ ಅವರು, ಸಿಲಿಕಾನ್ ಉಪಕರಣ ಬಳಸಿ ಅಂದಾಜು 15 ಕೆ.ಜಿ. ತೂಕವಿರುವ ಪತ್ನಿಯ ಪ್ರತಿಮೆಯನ್ನು ಒಂದು ವರ್ಷದ ಅವಧಿಯಲ್ಲಿ ತಯಾರಿಸಿಕೊಟ್ಟಿದ್ದಾರೆ’ ಎನ್ನುತ್ತಾರೆ ಶ್ರೀನಿವಾಸ್‌ ಗುಪ್ತಾ. 

ಪತ್ನಿಯ ಪ್ರತಿಮೆಯನ್ನು ಮನೆಯಲ್ಲಿ ಪ್ರತಿಷ್ಠಾಪಿಸುವುದರೊಂದಿಗೆ ಗುಪ್ತಾ ಅವರು ಈಚೆಗೆ ಗೃಹ ಪ್ರವೇಶ ಮಾಡಿದ್ದಾರೆ. ಮನೆಯ ಹಜಾರದಲ್ಲಿ ಸೋಫಾದ ಮೇಲೆ ಕೂರಿಸಿರುವ ಮಾಧವಿ ಅವರ ಪ್ರತಿಮೆಗೆ ಪತಿ, ಮಕ್ಕಳು ನಿತ್ಯ ಅಲಂಕಾರ ಮಾಡುತ್ತಿದ್ದಾರೆ.

‘ಅಮ್ಮನ ಪ್ರತಿಮೆಯನ್ನು ನೋಡಲು ನಿತ್ಯ ಬಹಳಷ್ಟು ಜನ ಮನೆಗೆ ಬರುತ್ತಿದ್ದಾರೆ. ಅಲ್ಲದೇ ಮೆಚ್ಚುಗೆ ಕೂಡ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ಸಮಾಜಕ್ಕೆ ಹೊಸ ಸಂದೇಶ ನೀಡಿದ ತೃಪ್ತಿ ಇದೆ. ಸಾಕ್ಷಾತ್‌ ತಾಯಿಯೇ ನಮ್ಮೊಂದಿಗೆ ಇರುವ ಅನುಭವವಾಗುತ್ತಿದೆ’ ಎಂದು ಭಾವುಕರಾಗುತ್ತಾರೆ ಪುತ್ರಿ ಸಿಂಧೂಷಾ. 

**
ಮನೆಯ ಒಡತಿ ಇಲ್ಲ ಎಂಬ ಕೊರತೆ ನೀಗಿದೆ. ಕುಟುಂಬದವರೆಲ್ಲ ಒಟ್ಟಿಗೆ ಇರುವ ಭಾವ ಮೂಡುತ್ತಿದೆ. ಈ ಪ್ರತಿಮೆ ಮಾತನಾಡಲ್ಲ ಅಷ್ಟೇ.
–ಶ್ರೀನಿವಾಸ್‌ ಗುಪ್ತಾ, ಉದ್ಯಮಿ

**

ಅಮ್ಮನನ್ನು ಬಹಳ ಮಿಸ್‌ ಮಾಡಿಕೊಳ್ಳುತ್ತಿದ್ದೆವು. ಆಕೆಯ ಬಯಕೆಯಂತೆ ನಿರ್ಮಿಸಿದ ಹೊಸಮನೆಗೆ ಅಮ್ಮ ಪ್ರತಿಮೆಯ ರೂಪದಲ್ಲಿ ಬಂದಿದ್ದಾಳೆ.
–ಅನುಷಾ, ಮಾಧವಿ ಅವರ ಪುತ್ರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು