ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ಅವಘಡ: ರಾಜ್ಯದ ವಾಲಿಬಾಲ್ ಆಟಗಾರ್ತಿಯರಿಗೆ ನೆರವಾದ ರೈಲ್ವೆ ಅಧಿಕಾರಿ ಮಂಡ್ಯದ ಮೇಘನಾ

Published 3 ಜೂನ್ 2023, 18:36 IST
Last Updated 3 ಜೂನ್ 2023, 18:36 IST
ಅಕ್ಷರ ಗಾತ್ರ

ಕೊಪ್ಪಳ: ರಾಷ್ಟ್ರೀಯ ಮಟ್ಟದ 16 ವರ್ಷದ ಒಳಗಿನವರ ವಾಲಿಬಾಲ್‌ ಟೂರ್ನಿ ಆಡಲು ಪಶ್ಚಿಮ ಬಂಗಾಳಕ್ಕೆ ತೆರಳಿದ್ದ ಕರ್ನಾಟಕ ಬಾಲಕಿಯರ ತಂಡಕ್ಕೆ ಹೌರಾದಲ್ಲಿ ನೆಲೆಸಿರುವ ಮಂಡ್ಯದ ಮೇಘನಾ ಎನ್ನುವವರು ನೆರವಾಗಿದ್ದಾರೆ.

ಒಡಿಶಾದ ಬಾಲಸೋರ್‌ ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿರುವ ಅಪಘಾತದಿಂದ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದರಿಂದ ಹೌರಾದಲ್ಲಿ ರಾಜ್ಯದ 32 ಜನ ವಾಲಿಬಾಲ್‌ ಕ್ರೀಡಾಪಟಗಳು ಮತ್ತು ಕೋಚ್‌ಗಳು ಸಿಲುಕಿ ಬಿದ್ದಿದ್ದರು. ಟೂರ್ನಿ ಮುಗಿಸಿಕೊಂಡು ಬೆಂಗಳೂರಿಗೆ ಬರಲು ಅವರು ಹೌರಾ ರೈಲು ನಿಲ್ದಾಣಕ್ಕೆ ಬಂದಿದ್ದರು. ರಾತ್ರಿ 11 ಗಂಟೆಗೆ ಬೆಂಗಳೂರಿಗೆ ರೈಲು ಇತ್ತು.

ಬಾಲಸೋರ್‌ನಲ್ಲಿ ರೈಲು ಅಪಫಾತ ಸಂಭವಿಸಿದ್ದರಿಂದ ಉತ್ತರ ಭಾರತದಿಂದ ಬೆಂಗಳೂರಿಗೆ ತೆರಳುವ ರೈಲುಗಳ ಸಂಚಾರ ಬಹುತೇಕ ಸ್ಥಗಿತಗೊಂಡಿದ್ದರಿಂದ ಕ್ರೀಡಾಪಟುಗಳು ಸಂಕಷ್ಟಕ್ಕೆ ಸಿಲುಕಿದರು. ಆಗ ಹೌರಾ ರೈಲು ನಿಲ್ದಾಣದಲ್ಲಿ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವ ಮೇಘನಾ ನೆರವಾಗಿದ್ದಾರೆ. ವಾಲಿಬಾಲ್‌ ಕ್ರೀಡಾಪಟುವಾದ ಅವರು ತಮ್ಮ ಮನೆಯಲ್ಲಿಯೇ ಯುವತಿಯರ ವಾಲಿಬಾಲ್‌ ತಂಡದ ಸದಸ್ಯೆಯರಿಗೆ ರಾತ್ರಿ ತಂಗಲು ವ್ಯವಸ್ಥೆ ಮಾಡಿದ್ದಾರೆ. ಶನಿವಾರ ಸಂಜೆ ತನಕ ಮೇಘನಾ ಮನೆಯಲ್ಲಿ ಕ್ರೀಡಾಪಟುಗಳು ವಿಶ್ರಾಂತಿ ಪಡೆದಿದ್ದಾರೆ.

‘ಬೆಂಗಳೂರಿನ ಕಡೆ ಹೊರಡಲು ಹೌರಾ ರೈಲು ನಿಲ್ದಾಣಕ್ಕೆ ಬಂದಾಗ ಎಲ್ಲಾ ರೈಲುಗಳ ಸಂಚಾರ ರದ್ದಾಗಿದ್ದು ಗೊತ್ತಾಗಿ ಆತಂಕಗೊಂಡೆವು. ಆದರೆ, ಮೇಘನಾ ಅಕ್ಕ ತಮ್ಮ ಮನೆಗೆ ಕರೆದುಕೊಂಡು ಹೋಗಿ ನೆಮ್ಮದಿಯಿಂದ ಇರುವಂತೆ ಮಾಡಿದರು’ ಎಂದು ಕರ್ನಾಟಕ ಬಾಲಕಿಯರ ವಾಲಿಬಾಲ್‌ ತಂಡದ ನಾಯಕಿ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ವಜ್ರಬಂಡಿ ಗ್ರಾಮದ ಹುಲಿಗೆಮ್ಮ ಹೇಳಿದರು.

‘ಪ್ರಜಾವಾಣಿ’ ಜೊತೆ ಮಾತನಾಡಿದ ಹುಲಿಗೆಮ್ಮ ‘ನಾವೆಲ್ಲ ಸುರಕ್ಷಿತವಾಗಿದ್ದೇವೆ. ರಾಜ್ಯ ಸರ್ಕಾರ ವಿಮಾನದ ವ್ಯವಸ್ಥೆ ಮಾಡಿದೆ. ಈಗ ಕೋಲ್ಕತ್ತ ವಿಮಾನ ನಿಲ್ದಾಣಕ್ಕೆ ಬಂದಿದ್ದೇವೆ. ಭಾನುವಾರ ಬೆಂಗಳೂರು ತಲುಪುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT