ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸರಿಗಷ್ಟೇ ತಾಲ್ಲೂಕು: ಮೂಲಸೌಕರ್ಯ ಮರೀಚಿಕೆ

ಕುಕನೂರು, ಕಾರಟಗಿ, ಕನಕಗಿರಿ ನೂತನ ತಾಲ್ಲೂಕುಗಳ ಜನರ ಸರ್ಕಾರಿ ಕೆಲಸಗಳಿಗೆ ತಪ್ಪದ ಅಲೆದಾಟ
Last Updated 12 ಅಕ್ಟೋಬರ್ 2020, 8:20 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯ ನಾಲ್ಕು ತಾಲ್ಲೂಕುಗಳ ಜೊತೆ ಹೊಸ ಮೂರು ತಾಲ್ಲೂಕುಗಳು ಮೂರು ವರ್ಷಗಳು ಸಂದಿವೆ. ಆದರೂ ಮೂಲಸೌಕರ್ಯ ಸೇರಿದಂತೆ ಇತರೆ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ.

ಕೊಪ್ಪಳ, ಕುಷ್ಟಗಿ, ಯಲಬುರ್ಗಾ, ಗಂಗಾವತಿ ತಾಲ್ಲೂಕುಗಳ ಜೊತೆ ಈಗ ಕುಕನೂರ, ಕಾರಟಗಿ, ಕನಕಗಿರಿ ಮೂರು ತಾಲ್ಲೂಕುಗಳನ್ನು ರಚಿಸಲಾಗಿದೆ. ತಾಲ್ಲೂಕಿಗೆ ತಹಶೀಲ್ದಾರ್‌ ನೇಮಕ ಆಗಿದ್ದು ಬಿಟ್ಟರೆ ಇನ್ನೂ ಸರ್ಕಾರಿ ಕಚೇರಿ ಆರಂಭವಾಗಿಲ್ಲ. ಆಡಳಿತಾತ್ಮಕವಾಗಿ ಪೂರ್ಣ ಪ್ರಮಾಣದ ಅಧಿಕಾರ ಹೊಸ ತಾಲ್ಲೂಕುಗಳಿಗೆ ಲಭಿಸಿಲ್ಲ.

ಕುಕನೂರ: ಯಲಬುರ್ಗಾ ತಾಲ್ಲೂಕಿನಲ್ಲಿ ಇದ್ದ ಕುಕನೂರು ತಾಲ್ಲೂಕು ಕೇಂದ್ರವಾಗಿದೆ. ತಾಲ್ಲೂಕು ಆಸ್ಪತ್ರೆ, ನ್ಯಾಯಾಲಯ, ಲೋಕೋಪಯೋಗಿ ಇಲಾಖೆ, ವಿದ್ಯಾರ್ಥಿಗಳ ಹಾಸ್ಟೆಲ್‌, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿ ಸೇರಿದಂತೆ 22 ಇಲಾಖೆಗಳ ಕಚೇರಿ ಇನ್ನೂ ಆರಂಭವಾಗಿಲ್ಲ.

ತಹಶೀಲ್ದಾರ್ ಕಚೇರಿ, ಎಪಿಎಂಸಿ, ಅಗ್ನಿಶಾಮಕ ದಳ ಕಚೇರಿ ಮಾತ್ರ ಕಾರ್ಯನಿರ್ವಹಿಸುತ್ತವೆ. ಪಟ್ಟಣ ಪಂಚಾಯಿತಿಗೆ ಸಂಬಂಧಪಟ್ಟ ಕಲ್ಯಾಣ ಮಂಟಪ ಕಟ್ಟಡದಲ್ಲಿ ತಹಶೀಲ್ದಾರ್ ಕಚೇರಿಆರಂಭವಾಗಿದೆ.

‘ಕುಕನೂರಿನಲ್ಲಿ ವಿವಿಧ ಇಲಾಖೆಗಳ ಕಚೇರಿಗಾಗಿ ಸರ್ಕಾರಿ ಜಾಗ ಹಾಗೂ ಬಾಡಿಗೆ ಕಟ್ಟಡಗಳಿಗಾಗಿ ಹುಡುಕಾಟ ನಡೆದಿದೆ. ಆದರೆ, ಹೋಬಳಿಯಾಗಿದ್ದ ಈ ಊರಿನಲ್ಲಿ ಕಚೇರಿಗಳ ಕಟ್ಟಡ ನಿರ್ಮಾಣಕ್ಕೆ ಸರ್ಕಾರಿ ಭೂಮಿ ಸಿಗುತ್ತಿಲ್ಲ. ಜತೆಗೆ, ಬಾಡಿಗೆಗೆ ಸೂಕ್ತ ಖಾಸಗಿ ಕಟ್ಟಡಗಳೂ ಇಲ್ಲ’ ಎಂದು ತಹಶೀಲ್ದಾರ್ ಕಿರಣಕುಮಾರ ಕುಲಕರ್ಣಿ ತಿಳಿಸಿದರು.

‘30 ವರ್ಷಗಳ ಶ್ರಮದ ಫಲವಾಗಿ ತಾಲ್ಲೂಕು ಆಗಿದೆ. ನಮ್ಮ ಬೇಡಿಕೆಗೆ ಸ್ಪಂದಿಸಿದ ಹಿಂದಿನ ಸರ್ಕಾರ, ಹೊಸ ತಾಲ್ಲೂಕು ಘೋಷಣೆಗೆ ತೋರಿದ ಆಸಕ್ತಿಯನ್ನು ಅಭಿವೃದ್ಧಿ ವಿಷಯದಲ್ಲಿ ಇಚ್ಛಾಶಕ್ತಿ ತೋರಲಿಲ್ಲ’ ಎಂದು ತಾಲ್ಲೂಕು ಹೋರಾಟ ಸಮಿತಿ ಅಧ್ಯಕ್ಷ ರಾಮಣ್ಣ ಭಜಂತ್ರಿ ಬೇಸರ ವ್ಯಕ್ತಪಡಿಸುತ್ತಾರೆ.

‘ವರ್ಷದ ಹಿಂದೆ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಮತ್ತು ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಹೊಸ ತಾಲ್ಲೂಕುಗಳ ಅಭಿವೃದ್ಧಿ ಇರಲಿ, ಕನಿಷ್ಠ ಮೂಲಸೌಕರ್ಯ ಒದಗಿಸಿಲ್ಲ’ ಎನ್ನುತ್ತಾರೆ ಅವರು.

ಕಾರಟಗಿ: ತಾಲ್ಲೂಕು ಆಗಿದೆ ಎಂಬ ಸಂಭ್ರಮವಿದೆಯಾದರೂ, ತಾಲ್ಲೂಕಿನ ಸೌಲಭ್ಯ, ಸೇವೆ, ಕಚೇರಿಗಳ ಆರಂಭ, ಮಿನಿವಿಧಾನಸೌಧದ ಕಟ್ಟಡ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ.

ಕೋವಿಡ್- 19 ಹೆಸರಲ್ಲಿ ಇನ್ನೂ ಪೂರ್ಣಪ್ರಮಾಣದ ತಾಲ್ಲೂಕು ಆಗುವುದು ಸದ್ಯಕ್ಕೆ ಸಾಧ್ಯವಿಲ್ಲ ಎಂಬ ಜಾಣಮೌನ ಉತ್ತರ ಜನಪ್ರತಿನಿಧಿಗಳು, ಸಚಿವರು, ಅಧಿಕಾರಿಗಳಿಂದ ದೊರೆಯುತ್ತಿದೆ.

ಆರೋಗ್ಯ ಇಲಾಖೆಯ ಹಳೆಯ ಕಟ್ಟಡ ಹಾಗೂ ವಿಶೇಷ ಎಪಿಎಂಸಿ ಕಟ್ಟಡ ಹೀಗೆ ಎರಡು ದಂಡೆಯ ಮೇಲೆ ಕಾಲಿಟ್ಟಂತೆ ತಹಶೀಲ್ದಾರ್ ಕಚೇರಿ ಕಾರ್ಯಾರಂಭಿಸಿ, ಕೆಲಸ ಮಾಡುತ್ತಿದೆ. ಜನರು ಅರ್ಜಿ ಸಲ್ಲಿಸಲು ಆರೋಗ್ಯ ಇಲಾಖೆಯ ಹಳೆಯ ಕಟ್ಟಡ ಮತ್ತು ಅಧಿಕಾರಿಗಳನ್ನು ಭೇಟಿಯಾಗಲು ಎಪಿಎಂಸಿ ಕಚೇರಿಗೆ ಅಲೇದಾಡಬೇಕಿದೆ. ಕೆಲ ಸಂದರ್ಭಗಳಲ್ಲಿಯೂ ಅಧಿಕಾರಿಗಳ ಅಲೆದಾಟವೂ ಸಾಮಾನ್ಯವಾಗಿದೆ.

ಶಿಕ್ಷಣ ಇಲಾಖೆಯ ಕಟ್ಟಡವೊಂದರಲ್ಲಿ ನೂತನ ತಾಲ್ಲೂಕು ಪಂಚಾಯಿತಿ ಕಚೇರಿಅಧಿಕಾರಿ, ಸಿಬ್ಬಂದಿ ಕೊರತೆಯ ಮಧ್ಯೆ ಆರಂಭಗೊಂಡಿದೆ.ಇವೆರಡು ಕಚೇರಿ ಬಿಟ್ಟರೆ ತಾಲ್ಲೂಕಿನಲ್ಲಿ ಇರಬೇಕಿದ್ದ ಕಚೇರಿಗಳು ಆರಂಭಗೊಳ್ಳುವ ಲಕ್ಷ್ಮಣಗಳು ಸದ್ಯಕ್ಕಂತೂ ಕಾಣುತ್ತಿಲ್ಲ.

ಶಾಸಕ ಬಸವರಾಜ ದಢೇಸುಗೂರ ಪ್ರತಿಕ್ರಿಯಿಸಿ, ‘ಸರ್ಕಾರ ನೂತನ ತಾಲ್ಲೂಕು ಘೋಷಿಸಿದೆ. ಕೊರೊನಾ ಮುಂದಿನ ಪ್ರಗತಿಗೆ ಅಡ್ಡಿಯಾಗಿದೆ. ಸರ್ಕಾರದ ಮೇಲೆ ನಿರಂತರವಾದ ಒತ್ತಡ ಹಾಕಿ ಎಲ್ಲಇಲಾಖೆಗಳ ಕಚೇರಿ ಆರಂಭಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವೆ’ ಎನ್ನುತ್ತಾರೆ.

ಕನಕಗಿರಿ: ಐತಿಹಾಸಿಕ ಮತ್ತು ಭೌಗೋಳಿಕವಾಗಿ ಕನಕಗಿರಿ ಜಿಲ್ಲೆಯಲ್ಲಿಯೇ ವಿಶಿಷ್ಟ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಕನಕಗಿರಿ ಮೀಸಲು ವಿಧಾನಸಭಾ ಕ್ಷೇತ್ರ ರಚನೆಗೊಂಡಿದ್ದರೂ ತಾಲ್ಲೂಕು ಕೇಂದ್ರ ಆಗಿದ್ದಿಲ್ಲ.ಅಸ್ತಿತ್ವಕ್ಕೆಬಂದಿದೆ.

ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಕಚೇರಿ ಬಿಟ್ಟರೆ ಉಳಿದ ಕಚೇರಿ ಇನ್ನೂ ಸ್ಥಾಪನೆಗೊಂಡಿಲ್ಲ.

ಕನಕಾಚಲಪತಿ ದೇವಸ್ಥಾನದ ಆವರಣದಲ್ಲಿರುವ ಯಾತ್ರಿನಿವಾಸದಲ್ಲಿ ತಹಶೀಲ್ದಾರ್ ಕಚೇರಿಆರಂಭವಾಗಿದೆ. ತಹಶೀಲ್ದಾರ್, ಶಿರಸ್ತೇದಾರರು ಹಾಗೂ ಕಂದಾಯ ನಿರೀಕ್ಷಕರು ಸೇರಿದಂತೆ ಕೆಲ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.

ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿರುವ ಶಾಲಾ ಕಟ್ಟಡದಲ್ಲಿ ಕಳೆದ ಹತ್ತು ತಿಂಗಳ ಹಿಂದೆ ತಾಲ್ಲೂಕು ಪಂಚಾಯಿತಿ ಕಚೇರಿ ಸ್ಥಾಪಿಸಿದರೂ ಅಧಿಕಾರಿ ಹಾಗೂ ಸಿಬ್ಬಂದಿ ಕೊರತೆ ಇದೆ. ಕುಷ್ಟಗಿ ತಾಲ್ಲೂಕು ಪಂಚಾಯಿತಿ ಕಚೇರಿಯ ನರೇಗಾ ಸಹಾಯಕ ನಿರ್ದೇಶಕರೊಬ್ಬರು ಕೆಲ ತಿಂಗಳ ಕಾಲ ನಿಯೋಜನೆ ಮೇಲೆ ಬಂದು ಸೇವೆ ಸಲ್ಲಿಸಿ ಕಚೇರಿಯ ಆರ್ಥಿಕ ವೆಚ್ಚಕ್ಕೆ ಹೆದರಿ ಬಂದ ದಾರಿಗೆ ತೆರಳಿದರು ಎಂಬ ಮಾತುಗಳು ಕೇಳಿಬಂದಿವೆ.

2014ರಲ್ಲಿ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಇಲ್ಲಿ ಆರಂಭಿಸಲಾಗಿದೆ. ಪೂರ್ಣ ಪ್ರಮಾಣದ ಅಧಿಕಾರಿ ಹಾಗೂ ಸಿಬ್ಬಂದಿ ಕೆಲಸ ಮಾಡುತ್ತಿದ್ದರೂ ಸ್ವಂತ ಕಟ್ಟಡವಿಲ್ಲವಾಗಿದೆ. ಮಿನಿವಿಧಾನ ಸೌಧ ಕಟ್ಟಡ ನಿರ್ಮಾಣಕ್ಕೆ ಕಳೆದ ಒಂದು ವರ್ಷದಿಂದ ಜಾಗ ಹುಡುಕಾಟ ನಡೆಯುತ್ತಿದ್ದರೂ ಇನ್ನೂ ಅಂತಿಮವಾಗಿಲ್ಲ.

ಕ್ಷೇತ್ರ ಶಿಕ್ಷಣಾಧಿಕಾರಿ, ನ್ಯಾಯಾಲಯ, ಖಜಾನಾಧಿಕಾರಿ, ಕೃಷಿ, ಜಿಲ್ಲಾ ಪಂಚಾಯಿತಿ, ಲೋಕೋಪಯೋಗಿ, ತೋಟಗಾರಿಕೆ, ಪೊಲೀಸ್ ಸೇರಿದಂತೆ ಇತರೆ ತಾಲ್ಲೂಕು ಮಟ್ಟದ ಕಚೇರಿಗಳು ಇಲ್ಲಿವರೆಗೆ ಆರಂಭವಾಗಿಲ್ಲ. ಹೀಗಾಗಿ ಜನರು ಮಾನಸಿಕವಾಗಿ ಗಂಗಾವತಿ ತಾಲ್ಲೂಕಿನಲ್ಲಿಯೆ ಇದ್ದೇವೆ ಎಂಬ ಭಾವನೆ ಹೊಂದಿದ್ದಾರೆ.

‘ತಾಲ್ಲೂಕು ಕಚೇರಿ ಶೀಘ್ರವೆ ಆರಂಭಿಸಲಾಗುವುದು ಎಂದು ಶಾಸಕರು ಬರೀ ಭರವಸೆ ನೀಡುತ್ತಿದ್ದಾರೆ. ಯಾವ ಕಚೇರಿಯೂ ಇಲ್ಲಿವರೆಗೆ ಬಂದಿಲ್ಲ’ ಎನ್ನುತ್ತಾರೆ ದಸಂಸಮುಖಂಡ ಶಾಂತಪ್ಪ ಬಸರಿಗಿಡದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT