ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮದ್ರಾಸ್‌ ಐ’: ಮುಂಜಾಗ್ರತೆ ವಹಿಸಲು ಸೂಚನೆ

Published 4 ಆಗಸ್ಟ್ 2023, 4:31 IST
Last Updated 4 ಆಗಸ್ಟ್ 2023, 4:31 IST
ಅಕ್ಷರ ಗಾತ್ರ

ಯಲಬುರ್ಗಾ: ಈಚೆಗೆ ಮದ್ರಾಸ್ ಐ ಎಂಬ ವೈರಸ್‍ದಿಂದ ಕಣ್ಣುಬೇನೆ ಕಾಯಿಲೆಗೆ ಒಳಗಾಗುವವರ ಸಂಖ್ಯೆ ಹೆಚ್ಚುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ನಿಯಂತ್ರಣಕ್ಕೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಹಾಗೂ ತಾಪಂ ಆಡಳಿತಾಧಿಕಾರಿ ಮಲ್ಲಪ್ಪ ತೊದಲಬಾಗಿ ಹೇಳಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ತಾ.ಪಂ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಮದ್ರಾಸ್ ಐ ಸೋಂಕು ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವುದರ ಜೊತೆಗೆ ವೇಗವಾಗಿ ಹರಡುತ್ತಿದೆ. ಸೋಂಕಿತ ಮಕ್ಕಳು ಸಂಪೂರ್ಣ ಗುಣಮುಖವಾಗುವವರೆಗೂ ಶಾಲೆಗೆ ಬರದಂತೆ ನೋಡಿಕೊಳ್ಳುವುದು. ಈ ಬಗ್ಗೆ ಆರೋಗ್ಯಾಧಿಕಾರಿಗಳು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ರಮಕೈಗೊಳ್ಳಬೇಕು’ ಎಂದು ಸೂಚಿಸಿದರು.

‘ಆಸ್ಪತ್ರೆಗಳಲ್ಲಿ ಕುಡಿಯುವ ನೀರಿನ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ನೀರಿನ ಲಭ್ಯತೆ ಇಲ್ಲದಿದ್ದರೆ ತ್ವರಿತವಾಗಿ ನೀರು ಶುದ್ದೀಕರಣ ಯಂತ್ರವನ್ನು ಅಳವಡಿಸಿಕೊಳ್ಳಬೇಕು’ ಎಂದು ವೈದ್ಯಾಧಿಕಾರಿಗಳಿಗೆ ಸಲಹೆ ನೀಡಿದರು.

ಕೃಷಿ ಸಹಾಯಕ ನಿರ್ದೇಶಕ ಪ್ರಾಣೇಶ ಹಾದಿಮನಿ ಮಾತನಾಡಿ, ರೈತ ಸಂಪರ್ಕ ಕೇಂದ್ರಕ್ಕೆ ಸ್ವಂತ ಕಟ್ಟಡವಿಲ್ಲ, ಕಟ್ಟಡ ಮಂಜೂರಾತಿಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ ಎಂದರು.

ತಾಲ್ಲೂಕಿನಲ್ಲಿ 15 ಪಶು ಆಸ್ಪತ್ರೆಗಳಿದ್ದು, ಈ ಎಲ್ಲ ಆಸ್ಪತ್ರೆಗಳಲ್ಲಿ ಲಭ್ಯವಿರುವ ನಾಲ್ಕು ಜನ ವೈದ್ಯಾಧಿಕಾರಿಗಳು ಮಾತ್ರ ಕಾರ್ಯನಿರ್ವಹಿಸಬೇಕಾಗಿದೆ. ಕುಕನೂರು ತಾಲ್ಲೂಕಿನಲ್ಲಿ 8 ಆಸ್ಪತ್ರೆಗಳಿದ್ದು, ಅವುಗಳಲ್ಲಿ ಒಬ್ಬ ವೈದ್ಯರು ಮಾತ್ರ ನಿರ್ವಹಿಸಬೇಕಾಗಿದೆ. ಕೂಡಲೇ ಸಿಬ್ಬಂದಿಯನ್ನು ಒದಗಿಸಬೇಕು ಎಂದು ಪಶು ವೈದ್ಯಾಧಿಕಾರಿ ಡಾ. ಪ್ರಕಾಶ ಸಭೆಯ ಗಮನಕ್ಕೆ ತಂದರು.

ಗಾಣದಾಳ ಗ್ರಾಮದಲ್ಲಿ ವಸತಿ ಶಾಲೆ ಉಪಯೋಗಕ್ಕೆ ಸಜ್ಜುಗೊಂಡಿದ್ದರೂ ಅದರ ಬಳಕೆಗೆ ಅವಕಾಶ ಕೊಡದೇ ಇರುವ ಬಗ್ಗೆ ಬಿಸಿಎಂ ಅಧಿಕಾರಿ ಶಿವಶಂಕರ ಕರಡಕಲ್ಲ ಸಭೆಯ ಗಮನಕ್ಕೆ ತಂದರು. ಈ ವೇಳೆ ಜಿಪಂ ಉಪ ಕಾರ್ಯದರ್ಶಿ ಮಲ್ಲಪ್ಪ ಅವರು ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು. ಮಕ್ಕಳ ಉಪಯೋಗಕ್ಕೆ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಅವುಗಳನ್ನು ಬಳಸಿಕೊಳ್ಳದಿದ್ದರೆ ಹೇಗೆ. ಯಾಕೆ ಈ ರೀತಿ ನಿರ್ಲಕ್ಷ್ಯತನ ತೋರಿತ್ತೀರಿ ಎಂದು ಅಧಿಕಾರಿಗಳ ವರ್ತನೆ ವಿರುದ್ಧ ಹರಿಹಾಯ್ದರು.

ಸಭೆಗೆ ಗೈರಾದವರು, ಸಭೆಗೆ ಹಾಜರಾಗಿ ಸರಿಯಾಗಿ ಮಾಹಿತಿ ನೀಡದೇ ಇರುವವರು ಹಾಗೂ ಸಭೆಯನ್ನು ಗಂಭೀರವಾಗಿ ಪರಿಗಣಿಸದೇ ಉದಾಸೀನ ತೋರಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. ಸರಿಯಾದ ಮಾಹಿತಿ ಇರದಿದ್ದರೆ ಸಭೆಗೆ ಬರುವ ಅವಶ್ಯಕತೆ ಇಲ್ಲ ಎಂದು ಮಲ್ಲಪ್ಪ ಅವರು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ತಾಪಂ ಇಒ ಸಂತೋಷ ಪಾಟೀಲ ಬಿರಾದಾರ, ಉಪತಹಶೀಲ್ದಾರ್‌ ನಾಗಪ್ಪ ಸಜ್ಜನ ವೇದಿಕೆಯಲ್ಲಿದ್ದರು. ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಯಲಬುರ್ಗಾ ತಾಪಂ ಸಭಾಂಗಣದಲ್ಲಿ ಗುರುವಾರ ನಡೆದ ತಾಪಂ ಸಾಮಾನ್ಯಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು
ಯಲಬುರ್ಗಾ ತಾಪಂ ಸಭಾಂಗಣದಲ್ಲಿ ಗುರುವಾರ ನಡೆದ ತಾಪಂ ಸಾಮಾನ್ಯಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT