ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುನಿರಾಬಾದ್ | ತೇವಾಂಶದ ಕೊರತೆ: ಬಿಸಿಲಿಗೆ ಒಣಗುತ್ತಿರುವ ತೆಂಗು

Published 7 ಮೇ 2024, 4:51 IST
Last Updated 7 ಮೇ 2024, 4:51 IST
ಅಕ್ಷರ ಗಾತ್ರ

ಮುನಿರಾಬಾದ್: ತುಂಗಭದ್ರಾ ಜಲಾಶಯದಲ್ಲಿ ಅಂಚಿನಲ್ಲಿಯೇ ಇದ್ದರೂ ತೇವಾಂಶದ ಕೊರತೆಯಿಂದಾಗಿ ಈ ಭಾಗದಲ್ಲಿ ಬೆಳೆದಿರುವ ತೆಂಗು ಒಣಗುತ್ತಿದೆ. ಇದು ಈ ಭಾಗದ ರೈತರನ್ನು ಚಿಂತೆಗೀಡು ಮಾಡಿದೆ.

ಕಳೆದ ವರ್ಷ ಮಳೆ ಕೊರತೆಯ ಪರಿಣಾಮದಿಂದಾಗಿ ಇಲ್ಲಿನ ತುಂಗಭದ್ರಾ ಜಲಾಶಯಕ್ಕೆ ನೀರಿನ ಒಳಹರಿವು ಕಡಿಮೆಯಾಗಿತ್ತು. ಹೀಗಾಗಿ ಜಲಾಶಯದ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಮುನಿರಾಬಾದ್, ಹಿಟ್ನಾಳ, ಹುಲಿಗಿ, ಅಗಳಕೇರಾ ಮತ್ತು ಶಿವಪುರ ಗ್ರಾ.ಪಂ ವ್ಯಾಪ್ತಿಯಲ್ಲಿ ಬರಗಾಲದ ಛಾಯೆ ಮೂಡಿದೆ.

ನಿರಂತರ ಭತ್ತ ಬೆಳೆಯುತ್ತಿದ್ದ ಗದ್ದೆಗಳು ಖಾಲಿ ಖಾಲಿ ಆಗಿವೆ. ಪಂಪ್‌ಸೆಟ್ ಸೌಲಭ್ಯ ಇರುವ ಕೆಲವು ರೈತರು ಅಲ್ಪ ಪ್ರಮಾಣದಲ್ಲಿ ಭತ್ತ, ಮೆಕ್ಕೆಜೋಳ ಮತ್ತು ಶೇಂಗಾ ಬೆಳೆದಿದ್ದಾರೆ. ಆದರೆ, ಹೆಚ್ಚಿನ ಪ್ರಮಾಣದಲ್ಲಿ ನೀರು ಬೇಡುವ ಭತ್ತವನ್ನು ಈ ಬಾರಿ ಕಡಿಮೆ ಪ್ರಮಾಣದಲ್ಲಿ ಬೆಳೆಯಲಾಗಿದೆ. ಅಚ್ಚುಕಟ್ಟು ವ್ಯಾಪ್ತಿಯ ಕೆಲವು ಭಾಗಗಳಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ.

ಹೊಸಹಳ್ಳಿ, ಹೊಸ ಲಿಂಗಾಪುರ ವ್ಯಾಪ್ತಿಯಲ್ಲಿ ಭತ್ತದ ಗದ್ದೆಯ ಬದುವಿನಲ್ಲಿ ಬೆಳೆಸಲಾದ ಹಲವು ತೆಂಗಿನ ಮರಗಳು ತೇವಾಂಶದ ಕೊರತೆಯಿಂದ ಮರದ ಗರಿಗಳು ಒಣಗುತ್ತಿವೆ.

ಮುಖಕ್ಕೆ ಮುಸುಕು: ಇಲ್ಲಿನ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಬೈಕ್ ಸವಾರರು ಮುಖಕ್ಕೆ ಮುಸುಕು ಹಾಕಿಕೊಂಡು ಸವಾರಿ ಮಾಡುತ್ತಿದ್ದಾರೆ. ಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳಲು ಸಾರ್ವಜನಿಕರು ಕಬ್ಬಿನ ಹಾಲು, ತಂಪು ಪಾನೀಯ ಮತ್ತು ಎಳೆನೀರು ಮೊರೆ ಹೋಗಿದ್ದಾರೆ.

ಮಳೆಗಾಗಿ ಪೂಜೆ: ಸಾರ್ವಜನಿಕರು ಮಳೆಗಾಗಿ ದೇವರ ಮೊರೆ ಹೋಗಿದ್ದು, ಹಲವು ಕಡೆ ಮಳೆಗಾಗಿ ಪ್ರಾರ್ಥಿಸಿ ಗುರ್ಜಿ ಪೂಜೆ ನಡೆಸಲಾಗುತ್ತಿದೆ. ರೈತರು ಮುಗಿಲ ಕಡೆ ಮುಖ ಮಾಡಿ ಮಳೆಗಾಗಿ ಕಾತರಿಸುತ್ತಿದ್ದಾರೆ. ಸಮೀಪದ ಬೆಳೆಬಾವಿ ಗ್ರಾಮದಲ್ಲಿ ಸಾರ್ವಜನಿಕರು ಮತ್ತು ಮಕ್ಕಳು ಮಳೆಗಾಗಿ ಪ್ರಾರ್ಥಿಸಿ, ಗುರ್ಜಿ ಪೂಜೆ ಮಾಡಿದ ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT