ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ | ಕೇಸೂರು ಗ್ರಾಮ ಸಂಪೂರ್ಣ ಸೀಲ್‌ಡೌನ್‌

Last Updated 26 ಮೇ 2020, 17:33 IST
ಅಕ್ಷರ ಗಾತ್ರ

ಕುಷ್ಟಗಿ: ತಾಲ್ಲೂಕಿನ ಕೇಸೂರು ಗ್ರಾಮದ ವ್ಯಕ್ತಿಯೊಬ್ಬರಿಗೆ ಕೋವಿಡ್‌–19 ದೃಢಪಟ್ಟಿದ್ದು, ಇಡೀ ಗ್ರಾಮವನ್ನು ಸೀಲ್‌ಡೌನ್‌ ಮಾಡಲಾಗಿದೆ.

ಸೋಂಕಿತ ವ್ಯಕ್ತಿ ಕೇಸೂರು, ದೋಟಿಹಾಳ ಹಾಗೂ ಕುಷ್ಟಗಿ ಪಟ್ಟಣದ ಕೆಲವು ಕಡೆ ಸಂಚರಿಸಿದ್ದಾರೆ. ಅಲ್ಲದೆ, ಆಸ್ಪತ್ರೆಗಳಿಗೂ ಭೇಟಿ ನೀಡಿದ್ದು ಅಲ್ಲಿಯ ಜನರಲ್ಲಿ ಆತಂಕ ಉಂಟು ಮಾಡಿದೆ.

ಗ್ರಾಮಕ್ಕೆ ಭೇಟಿ ನೀಡಿದ್ದ ತಹಶೀಲ್ದಾರ್‌ ಎಂ.ಸಿದ್ದೇಶ್‌, ಸಬ್‌ ಇನ್‌ಸ್ಪೆಕ್ಟರ್‌ ಚಿತ್ತರಂಜನ್ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಮನೆಯಿಂದ ಜನರು ಹೊರಬರದಂತೆ ನಿರ್ಬಂಧ ವಿಧಿಸಿದ್ದಾರೆ.

ಅದೇ ರೀತಿ ಸೋಂಕಿತನ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ತಂದೆ, ತಾಯಿ ಮತ್ತು ಸಹೋದರ ಸೇರಿ ಇತರರ ರಕ್ತ ಮತ್ತು ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಸೋಂಕಿತನನ್ನು ಕೊಪ್ಪಳದಲ್ಲಿ ಐಸೋಲೇಷನ್‌ ವಾರ್ಡ್‌ಗೆ ದಾಖಲಿಸಲಾಗಿದ್ದು ಅವರು ಮೇ 25ರಂದು ಚಿಕಿತ್ಸೆ ಪಡೆದಿದ್ದ ದೋಟಿಹಾಳ ಪ್ರಾಥಮಿಕ ಕೇಂದ್ರವನ್ನು ಬಂದ್‌ ಮಾಡಲಾಗಿದೆ. ಅದೇ ರೀತಿ ಚಿಕಿತ್ಸೆ ನೀಡಿದ ದೋಟಿಹಾಳ ಸರ್ಕಾರಿ ಆಸ್ಪತ್ರೆಯ ವೈದ್ಯ, ಅವರ ಪತ್ನಿ, ಆಸ್ಪತ್ರೆಯ ಸಿಬ್ಬಂದಿ ಸೇರಿ 13 ಜನರಿಗೆ ಹೋಂ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಲಾಗಿದೆ ಎಂದು ತಹಶೀಲ್ದಾರ್‌ ಎಂ.ಸಿದ್ದೇಶ್‌ ತಿಳಿಸಿದರು.

ಸುಮಾರು ಎರಡೂವರೆ ಸಾವಿರ ಜನಸಂಖ್ಯೆ ಇರುವ ಕೇಸೂರು ಗ್ರಾಮದ 65 ಮನೆಗಳ ವ್ಯಾಪ್ತಿಯನ್ನು ಕಂಟೈನ್‌ಮೆಂಟ್‌ ವಲಯ ಎಂದು ಗುರುತಿಸಲಾಗಿದೆ. ಗ್ರಾಮವನ್ನು ಪ್ರವೇಶಿಸುವ ಎಲ್ಲ ರಸ್ತೆಗಳನ್ನು ಬಂದ್‌ ಮಾಡಲಾಗಿದೆ. ಸೋಂಕು ನಾಶಕ ದ್ರಾವಣ ಸಿಂಪಡಣೆ
ಮಾಡಲಾಗಿದೆ.

ಸೋಂಕಿತ ವ್ಯಕ್ತಿ ಕುಷ್ಟಗಿ ಸರ್ಕಾರಿ ಆಸ್ಪತ್ರೆಗೆ ಬಂದು ಸ್ವತಃ ಗಂಟಲು ದ್ರವ, ರಕ್ತದ ಮಾದರಿ ನೀಡಿದ್ದಾರೆ. ಆದರೂ ವೈದ್ಯರು ಅವನ್ನು ಕ್ವಾರಂಟೈನ್‌ಗೆ ಒಳಪಡಿಸಿಲ್ಲ. ನಂತರ ಎರಡು ದಿನ ಸೋಂಕಿತ ವ್ಯಕ್ತಿ ಕುಷ್ಟಗಿ, ಕೇಸೂರು, ದೋಟಿಹಾಳದಲ್ಲಿ ಸಂಚರಿಸಿ ಕೆಲವರನ್ನು ಭೇಟಿ ಮಾಡಿದ್ದಾರೆ.

ಈ ಕುರಿತು ವಿವರಿಸಿದ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಆನಂದ ಗೋಟೂರು, ಈ ಹಿಂದೆ ಮಾದರಿ ನೀಡಿದ ಎಲ್ಲರನ್ನೂ ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಬೇಕು ಎಂಬ ನಿಯಮ ಇತ್ತು. ಈಗ ಮಾರ್ಗಸೂಚಿಯನ್ನು ಬದಲಿಸಲಾಗಿದ್ದು ಕೆಮ್ಮು, ನೆಗಡಿ, ಜ್ವರ ಇದ್ದವರು ಮಾದರಿ ನೀಡಿದ ನಂತರ ತಾವೇ ಹೋಂ ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT