ಭಾನುವಾರ, ಮಾರ್ಚ್ 26, 2023
23 °C

ಮೆಕ್ಕೆಜೋಳಕ್ಕೆ ಸೈನಿಕ ಹುಳುವಿನ ಕಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹನುಮಸಾಗರ: ಹನುಮಸಾಗರ ಮತ್ತು ಹನುಮನಾಳ ಹೋಬಳಿ ವ್ಯಾಪ್ತಿಯಲ್ಲಿ ರೈತರು ಬೆಳೆದ ಮೆಕ್ಕೆಜೋಳ ಬೆಳೆಗೆ ಸೈನಿಕ ಹುಳು ಬಾಧೆ ಕಂಡುಬಂದಿದ್ದು ಮೆಕ್ಕೆಜೋಳ ಬೆಳೇದ ಅನೇಕ ರೈತರು ಕಂಗಾಲಾಗಿದ್ದಾರೆ.

ಬಹುತೇಕ ರೈತರಿಗೆ ಸೂಕ್ತ ಮಾಹಿತಿ ಹಾಗೂ ಮಾರ್ಗದರ್ಶನದ ಕೊರತೆಯಿಂದಾಗಿ ಅವರಿವರು ಹೇಳಿದ ಕ್ರಿಮಿನಾಶಕವನ್ನು ಸಿಂಪಡಿಸುತ್ತಿರುವ ಕಾರಣವಾಗಿ ಸೈನಿಕ ಹುಳುವಿನ ತೀವ್ರತೆ ಕಡಿಮೆಯಾಗುವುದರ ಬದಲು ಕ್ರಿಮಿನಾಶಕಕ್ಕಾಗಿ ಮಾಡಿದ ಸಾಲ ಹೆಚ್ಚುತ್ತಿದೆ ಎಂದು ರೈತರು ನೋವು ತೋಡಿಕೊಂಡರು.

ಈ ಬಾರಿ ಮಳೆ ಉತ್ತಮವಾಗಿ ಸುರಿದ್ದರಿಂದ ಮೆಕ್ಕೆಜೋಳ ಬೆಳೆಗಳು ಉತ್ತಮವಾಗಿ ಬೆಳೆದಿದ್ದವು. ಬೆಳೆ ಉತ್ತಮವಾಗಿ ಬರುತ್ತದೆ ಎಂಬ ನಿರೀಕ್ಷೆಯಲ್ಲಿ ನಾವು ಕಳೆ ತೆಗೆದು ಗೊಬ್ಬರ ಹಾಕಿದ್ದೆವು, ಬೆಳೆದು ನಿಂತ ಮೆಕ್ಕೆಜೋಳ ಬೆಳೆಯ ಕುಡಿಯನ್ನು ಸೈನಿಕ ಹುಳು ತಿನ್ನುತ್ತಿದ್ದು, ಎಲೆಗಳೆಲ್ಲವನ್ನು ನಾಶ ಮಾಡುತ್ತಿವೆ. ಇದರಿಂದಾಗಿ ಸಾಲ ಮಾಡಿ ಬೀಜ ಗೊಬ್ಬರ ಖರೀದಿಸಿ ಉತ್ತಮ ಫಸಲಿನ ನಿರೀಕ್ಷೆಯಲಿದ್ದ ನಮಗೆ ತೀವ್ರ ಆತಂಕವಾಗಿದೆ ಎಂದು ರೈತರಾದ ಚಂದಾಲಿಂಗಪ್ಪ ಗದ್ದಿ, ಮಲ್ಲರಡ್ಡಿ, ಬಸಪ್ಪ ಗೌಡ್ರ, ಶಿವುಕುಮಾರ ಹನುಮನಾಳ, ಸಂಜೀವಪ್ಪ ಕಬ್ಬರಗಿ ನೋವು ತೋಡಿಕೊಂಡರು.

ಕೃಷಿ ಇಲಾಖೆ ಅಧಿಕಾರಿಗಳು ಕೂಡಲೇ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸೈನಿಕ ಹುಳುವಿನ ನಿಯಂತ್ರಣಕ್ಕೆ ಸಲಹೆ ನೀಡಬೇಕೆಂಬುದು ಅವರು ಒತ್ತಾಯಿಸಿದರು.

ಹನಮನಾಳ ಗ್ರಾಮದಲ್ಲಿ ಕೃಷಿ ಇಲಾಖೆಯ ಅಧಿಕಾರಿ ದಾವಲ್ ಬಿ, ಹನುಮನಾಳ ಭಾಗದ ರೈತರ ಗ್ರಾಮದ ಮೆಕ್ಕೆಜೋಳ ಬೆಳೆದ ರೈತರ ಜಮೀನುಗಳಿಗೆ ಶುಕ್ರವಾರ ಭೇಟಿ ನೀಡಿ ರೈತರಿಗೆ ಮಾಹಿತಿ ನೀಡಿ, ಸೈನಿಕ ಹುಳು ಹಗಲು ಹೊತ್ತಿನಲ್ಲಿ ಬೆಳೆಯ ಸುಳಿಯಲ್ಲಿ ಅಡಗಿಕೊಂಡು ರಾತ್ರಿ ಹೊತ್ತಿನಲ್ಲಿ ಎಲೆಗಳನ್ನು ತಿಂದು ಹಾಳಿಮಾಡುತ್ತದೆ.

ಇಮಾಮೆಕ್ಟಿನ್ ಬೆಂಜೋಯೇಟ್ 0.2ಗ್ರಾಮ್ ಪ್ರತಿಲೀಟರಿಗೆ ನೀರಿಗೆ ಬೆರಸಿ ಬೆಳೆ ತೊಯ್ಯುವ ಹಾಗೆ ಸಿಂಪಡಿಸಬೇಕು, 8 ಲೀಟರ್ ನೀರಿನಲ್ಲಿ 250.ಮೀ.ಲೀಟರ್ ಮೊನೋಕ್ರೊಟೋಫಾಸ್ ಕೀಟನಾಶಕವನ್ನು 4 ಕಿಲೋ ಬೆಲ್ಲದೊಂದಿಗೆ ಬೆರೆಸಿ ಐವತ್ತೂ ಕಿಲೋ ಗ್ರಾಂ ಅಕ್ಕಿ ಅಥವಾ ಗೋಧಿ ತೌಡಿನಲ್ಲಿ ಮಿಶ್ರಣ ಮಾಡಿ ಎರಡು ದಿನಗಳವರಗೆ ಪ್ಲಾಸ್ಟಿಕ್ ಚೀಲದಲ್ಲಿ ಕೊಳೆಯಲು ಬೀಡಬೇಕು. ಸಾಯಂಕಾಲ ಸಮಯದಲ್ಲಿ ಎಕರೆಗೆ ಇಪ್ಪತ್ತು ಕಿಲೋ ಗ್ರಾಂ ಪ್ರಮಾಣದಲ್ಲಿ ವಿಷ ಪಾಷಣವನ್ನು ಸುಳಿ ಮತ್ತು ಎಲೆಗಳ ಮೇಲೆ ಬೀಳುವಂತೆ ಸುರಿಯಬೇಕು, ಕ್ರಮೇಣ ಸೈನಿಕ ಹುಳುಗಳು ವಿಷಪ್ರಾಶನಕ್ಕೆ ಆಕರ್ಷಿತಗೊಂಡು ನಿಯಂತ್ರಣವಾಗುತ್ತವೆ ಎಂದು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.