ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪೂರ್ಣ ಲಾಕ್‌ಡೌನ್ ಅನಿವಾರ್ಯ

ಕೋವಿಡ್ ಸಮಸ್ಯೆ: ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಅಭಿಮತ
Last Updated 8 ಮೇ 2021, 4:06 IST
ಅಕ್ಷರ ಗಾತ್ರ

ಕುಷ್ಟಗಿ: ‘ರಾಜ್ಯದಲ್ಲಿ ಕೋವಿಡ್‌ ಸಮಸ್ಯೆ ಗಂಭೀರ ಸ್ವರೂಪ ಪಡೆಯುತ್ತಿದ್ದು, ಪರಿಸ್ಥಿತಿ ಕೈಮೀರುವ ಹಂತ ತಲುಪುವ ಮೊದಲು ರಾಜ್ಯವನ್ನು ಸಂಪೂರ್ಣ ಲಾಕ್‌ಡೌನ್‌ ಮಾಡುವುದೊಂದೇ ಸದ್ಯಕ್ಕೆ ಇರುವ ದಾರಿ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

ಇಲ್ಲಿಯ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದರು.

‘ಈಗಾಗಲೇ ತಿಳಿದಿರುವಂತೆ ಸರ್ಕಾರ ಏನೇ ಪ್ರಯತ್ನ ಮಾಡಿದರೂ ಲಾಕ್‌ಡೌನ್‌ ಪರಿಣಾಮ ಬೀರಲೇ ಇಲ್ಲ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಜನ ಗುಂಪುಗೂಡುವುದನ್ನು ತಡೆಯಲು ಲಾಕ್‌ಡೌನ್‌ ಅನಿವಾರ್ಯ ಎಂಬುದು ತಮ್ಮ ಅಭಿಪ್ರಾಯ ಎಂದರು. ಈ ವಿಷಯಕ್ಕೆ ದನಿಗೂಡಿಸಿದ ಸ್ಥಳದಲ್ಲಿದ್ದ ಶಾಸಕ ಅಮರೇಗೌಡ ಬಯ್ಯಾಪುರ, ಜನರ ಜೀವ ಉಳಿಸುವುದು ಮುಖ್ಯವಾಗಿದ್ದು, ಲಾಕ್‌ಡೌನ್‌ಗೆ ತಮ್ಮ ಬೆಂಬಲವಿದೆ. ಅದರ ಜತೆಗೆ ಜನಸಾಮಾನ್ಯರು, ಬಡವರ ಬದುಕಿಗೆ ಸಹಾಯ ಮಾಡುವ ಕ್ರಮಗಳನ್ನು ಸರ್ಕಾರ ತಕ್ಷಣ ಕೈಗೊಳ್ಳಬೇಕಿದೆ’ ಎಂದರು.

ಕುಷ್ಟಗಿ ಕೋವಿಡ್‌ ಆರೋಗ್ಯ ಕೇಂದ್ರದಲ್ಲಿ ಕೋವಿಡ್‌ ಪೀಡಿತರಾಗಿದ್ದ 95 ವರ್ಷದ ಒಬ್ಬರು ಮತ್ತು ಗಂಟಲು ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಇನ್ನೊಬ್ಬರು ಶುಕ್ರವಾರ ಮೃತಪಟ್ಟಿದ್ದಾರೆ. ಕುಷ್ಟಗಿ ಸರ್ಕಾರಿ ಆಸ್ಪತ್ರೆಯಲ್ಲಿ ಲಭ್ಯವಿರುವ ಸೌಲಭ್ಯಗಳು, ಕೋವಿಡ್ ಚಿಕಿತ್ಸಾ ಪ್ರಕ್ರಿಯೆಗಳು, ಹಾಸಿಗೆಗಳು, ಆಮ್ಲಜನಕದ ವ್ಯವಸ್ಥೆ ಹಾಗೂ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಕುರಿತು ಪರಿಶೀಲನೆ ನಡೆಸಲಾಗಿದೆ. 42 ಬೆಡ್‌ಗಳ ಸೌಲಭ್ಯ ಇದ್ದು ಅವುಗಳಲ್ಲಿ 6 ಬೆಡ್‌ಗಳು ಖಾಲಿ ಇವೆ. ಇನ್ನೂ 20 ಬೆಡ್‌ಗಳ ವ್ಯವಸ್ಥೆ ಮಾಡಬೇಕಿದೆ. ತಾವರಗೇರಾದಲ್ಲಿ 30 ಬೆಡ್‌ಗಳ ವ್ಯವಸ್ಥೆ ಮಾಡಲಾಗುವುದು ಎಂದರು.

ತಾಲ್ಲೂಕಿನಲ್ಲಿ ಆಮ್ಲಜನಕ ಮತ್ತು ರೆಮ್‌ಡಿಸಿವಿರ್‌ ಕೊರತೆ ಇಲ್ಲ. ಅಗತ್ಯಕ್ಕೆ ಅನುಗುಣವಾಗಿ ಇವೆಲ್ಲವನ್ನೂ ಪೂರೈಸಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಖಾಲಿ ಇರುವ ಅರಳಿಕೆ ತಜ್ಞ ಹಾಗೂ ಫಿಜಿಸಿಯನ್ ಸೇರಿದಂತೆ ವೈದ್ಯಕೀಯ ಸಿಬ್ಬಂದಿ ತಕ್ಷಣ ನಿಯೋಜನೆಗೆ ತಿಳಿಸಲಾಗಿದೆ ಎಂದು ಸಚಿವ ಪಾಟೀಲ ಅವರು ವಿವರ ನೀಡಿದರು.

ಸಂಸದ ಸಂಗಣ್ಣ ಕರಡಿ, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಘುನಂದನ್ ಮೂರ್ತಿ, ಉಪವಿಭಾಗಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಲಿಂಗರಾಜ ತಹಶೀಲ್ದಾರ್ ಎಂ.ಸಿದ್ಧೇಶ್, ಡಿವೈಎಸ್‌ಪಿ ರುದ್ರೇಶ ಉಜ್ಜನಕೊಪ್ಪ ಇತರರು ಇದ್ದರು.

‘ರೋಗಿಗಳನ್ನು ಕೇರ್‌ ಸೆಂಟರ್‌ನಲ್ಲಿರಿಸಿ’
ಕೊರೊನಾ ಸೋಂಕಿತರು ಮನೆಯಲ್ಲಿ ಉಳಿಯುವುದು ಸರಿಯಲ್ಲ. ಅವರನ್ನು ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಇರಿಸಲು ಕ್ರಮ ಕೈಗೊಳ್ಳಬೇಕು. ಇದರಿಂದ ಮನೆಯ ಇತರರಿಗೂ ಸೋಂಕು ತಗುಲುವುದನ್ನು ತಡೆಯಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಅಧಿಕಾರಿಗಳಿಗೆ ಹೇಳಿದರು.

ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿ,‘ತಾವರಗೇರಾ, ಹನುಮಸಾಗರಗಳಲ್ಲಿ ತಲಾ 30, ಕುಷ್ಟಗಿಯಲ್ಲಿ 20 ಹಾಸಿಗೆ ಸೌಲಭ್ಯದ ಕೋವಿಡ್ ಕೇರ್ ಸೆಂಟರ್‌ಗಳನ್ನು ಒಂದು ವಾರದೊಳಗೆ ಆರಂಭಿಸಬೇಕು. ಕೋವಿಡ್ ಚಿಕಿತ್ಸೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಕರ್ತವ್ಯಲೋಪ, ರೋಗಿಗಳಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು’ ಎಂದು ತಾಕೀತು ಮಾಡಿದರು.

ಸಿಬ್ಬಂದಿ ಕೊರತೆ ದೊಡ್ಡ ಸಮಸ್ಯೆಯಾಗಿದೆ ಎಂದು ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ ಡಿಎಚ್‌ಒ ಡಾ.ಟಿ.ಲಿಂಗರಾಜು,‘ಸಿಬ್ಬಂದಿ ನಿಯೋಜನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಸಭೆಗೆ ತಿಳಿಸಿದರು.

ಕುಷ್ಟಗಿ ತಾಲ್ಲೂಕು ಆಸ್ಪತ್ರೆಯಲ್ಲಿ ಬಳಕೆಯಲ್ಲಿ ಇಲ್ಲದ ಆಮ್ಲಜನಕ ಟ್ಯಾಂಕ್ ದುರಸ್ತಿಗೆ ಕ್ರಮಕೈಗೊಳ್ಳುವಂತೆ ಶಾಸಕ ಅಮರೇಗೌಡ ಬಯ್ಯಾಪುರ ಸಲಹೆ ನೀಡಿದರು. ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಪ್ರತಿಕ್ರಿಯಿಸಿ,‘ತಜ್ಞರ ಮೂಲಕ ದುರಸ್ತಿ ಮಾಡಿಸುವುದಾಗಿ’ ತಿಳಿಸಿದರು. ಗಜೇಂದ್ರಗಡ ರಸ್ತೆಯ ಕೋವಿಡ್ ಕೇರ್ ಸೆಂಟರ್‌ಗೆ ಭೇಟಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT