ಗುರುವಾರ , ಜನವರಿ 23, 2020
22 °C

ಮೌನೇಶ್ವರ ವಿಶ್ವ ಬೆಳಗುವ ಚೈತನ್ಯಶಕ್ತಿ : ಈಶಪ್ಪ ಬಡಿಗೇರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಷ್ಟಗಿ: ಮೌನೇಶ್ವರರು ಜಗತ್ತನ್ನೇ ಬೆಳಗುವ ಚೈತನ್ಯ ಶಕ್ತಿಯಾಗಿದ್ದಾರೆ ಎಂದು ವಿಶ್ವಕರ್ಮ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಈಶಪ್ಪ ಬಡಿಗೇರ ಹೇಳಿದರು.

ಪಟ್ಟಣದಲ್ಲಿ ತಾಲ್ಲೂಕು ವಿಶ್ವಕರ್ಮ ಸಮಾಜ ಹಾಗೂ ನಗರ ಘಟಕದ ವತಿಯಿಂದ ಸೋಮವಾರ ಇಲ್ಲಿಯ ಕಾಳಿಕಾದೇವಿ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಮೌನೇಶ್ವರ ಜಯಂತ್ಯುತ್ಸವ ಹಾಗೂ ಸಮುದಾಯದ ವಟುಗಳಿಗೆ ಸಾಮೂಹಿಕ ಉಪನಯನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಶ್ವಕರ್ಮರು ಜಗತ್ತಿನ ಸೃಷ್ಟಿಕರ್ತರಾಗಿದ್ದು ರೈತನ ಬೆನ್ನೆಲುಬಾಗಿದ್ದಾರೆ. ಮನುಷ್ಯನಿಗೆ ಹುಟ್ಟಿನಿಂದ ಬದುಕಿನ ಅಂತ್ಯದವರೆಗೂ ಬೇಕಾಗುವ ಪರಿಕರಗಳನ್ನು ಒದಗಿಸುತ್ತ ಬಂದಿದ್ದಾರೆ ಎಂದರು.

12ನೇ ಶತಮಾನಕ್ಕಿಂತ ಪೂರ್ವದಲ್ಲಿಯೇ ಜನಿಸಿದ್ದ ಮೌನೇಶ್ವರರು ಎಲ್ಲ ಜಾತಿ ಸಮುದಾಯಗಳು ಒಂದೇ ಎಂಬುದನ್ನು ನಿರೂಪಿಸಿದ್ದಾರೆ.  ಅವರ ಚರಿತ್ರೆಯನ್ನು ಮುಂದಿನ ಪೀಳಿಗೆಗೂ ತಿಳಿಸುವ ಅಗತ್ಯವಿದ್ದು ಅದನ್ನು ಪಠ್ಯಪುಸ್ತಕದಲ್ಲಿ ಸೇರ್ಪಡೆಗೊಳಿಸಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ 45 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ವಿಶ್ವಕರ್ಮ ಸಮುದಾಯವನ್ನು ಸರ್ಕಾರಗಳು ಕಡೆಗಣಿಸುತ್ತ ಬಂದಿವೆ. ಯಾವುದೇ ಪಕ್ಷಗಳು ರಾಜಕೀಯ ಪ್ರಾತಿನಿಧ್ಯ ನೀಡಿಲ್ಲ. ವಿಶ್ವಕರ್ಮ ಅಭಿವೃದ್ಧಿ ನಿಗಮ ಸ್ಥಾಪಿಸಿದರೂ ಕಾಟಾಚಾರಕ್ಕೆ ಕನಿಷ್ಠ ಪ್ರಮಾಣದಲ್ಲಿ ಅನುದಾನ ಒದಗಿಸಲಾಗುತ್ತಿದೆ. ನಿರ್ಲಕ್ಷ್ಯ ಮುಂದುವರಿದರೆ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಸಿದರು.

ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಗುರಪ್ಪ ಬಡಿಗೇರ, ಮೌನೇಶ್ವರರ 90 ವರ್ಷ  ಬದುಕಿದ್ದಾರೆ ಎನ್ನಲಾಗಿದ್ದರೂ ಅವರ ಬದುಕಿದ ಅವಧಿಯ ಬಗೆಗಿನ ಜಿಜ್ಞಾಸೆ ಇನ್ನೂ ಮುಂದುವರೆದಿದೆ. ಈ ವಿಷಯದಲ್ಲಿ ಹೆಚ್ಚಿನ ಸಂಶೋಧನೆ ನಡೆಸುವ ಅಗತ್ಯವಿದೆ ಎಂದರು.

 ಪುರಸಭೆ ಸದಸ್ಯ ವಸಂತ ಮೇಲಿನಮನಿ ಇತರರು ಕಾರ್ಯಕ್ರಮ ಕುರಿತು ಮಾತನಾಡಿದರು. ಏಕದಂಡಗಿ ಮಠದ ವಿರುಪಾಕ್ಷಯ್ಯ ಸ್ವಾಮೀಜಿ, ನಾಗಮೂರ್ತೇಂದ್ರ ಸ್ವಾಮೀಜಿ, ದಿವಾಕರ ಸ್ವಾಮೀಜಿ, ಬ್ರಹ್ಮೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ನರಸಿಂಹಾಚಾರ, ಮಹಾಬಳೇಶಾಚಾರ ಉಪಸ್ಥಿತರಿದ್ದರು. ವಿಶ್ವಕರ್ಮ ಸಮಾಜದ ಜಿಲ್ಲಾ ಘಟಕದ ಉಪಾಧ್ಯಕ್ಷ ವೀರಣ್ಣ ಪತ್ತಾರ, ನಗರ ಘಟಕದ ಅಧ್ಯಕ್ಷ ಸಿದ್ದಪ್ಪ ಬಡಿಗೇರ, ಪುರಸಭೆ ಮಾಜಿ ಅಧ್ಯಕ್ಷೆ ಕಾಳಮ್ಮ ಬಡಿಗೇರ, ಕಮಲಮ್ಮ ಸಿಂಗಟಾಲೂರು, ವೀರಣ್ಣ ಪತ್ತಾರ, ವಾಸಪ್ಪ ಪತ್ತಾರ, ಆನಂದ ಕಮ್ಮಾರ, ಕೆ.ಆರ್‌.ಬಡಿಗೇರ, ಉಮ್ಮಣ್ಣ ಬಡಿಗೇರ, ಕಾಳೇಶ ಬಡಿಗೇರ, ಜಗದೀಶ ಬಡಿಗೇರ, ಪ್ರವಚನಕಾರ ಮೌನೇಶ್ವರ ಶಾಸ್ತ್ರಿ, ಕೆ.ಬಿ.ಬಡಿಗೇರ, ಮನೋಹರ ಬಡಿಗೇರ  ಇದ್ದರು.

 ವಿಶ್ವಕರ್ಮ ಸಮುದಾಯದ 46 ವಟುಗಳಿಗೆ ಸಾಮೂಹಿಕ ಉಪನಯನ ನೆರವೇರಿಸಲಾಯಿತು. ಅಲಂಕೃತ ವಾಹನದಲ್ಲಿ ಇರಿಸಲಾಗಿದ್ದ ಮೌನೇಶ್ವರರ ಚಿತ್ರದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು.

 ಪ್ರಮುಖರನ್ನು ಸಮಾಜದ ವತಿಯಿಂದ ಸನ್ಮಾನಿಸಲಾಯಿತು. ಕುಮಾರ ಬಡಿಗೇರ ನಿರೂಪಿಸಿದರು. ರಾಮಣ್ಣ ಬ್ಯಾಲಿಹಾಳ ಸ್ವಾಗತಿಸಿದರು. ಕಲಾವಿದರಾದ ಎಸ್‌.ಎಸ್‌.ಹಿರೇಮಠ, ದೇವೇಂದ್ರಪ್ಪ ಕಮ್ಮಾರ, ಅಯ್ಯಪ್ಪ ಬಡಿಗೇರ, ಕೊಳ್ಳಪ್ಪ ಬೂದ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು