ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಗಿರಿ: ಕ್ಷೇತ್ರದಲ್ಲಿ ಬಾಲಕಿಯರ ಪ್ರೌಢಶಾಲೆ ಮರೀಚಿಕೆ

ನೆರೆಯ ತಾಲ್ಲೂಕುಗಳಿಗೆ ಹೋಗಬೇಕಾದ ಅನಿವಾರ್ಯತೆ, ಈಡೇರಿದ ಜನರ ನಿರೀಕ್ಷೆ
Published 9 ಮೇ 2024, 5:42 IST
Last Updated 9 ಮೇ 2024, 5:42 IST
ಅಕ್ಷರ ಗಾತ್ರ

ಕನಕಗಿರಿ: ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ವಿವಿಧ ರಾಜಕೀಯ ಪಕ್ಷಗಳ ನಾಯಕರು ಅಭಿವೃದ್ಧಿಯ ಬಗ್ಗೆ ಮಾತುಗಳನ್ನಾಡುತ್ತಿದ್ದು, ಹೆಣ್ಣುಮಕ್ಕಳ ಶಿಕ್ಷಣಕ್ಕೆ ಸ್ಥಳೀಯವಾಗಿ ಸಿಗಬೇಕಿದ್ದ ಸೌಲಭ್ಯಗಳು ಮರೀಚಿಕೆಯಾಗಿವೆ.

1978ರಲ್ಲಿಯೇ ಕನಕಗಿರಿ ವಿಧಾನಸಭಾ ಕ್ಷೇತ್ರವಾಗಿರುವ ಇಲ್ಲಿ ಇದುವರೆಗೂ ಬಾಲಕಿಯರ ಪ್ರೌಢಶಾಲೆ ಹಾಗೂ ಪಿಯು ಕಾಲೇಜು ಸೌಲಭ್ಯ ಇಲ್ಲವಾಗಿದ್ದು, ಈಗಲಾದರೂ ಇವುಗಳನ್ನು ಆರಂಭಿಸಬೇಕು ಎಂದು ವಿದ್ಯಾರ್ಥಿನಿಯರು ಹಾಗೂ ಪೋಷಕರು ಆಗ್ರಹಿಸಿದ್ದಾರೆ.

ಮೊದಲು ಗಂಗಾವತಿ ತಾಲ್ಲೂಕು ವ್ಯಾಪ್ತಿಗೆ ಸೇರಿದ್ದ ಕನಕಗಿರಿ ಹಾಗೂ ಕಾರಟಗಿ ಹೋಬಳಿಗಳು 2018ರಲ್ಲಿ ಹೊಸ ತಾಲ್ಲೂಕು ಕೇಂದ್ರಗಳಾದವು. ಕ್ಷೇತ್ರದಲ್ಲಿ 2.22 ಲಕ್ಷ‌ ಮತದಾರರಿದ್ದಾರೆ. 2015ರ ಪೂರ್ವದಲ್ಲಿ ನವಲಿ, ಹುಲಿಹೈದರ, ಕನಕಗಿರಿ, ಕಾರಟಗಿ, ಸಿದ್ದಾಪುರ, ಮರಳಿ, ಹೇರೂರು‌ ಗ್ರಾಮಗಳು‌ ಜಿಲ್ಲಾ ಪಂಚಾಯಿತಿ ಕ್ಷೇತ್ರ ಹೊಂದಿದ್ದು ಶಾಲಾ ಶಿಕ್ಷಣ‌ ಇಲಾಖೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಸೇರಿದ್ದರೂ ಇಲ್ಲಿಂದ ಆಯ್ಕೆಯಾದ ಯಾವ ಜಿಲ್ಲಾ‌ ಪಂಚಾಯಿತಿ ಸದಸ್ಯರು ಎಲ್ಲಿಯೂ ಬಾಲಕಿಯರ ಪ್ರೌಢಶಾಲೆ ಮಂಜೂರು ಮಾಡಿಲ್ಲ.

ಹೆಣ್ಣು ಮಕ್ಕಳ ಶಿಕ್ಷಣಕ್ಕೆ‌ ಒತ್ತು ನೀಡಬೇಕೆಂದು ಸರ್ಕಾರ ಹಾಗೂ ಶಿಕ್ಷಣ‌ ನೀತಿಗಳು ಹೇಳುತ್ತಿವೆಯಾದರೂ ಬಾಲಕಿಯರ ಪ್ರೌಢಶಾಲೆ ಹಾಗೂ ಪಿಯು ಕಾಲೇಜು ಮಂಜೂರು ಮಾಡುವಲ್ಲಿ ವಿಫಲವಾಗಿವೆ ಎಂದು ಪಾಲಕ‌ ಕನಕರೆಡ್ಡಿ ಕೆರಿ ದೂರುತ್ತಾರೆ. ಗ್ರಾಮೀಣ ಹಾಗೂ ಪಟ್ಟಣ ವ್ಯಾಪ್ತಿಯಲ್ಲಿರುವ ಖಾಸಗಿ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಪ್ರತಿ ವರ್ಷ ಬಾಲಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗಿ ಪ್ರೌಢಶಾಲೆಗಳಲ್ಲಿ ಪ್ರವೇಶ ಪಡೆಯುತ್ತಾರೆ. ಅವರು ನೆರೆಯ ಊರುಗಳನ್ನೇ ನೆಚ್ಚಿಕೊಳ್ಳಬೇಕಾಗಿದೆ. ಸಹ ಶಿಕ್ಷಣ‌  (ಕೋ ಎಜುಕೇಷನ್) ಇರುವ ಸರ್ಕಾರಿ ಪ್ರೌಢಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಸೇರಿಸುವುದು ಅನಿವಾರ್ಯವಾಗಿದೆ ಎಂದು ಅವರು ಅಳಲು ತೋಡಿಕೊಂಡರು.

ಇದುವರೆಗೆ 11 ವಿಧಾನಸಭಾ‌ ಚುನಾವಣೆಗಳು ನಡೆದಿದ್ದು 7 ಜನ ಕ್ಷೇತ್ರದಿಂದ ಶಾಸಕ,‌ ಸಚಿವರಾಗಿ ಕೆಲಸ ಮಾಡಿದ್ದಾರೆ. ತಮ್ಮ ಅವಧಿಯಲ್ಲಿ ವಿವಿಧ ಕಡೆಗಳಲ್ಲಿ ಸರ್ಕಾರಿ ಪ್ರೌಢಶಾಲೆ, ಹಲವು‌ ಇಲಾಖೆಗಳ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಆದರ್ಶ ವಿದ್ಯಾಲಯಗಳನ್ನು ಮಂಜೂರು ಮಾಡಿಸಿದ್ದಾರೆ. ಆದರೆ‌ ಬಾಲಕಿಯರ ಪ್ರೌಢಶಾಲೆ ಮತ್ತು‌ ಮಹಿಳಾ ಪಿಯು ಕಾಲೇಜುಗಳು ಕ್ಷೇತ್ರದ ಜನರಿಗೆ ಈಗಲೂ ಗಗನ ಕುಸುಮ.

2014ರಲ್ಲಿ ಸಚಿವರಾಗಿದ್ದ ಶಿವರಾಜ ತಂಗಡಗಿ ತಾಲ್ಲೂಕಿನ ಸೋಮಸಾಗರ, ಕಲಕೇರಿ, ಗೌರಿಪುರ ಸೇರಿದಂತೆ ಕಾರಟಗಿ ತಾಲ್ಲೂಕುಗಳಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಲ್ಲಿ ಪ್ರೌಢ (ಆರ್‌ಎಂಎಸ್‌) ಶಾಲೆಗಳನ್ನು ಮಂಜೂರು ಮಾಡಿಸಿದ್ದರೂ ಬಾಲಕಿಯರ ಪ್ರೌಢಶಾಲೆ ಭಾಗ್ಯ ಲಭಿಸಲಿಲ್ಲ.

ತಮ್ಮ ಮಕ್ಕಳು ಬಾಲಕಿಯರ ಪ್ರೌಢಶಾಲೆ ಹಾಗೂ ಬಾಲಕಿಯರ ಪಿಯು ಕಾಲೇಜಿನಲ್ಲಿ ಶಿಕ್ಷಣ‌ ಪಡೆಯಬೇಕೆಂಬ ಬಹುತೇಕ ಪಾಲಕರ ಆಸೆ‌ಗೆ ಇಷ್ಟು ವರ್ಷ ಆಡಳಿತ ಮಾಡಿದ ಯಾವ ಪಕ್ಷಗಳೂ ಸ್ಪಂದಿಸಿಲ್ಲ.

‘ಬಸ್, ಸುಸಜ್ಜಿತ ರಸ್ತೆ, ಮೂಲಸೌಲಭ್ಯಗಳ ಕೊರತೆಗಳಿಂದ ಗ್ರಾಮೀಣ ಭಾಗದ ಹೆಣ್ಣು‌ಮಕ್ಕಳು ಪ್ರೌಢಶಾಲೆಗೆ ಹೋಗುವುದೇ ಕಷ್ಟವಾಗಿರುವುದರಿಂದ ಹೋಬಳಿ ಮಟ್ಟದಲ್ಲಿ ಬಾಲಕಿಯರ ಪ್ರೌಢ ಶಾಲೆ ಹಾಗೂ ವಸತಿ ನಿಲಯ ಸ್ಥಾಪಿಸಿದರೆ ಸಾಕಷ್ಟು ಜನರಿಗೆ ಅನುಕೂಲವಾಗಲಿದೆ’ ಎಂದು ಕನಕರೆಡ್ಡಿ ಆಶಯ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT