ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭಾ ಕ್ಷೇತ್ರವಾರು ಫಲಿತಾಂಶ ವಿಶ್ಲೇಷಣೆ

ಸೋಲಿಗೆ ಹಲವು ಕಾರಣಗಳನ್ನು ಮುಂದಿಟ್ಟ ಬಿಜೆಪಿ ಕಾರ್ಯಕರ್ತರು, ಇಂದು ಯಲಬುರ್ಗಾದಲ್ಲಿ ಸಭೆ
Published 11 ಜೂನ್ 2024, 6:59 IST
Last Updated 11 ಜೂನ್ 2024, 6:59 IST
ಅಕ್ಷರ ಗಾತ್ರ

ಕೊಪ್ಪಳ: ಲೋಕಸಭಾ ಚುನಾವಣೆ ಫಲಿತಾಂಶ ಹೊರಬಂದು ಇಂದಿಗೆ (ಮಂಗಳವಾರ) ಸರಿಯಾಗಿ ಒಂದು ವಾರವಾಗಿದ್ದು, ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಪಕ್ಷದ ಸೋಲಿಗೆ ಕಾರಣಗಳೇನು ಎನ್ನುವುದರ ಬಗ್ಗೆ ಬಿಜೆಪಿ ಪ್ರತಿ ವಿಧಾನಸಭಾ ಕ್ಷೇತ್ರವಾರು ವಿಶ್ಲೇಷಣೆ ಆರಂಭಿಸಿದೆ.

ಈ ಕ್ಷೇತ್ರವು ಜಿಲ್ಲೆಯ ಐದು, ರಾಯಚೂರು ಜಿಲ್ಲೆಯ ಮಸ್ಕಿ, ಸಿಂಧನೂರು ಮತ್ತು ಬಳ್ಳಾರಿ ಜಿಲ್ಲೆಯ ಸಿರಗುಪ್ಪ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಮೊದಲ ಹಂತವಾಗಿ ಸೋಮವಾರ ಮಸ್ಕಿ ಮತ್ತು ಸಿರಗುಪ್ಪದಲ್ಲಿ ಪಕ್ಷದ ನಾಯಕರು, ಮುಖಂಡರು ಮತ್ತು ಕಾರ್ಯಕರ್ತರನ್ನು ಒಳಗೊಂಡ ಅವಲೋಕನ ಸಭೆ ಜರುಗಿದೆ.

ಕೊಪ್ಪಳ ಜಿಲ್ಲೆಯ ಮೊದಲ ಸಭೆ ಮಂಗಳವಾರ ಪಕ್ಷದ ಜಿಲ್ಲಾಧ್ಯಕ್ಷ ನವೀನ್‌ ಗುಳಗಣ್ಣನವರ್ ಸ್ವ–ಕ್ಷೇತ್ರ ಯಲಬುರ್ಗಾ ಮೂಲಕ ಆರಂಭವಾಗಲಿದೆ. ಜೂನ್‌ 4ರಂದು ನಡೆದಿದ್ದ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ರಾಜಶೇಖರ ಹಿಟ್ನಾಳ 46,357 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಸತತ ಎರಡನೇ ಬಾರಿ ಸ್ಪರ್ಧೆ ಎದುರಿಸಿದ್ದ ಹಿಟ್ನಾಳ ಈ ಸಲದ ಚುನಾವಣೆಯಲ್ಲಿ 6,63,511 ಮತಗಳನ್ನು ಪಡೆದಿದ್ದು, ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್‌ 6,17,154 ಮತಗಳನ್ನು ಪಡೆದುಕೊಂಡಿದ್ದರು.

ಉಭಯ ಪಕ್ಷಗಳ ನಾಯಕರು ಫಲಿತಾಂಶ ಹೊರಬಂದ ದಿನದಿಂದಲೇ ಯಾವ ಬೂತ್‌ನಿಂದ ಎಷ್ಟು ಮತಗಳು ಬಂದಿವೆ. ಯಾವ ಕ್ಷೇತ್ರಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮುನ್ನಡೆ ಸಾಧಿಸಲು ಸಾಧ್ಯವಾಗಿಲ್ಲ ಎನ್ನುವ ಚರ್ಚೆಗಳನ್ನು ನಡೆಸಿದ್ದಾರೆ. ಒಟ್ಟು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬಿಜೆಪಿ ಕುಷ್ಟಗಿ ಮತ್ತು ಸಿಂಧನೂರು ಕ್ಷೇತ್ರದಲ್ಲಿ ಮಾತ್ರ ಅಲ್ಪ ಮತಗಳ ಮುನ್ನಡೆ ಪಡೆದುಕೊಂಡಿತ್ತು. ಉಳಿದ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮುನ್ನಡೆ ಸಾಧಿಸಿದೆ. ಅದರಲ್ಲಿ ಸಿರಗುಪ್ಪ (20,916) ಮತ್ತು ಗಂಗಾವತಿ (15,154) ಈ ಎರಡು ಕ್ಷೇತ್ರಗಳಲ್ಲಿಯೇ ಕಾಂಗ್ರೆಸ್‌ ತನ್ನ ಗೆಲುವು ದೃಢಪಡಿಸಿಕೊಂಡಿತ್ತು.

ಗಂಗಾವತಿ ಕ್ಷೇತ್ರದಲ್ಲಿ ಬಿಜೆಪಿಯ ಜನಾರ್ದನ ರೆಡ್ಡಿಯೇ ಶಾಸಕರಿದ್ದರೂ ಅತೀವ ಹಿನ್ನಡೆಯಾಗಿದ್ದು ಹೇಗೆ? ಎನ್ನುವ ಪ್ರಶ್ನೆಯೂ ಕ್ಷೇತ್ರದಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ)ದಲ್ಲಿದ್ದ ರೆಡ್ಡಿ ಚುನಾವಣೆಯ ಹೊತ್ತಿನಲ್ಲಿಯೇ ಬಿಜೆಪಿಗೆ ಸೇರಿದ್ದು, ಅನುಕೂಲವಾಗುತ್ತದೆ ಎಂದು ಪಕ್ಷದ ಲೆಕ್ಕಾಚಾರವಾಗಿತ್ತು. ಆದರೆ ಆ ಕ್ಷೇತ್ರದಲ್ಲಿಯೇ ಪಕ್ಷಕ್ಕೆ ಹಿನ್ನಡೆಯಾಗಿದೆ. ಈ ಎಲ್ಲ ಅಂಶಗಳ ಬಗ್ಗೆಯೂ ಕ್ಷೇತ್ರವಾರು ನಡೆಯುವ ಅವಲೋಕನ ಸಭೆಯಲ್ಲಿ ಚರ್ಚೆ ನಡೆಯಲಿದೆ.

ಮಸ್ಕಿಯಲ್ಲಿ ನಡೆದ ಸಭೆಯಲ್ಲಿ ಅಧಿಕಾರಕ್ಕೆ ಬಂದರೆ ಮಹಿಳೆಯರ ಖಾತೆಗೆ ₹1 ಲಕ್ಷ ಹಾಕುವ ಭರವಸೆ, ಗ್ಯಾರಂಟಿ ಯೋಜನೆಗಳು, ಈ ಕ್ಷೇತ್ರದಲ್ಲಿ ಶತಾಯ ಗತಾಯು ಗೆಲ್ಲಲೇಬೇಕು ಎಂದು ರಾಜ್ಯದ ಹಲವು ಸಚಿವರು ಠಿಕಾಣಿ ಹೂಡಿದ್ದು, ಕಾಂಗ್ರೆಸ್‌ ಗೆಲುವಿಗೆ ಕಾರಣವಾದವು ಎನ್ನುವ ಅಂಶಗಳು ವ್ಯಕ್ತವಾಗಿವೆ. ಈ ಎಲ್ಲ ವಿಷಯಗಳ ಜೊತೆಗೆ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಿದ್ಧತೆ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗಲಿದೆ.

‘ಮೋದಿ ಆಡಳಿತದಿಂದ ಹುಮ್ಮಸ್ಸು’

ಕೊಪ್ಪಳ ಕ್ಷೇತ್ರದಲ್ಲಿ ನಾವು ಸೋತಿದ್ದರೂ ದೇಶದಲ್ಲಿ ಸರ್ಕಾರ ರಚಿಸಿದ್ದೇವೆ. ಸೋಲಿಗೆ ಕಾರಣಗಳ ಅವಲೋಕನ ಮಾಡಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಅವರ ಹ್ಯಾಟ್ರಿಕ್‌ ಆಡಳಿತ ನಮಗೆ ಪಕ್ಷ ಸಂಘಟನೆಗೆ ಪ್ರೇರಣೆಯಾಗಲಿದೆ’ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನ್‌ ಗುಳಗಣ್ಣನವರ್‌ ಹೇಳಿದರು.

‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು‘ಪ್ರತಿ ವಿಧಾನಸಭಾ ಕ್ಷೇತ್ರವಾರು ಅವಲೋಕನ ಸಭೆ ನಡೆಸುತ್ತಿದ್ದೇವೆ. ಮೋದಿ ಅಧಿಕಾರ ಪದಗ್ರಹಣ ಸಮಯದಲ್ಲಿ ಜಿಲ್ಲೆಯ ಪ್ರತಿ ಹಳ್ಳಿಗಳಲ್ಲಿಯೂ ಸಂಭ್ರಮಾಚರಣೆ ನಡೆದಿರುವುದು ನೋಡಿದರೆ ಜನ ಈಗಲೂ ನಮ್ಮ ಪರವಾಗಿ ಇದ್ದಾರೆ ಎನ್ನುವುದು ಗೊತ್ತಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT