ಕೊಪ್ಪಳ: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಯನ್ನು ವರ್ಗಾವಣೆ ಮಾಡಿ ಎಂದು ಜಿಲ್ಲೆಯ ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಅವರು ಬಳ್ಳಾರಿ ಐಜಿಪಿಗೆ ಬರೆದಿರುವ ಶಿಫಾರಸು ಪತ್ರ ಸಾಮಾಜಿಕ ತಾಣಗಳಲ್ಲಿ ಹರಿದಾಡಿದೆ.
ಯಾವ ಸಿಬ್ಬಂದಿಯನ್ನು ಯಾವ ಸ್ಥಳಕ್ಕೆ ನಿಯೋಜಿಸಬೇಕು ಎನ್ನುವುದನ್ನೂ ಶಾಸಕರೇ ಸೂಚಿಸಿದ್ದು ಚರ್ಚೆಗೆ ಗ್ರಾಸವಾಗಿದೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ರಾಯರಡ್ಡಿ, ‘ವರ್ಗಾವಣೆ ಮಾಡುವಂತೆ ಪತ್ರ ಬರೆದಿದ್ದು ನಿಜ. ಇದರಲ್ಲಿ ನನ್ನ ಹಿತಾಸಕ್ತಿ ಎನಿಲ್ಲ. ಸಾರ್ವಜನಿಕರ ದೂರು, ನೌಕರರ ಸಂಬಂಧಿಕರ ಕೋರಿಕೆ ಮತ್ತು ನಮ್ಮ ಪಕ್ಷದ ಕಾರ್ಯಕರ್ತರ ಬೇಡಿಕೆಗೆ ಮಣಿದು ಪತ್ರ ಬರೆದಿದ್ದೇನೆ’ ಎಂದರು.
‘ವರ್ಗಾವಣೆಯು ಕಳೆದ 20 ವರ್ಷಗಳಿಂದ ಎಲ್ಲಾ ಸರ್ಕಾರದಲ್ಲಿ ನಡೆದುಕೊಂಡ ಬಂದ ವ್ಯವಸ್ಥಿತ ದಂಧೆಯಾಗಿದೆ. ಈ ಕೆಟ್ಟ ಪರಂಪರೆಗೆ ಕಡಿವಾಣ ಹಾಕಬೇಕೆಂಬುದು ನನ್ನ ವೈಯಕ್ತಿಕ ಒತ್ತಾಯವಾಗಿದೆ. ಇತ್ತೀಚೆಗೆ ಇದೊಂದು ಉದ್ದಿಮೆಯಂತೆ ಆಗಿದೆ. ಇದು ನನ್ನ ಕ್ಷೇತ್ರದಲ್ಲಿ ಮಾತ್ರವಲ್ಲ, ರಾಜ್ಯದ ಎಲ್ಲ ಪಕ್ಷಗಳ ಶಾಸಕರು ಶಿಫಾರಸು ಮಾಡುತ್ತಿದ್ದಾರೆ’ ಎಂದಿದ್ದಾರೆ.
‘ವರ್ಗಾವಣೆಗೆ ಪಕ್ಷದ ಕಾರ್ಯಕರ್ತರು ಹಾಕುತ್ತಿರುವ ಒತ್ತಡಕ್ಕೆ ಎಲ್ಲಾ ಜನಪ್ರತಿನಿಧಿಗಳು ಸಿಲುಕುತ್ತಿದ್ದಾರೆ. ಒತ್ತಡಕ್ಕೆ ಮಣಿದು ಅನಿವಾರ್ಯವಾಗಿ ಮನಸ್ಸಿನ ವಿರುದ್ಧವಾಗಿ ನಡೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ವರ್ಗಾವಣೆ ದಂಧೆಗೆ ಕಡಿವಾಣದ ಅಗತ್ಯವಿದೆ. ಸರ್ಕಾರ ಈ ಬಗ್ಗೆ ಸ್ಪಷ್ಟವಾದ ನಿಯಮಾವಳಿ ರೂಪಿಸಬೇಕು. ವರ್ಗಾವಣೆ ಬಯಸಿ ಬರುವ ಸರ್ಕಾರಿ ನೌಕರರನ್ನು ಅಮಾನತು ಮಾಡುವ ಕಠಿಣ ಕ್ರಮ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.