ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಈಶಾನ್ಯ ಪದವೀಧರರ ಕ್ಷೇತ್ರದ ಚುನಾವಣೆ: ಜಿಲ್ಲೆಯಲ್ಲಿ ಶೇ. 81.61ರಷ್ಟು ಮತದಾನ

Published 3 ಜೂನ್ 2024, 14:18 IST
Last Updated 3 ಜೂನ್ 2024, 14:18 IST
ಅಕ್ಷರ ಗಾತ್ರ

ಕೊಪ್ಪಳ: ವಿದ್ಯಾವಂತರ ಕಣ ಎಂದೇ ಹೆಸರಾದ ಕರ್ನಾಟಕ ವಿಧಾನಪರಿಷತ್ ಈಶಾನ್ಯ ಪದವೀಧರರ ಮತಕ್ಷೇತ್ರದ ಚುನಾವಣೆಗೆ ಸೋಮವಾರ ಜಿಲ್ಲೆಯಲ್ಲಿ ಶೇ. 81.61ರಷ್ಟು ಮತದಾನವಾಗಿದೆ.

ಆದರೆ, ಜಿಲ್ಲಾಕೇಂದ್ರದ ಮತಗಟ್ಟೆಗಳ ಎದುರೇ ರಾಜಾರೋಷವಾಗಿ ಹಣ ಹಂಚಿಕೆ ಮಾಡುವ ಚಿತ್ರಣ ಕಂಡು ಬಂದಿತು. ಅಧಿಕಾರದ ಗದ್ದುಗೆಗಾಗಿ ಬಿಜೆಪಿ, ಕಾಂಗ್ರೆಸ್‌ ಮತ್ತು ಕೆಲ ಪಕ್ಷೇತರ ಅಭ್ಯರ್ಥಿಗಳ ನಡುವೆ ತುರುಸಿನ ಪೈಪೋಟಿಯಿದೆ. ಹೀಗಾಗಿ ಶತಾಯುಗತಾಯು ಅಧಿಕಾರ ಪಡೆಯಲೇಬೇಕು ಎಂದು ಕೆಲ ರಾಜಕೀಯ ಪಕ್ಷಗಳ ಮುಖಂಡರು, ಎಜೆಂಟರು ಬಹಿರಂಗವಾಗಿಯೇ ಹಣ ಹಂಚಿದರು. ಕ್ಯಾಮೆರಾ ಹೊರತೆಗೆಯುತ್ತಿದ್ದಂತೆಯೇ ಬಚ್ಚಿಟ್ಟುಕೊಂಡು ಹಣ ನೀಡಿದರು.

ಇನ್ನೂ ಕೆಲವರು ಮತದಾರರ ಪಟ್ಟಿಗೆ ತಕ್ಕಂತೆ ಅವರಿಗೆ ಫೋನ್‌ ಮಾಡಿ ಹಣ ನೀಡಿದರೆ, ಇನ್ನೂ ಕೆಲವರು ಮತಗಟ್ಟೆ ಸಮೀಪ ಬಂದಾಗ ಹಣ ನೀಡಿದರು. ಮತ್ತಷ್ಟು ಜನ ಮತಗಟ್ಟೆ ಕೇಂದ್ರದಿಂದ ಕೊಂಚ ದೂರು ಕರೆದುಕೊಂಡು ಹೋಗಿ ಕವರ್‌ ಕೊಟ್ಟ ಚಿತ್ರಗಳು ಕಂಡುಬಂದವು.

ನಿಧಾನ ಆರಂಭ: ಬೆಳಿಗ್ಗೆ ಮೋಡಕವಿದ ವಾತಾವರಣವಿದ್ದ ಕಾರಣ ನಿಧಾನಗತಿಯನ್ನು ಮತದಾನ ಮಾಡಲು ಮತದಾರರು ಬಂದರು. ಬೆಳಿಗ್ಗೆ 10 ಗಂಟೆ ಅಂತ್ಯಕ್ಕೆ ಶೇ .8.72ರಷ್ಟು ಮತದಾನವಾಗಿತ್ತು. ನಿಧಾನವಾಗಿ ಏರಿಕೆ ಕಂಡು ಮಧ್ಯಾಹ್ನ 12 ಗಂಟೆ ಅಂತ್ಯಕ್ಕೆ ಶೇ. 30.98ರಷ್ಟು ಮತದಾನವಾಗಿದೆ. ಬಳಿಕ ಚುರುಕು ಪಡೆದುಕೊಂಡಿತು.

ಕೊಪ್ಪಳ ತಾಲ್ಲೂಕು ಪಂಚಾಯಿತಿ ಕಚೇರಿಯ 128 ಹಾಗೂ 128 ಎ ಮತಗಟ್ಟೆಯಲ್ಲಿ ಮತಕ್ಷೇತ್ರದ ಚುನಾವಣಾ ವೀಕ್ಷಕರಾದ ಮಹೇಶ್ವರರಾವ್ ಭೇಟಿ ನೀಡಿ ಪರಿಶೀಲಿಸಿದರು.

ಜಿಲ್ಲಾಧಿಕಾರಿ ನಲಿನ್‌ ಅತುಲ್‌, ಎಸ್‌.ಪಿ. ಯಶೋಧಾ ವಂಟಗೋಡಿ, ಸಿಇಒ ರಾಹುಲ್‌ ರತ್ನಂ ಪಾಂಡೆಯ, ಹೆಚ್ಚುವರಿ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ ಸೇರಿದಂತೆ ಅನೇಕರು ಸರತಿಯಲ್ಲಿ ನಿಂತು ಮತದಾನದ ಹಕ್ಕು ಚಲಾಯಿಸಿದರು. 80 ವರ್ಷದ ಶೋಭಾ ಅಗಡಿ ಇಳಿವಯಸ್ಸಿನಲ್ಲಿಯೂ ಮತದಾನ ಮಾಡಿ ಪ್ರೇರಣೆಯಾದರು. ನಗರದ ಜಗದೀಶ್ವರಯ್ಯ ಹಿರೇಮಠ ಹಾಗೂ ಸುವರ್ಣ ಹಿರೇಮಠ ದಂಪತಿ ಕೂಡ ಜೊತೆಯಾಗಿ ಬಂದು ಹಕ್ಕು ಚಲಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT