ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭಾ ಚುನಾವಣೆ | ಸಮೀಪಿಸಿದ ಮತ ಎಣಿಕೆ ದಿನ: ಹಲವು ಲೆಕ್ಕಾಚಾರ

Published 28 ಮೇ 2024, 5:26 IST
Last Updated 28 ಮೇ 2024, 5:26 IST
ಅಕ್ಷರ ಗಾತ್ರ

ಕೊಪ್ಪಳ: ಇಂದಿಗೆ (ಮಂಗಳವಾರ) ಸರಿಯಾಗಿ ಒಂದು ವಾರಕ್ಕೆ ಲೋಕಸಭಾ ಚುನಾವಣೆಯ ಮತ ಎಣಿಕೆ ನಡೆಯಲಿದ್ದು ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು, ಕಾರ್ಯಕರ್ತರು ಮತ್ತು ಜನಸಾಮಾನ್ಯರ ನಡುವೆ ಹಲವು ಲೆಕ್ಕಾಚಾರಗಳು ನಡೆಯುತ್ತಿವೆ.

ಕೊಪ್ಪಳ ಲೋಕಸಭಾ ಕ್ಷೇತ್ರದ ಮತದಾನ ಪೂರ್ಣಗೊಂಡ ಮೇ 7ರಿಂದಲೇ ಸೋಲು ಗೆಲುವಿನ ಲೆಕ್ಕಾಚಾರಗಳು ಚುರುಕು ಪಡೆದುಕೊಂಡಿವೆ. ಕೊಪ್ಪಳ ಜಿಲ್ಲೆಯ ಐದು, ರಾಯಚೂರಿನ ಎರಡು ಮತ್ತು ಬಳ್ಳಾರಿಯ ಒಂದು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಇಲ್ಲಿನ ಕ್ಷೇತ್ರದಲ್ಲಿ ಈ ಬಾರಿ ಶೇ 70.94ರಷ್ಟು ಮತದಾನವಾಗಿದೆ. 2019ರ ಚುನಾವಣೆಗಿಂತಲೂ ಈ ಸಲ ಶೇ 2.53ರಷ್ಟು ಹೆಚ್ಚಳವಾಗಿದ್ದರಿಂದಲೂ ಯಾವ ಪಕ್ಷದ ಅಭ್ಯರ್ಥಿಗೆ ಮತಗಳಿಕೆ ಪ್ರಮಾಣ ಹೆಚ್ಚಾಗುತ್ತದೆ ಎನ್ನುವ ಚರ್ಚೆಯೂ ಜೋರಾಗಿದೆ.

ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಜನ ಅಭ್ಯರ್ಥಿಗಳು ಕಣದಲ್ಲಿದ್ದರೂ ಮುಖ್ಯವಾಗಿ ಸ್ಪರ್ಧೆ ಇರುವುದು ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳ ಅಭ್ಯರ್ಥಿಗಳ ನಡುವೆ. ವೃತ್ತಿಯಲ್ಲಿ ವೈದ್ಯರಾಗಿರುವ ಬಸವರಾಜ ಕ್ಯಾವಟರ್‌ ಬಿಜೆಪಿಯಿಂದ, 2019ರ ಚುನಾವಣೆಯಲ್ಲಿಯೂ ಸ್ಪರ್ಧೆ ಮಾಡಿದ್ದ ಕಾಂಗ್ರೆಸ್‌ನ ರಾಜಶೇಖರ ಹಿಟ್ನಾಳ ಅವರ ನಡುವೆಯೇ ಈಗ ‘ಗೆಲ್ಲುವ ಕುದುರೆ’ ಯಾರು ಎನ್ನುವುದು ಬಹುಸಂಖ್ಯೆ ಮತದಾರರ ಪ್ರಶ್ನೆಯಾಗಿದೆ.

ಮತದಾನ ಮುಗಿದ ಒಂದು ವಾರದ ತನಕ ‘ಲೋಕ’ದ ಗೆಲುವಿನ ಹಾರ ಯಾರಿಗೆ ಸಿಗುತ್ತದೆ ಎನ್ನುವ ಲೆಕ್ಕಾಚಾರದ ಕುರಿತು ಜೋರು ಚರ್ಚೆಗಳು ನಡೆದಿದ್ದವು. ಹಲವರು ತಮ್ಮ ನೆಚ್ಚಿನ ಅಭ್ಯರ್ಥಿಗಳು ಹಾಗೂ ಪಕ್ಷದ ಪರ ಬಾಜಿ ಕಟ್ಟಿ ನೋಡಿದ್ದರು. ಮಧ್ಯದಲ್ಲಿ ಚರ್ಚೆ ಕಡಿಮೆಯಾಗಿತ್ತು. ಈಗ ಮತ ಎಣಿಕೆಯ ದಿನಾಂಕ ಸಮೀಪಿಸುತ್ತಿರುವ ಕಾರಣ ಚರ್ಚೆ ಮತ್ತೆ ಚುರುಕು ಪಡೆದುಕೊಂಡಿದೆ.

ಪಕ್ಷಗಳು ಹಾಗೂ ಅಭ್ಯರ್ಥಿಗಳು ಮತದಾನದ ಬಳಿಕ ಆಂತರಿಕವಾಗಿ ತಮ್ಮ ಮೂಲಗಳನ್ನು ಬಳಸಿಕೊಂಡು ಬೂತ್‌ಗಳವಾರು ಮತದಾನದ ಪ್ರಮಾಣ ಅಲ್ಲಿ ತಮ್ಮ ಪಕ್ಷಕ್ಕೆ ಸಿಗುವ ಮತಗಳು ಎಷ್ಟು? ಎನ್ನುವ ಮಾಹಿತಿ ತರಿಸಿಕೊಂಡಿವೆ. ದೇವರ ಪ್ರಾರ್ಥನೆ ಮತ್ತು ಭವಿಷ್ಯ ಹೇಳುವವರ ಬಳಿ ಮುಂದಿನ ಭವಿಷ್ಯ ಹೇಗಿರಲಿದೆ ಎನ್ನುವ ಪ್ರಶ್ನೆಗಳನ್ನೂ ಕೇಳುತ್ತಿದ್ದಾರೆ. ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಆರರಲ್ಲಿ ಕಾಂಗ್ರೆಸ್‌ ಮತ್ತು ಎರಡರಲ್ಲಿ ಬಿಜೆಪಿ ಶಾಸಕರು ಇದ್ದಾರೆ. ಹೀಗಾಗಿ ಶಾಸಕರು ಸ್ವ ಕ್ಷೇತ್ರದಲ್ಲಿ ಹೊಂದಿರುವ ಹಿಡಿತ ಮತ್ತು ಮತ ಗಳಿಕೆಗೆ ಸಾಮರ್ಥ್ಯ ಎಷ್ಟು ಎಂಬುದು ಕೂಡ ಈ ಫಲಿತಾಂಶದ ಮೂಲಕ ಗೊತ್ತಾಗಲಿದೆ.

ಈಗ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ ನಡೆಯುತ್ತಿದ್ದು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಪ್ರಚಾರ, ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅದರಲ್ಲಿಯೂ ‘ಲೋಕ’ದ ಫಲಿತಾಂಶದ ಬಗ್ಗೆಯೂ ಚರ್ಚೆಯಾಗುತ್ತಿದೆ. ಮಾಧ್ಯಮಗಳ ಸ್ನೇಹಿತರಿಂದಲೂ ‘ಫಲಿತಾಂಶ ಏನಾಗಬಹುದು’ ಎನ್ನುವ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಕೊಪ್ಪಳ ಲೋಕಸಭಾ ಕ್ಷೇತ್ರದ ಮತ ಎಣಿಕೆ ನಡೆಯಲಿರುವ ಇಲ್ಲಿನ ಗವಿಸಿದ್ಧೇಶ್ವರ ಪದವಿ ಕಾಲೇಜಿನತ್ತ ಎಲ್ಲರ ಚಿತ್ತ ನೆಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT