ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗಾವತಿ: ಮೊದಲ ದಿನದ ಎಸ್ಸೆಸ್ಸೆಲ್ಸಿ ಪರೀಕ್ಷೆ ಯಶಸ್ವಿ

ದಟ್ಟಣೆ ತಪ್ಪಿಸಲು ಸೂಚನಾ ಫಲಕ ಅಳವಡಿಕೆ: ಕೋವಿಡ್ ಮಾರ್ಗಸೂಚಿ ಪಾಲನೆ
Last Updated 19 ಜುಲೈ 2021, 11:54 IST
ಅಕ್ಷರ ಗಾತ್ರ

ಗಂಗಾವತಿ: ಮೊದಲ ದಿನದ ಎಸ್ಸೆಸ್ಸೆಲ್ಸಿ ಪರೀಕ್ಷೆ ತಾಲ್ಲೂಕಿನಲ್ಲಿ ಸೋಮವಾರ ಯಶಸ್ವಿಯಾಗಿ ನಡೆಯಿತು.

ಮುಖಗವಸು ತೊಟ್ಟು ಬೆಳಿಗ್ಗೆ 8 ಗಂಟೆಯಿಂದಲೇ ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳು ಬರತೊಡಗಿದರು. ಬಹುತೇಕ ಕಡೆ ಅಂತರ ಕಾಯ್ದುಕೊಂಡು ಶಿಸ್ತು ಪ್ರದರ್ಶಿಸಿದರು.

ಧ್ವನಿವರ್ಧಕದ ಮೂಲಕ ಮಕ್ಕಳಲ್ಲಿ ಕೋವಿಡ್ ಜಾಗೃತಿ ಮೂಡಿಸಲಾಯಿತು.

ನೋಂದಣಿ ಸಂಖ್ಯೆ ಹುಡುಕುವ ವೇಳೆ ದಟ್ಟಣೆ ಉಂಟಾಗುವುದನ್ನು ತಪ್ಪಿಸಲು ಕೇಂದ್ರಗಳ ಹಲವು ಕಡೆ ಸೂಚನಾ ಫಲಕಗಳನ್ನು ಅಳವಡಿಸಲಾಗಿತ್ತು.

ಪರೀಕ್ಷಾ ಕೇಂದ್ರಗಳಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ವೈದ್ಯಕೀಯ ಸಿಬ್ಬಂದಿ ಥರ್ಮಲ್‌ ಸ್ಕ್ಯಾನರ್ ಮೂಲಕ ವಿದ್ಯಾರ್ಥಿಗಳ ದೇಹದ ತಾಪಮಾನ ಪರೀಕ್ಷಿಸಿದರು.

ನಂತರ ಸ್ಕೌಟ್‌ ಮತ್ತು ಗೈಡ್ಸ್ ಸಿಬ್ಬಂದಿ ಮಕ್ಕಳಿಗೆ ಸ್ಯಾನಿಟೈಸರ್ ಮತ್ತು ಮಾಸ್ಕ್‌ಗಳನ್ನು ನೀಡಿದರು.

ಸರ್ಕಾರಿ ಕಾಲೇಜುಗಳಲ್ಲಿ ಪರೀಕ್ಷೆ ಬರೆಯುವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಕೊಠಡಿಗೆ ಸಾಲಾಗಿ ತೆರಳಲು ಚೌಕಕಾರದ ಬಾಕ್ಸ್‌ಗಳನ್ನು ರಚಿಸಲಾಗಿತ್ತು. ವಿದ್ಯಾರ್ಥಿಗಳ ನೋಂದಣಿ ಸಂಖ್ಯೆ ಕೊಠಡಿಗಳ ಮಾಹಿತಿ ನೀಡಲು ಪ್ರತ್ಯೇಕ ಶಿಕ್ಷಕರನ್ನು ನಿಯೋಜಿಸಲಾಗಿತ್ತು.

ವಿದ್ಯಾರ್ಥಿಗಳಿಗೆ ಒಎಂಆರ್ ಶೀಟ್ ಭರ್ತಿ ಮಾಡುವ ವೇಳೆ ಗೊಂದಲ ಆಗಬಾರದು ಎನ್ನುವ ಉದ್ದೇಶದಿಂದ ಪರೀಕ್ಷಾ ಕೊಠಡಿಗಳ ಬೋರ್ಡ್‌ ಮೇಲೆ ಚುಕ್ಕೆಗಳ ಮೂಲಕ ಒಎಂಆರ್ ಭರ್ತಿ ಮಾಡುವ ವಿಧಾನದ ಮಾಹಿತಿ ನೀಡಲಾಗಿತ್ತು.

ಆರತಿ ಬೆಳಗಿ, ಸೆಲ್ಯೂಟ್‌ ಮಾಡಿ ಸ್ವಾಗತ
ಗಂಗಾವತಿ:
ತಾಲ್ಲೂಕಿನ ಆನೆಗೊಂದಿ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳಿಗೆ ಆರತಿ ಬೆಳಗಲಾಯಿತು. ಸೆಲ್ಯೂಟ್ ಮಾಡುವ ಮೂಲಕ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ.ಡಿ.ಮೋಹನ್ ಅವರು ವಿದ್ಯಾರ್ಥಿಗಳನ್ನು ಸ್ವಾಗತಿಸಿದರು.

ಬಳಿಕ ಮಾತನಾಡಿದ ಮೋಹನ್,‘ಕೋವಿಡ್ ಕಾರಣ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಇದೀಗ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಸರ್ಕಾರ ಪರೀಕ್ಷೆ ನಡೆಸುತ್ತಿದೆ. ಅದಕ್ಕಾಗಿ ಶಾಲೆಗಳನ್ನು ಅಲಂಕರಿಸಲಾಗಿದೆ. ವಿದ್ಯಾರ್ಥಿಗಳಿಗೆ ಧೈರ್ಯ ತುಂಬಲಾಗುತ್ತಿದೆ’ ಎಂದರು.

ಕೋವಿಡ್ ನಿಯಮಗಳನ್ನು ಪಾಲಿಸಲಾಗುತ್ತಿದೆ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ತಿಮ್ಮಪ್ಪ ಬಾಳೆಕಾಯಿ, ಉಪಾಧ್ಯಕ್ಷೆ ಸುಶೀಲಾಬಾಯಿ, ಶಿಕ್ಷಕರಾದ ವೀರಾರೆಡ್ಡಿ, ಶಂಕ್ರಪ್ಪ, ಜಯಶ್ರೀ, ಪಿಡಿಒ ಕೃಷ್ಣಪ್ಪ, ಆರೋಗ್ಯ ಇಲಾಖೆ ಹಾಗೂ ಗ್ರಾ.ಪಂ ಸಿಬ್ಬಂದಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

6,500 ವಿದ್ಯಾರ್ಥಿಗಳು ಹಾಜರು
ಈ ಬಾರಿ ತಾಲ್ಲೂಕಿನ 33 ಕೇಂದ್ರಗಳಲ್ಲಿ ಒಟ್ಟು 6500 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಆ ಪೈಕಿ ಖಾಸಗಿ ಶಾಲೆ ರೆಗ್ಯುಲರ್ 182, ರಿಪೀಟರ್ಸ್ ಆಗಿ 742 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.

ಇದರಲ್ಲಿ ಸರ್ಕಾರಿ ಶಾಲೆ ರೆಗ್ಯುಲರ್ 40, ಖಾಸಗಿ ಶಾಲೆ ರೆಗ್ಯುಲರ್ 3 ಹಾಗೂ 14 ರಿಪೀಟರ್ಸ್‌ ಸೇರಿ ಒಟ್ಟು 57 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದರು. ಸರ್ಕಾರಿ, ಖಾಸಗಿ ವಸತಿ ನಿಲಯಗಳಲ್ಲಿದ್ದು 114 ಹಾಗೂ ಪರೀಕ್ಷಾ ಕೇಂದ್ರಗಳನ್ನು ಬದಲಾವಣೆ ಮಾಡಿಕೊಂಡು 84 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.

ಸೋಮವಾರ ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ವಿಷಯಗಳ ಪರೀಕ್ಷೆ ನಡೆಯಿತು. ಗುರುವಾರ ಪ್ರಥಮ ಭಾಷೆ ಕನ್ನಡ, ದ್ವಿತೀಯ ಭಾಷೆ ಇಂಗ್ಲೀಷ್, ತೃತೀಯ ಭಾಷೆ ಹಿಂದಿ ಪರೀಕ್ಷೆ ನಡೆಯಲಿದೆ.

ಬಫರ್ ಒಎಂಆರ್ ಶೀಟ್ ಪರೀಕ್ಷೆ: ಗಂಗಾವತಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಅಂಗವಿಕಲ ವಿದ್ಯಾರ್ಥಿನಿ ಸನಾ ಬೇಗಂ ಅವರ ತಾಯಿ ಹುಸೇನ್ ಬೀ ಅವರು ಮೂಲ ಒಎಂಆರ್ ಶೀಟ್ ಬರದ ಕಾರಣ ಬಫರ್ ಒಎಂಆರ್ ಶೀಟ್‌ನಲ್ಲಿ ಪರೀಕ್ಷೆ ಬರೆದರು.

ವಿದ್ಯಾರ್ಥಿಗಳಲ್ಲಿ ಸಂತಸ: ಪರೀಕ್ಷೆ ಬರೆದು ಹೊರಬಂದ ವಿದ್ಯಾರ್ಥಿಗಳು ಮೊದಲ ದಿನ ಯುದ್ಧ ಗೆದ್ದ ಸಂಭ್ರಮದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT