ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ: ಒಟಿಎಸ್‌ ಪಾವತಿಗೆ ಆರು ತಿಂಗಳು ಸಮಯ ನೀಡಲು ಒತ್ತಾಯ

Published 2 ಜೂನ್ 2024, 14:17 IST
Last Updated 2 ಜೂನ್ 2024, 14:17 IST
ಅಕ್ಷರ ಗಾತ್ರ

ಕೊಪ್ಪಳ: ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಸಾಲ ಪಡೆದ ರೈತರಿಗೆ ಅನುಕೂಲ ಕಲ್ಪಿಸಲು ಒಂದೇ ಸಲಕ್ಕೆ ಪಾವತಿ (ಒಟಿಎಸ್‌) ವ್ಯವಸ್ಥೆಯನ್ನು ತ್ವರಿತವಾಗಿ ಜಾರಿಗೆ ತರಬೇಕು. ಪಾವತಿಗೆ ಕನಿಷ್ಠ 60ರಿಂದ 90 ದಿನಗಳಾದರೂ ಸಮಯ ನೀಡಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.

ಸಂಘಟನೆಯ ರಾಜ್ಯಾಧ್ಯಕ್ಷ ಆರ್‌. ಮಾಧವರೆಡ್ಡಿ ಕರೂರು ಭಾನುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ’ಈಗಿನ ನಿಯಮದ ಪ್ರಕಾರ 21 ದಿನಗಳ ಕಾಲ ಮಾತ್ರ ಅವಕಾಶ ನೀಡಲಾಗುತ್ತಿದೆ ಎನ್ನುವ ಸುದ್ದಿಯಿದೆ. ಇಷ್ಟೊಂದು ಕಡಿಮೆ ಅವಧಿಯಲ್ಲಿ ಅಸಲಿನ ಹಣ ಒಪ್ಪಿಸುವುದು ಕಷ್ಟವಾಗುತ್ತದೆ. ಆದ್ದರಿಂದ ಮತ್ತಷ್ಟು ಸಮಯ ನೀಡಬೇಕು’ ಎಂದು ಹೇಳಿದರು. ಜಿಲ್ಲೆಯಲ್ಲಿ ಎರಡು ಲಕ್ಷ ಸಾಲಗಾರರು ಇದ್ದಾರೆ.

‘ಬ್ಯಾಂಕ್‌ನಲ್ಲಿ ರೈತರು ಕೃಷಿಗೆ ಸಂಬಂಧಿಸಿದ ಸಾಲ ಪಡೆದುಕೊಂಡಿದ್ದು ಬ್ಯಾಂಕ್‌ನವರು ಅಸಲಿನ ಮೇಲೆ ಬಡ್ಡಿ, ಚಕ್ರಬಡ್ಡಿ, ಸುಸ್ತಿ ಬಡ್ಡಿ ಸೇರಿದಂತೆ ಅನೇಕ ಖರ್ಚು ವಿಧಿಸಿದ್ದಾರೆ. ಪಡೆದ ಸಾಲಕ್ಕಿಂತ ಈಗ ಹತ್ತು ಪಟ್ಟು ಹೆಚ್ಚು ಹಣ ಕಟ್ಟಬೇಕಾದ ಸ್ಥಿತಿ ಎದುರಾಗಿದ್ದು, ಇದರಿಂದ ರೈತರು ಕಂಗಲಾಗಿದ್ದಾರೆ. ಕೆಲ ರಾಷ್ಟ್ರೀಕೃತ ಬ್ಯಾಂಕ್‌ಗಳು ಪಡೆದ ಸಾಲದಲ್ಲಿ ಶೇ. 10ರಷ್ಟನ್ನು ಮಾತ್ರ ಪಾವತಿಸುವ ರೈತಸ್ನೇಹಿ ಯೋಜನೆ ಜಾರಿಗೊಳಿಸಿ ಮಾನವೀಯತೆ ಮೆರೆದಿವೆ. ಆದರೆ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ರೈತ ಸ್ನೇಹಿ ಯೋಜನೆ ಜಾರಿಗೊಳಿಸದೆ ರೈತರ ಹೊರಯನ್ನು ಮತ್ತಷ್ಟು ಜಾಸ್ತಿ ಮಾಡುತ್ತಿದೆ. ರೈತರಿಗೆ ನ್ಯಾಯಾಲಯಗಳಿಂದ ನೋಟಿಸ್‌ ನೀಡುವ ಮೂಲಕ ಭಯದ ವಾತಾವರಣ ಸೃಷ್ಟಿಸುತ್ತಿದೆ’ ಎಂದು ಅವರು ಆರೋಪಿಸಿದರು.

ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷ ಶರಣಪ್ಪ, ಪ್ರಮುಖರಾದ ಕಾಳಿದಾಸ ಜೆ.ಎನ್‌. ಹಾಗೂ ಹನುಮಂತಪ್ಪ ನಾಯಕ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT