ಮಂಗಳವಾರ, ಡಿಸೆಂಬರ್ 1, 2020
26 °C
ಎರಡು ವಾರದೊಳಗೆ ಕಲ್ಲುಗಣಿಗಳಿಗೆ ರಕ್ಷಣಾ ಬೇಲಿ

ಗಣಿ ಮಾಲೀಕರಿಗೆ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಷ್ಟಗಿ: ಅಪಾಯ ಸ್ಥಿತಿಯಲ್ಲಿರುವ ಗ್ರಾನೈಟ್‌, ಕಲ್ಲು ಗಣಿಗಳ ಸುತ್ತ ಎರಡು ವಾರದ ಒಳಗಾಗಿ ಜನ ಜಾನುವಾರುಗಳ ಸುರಕ್ಷತೆಗಾಗಿ ಶಾಶ್ವತ ರಕ್ಷಣಾ ಬೇಲಿ ಅಳವಡಿಸಬೇಕು. ಇಲ್ಲದಿದ್ದರೆ ಸಂಬಂಧಿಸಿದ ಭೂ ಮಾಲೀಕರು ಮತ್ತು ಗಣಿಗಾರಿಕೆ ನಡೆಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.

ಪಟ್ಟಣದಲ್ಲಿ ಶುಕ್ರವಾರ ಗ್ರಾನೈಟ್‌ ಗಣಿ ಮಾಲೀಕರೊಂದಿಗೆ ನಡೆದ ಸಭೆಯಲ್ಲಿ ತಹಶೀಲ್ದಾರ್ ಎಂ.ಸಿದ್ದೇಶ ಮತ್ತು ಸರ್ಕಲ್‌ ಇನ್‌ಸ್ಪೆಕ್ಟರ್ ನಿಂಗಪ್ಪ ರುದ್ರಪ್ಪಗೋಳ ಈ ಎಚ್ಚರಿಕೆ ನೀಡಿದರು.

ಗಣಿಗಳು ಚಾಲು ಸ್ಥಿತಿಯಲ್ಲಿರಲಿ ಅಥವಾ ಬಂದ್‌ ಆಗಿರಲಿ ಎಲ್ಲವುಗಳಿಗೂ ಈ ಸೂಚನೆ ಅನ್ವಯಿಸುತ್ತದೆ. ಎಲ್ಲರೂ ಕಾನೂನು ಪಾಲನೆ ಮಾಡಬೇಕು. ಅನಗತ್ಯವಾಗಿ ವಿಳಂಬ ನೀತಿ ಅನುಸರಿಸುವವರು ಕಾನೂನು ಕ್ರಮ ಎದುರಿಸಲು ಸಿದ್ಧರಾಗಿ ಎಂದು ತಾಕೀತು ಮಾಡಿದರು.

ಗಣಿಗಳಲ್ಲಿ ಮಳೆ ನೀರು ಭರ್ತಿಯಾಗಿ ಸಾವು ನೋವಿನ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮಕ್ಕಳು, ಮಹಿಳೆಯರು ತೊಂದರೆಗೆ ಸಿಲುಕುವ ಸಾಧ್ಯತೆ ಇರುತ್ತದೆ. ಭವಿಷ್ಯದ ದಿನಗಳಲ್ಲಿ ಇಂಥ ಅವಘಡಗಳು ನಡೆದರೆ ಕಾನೂನು ಸುವ್ಯವಸ್ಥೆ ಸಮಸ್ಯೆ ಎದುರಾಗುತ್ತದೆ. ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಗಣಿ ಗುಂಡಿಗಳ ಸುತ್ತ ರಕ್ಷಣಾ ಬೇಲಿಯನ್ನು ಅಳವಡಿಸಲು ತಕ್ಷಣ ಮುಂದಾಗಬೇಕು. ಬೇಲಿ ಅಳವಡಿಸಿದ ಫೋಟೊ ಸಹಿತ ವರದಿ ಸಲ್ಲಿಸುವಂತೆ ಗಣಿಗಾರಿಕೆಯಲ್ಲಿ ತೊಡಗಿರುವವರಿಗೆ ಅಧಿಕಾರಿಗಳು ತಿಳಿಸಿದರು.

ಬಹುತೇಕ ಪ್ರಕರಣಗಳಲ್ಲಿ ಜಮೀನಿನ ಮಾಲೀಕರು ಬೇರೆಯವರು ಅನಧಿಕೃತವಾಗಿ ಗಣಿಗಾರಿಕೆ ನಡೆಸುತ್ತಿರುತ್ತಾರೆ. ಹಾಗಾಗಿ ಅವಘಡಗಳು ಸಂಭವಿಸಿದಾಗ ಭೂಮಿ ಮಾಲೀಕರ ವಿರುದ್ಧವೇ ಪ್ರಕರಣ ದಾಖಲಿಸಬೇಕಾಗುತ್ತದೆ. ಇತ್ತೀಚಿನ ಒಂದು ಪ್ರಕರಣದಲ್ಲಿ 75 ವರ್ಷದ ಓರ್ವ ಮಹಿಳೆಯ ವಿರುದ್ಧ ಪ್ರಕರಣ ದಾಖಲಾಯಿತು. ಹಾಗಾಗಿ ಗಣಿಗಾರಿಕೆಗೆ ಜಮೀನು ನೀಡಿದ ಮಾಲೀಕರು ತಮ್ಮ ಭೂಮಿಯಲ್ಲಿ ಯಾವ ರೀತಿ ಗಣಿಗಾರಿಕೆ ನಡೆಯುತ್ತಿದೆ ಎಂಬುದನ್ನು ಗಮನಿಸುತ್ತಿರಬೇಕು ಎಂದು ಸಿಪಿಐ ಹೇಳಿದರು. ಎಲ್ಲಿಯೇ ಅನಾಹುತಗಳು ನಡೆದರೂ ಸರ್ವೆ ಸಂಖ್ಯೆ, ಮಾಲೀಕರ ವಿರುದ್ಧ ಮುಲಾಜಿಲ್ಲದೆ ಪ್ರಕರಣ ದಾಖಲಿಸಲಾಗುತ್ತದೆ ಎಂದು ತಹಶೀಲ್ದಾರ್ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾನೈಟ್ ಗಣಿ ಮಾಲೀಕರ ಸಂಘದ ಪ್ರಮುಖ ಮಲ್ಲಣ್ಣ ಪಲ್ಲೇದ, ಶೇಕಡ 80ರಷ್ಟು ಗ್ರಾನೈಟ್‌ ಗಣಿಗಳು ಸ್ಥಗಿತಗೊಂಡಿವೆ, ಅಲ್ಲಿನ ಗುಂಡಿಗಳಹಾಗೇ ಬಿಟ್ಟಿದ್ದಾರೆ. ಏನಾದರೂ ಸಮಸ್ಯೆ ಎದುರಾದರೆ ಇತರರೂ ತೊಂದರೆ ಎದುರಿಸುವಂತಾಗಿದೆ. ಅಂಥ ವ್ಯಕ್ತಿಗಳನ್ನು ಗುರುತಿಸಿ ಅವರಿಗೂ ಗಡುವು ವಿಧಿಸಬೇಕು ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಸಿಪಿಐ ನಿಂಗಪ್ಪ, ಬಹುತೇಕ ಮಾಲೀಕರ ವಿಳಾಸ, ದೂರವಾಣಿ ಪತ್ತೆಯಾಗುತ್ತಿಲ್ಲ, ಈ ಬಗ್ಗೆ ಪರಿಶೀಲಿಸಿ ಅವರಿಗೂ ನೋಟಿಸ್‌ ನೀಡುವುದಾಗಿ ಹೇಳಿದರು. ಕಂದಾಯ ನಿರೀಕ್ಷಕರ ಬಳಿ ಎಲ್ಲರ ಮಾಹಿತಿಯೂ ಇದೆ ಅವರಿಂದಲೇ ತಿಳಿದುಕೊಳ್ಳಬಹುದು ಎಂದು ಗಣಿ ಮಾಲೀಕರು ಹೇಳಿದರು.

ಗಣಿಗಾರಿಕೆಗೆ ಅನುಮತಿ ನೀಡುವಾಗಿನ ಷರತ್ತು, ನಿಬಂಧನೆಗಳ ಪ್ರಕಾರ ಗಣಿಗಳು ಬಂದ್ ಆದ ನಂತರ ಅದನ್ನು ಮೊದಲು ಇದ್ದ ಸ್ಥಿತಿಗೆ ತಂದು ಸರ್ಕಾರಕ್ಕೆ ಮರಳಿಸಬೇಕಾಗುತ್ತದೆ ಎಂದು ತಹಶೀಲ್ದಾರ್ ಸಿದ್ದೇಶ್‌ ಗಣಿ ಮಾಲೀಕರಿಗೆ ತಾಕೀತು ಮಾಡಿದರು.

ಸಭೆಗೆ ಪ್ರಮುಖರ ಗೈರು: ತಾಲ್ಲೂಕಿನಲ್ಲಿ 29 ಗಣಿಗಳಿದ್ದು ಸಭೆಗೆ ಹಾಜರಾಗುವಂತೆ ಎಲ್ಲರಿಗೂ ನೋಟಿಸ್‌ ನೀಡಲಾಗಿತ್ತು. ಆದರೆ ಸಭೆಯಲ್ಲಿ ಕೇವಲ ಎಂಟು ಗಣಿಗಳಿಗೆ ಸಂಬಂಧಿಸಿದವರು ಮಾತ್ರ ಹಾಜರಿದ್ದರು. ರಾಜಕೀಯ ಹಿನ್ನೆಲೆಹೊಂದಿರುವ ಕೆಲ ಪ್ರಮುಖ ಗ್ರಾನೈಟ್‌ ಮಾಲೀಕರು ಅಧಿಕಾರಿಗಳ ಸೂಚನೆಗೆ ಕವಡೆಕಾಸಿನ ಕಿಮ್ಮತ್ತು ನೀಡದೆ ಗೈರು ಹಾಜರಾದದ್ದು ಅಧಿಕಾರಿಗಳ ಅಸಮಾಧಾನಕ್ಕೆ ಕಾರಣವಾಯಿತು. ಸಭೆಗೆ ಹಾಜರಾಗದವರಿಗೆ ನೋಟಿಸ್‌ ಜಾರಿ ಮಾಡುವುದಾಗಿ ಸಿಪಿಐ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.