ಶನಿವಾರ, ಸೆಪ್ಟೆಂಬರ್ 18, 2021
29 °C
ವೈದ್ಯಕೀಯ ಕಾಲೇಜಿಗೆ ಎಂಸಿಐ ಸದಸ್ಯರ ಭೇಟಿ: ಮೆಚ್ಚುಗೆ

ಕಿಮ್ಸ್‌ಗೆ ಅನುಮತಿ ದೊರೆಯುವ ವಿಶ್ವಾಸ

ಸಿದ್ದನಗೌಡ ಪಾಟೀಲ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಕೊಪ್ಪಳ ಸರ್ಕಾರಿ ವೈದ್ಯಕೀಯ ಕಾಲೇಜಿಗೆ (ಕಿಮ್ಸ್‌) ಪ್ರತಿವರ್ಷ ಎಂಬಿಬಿಎಸ್ ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮತಿ ದೊರೆಯದೇ ತೊಂದರೆ ಆಗುತ್ತಿತ್ತು. ಆದರೆ, ಈ ಸಾರಿ ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ತಂಡ ಭೇಟಿ ನೀಡಿ, ಕಾಲೇಜಿನ ಮೂಲಸೌಕರ್ಯ ಮತ್ತು ಗುಣಮಟ್ಟದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದು, ಅನುಮತಿ ದೊರೆಯಲಿದೆ ಎಂಬ ವಿಶ್ವಾಸದಲ್ಲಿ ಆಡಳಿತ ಮಂಡಳಿ ಇದೆ.

ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಪ್ರತಿವರ್ಷ ತೊಂದರೆ ಎದುರಾಗುತ್ತಿತ್ತು.  ಮೂಲಸೌಕರ್ಯ ಮತ್ತು ಗುಣಮಟ್ಟದ ಶಿಕ್ಷಣ ಇಲ್ಲದೆ ಅನುಮತಿ ನೀಡುವುದು ಸಾಧ್ಯವಿಲ್ಲ ಎಂದು ಎಂಸಿಐ ಹೇಳಿತ್ತು. ಈ ಕುರಿತು ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಅಲ್ಲದೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಪ್ರೀಂಕೋರ್ಟ್ ಎದುರು ಹಾಜರಾಗಿ ಕಾಲೇಜಿಗೆ ಸಕಲ ಸೌಲಭ್ಯ ನೀಡುವುದಾಗಿ ಪ್ರಮಾಣ ಪತ್ರ ಸಲ್ಲಿಸಿದ ನಂತರ ಮೂರು ವರ್ಷಗಳ ಮಟ್ಟಿಗೆ ಅನುಮತಿ ನೀಡಲಾಗಿತ್ತು.

ಪ್ರತಿವರ್ಷದ ತೊಂದರೆ ಮತ್ತೆ ಎದುರಾಗಬಾರದು ಎಂಬ ಉದ್ದೇಶದಿಂದ ಎಂಸಿಐ ರೂಪಿಸಿದ 26 ಮಾನದಂಡಗಳನ್ನು ಅನುಸರಿಸಿ ಎಲ್ಲ ಸೌಲಭ್ಯ ನೀಡಿದ್ದರಿಂದ ಎಂಸಿಐ ತಂಡ ತೃಪ್ತಿ ವ್ಯಕ್ತಪಡಿಸಿದೆ. ಪ್ರಸ್ತುತ ನಾಲ್ಕನೇ ವರ್ಷ ಪೂರೈಸುತ್ತಿರುವ ಮತ್ತು ಹೊಸದಾಗಿ ಪ್ರಥಮ ವರ್ಷಕ್ಕೆ ಸೇರ್ಪಡೆಗೊಳ್ಳುವ ವಿದ್ಯಾರ್ಥಿಗಳಲ್ಲಿ ಸಂತಸ ಮೂಡಿಸಿದೆ.

ಹಿಂದುಳಿದ ಭಾಗದ ಅತ್ಯಂತ ಮಹತ್ವದ ವೈದ್ಯಕೀಯ ಸಂಸ್ಥೆ ಉಳಿಸುವ ನಿಟ್ಟಿನಲ್ಲಿ ಹಲವಾರು ಯತ್ನ ನಡೆದಿವೆ. ಪ್ರಸ್ತುತ ಕಿಮ್ಸ್‌ನ ಹಂಗಾಮಿ ನಿರ್ದೇಶಕ ಡಾ.ದತ್ತಾತ್ರೇಯ ಬಂಟ್‌ ನೇತೃತ್ವದ ಸಮಿತಿ ಸೌಲಭ್ಯಗಳನ್ನು ಕಲ್ಪಿಸಲು ಶ್ರಮಿಸಿದೆ. ಕುಡಿಯುವ ನೀರು, ವಸತಿ ನಿಲಯ, ಗ್ರಂಥಾಲಯಕ್ಕೆ 2.500 ಪುಸ್ತಕ, ಅಗತ್ಯ ಬೋಧಕ ಸಿಬ್ಬಂದಿ ನೇಮಕಾತಿಯಿಂದ ಎಂಸಿಐ ತಂಡ ಸಮಾಧಾನ ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿವೆ.

'ರೇಡಿಯಾಲಾಜಿಸ್ಟ್ ಮತ್ತು ಯೂರಾಲಾಜಿಸ್ಟ್ ತಜ್ಞ ವೈದ್ಯರ ಕೊರತೆಯೂ ಇಲ್ಲಿ ಇದೆ. ಆದ್ದರಿಂದ ಬೇರೆಡೆಯಿಂದ ತಜ್ಞ ವೈದ್ಯರನ್ನು ವಾರದಲ್ಲಿ ಎರಡು ದಿನ ಕರೆಸಿಕೊಳ್ಳಲಾಗುತ್ತದೆ. ಆಸ್ಪತ್ರೆ ಪಕ್ಕದಲ್ಲಿಯೇ 350 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು ನಿರ್ಮಿಸಲಾಗುತ್ತಿದೆ. ಸರ್ಕಾರದ ಮಟ್ಟದಲ್ಲಿ ಒತ್ತಡ ಹಾಕಿ ಸಾವಿರ ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಕ್ಕೆ ₹134 ಕೋಟಿ ಅನುದಾನ ಬಿಡುಗಡೆ ಮಾಡಿಸಲಾಗಿದೆ. ಹೀಗಾಗಿ ಜಿಲ್ಲೆಯ ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ಆಗಲಿದೆ' ಎಂದು ಕಿಮ್ಸ್‌ನ ಹಂಗಾಮಿ ನಿರ್ದೇಶಕ ಡಾ.ದತ್ತಾತ್ರೇಯ ಬಂಟ್‌ ತಿಳಿಸಿದರು.

ಕೊರತೆಗಳೇನು: ಕಾಲೇಜಿನ ಕ್ಯಾಂಪಸ್ ನಗರದ ಹೊರವಲಯದಲ್ಲಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಭದ್ರತೆ, ತರಬೇತಿಗಾಗಿ ಜಿಲ್ಲಾ ಆಸ್ಪತ್ರೆಗೆ ತೆರಳುವುದಕ್ಕಾಗಿ ವಾಹನ ವ್ಯವಸ್ಥೆ, ಶುದ್ಧ ಕುಡಿಯುವ ನೀರು, ನಿರಂತರ ವಿದ್ಯುತ್, ಆವರಣದಲ್ಲಿ ಹಸಿರೀಕರಣ ಆಗಬೇಕಾಗಿದೆ. ಈ ಕುರಿತು ಸ್ಥಳೀಯ ಆಡಳಿತಕ್ಕೆ ಮೇಲಿಂದ ಮೇಲೆ ಮನವಿ ಸಲ್ಲಿಸಿದ್ದು, ನಿಧಾನಗತಿಯಲ್ಲಿ ಕಾರ್ಯ ಸಾಗುತ್ತಿದೆ. ಅಲ್ಲದೆ ಸಿಬ್ಬಂದಿ ಕೊರತೆಯೇ ಅನುಮತಿ ನೀಡುವುದಕ್ಕೆ ಪ್ರಮುಖ ಕಾರಣವಾಗಿತ್ತು.

ಕಿಮ್ಸ್ ಕಾಲೇಜಿನಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳು ಮೂರು ವರ್ಷದಿಂದ ಆತಂಕದಲ್ಲಿಯೇ ಕಾಲ ಕಳೆದಿದ್ದಾರೆ. ಸೌಲಭ್ಯವಿಲ್ಲದೆ ಭವಿಷ್ಯದಲ್ಲಿ ತಮ್ಮ ಲಕ್ಷಾಂತರ ವೆಚ್ಚ ಮಾಡಿ ಪದವಿ ಪೂರೈಸಿದರೂ ಮಾನ್ಯತೆ ದೊರೆಯುತ್ತೋ ಇಲ್ಲವೋ ಎಂಬ ಭಯದಲ್ಲಿ ಪಾಲಕರ ಸಮೇತ ಪ್ರತಿಭಟನೆ ಮಾಡಿದ್ದನ್ನು ಸ್ಮರಿಸಬಹುದಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು