ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗಾವತಿ | ಸಾಣಾಪುರ ಕೆರೆ: ಅನಧಿಕೃತಕ್ಕೆ ಈಗ ಅಧಿಕೃತ ಮುದ್ರೆ?

Published 17 ಜನವರಿ 2024, 5:43 IST
Last Updated 17 ಜನವರಿ 2024, 5:43 IST
ಅಕ್ಷರ ಗಾತ್ರ

ಗಂಗಾವತಿ: ತಾಲ್ಲೂಕಿನ ಸಾಣಾಪುರ ಗ್ರಾಮದ ನಿಷೇಧಿತ ಅರಣ್ಯ ವಲಯ ಪ್ರದೇಶದಲ್ಲಿರುವ ಕೆರೆಯಲ್ಲಿ ಅನಧಿಕೃತವಾಗಿ ಪುನಃ ಆರಂಭವಾಗಿರುವ ಹರಿಗೋಲು ಸವಾರಿಗೆ ಈಗ ಅರಣ್ಯ ಇಲಾಖೆಯೇ ಅಧಿಕೃತ ಮುದ್ರೆ ಒತ್ತಲು ಸಿದ್ಧತೆ ನಡೆಸುತ್ತಿದೆ.

ಅಂಜನಾದ್ರಿ, ನವ ವೃಂದಾವನ, ಸಾಣಾಪುರ ಸೇರಿದಂತೆ ಹಲವು ಪ್ರವಾಸೋದ್ಯಮ ಹಾಗೂ ಐತಿಹಾಸಿಕ ಸ್ಥಳಗಳು ಈ ಭಾಗದಲ್ಲಿರುವ ಕಾರಣ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಶಾಸಕ ಜನಾರ್ದನ ರೆಡ್ಡಿ ತರಾತುರಿಯಲ್ಲಿ ಹರಿಗೋಲು ಬಳಕೆಗೆ ಅವಕಾಶ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಇದರಂತೆ ಅರಣ್ಯ ಇಲಾಖೆಯಿಂದಲೇ ಟಿಕೆಟ್ ವಿತರಣೆ ಮಾಡಲಾಗಿತ್ತು. ಖುದ್ದು ಶಾಸಕರೇ ಹರಿಗೋಲಿನಲ್ಲಿ ವಿಹರಿಸಿದ್ದರು. ಈ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಕಟವಾದ ಬಳಿಕ ಸಾಕಷ್ಟು ಟೀಕೆಯೂ ವ್ಯಕ್ತವಾಗಿದೆ.

ಆದ್ದರಿಂದ ಅರಣ್ಯ ಇಲಾಖೆ ಈಗ ಸ್ಥಳೀಯ ಆಡಳಿತದ ಜೊತೆ ‘ಪರಸ್ಪರ ಒಪ್ಪಂದದ ತಿಳಿವಳಿಕೆ ಪತ್ರ’ (ಎಂಒಯು) ಮಾಡಿಕೊಳ್ಳಲು ಮುಂದಾಗಿದೆ.

ಸೋಮವಾರ ಅರಣ್ಯ ಇಲಾಖೆಯ ಸಹಯೋಗದಲ್ಲಿ ನಡೆದ ಹರಿಗೋಲು ಸವಾರಿ ಹಾಗೂ ಟಿಕೆಟ್ ವಿತರಣೆ ಕಾರ್ಯಕ್ರಮವನ್ನು ಶಿಷ್ಟಾಚಾರ ಉಲ್ಲಂಘಿಸಿ ನಡೆಸಲಾಗಿದೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ಖಚಿತಪಡಿಸಿವೆ.

ಈ ಎಲ್ಲಾ ಬೆಳವಣಿಗೆಗಳ ನಡುವೆ ಅರಣ್ಯ ಇಲಾಖೆ ಅಧಿಕಾರಿಗಳು ಮಂಗಳವಾರ 16 ಜನ ಹರಿಗೋಲು ಸವಾರರಿಗೆ ಕೆರೆಯಲ್ಲಿ ಹರಿಗೋಲು ಹಾಕಲು ಅನುಮತಿ ಕೊಡುವ ಸಲುವಾಗಿಯೇ ಗಂಗಾವತಿಗೆ ಕರೆಯಿಸಿಕೊಂಡಿದ್ದರು ಎಂದು ಮೂಲಗಳು ಖಚಿತಪಡಿಸಿವೆ.

ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ಕಾರಣ ಮುಂದಿಟ್ಟು ಹರಿಗೋಲು ಹಾಕಲು ಅನುಮತಿ ನೀಡಿದ್ದಾರೆ. ಆದರೆ, ಇದರ ಬಗ್ಗೆ ಮೇಲಧಿಕಾರಿಗಳಿಂದ ಅಧಿಕೃತವಾಗಿ ಮಾಹಿತಿ ಬಂದಿಲ್ಲ. ಈ ಎಲ್ಲ ಬೆಳವಣಿಗೆಗಳ ಬಗ್ಗೆ ಸಾಣಾಪುರ ವ್ಯಾಪ್ತಿಯ ಗಂಗಾವತಿ ತಾಲ್ಲೂಕು ಪಂಚಾಯಿತಿಯಾಗಲಿ, ಸಾಣಾಪುರ ಗ್ರಾಮ ಪಂಚಾಯಿತಿಗೆ ಯಾರೂ ಮಾಹಿತಿ ನೀಡಿಲ್ಲ ಎಂದು ಅಲ್ಲಿನ ಪ್ರಮುಖರೇ ತಿಳಿಸಿದ್ದಾರೆ.

ಈ ಕುರಿತು ಪತ್ರಿಕೆಗೆ ಪ್ರತಿಕ್ರಿಯಿಸಿದ ಗಂಗಾವತಿ ತಾಲ್ಲೂಕು ಪಂಚಾಯಿತಿ ಇಒ ಲಕ್ಷ್ಮಿದೇವಿ ‘ಹರಿಗೋಲು ಸವಾರಿಗೆ ಯಾರೂ ನಮ್ಮಿಂದ ಪರವಾನಗಿ ಪಡೆದಿಲ್ಲ. ಕರೆಯಲ್ಲಿ ಅನಾಹುತ ನಡೆದರೆ ಅರಣ್ಯ ಇಲಾಖೆಯೇ ಅದರ ಹೊಣೆ ಹೊತ್ತುಕೊಳ್ಳಬೇಕು. ಯಾರೂ ಚರ್ಚಿಸಿಲ್ಲ’ ಎಂದು ಹೇಳಿದರು.

Highlights - null

Quote - ಪ್ರವಾಸೋದ್ಯಮ ಬೆಳೆಸಲು ಹರಿಗೋಲು ಆರಂಭಿಸಲಾಗುತ್ತಿದ್ದು ಈ ಕುರಿತು ಎಂಒಯು ಮಾಡಿಕೊಳ್ಳಲು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಟಿಕೆಟ್‌ ಸಂಗ್ರಹದಿಂದ ಬರುವ ಹಣವನ್ನು ಸ್ಥಳೀಯ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು. ಚಂದ್ರಣ್ಣ ಎ. ಡಿಎಫ್‌ಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT