ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಂಚ ಗ್ಯಾರಂಟಿ ಪರಿಷ್ಕರಣೆ ಇಲ್ಲ; ಸಚಿವ ತಂಗಡಗಿ

Published 15 ಆಗಸ್ಟ್ 2024, 15:33 IST
Last Updated 15 ಆಗಸ್ಟ್ 2024, 15:33 IST
ಅಕ್ಷರ ಗಾತ್ರ

ಕೊಪ್ಪಳ: ‘ರಾಜ್ಯದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ‌ ಯೋಜನೆಗಳನ್ನು ಯಾವುದೇ ಕಾರಣಕ್ಕೂ ಪರಿಷ್ಕರಣೆ ಮಾಡುವ ಪ್ರಶ್ನೆಯೇ ಇಲ್ಲ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು ಗ್ಯಾರಂಟಿ ಯೋಜನೆಯಿಂದ ಸರ್ಕಾರಕ್ಕೆ ಯಾವುದೇ ಹೊರೆಯಾಗಿಲ್ಲ. ಅಭಿವೃದ್ಧಿ ವಿಷಯದಲ್ಲಿ ಯಾವುದೇ ಕುಂಠಿತವಾಗಿಲ್ಲ ಎಂದು ಸ್ಪಷ್ಟಪಡಿಸಿದರು.‌

‘ಇದು ಬಡವರ ಗ್ಯಾರಂಟಿ. ಹೈಕಮಾಂಡ್ ನಾಯಕರು ಕೂಡ ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರ ಜೊತೆ ಚರ್ಚೆ ನಡೆಸಿದ್ದು, ಗ್ಯಾರಂಟಿ ಯೋಜನೆಯನ್ನು ಪರಿಷ್ಕರಣೆ ಮಾಡುವುದಿಲ್ಲ ಎಂದು ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ. ಗ್ಯಾರಂಟಿ ಆಶ್ವಾಸನೆ ಕೊಟ್ಟು ನಾವು 135 ಸೀಟು ಗೆದ್ದಿದ್ದೇವೆ. ಅದರಂತೆ ಕೊಟ್ಟ ಭರವಸೆಯನ್ನು ಈಡೇರಿಸಿದ್ದೇವೆ. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಒಂದೇ ಸ್ಥಾನದಲ್ಲಿ ಗೆಲುವು ಸಾಧಿಸಿದ್ದ, ನಾವು ಆ ಸಂಖ್ಯೆಯನ್ನು ಈ‌ ಬಾರಿ 9ಕ್ಕೆ ಹೆಚ್ಚಿಸಿಕೊಂಡಿದ್ದೇವೆ. ಹೀಗಾಗಿ ನಮ್ಮ ಸರ್ಕಾರ ಇರುವ ತನಕ ಗ್ಯಾರಂಟಿ ಯೋಜನೆ ನಿಲ್ಲಿಸುವುದಿಲ್ಲ’ ಎಂದು ತಿಳಿಸಿದರು.

‘ಆನೆಗೊಂದಿ ಉತ್ಸವದ ಹಣ ನೀಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಅನುದಾನ ಇಲ್ಲ ಎಂಬ ಆರೋಪ ಇದೆಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಕೆಲ ತಾಂತ್ರಿಕ ಕಾರಣದಿಂದಾಗಿ ಹೆಚ್ಚುವರಿ ಅನುದಾನ ಬಿಡುಗಡೆಯಾಗಿಲ್ಲ ಅಷ್ಟೇ. ಯಾವುದೇ ಅನುದಾನದ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರು‌.

ಜಿ.ಜನಾರ್ದನ ರೆಡ್ಡಿ ಗಂಗಾವತಿ ಕ್ಷೇತ್ರಕ್ಕೆ ಮಾತ್ರ ಶಾಸಕರು. ಆನೆಗೊಂದಿ ಉತ್ಸವ ಪೂರ್ಣ ಕೊಪ್ಪಳ ಜಿಲ್ಲೆಯ ಉತ್ಸವ ಎಂದು ಪ್ರಶ್ನೆಯೊಂದಕ್ಕೆ ಮಾರ್ಮಿಕವಾಗಿ ಉತ್ತರಿಸಿದರು.

ತುಂಗಭದ್ರಾ ಅಣೆಕಟ್ಟೆಯ ನಿರ್ವಹಣೆಗೆ ₹ 135 ಕೋಟಿ ಮೀಸಲಿಡಲಾಗಿದೆ. ಈ ಪೈಕಿ ಪ್ರಸ್ತುತ ನಡೆಯುತ್ತಿರುವ ಕೆಲಸಕ್ಕಾಗಿ ಐದು ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಲಾಗಿದೆ. ಅಣೆಕಟ್ಟೆಯ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಶೇ. 65ರಷ್ಟು ಹಣವನ್ನು ಭರಿಸುತ್ತದೆ.‌ ಅಲ್ಲದೆ, ಮಂಡಳಿ ಕೇಳಿದ ಅನುದಾನವನ್ನು ಒದಗಿಸಲಾಗುತ್ತಿದೆ ಎಂದು ವಿವರಿಸಿದರು.

ಶಾಸಕ ರಾಘವೇಂದ್ರ ಹಿಟ್ನಾಳ, ಸಂಸದ ರಾಜಶೇಖರ ಹಿಟ್ನಾಳ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT