ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ದರ್ಶನ ರದ್ದು; ಸಂಕ್ರಾಂತಿ, ಉತ್ಸವ ಇಲ್ಲ

Last Updated 13 ಜನವರಿ 2022, 7:05 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯ ಹಲವು ಪ್ರಮುಖ ಧಾರ್ಮಿಕ ಕೇಂದ್ರಗಳಿಗೆ ವಿವಿಧ ಪ್ರದೇಶದಿಂದ ಗಣನೀಯ ಸಂಖ್ಯೆಯಲ್ಲಿ ಭಕ್ತರು ಬರುತ್ತಿರುವ ಕಾರಣ ಕೋವಿಡ್ ಹಾಗೂ ಓಮೈಕ್ರಾನ್ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಗಂಗಾವತಿಯ ಅಂಜನಾದ್ರಿ ದೇವಸ್ಥಾನ ಹಾಗೂ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಸಾರ್ವಜನಿಕರಿಗೆ ದರ್ಶನ ನಿಷೇಧಿಸಿ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಆದೇಶ ಹೊರಡಿಸಿದ್ದಾರೆ.

ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲೆಯ ಅಂಜನಾದ್ರಿ ಪರ್ವತದಆಂಜನೇಯ ದೇವಸ್ಥಾನದಲ್ಲಿ ಜ.14 ರ ರಾತ್ರಿ 9 ಗಂಟೆಯಿಂದ ಜ.17 ರ ಬೆಳಿಗ್ಗೆ 5 ಗಂಟೆಯವರೆಗೆ ಜಾತ್ರೆ, ವಿಶೇಷ ಉತ್ಸವ, ಧಾರ್ಮಿಕ ಕಾರ್ಯಕ್ರಮ ಹಾಗೂ ಸಾರ್ವಜನಿಕ ದರ್ಶನವನ್ನು ನಿರ್ಬಂಧಿಸಲಾಗಿದೆ. ದೇವಾಲಯದ ಸುತ್ತಮುತ್ತಲಿನ ಪ್ರದೇಶದಲ್ಲಿನ ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಬೇಕು ಎಂದು ತಿಳಿಸಲಾಗಿದೆ.

ತಾಲ್ಲೂಕಿನ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಜ.15 ರಿಂದ 31 ರವರೆಗೆ ಮುಂಬರುವ ದಿನಗಳಲ್ಲಿ ಜರುಗಬಹುದಾದ ಜಾತ್ರೆ, ವಿಶೇಷ ಉತ್ಸವ, ಧಾರ್ಮಿಕ ಕಾರ್ಯಕ್ರಮಗಳನ್ನು ಹಾಗೂ ಸಾರ್ವಜನಿಕ ದರ್ಶನವನ್ನು ನಿರ್ಬಂಧಿಸಲಾಗಿದೆ. ದೇವಾಲಯದ ಸುತ್ತಮುತ್ತಲಿನ ಪ್ರದೇಶದಲ್ಲಿ ಅಂಗಡಿ, ಮುಂಗಟ್ಟು ತೆರೆಯುವುದನ್ನು ನಿಷೇಧಿಸಲಾಗಿದೆ.

ದೈನಂದಿನ ಧಾರ್ಮಿಕ ಕಾರ್ಯಕ್ರಮಗಳನ್ನು ದೇವಾಲಯದ ಆಡಳಿತ ಮಂಡಳಿ, ಅರ್ಚಕರು ಹಾಗೂ ಸಿಬ್ಬಂದಿ ಸೇರಿ ಕೋವಿಡ್ ಮಾರ್ಗಸೂಚಿಯ ಪಾಲನೆಯೊಂದಿಗೆ ಜನಜಂಗುಳಿಗೆ ಅವಕಾಶ ಕಲ್ಪಿಸದೇ ಸರಳ ಹಾಗೂ ಸಾಂಕೇತಿಕವಾಗಿ ಕೇವಲ ದೇವಾಲಯದ ಪ್ರಾಂಗಣದೊಳಗೆ ಆಚರಿಸಬೇಕು.

ಈ ಆದೇಶ ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ಹಾಗೂ ಭಾರತೀಯ ದಂಡ ಸಂಹಿತೆ 188 ರ ಪ್ರಕಾರ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಗಂಗಾವತಿ: ರಥೋತ್ಸವ ರದ್ದು
ಗಂಗಾವತಿ:
ನಗರದಲ್ಲಿ ಜ.15 ರಂದು ನಡೆಯಬೇಕಿದ್ದ ಚನ್ನಬಸವ ತಾತರ ಜಾತ್ರೆ ಮತ್ತು 17 ರಂದು ನಿಗದಿಯಾಗಿದ್ದ ದುರ್ಗಾದೇವಿ ಜಾತ್ರಾ ರಥೋತ್ಸವ ರದ್ದುಪಡಿಸಿ ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ್ ಕಿಶೋರ್ ಆದೇಶ ಹೊರಡಿಸಿದ್ದಾರೆ.

ಇಲ್ಲಿನ ಚೆನ್ನಮಲ್ಲಿಕಾರ್ಜುನ ಟ್ರಸ್ಟ್, ದುರ್ಗಮ್ಮ ಗಾಳೇಮ್ಮ ದೇವಿ ಸೇವಾ ಟ್ರಸ್ಟ್‌ನ ಪದಾಧಿಕಾರಿಗಳು ಚನ್ನಬಸವ ತಾತ ಮತ್ತು ದುರ್ಗಾದೇವಿ ಜಾತ್ರಾ ಮತ್ತು ರಥೋತ್ಸವಕ್ಕೆ ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.

ರಾಜ್ಯದಲ್ಲಿ ಮತ್ತು ಕೊಪ್ಪಳ ಪಕ್ಕದ ವಿಜಯನಗರ, ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಕೋವಿಡ್ ಮತ್ತು ಅದರ ರೂಪಾಂತರ ತಳಿ ಓಮೈಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ, ಜಿಲ್ಲಾಡಳಿತ ಮುನ್ನಚ್ಚರಿಕಾ ಕ್ರಮವಾಗಿ ಸಭೆ, ಸಮಾರಂಭ ಹಾಗೂ ಜಾತ್ರೆಗಳನ್ನು ನಿಷೇಧಿಸಿದೆ.

ಈ ನಿಟ್ಟಿನಲ್ಲಿ ದೇವಸ್ಥಾನ ಸಮಿತಿಗಳು ಜಾತ್ರೆ, ರಥೋತ್ಸವ ನಡೆಸುವ ಕುರಿತು ಕೋರಿದ ಅನುಮತಿ ಪತ್ರಕ್ಕೆ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ,‘ಧಾರ್ಮಿಕ ಸ್ಥಳದಲ್ಲಿ ದೇವರ ದರ್ಶನಕ್ಕೆ ಮಾತ್ರ ಅವಕಾಶವಿದೆ. ಇತರೆ ಯಾವುದೇ ಸೇವೆಗಳಿಗೆ ಅವಕಾಶ ಇರುವುದಿಲ್ಲ’ ಎಂದು ಹೇಳಿದ್ದಾರೆ.

ಕೋವಿಡ್ ಲಸಿಕೆ ಪಡೆದಿರುವ 50 ಜನರಿಗೆ ಮಾತ್ರ ದೇವಸ್ಥಾನ ಪ್ರವೇಶಕ್ಕೆ ಅವಕಾಶ ಇರುತ್ತದೆ ಎಂದು ಜಿಲ್ಲಾಧಿಕಾರಿ ಹಿಂಬರಹದ ಮೂಲಕ ಆದೇಶ ಹೊರಡಿಸಿದ್ದಾರೆ.

ಕಾರ್ಯಕ್ರಮ ರದ್ದು
ಬಂಡಿಹರ್ಲಾಪುರ (ಮುನಿರಾಬಾದ್):
ಸಮೀಪದ ತುಂಗಭದ್ರಾ ತೀರ ಬಂಡಿಹರ್ಲಾಪುರದ ನಗರಗಡ್ಡಿ ಮಠದಲ್ಲಿ ಸಂಕ್ರಾಂತಿ ಪ್ರಯುಕ್ತ ನಡೆಯುತ್ತಿದ್ದ ಧಾರ್ಮಿಕ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ.

ಈ ಬಗ್ಗೆ ಮಠದ ಭಕ್ತಾದಿಗಳು, ಸ್ಥಳೀಯ ಮುಖಂಡರನ್ನು ಒಳಗೊಂಡಂತೆ ಮಠದ ಆವರಣದಲ್ಲಿ ಮಂಗಳವಾರ ಸಭೆ ನಡೆಯಿತು. ಕೋವಿಡ್ ಮೂರನೇ ಅಲೆ ಮತ್ತು ಒಮೈಕ್ರಾನ್ ಸೋಂಕು ಹರಡುತ್ತಿರುವ ಕಾರಣ ಸರಕಾರ ವಿವಿಧ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಭಕ್ತಾದಿಗಳ ಆರೋಗ್ಯದ ಹಿತದೃಷ್ಟಿಯಿಂದ ಈ ವರ್ಷ ಜ. 14 ಹಾಗೂ ಜ. 15 ರಂದು ಮಕರಸಂಕ್ರಾಂತಿಯ ಅಂಗವಾಗಿ ನಡೆಯಬೇಕಾಗಿದ್ದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ. ಭಕ್ತಾದಿಗಳು ಸಹಕರಿಸಬೇಕು ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

ಶ್ರೀಮಠದ ಶಾಂತಲಿಂಗೇಶ್ವರ ಸ್ವಾಮೀಜಿ ಅವರ ನೇತೃತ್ವದ ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಪ್ರಭುರಾಜ ಪಾಟೀಲ ಮತ್ತು ದೇವಣ್ಣ ಮೇಕಾಳಿ, ಗಣ್ಯರಾದ ಚನ್ನಪ್ಪಗೌಡ ಪಾಟೀಲ, ಶರಣಬಸಪ್ಪ ಆನೆಗೊಂದಿ, ಚನ್ನಬಸಯ್ಯ ಹಿರೇಮಠ, ಹನುಮರೆಡ್ಡಿ ಬಿಸರಳ್ಳಿ, ನಿಜಲಿಂಗಪ್ಪ ಪಲ್ಲೇದ, ಚಿಂಚೋಳಯ್ಯ, ರಾಮಣ್ಣ, ಹನುಮೇಶ್, ವೆಂಕಟಯ್ಯ ಹರ್ಲಾಪುರ್, ಸುರೇಶ ಕಟಗಿ ಮತ್ತು ಸ್ಥಳೀಯ ಭಕ್ತಾದಿಗಳು ಪಾಲ್ಗೊಂಡಿದ್ದರು.

‘ಕೊರೊನಾ ನಿಯಮ ಪಾಲನೆ’
ಕೊಪ್ಪಳ:
ಉತ್ತರ ಕರ್ನಾಟಕದ ಪ್ರಸಿದ್ಧ ಗವಿಮಠದ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವವನ್ನುಕೊರೊನಾ ಹಿನ್ನೆಲೆಯಲ್ಲಿ ಸರ್ಕಾರದ ನಿಯಮಾವಳಿ ಪ್ರಕಾರ ಆಚರಣೆ ಮಾಡಲಾಗುವುದು ಎಂದು ಮಠದ ಪೀಠಾಧಿಪತಿ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,‘ಜನರಿಗೆತೊಂದರೆಯಾಗುವ ಯಾವ ಕಾರ್ಯಕ್ರಮಗಳನ್ನು ನಾವು ಹಮ್ಮಿಕೊಳ್ಳುವುದಿಲ್ಲ. ಜನರ ಜೀವ ಉಳಿಯಬೇಕು. ಜೀವನ ಕೂಡಾ ಬೆಳಗಬೇಕು ಎಂಬುವುದು ಗವಿಸಿದ್ಧನ ಆಶಯ. ಆದ್ದರಿಂದ ಆದಷ್ಟು ಸರಳ ಆಚರಣೆ ಮಾಡಲು ಒತ್ತು ನೀಡಲಾಗುತ್ತದೆ’ ಎಂದರು.

‘ವೇದಿಕೆ ಕಾರ್ಯಕ್ರಮಗಳ ಕುರಿತು ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಎರಡು, ಮೂರು ದಿನದಲ್ಲಿ ಭಕ್ತರ ಸಭೆ ಕರೆದು ನಿರ್ಧರಿಸಲಾಗುತ್ತದೆ. ಕಳೆದ ವರ್ಷ ಜಾತ್ರೆಯನ್ನು ಸರಳವಾಗಿ ಮಾಡಿ ಮೂರು ಬೃಹತ್ ಸಾಮಾಜಿಕ ಕಾರ್ಯ ಅನುಷ್ಠಾನಗೊಳಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT