ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀಲ್‌ಡೌನ್‌: ಗೊಂದಲದ ಗೂಡಾದ ಸಭೆ

ಸ್ವಯಂ ಪ್ರೇರಣೆಯಿಂದ ಮಾರ್ಗಸೂಚಿ ಅನುಸರಿಸುವುದು ಮುಖ್ಯ: ತಹಶೀಲ್ದಾರ್‌
Last Updated 10 ಮೇ 2021, 13:15 IST
ಅಕ್ಷರ ಗಾತ್ರ

ಕುಷ್ಟಗಿ: ಕೋವಿಡ್‌ ನಿಯಂತ್ರಿಸಲು ಪಟ್ಟಣವನ್ನು ಸೀಲ್‌ಡೌನ್‌ ಮಾಡುವುದಕ್ಕೆ ಸಂಬಂಧಿಸಿದಂತೆ ಇಲ್ಲಿಯ ಪುರಸಭೆಯಲ್ಲಿ ಸೋಮವಾರ ನಡೆದ ಸಭೆ ಗೊಂದಲದ ಗೂಡಾಯಿತು.

ಸಭೆಯಲ್ಲಿ ಪ್ರಾರಂಭದಲ್ಲಿ ಮಾತನಾಡಿದ ಅಧ್ಯಕ್ಷ ಜಿ.ಕೆ.ಹಿರೇಮಠ ಮತ್ತು ಕೆಲ ಸದಸ್ಯರು ಜನರಿಗೆ ತೊಂದರೆಯಾಗದಂತೆ ಸೀಲ್‌ಡೌನ್‌ ಮಾಡುವ ನಿಟ್ಟಿನಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದರು. ನಂತರ ಮಾತನಾಡಿ ಸಹಮತ ವ್ಯಕ್ತಪಡಿಸಿದ ಶಾಸಕ ಅಮರೇಗೌಡ ಬಯ್ಯಾಪುರ, ಸಾಧ್ಯವಾಗುವುದಾದರೆ ಸೀಲ್‌ಡೌನ್‌ ಮಾಡುವುದಕ್ಕೆ ತಮ್ಮ ಅಭ್ಯಂತರ ಇಲ್ಲ. ಈ ಸಂಬಂಧ ಈಗಾಗಲೇ ಜಿಲ್ಲಾಧಿಕಾರಿಯೊಂದಿಗೂ ಚರ್ಚಿಸಿದ್ದೇನೆ. ನಿರ್ಧಾರ ತೆಗೆದುಕೊಳ್ಳುವುದು ತಹಶೀಲ್ದಾರ್ ಅವರಿಗೆ ಸೇರಿರುತ್ತದೆ ಎಂದರು.

ಈ ಕುರಿತು ಸಭೆಗೆ ವಿವರಿಸಿದ ತಹಶೀಲ್ದಾರ್ ಎಂ.ಸಿದ್ದೇಶ್,‘ಸೀಲ್‌ಡೌನ್‌ ಮಾಡುವುದಕ್ಕೆ ಕೆಲವು ಆಯಾಮಗಳು ಇರುತ್ತವೆ. ಸದಸ್ಯರು, ಶಾಸಕರ ಅಭಿಪ್ರಾಯವನ್ನು ಜಿಲ್ಲಾಡಳಿತದ ಗಮನಕ್ಕೆ ತರುತ್ತೇವೆ. ಸೀಲ್‌ಡೌನ್ ನಿರ್ಧಾರ ತೆಗೆದುಕೊಳ್ಳಬೇಕೆ ಬೇಡವೆ ಎಂಬುದನ್ನು ಪರಿಶೀಲಿಸಲು ಎರಡು ಮೂರು ದಿನಗಳ ಕಾಲಾವಕಾಶ ಬೇಕಾಗುತ್ತದೆ’ ಎಂದರು.

ಅಲ್ಲದೆ ಕಾನೂನಾತ್ಮಕವಾಗಿ ಸೀಲ್‌ಡೌನ್‌ ಮಾಡುವ ಬದಲು ನಾವೇ ಸ್ವಯಂ ಪ್ರೇರಣೆಯಿಂದ ಕಟ್ಟುನಿಟ್ಟಿನ ಕ್ರಮ ಅನುಸರಿಸುವುದು ಮಹತ್ವದ್ದಾಗಿರುತ್ತದೆ ಎಂದೂ ಹೇಳಿದರು.

ಹೊತ್ತಿದ ಕಿಡಿ: ಅಲ್ಲಿಯವರೆಗೂ ಸಭೆ ಸುಗಮವಾಗಿ ನಡೆಯಿತಾದರೂ ಸದಸ್ಯ ಮೈನುದ್ದೀನ್‌ ಮುಲ್ಲಾ ಅವರು ‘ಸೀಲ್‌ಡೌನ್‌ ಕುರಿತು ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯವಾಗಿ ವ್ಯವಸ್ಥಿತ ರೀತಿಯಲ್ಲಿ ಅಪಪ್ರಚಾರ ನಡೆಸಲಾಗುತ್ತಿದೆ’ ಎಂದು ಹೇಳಿದರು.

ಆದರೆ ಆ ವಿಷಯ ಇಲ್ಲಿ ಅಪ್ರಸ್ತುತ ಅದರ ಬಗ್ಗೆ ಪ್ರಸ್ತಾಪಿಸುವುದು ಬೇಡ ಎಂದು ಜಿ.ಕೆ.ಹಿರೇಮಠ ಮತ್ತು ಸ್ವತಃ ಶಾಸಕ ಬಯ್ಯಾಪುರ ಸಮಾಧಾನಪಡಿಸಲು ಮುಂದಾದರೂ ಅದಕ್ಕೆ ಮಣಿಯದ ಮೈನುದ್ದೀನ್ ಮುಲ್ಲಾ ಮಾತು ಮುಂದುವರಿಸಿದಾಗ ಗದ್ದಲ ಶುರುವಾಯಿತು. ಮಾತಿಗೆ ಮಾತು ಬೆಳೆದು ಮೂಲ ವಿಷಯ ಗೌಣವಾಯಿತು.

ಅಷ್ಟೇ ಅಲ್ಲ ‘ಶಾಸಕರ ಸೂಚನೆಯಂತೆ ತರಕಾರಿ ಮಾರುಕಟ್ಟೆಯನ್ನು ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಯಿತು’ ಎಂದು ಜಿ.ಕೆ.ಹಿರೇಮಠ ಹೇಳುತ್ತಿದ್ದಂತೆ ಸಿಟ್ಟಿಗೆದ್ದು ಎದ್ದು ನಿಂತ ಶಾಸಕ, ಅದು ನನ್ನ ತೀರ್ಮಾನ ಅಲ್ಲ. ಸಮಾಜಕ್ಕೆ ತಪ್ಪು ಸಂದೇಶ ನೀಡಬೇಡಿ ಎಂದು ಆಕ್ಷೇಪಿಸಿದರು. ಈ ಸಂದರ್ಭದಲ್ಲಿ ಶಾಸಕ ಹಾಗೂ ಹಿರೇಮಠ ಪರಸ್ಪರ ಮಾತಿಗಿಳಿದಿದ್ದರಿಂದ ಸಭೆ ಮತ್ತಷ್ಟೂ ಗೊಂದಲಕ್ಕೀಡಾಯಿತು. ಎರಡು ಮೂರು ದಿನಗಳಲ್ಲಿ ಸೀಲ್‌ಡೌನ್‌ ಬಗ್ಗೆ ನಿರ್ಧರಿಸುವುದಾಗಿ ತಹಶೀಲ್ದಾರ್ ಹೇಳಿ ಸಭೆ ಮುಕ್ತಾಯಗೊಳಿಸಿದರು.

ಸರ್ಕಲ್‌ ಇನ್‌ಸ್ಪೆಕ್ಟರ್ ಎಸ್‌.ಆರ್‌.ನಿಂಗಪ್ಪ, ಪುರಸಭೆ ವ್ಯವಸ್ಥಾಪಕ ಪ್ರಹ್ಲಾದ ಜೋಷಿ ಇತರರು ಇದ್ದರು. ಸಭೆಯಲ್ಲಿ ಆರೋಗ್ಯಕರ ಚರ್ಚೆ ನಡೆಸದೆ ಸದಸ್ಯರು ಪರಸ್ಪರ ಕದನಕ್ಕೆ ಇಳಿದು ಸಮಯ ವ್ಯರ್ಥಮಾಡಿದರು ಎಂದು ಅಧಿಕಾರಿಯೊಬ್ಬರು ನಂತರ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT