ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗಾವತಿ | ಅಂಬೇಡ್ಕರ್ ವಸತಿ ನಿಲಯ: ಸಮಸ್ಯೆಗಳ ಸರಮಾಲೆ

Published 22 ನವೆಂಬರ್ 2023, 4:55 IST
Last Updated 22 ನವೆಂಬರ್ 2023, 4:55 IST
ಅಕ್ಷರ ಗಾತ್ರ

ಗಂಗಾವತಿ: ದುರ್ವಾಸನೆ ಬೀರುವ ಶೌಚಾಲಯ, ಜಿಡಿ ಹಿಡಿದ ಕೊಠಡಿ, ಪುಸ್ತಕಗಳಿಲ್ಲದ ಗ್ರಂಥಾಲಯ, ರೀಚಾರ್ಜ್ ಮಾಡದ ಟಿವಿ, ಬೆಡ್‌ಶೀಟ್‌ ಇಲ್ಲ, ಗುಣಮಟ್ಟವಿಲ್ಲದ ಆಹಾರ, ಮೇಲ್ಛಾವಣಿ ಪದರು ಕುಸಿಯುವ ಸ್ನಾನದ ಗೃಹ, ಶುದ್ಧವಿಲ್ಲದ ಕುಡಿಯುವ ನೀರು... ಹೀಗೆ ಸಾಲು ಸಾಲು ಸಮಸ್ಯೆಗಳು...

ಗಂಗಾವತಿ ತಾಲ್ಲೂಕಿನ ಸಾಯಿನಗರದಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ವಸತಿ ನಿಲಯದಲ್ಲಿ ಕಂಡುಬರುವ ದೃಶ್ಯವಿದು. ಸರ್ಕಾರ ಬಡ ಮತ್ತು ದೂರದ ಊರಿನ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕಾಗಿ ವಸತಿ ನಿಲಯಗಳನ್ನು ನಿರ್ಮಿಸಿ, ಅಗತ್ಯ ಸೌಲಭ್ಯ ಕಲ್ಪಿಸುತ್ತಿದ್ದು, ನಿಲಯದ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಸಮಸ್ಯೆಗಳು ಗೂಡು ಕಟ್ಟಿಕೊಳ್ಳುತ್ತಿವೆ.

ಪದವಿ, ಸ್ನಾತಕೋತ್ತರ ಪದವಿ, ಎಂಜಿನಿಯರ್, ಐಟಿಐ ಸೇರಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಸತಿ ನಿಲಯದಲ್ಲಿ ಆಶ್ರಯ ಪಡೆದಿದ್ದು, ಮೂಲ ಸೌಲಭ್ಯಕ್ಕಾಗಿ ಪರದಾಡುತ್ತಿದ್ದಾರೆ.

ಕುಡಿಯುವ ನೀರಿನ ಕೊರತೆ: ನಿಲಯದಲ್ಲಿ 2-3 ಕುಡಿಯುವ ನೀರಿನ ಘಟಕಗಳಿದ್ದು, ಸಮರ್ಪಕ ನೀರಿನ ಪೂರೈಕೆಯಿಲ್ಲ‌‌. ನೀರು ಪೂರೈಸುವ ಡ್ರಮ್‌ಗಳಲ್ಲಿ ಹೂಳು ತುಂಬಿಕೊಂಡಿದ್ದು, ಅದೇ ನೀರು ಸ್ನಾನ ಮಾಡಲು, ಕುಡಿಯಲು, ಅಡುಗೆ ಮಾಡಲು ಬಳಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ಅನಾರೋಗ್ಯದ ಭಯ ಎದುರಿಸುತ್ತಿದ್ದಾರೆ. ಬಿಸಿನೀರು ಕಾಯಿಸಲು ಬಳಸುವ 32 ಸೋಲಾರ್ ಪ್ಯಾನಲ್ ದುರಸ್ತಿಗೆ ಕಾದಿದ್ದು, ಸ್ನಾನಕ್ಕೆ ತಣ್ಣೀರೇ ಗತಿ.

ಪುಸ್ತಕಗಳಿಲ್ಲದ ಗ್ರಂಥಾಲಯ: ವಸತಿ ನಿಲಯ ಆರಂಭಿಸಿ 17 ವರ್ಷಗಳು ಕಳೆದಿವೆ. ಗ್ರಂಥಾಲಯಕ್ಕೆ ಸುಸಜ್ಜಿತ ಕಟ್ಟಡವಿಲ್ಲ, ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಸಂಬಂಧಿಸಿದ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡಿಕೊಳ್ಳುವ ಪುಸ್ತಕಗಳಿಲ್ಲ‌. ಗ್ರಂಥಾಲಯ ಖಾಲಿ ಖಾಲಿಯಾಗಿದ್ದು, ವಿದ್ಯಾರ್ಥಿಗಳು ನಿವಾಸ ಮಾಡುವ ಕೊಠಡಿಯಾಗಿ ಬದಲಾಗಿದೆ.

ಅಸ್ವಚ್ಛತೆಯಲ್ಲಿ ಅಡುಗೆ ತಯಾರಿ: ಅಂಬೇಡ್ಕರ್ ವಸತಿ ನಿಲಯಲ್ಲಿ ಅಡುಗೆ ತಯಾರಿಸುವ ಮಹಿಳೆಯರು ತರಕಾರಿ ಸ್ವಚ್ಛಗೊಳಿಸಿದ ಕಸದಲ್ಲೇ ಕುಳಿತು, ಅಡುಗೆ ತಯಾರಿಗೆ ಬೇಕಾದ ಕೆಲಸಗಳನ್ನು ಮಾಡುತ್ತಾರೆ. ಇವರ ಕೈಗೆ ಗ್ಲೌಸ್‌ ಇಲ್ಲ, ಅಡುಗೆ ವಸ್ತ್ರವಿರಲ್ಲ. ಇಂತಹ ವಾತಾವರಣದಲ್ಲಿ ತಯಾರಿಸಿದ ಆಹಾರ ಸೇವಿಸಿ ಹಲವು ಬಾರಿ ವಿದ್ಯಾರ್ಥಿಗಳು ಅನಾರೋಗ್ಯಕ್ಕೆ ತುತ್ತಾದ ಉದಾಹರಣೆಗಳಿವೆ.

ಕಳಪೆ ಆಹಾರ ನೀಡುವಿಕೆ: ಸರ್ಕಾರದಿಂದ ವಸತಿ ನಿಲಯಕ್ಕೆ ಸಾಕಷ್ಟು ಪಡಿತರ ನೀಡುತ್ತಿದ್ದು, ಇಲ್ಲಿನ ಸಿಬ್ಬಂದಿ ಗುಣಮಟ್ಟದ ಆಹಾರ ನೀಡುತ್ತಿಲ್ಲ. ಕಳಪೆ ಮಟ್ಟದ ಬಾಳೆಹಣ್ಣು, ಮೊಟ್ಟೆ, ಆಹಾರ ನೀಡಲಾಗುತ್ತಿದೆ. ಭಾನುವಾರ ಇಡ್ಲಿ, ದೋಸೆ ಎರಡೂ ಕೊಡಬೇಕು, ಆದರೆ ಇಡ್ಲಿ ಮಾತ್ರ ಕೊಡುತ್ತಾರೆ. ಬೆಳಿಗ್ಗೆ ತಿಂಡಿ ಬೇಗನೆ ಮಾಡಲ್ಲ. ಊಟ ಖಾಲಿಯಾದರೆ ಮತ್ತೆ ಮಾಡುವುದೇ ಇಲ್ಲ ಎಂಬುವುದು ವಿದ್ಯಾರ್ಥಿಗಳ ಆರೋಪ.

ಕೊಠಡಿಗಳ ನಿರ್ವಹಣೆಯಿಲ್ಲ: ಕೋವಿಡ್ ಸಮಯದಲ್ಲಿ ರೋಗಿಗಳಿಗೆ ವಸತಿ ನಿಲಯದ ಬೆಡ್ ಬಳಸಿ, ಅವುಗಳನ್ನ ಸುಟ್ಟು ಹಾಕಿದ್ದು, ಈವರೆಗೆ ಹೊಸ ಬೆಡ್‌ಗಳನ್ನು ಅಳವಡಿಸಿಲ್ಲ.  ವಸತಿನಿಲಯ ಹಿಂಭಾಗ, ಪಕ್ಕದಲ್ಲಿ ಕಸ ಸಂಗ್ರಹವಾಗಿದೆ. ಕೊಠಡಿಗಳಲ್ಲಿ ಜಿಡಿ ಹಿಡಿದಿವೆ, ವಿದ್ಯುತ್ ಬೋರ್ಡ್ ಕಿತ್ತುಹೋಗಿದೆ. ಬಟ್ಟೆ ತೊಳೆದ, ಸ್ನಾನ ಮಾಡಿದ, ಊಟದ ನಂತರ ಕೈ ತೊಳೆಯುವ ನೀರು ನಿಲಯದ ಹಿಂಭಾಗದಲ್ಲಿ ನಿಂತು ದುರ್ನಾತ ಬೀರುತ್ತಿದೆ.

ಡಾ.ಬಿ.ಆರ್ ಅಂಬೇಡ್ಕರ್ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳು ಉಪಾಹಾರ ಸೇವಿಸುವ ಕೊಠಡಿಯಲ್ಲಿನ ಕುಡಿಯುವ ನೀರಿನ ಪೈಪ್‌ಗಳು ಅಸ್ವಚ್ಚತೆಯಿಂದ ಕೂಡಿರುವುದು
ಡಾ.ಬಿ.ಆರ್ ಅಂಬೇಡ್ಕರ್ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳು ಉಪಾಹಾರ ಸೇವಿಸುವ ಕೊಠಡಿಯಲ್ಲಿನ ಕುಡಿಯುವ ನೀರಿನ ಪೈಪ್‌ಗಳು ಅಸ್ವಚ್ಚತೆಯಿಂದ ಕೂಡಿರುವುದು
ಡಾ.ಬಿ.ಆರ್ ಅಂಬೇಡ್ಕರ್ ವಸತಿ ನಿಲಯದ ಮೇಲೆ ಅಳವಡಿಸಲಾದ ಸೋಲಾರ್ ಪ್ಯಾನಲ್ ದುರಸ್ತಿಗೆ ಕಾದಿರುವುದು
ಡಾ.ಬಿ.ಆರ್ ಅಂಬೇಡ್ಕರ್ ವಸತಿ ನಿಲಯದ ಮೇಲೆ ಅಳವಡಿಸಲಾದ ಸೋಲಾರ್ ಪ್ಯಾನಲ್ ದುರಸ್ತಿಗೆ ಕಾದಿರುವುದು
ವಸತಿ ನಿಲಯದಲ್ಲಿ 20 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಸಿಬ್ಬಂದಿಯನ್ನು ವರ್ಗಾವಣೆ ಮಾಡಿದ್ದು ಸ್ವಲ್ಪ ಸಮಸ್ಯೆಯಾಗಿರಬಹುದು. ನಾನು ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸುವೆ.
- ಶರಣಪ್ಪ, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ

ವ್ಯವಸ್ಥಾಪಕನ ಆಪ್ತನ ಕೈಯಲ್ಲಿ ಆಡಳಿತ?

ಅಂಬೇಡ್ಕರ್ ವಸತಿ ನಿಲಯದ ವಾರ್ಡನ್ ವರ್ಗಾವಣೆ ಆದ ನಂತರ ನಿಲಯಕ್ಕೆ ವ್ಯವಸ್ಥಾಪಕರನ್ನಾಗಿ ಸಂಗಪ್ಪ ಅವರನ್ನು ನೇಮಿಸಿದ್ದು ಅವರು ತಮ್ಮ ಆಪ್ತನ (ಖಾಸಗಿ ವ್ಯಕ್ತಿ) ಮೂಲಕ ವಸತಿ ನಿಲಯ ಆಡಳಿತ ನಡೆಸುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿವೆ. ‘ವ್ಯವಸ್ಥಾಪಕರ ಆಪ್ತರೇ ನಿತ್ಯ ಮಾರುಕಟ್ಟೆಗೆ ಹೋಗಿ ತರಕಾರಿ ಬಾಳೆಹಣ್ಣು ಮೊಟ್ಟೆ ತರುತ್ತಾರೆ. ಅಡುಗೆ ದಾಸ್ತಾನು ವಸತಿ ನಿಲಯ ಕಚೇರಿ ಕೊಠಡಿ ಬೀಗವೆಲ್ಲ ತಮ್ಮ ಬಳಿಯೇ ಇಟ್ಟುಕೊಳ್ಳುತ್ತಾರೆ. ಅವರು ಬಂದು ಬೀಗಕೊಟ್ಟ ನಂತರವೇ ವಸತಿ ನಿಲಯದಲ್ಲಿ ಅಡುಗೆ ತಯಾರಿ ಕೆಲಸವಾಗುತ್ತದೆ’ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT