ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಳುಬಿದ್ದ ಚರಂಡಿ; ಜನಸಂಚಾರಕ್ಕೆ ತೊಂದರೆ

ಕುಷ್ಟಗಿ ಪಟ್ಟಣದ ಗಜೇಂದ್ರಗಡ ರಸ್ತೆಯಲ್ಲಿ ದುರಸ್ತಿಗೊಳ್ಳದ ಚರಂಡಿ
Published 24 ಮೇ 2023, 16:03 IST
Last Updated 24 ಮೇ 2023, 16:03 IST
ಅಕ್ಷರ ಗಾತ್ರ

ಕುಷ್ಟಗಿ: ಪಟ್ಟಣದ ಮಾರುತಿ ವೃತ್ತದಿಂದ ಗಜೇಂದ್ರಗಡ ಮುಖ್ಯರಸ್ತೆಯಲ್ಲಿನ ಚರಂಡಿ ಹಾಳು ಗೆಡವಿದ ಪುರಸಭೆ ಆರೇಳು ತಿಂಗಳಾದರೂ ಪುನರ್‌ನಿರ್ಮಾಣಕ್ಕೆ ಮುಂದಾಗದೆ ಜನರು ತೀವ್ರ ತೊಂದರೆ ಅನುಭವಿಸುತ್ತಿರುವುದು ಕಂಡುಬಂದಿದೆ.

ಕಲ್ಲಿನಿಂದ ಕೂಡಿದ್ದ ಹಳೇ ವಿನ್ಯಾಸದ ಚರಂಡಿ ಗಟ್ಟಿಮುಟ್ಟಾಗಿತ್ತು. ಆದರೆ, ಮಳೆ ಬಂದಾಗ ನೀರು ಕಟ್ಟಿ ಆಗಾಗ್ಗೆ ಕೊಳಚೆ ನೀರು ಉಕ್ಕಿ ಹರಿಯುತ್ತಿತ್ತು. ಇಷ್ಟು ಬಿಟ್ಟರೆ ಬೇರೆ ಸಮಸ್ಯೆ ಇರಲಿಲ್ಲ. ಆದರೆ ಹೂಳು ತೆಗೆಯುವ ನೆಪದಲ್ಲಿ ಇದ್ದ ಚರಂಡಿಯನ್ನೇ ಹಾಳು ಮಾಡಿರುವ ಪುರಸಭೆ ನಂತರ ಅದರ ಬಗ್ಗೆ ಗಮನಹರಿಸಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

‘ಈ ರಸ್ತೆ ಪಕ್ಕದಲ್ಲಿ ಆಸ್ಪತ್ರೆ, ಪ್ರಯೋಗಾಲಯ, ಔಷಧ ಅಂಗಡಿಗಳು, ಬೈಕ್‌ ಗ್ಯಾರೇಜ್‌, ಹೋಟೆಲ್‌ ಇತರೆ ವ್ಯಾಪಾರ ಮಳಿಗೆಗಳಿದ್ದು ನಿತ್ಯ ನೂರಾರು ಜನರು ಇಲ್ಲಿಗೆ ಬಂದು ಹೋಗುತ್ತಿರುತ್ತಾರೆ. ಅಂಗಡಿಗಳಿಗೆ ಬರಬೇಕಾದರೆ ಚರಂಡಿಯನ್ನು ದಾಟಬೇಕು. ಅನೇಕ ಜನ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ವೃದ್ಧರು, ಮಹಿಳೆಯರು, ಮಕ್ಕಳು ಅನುಭವಿಸುವ ಯಾತನೆ ಅಷ್ಟಿಷ್ಟಲ್ಲ’ ಎಂದು ನೋವು ತೋಡಿಕೊಂಡ ಸಾರ್ವಜನಿಕರು ಮತ್ತು ಮಳಿಗೆಗಳ ಮಾಲೀಕರು ಸಮಸ್ಯೆಯ ವಾಸ್ತವವನ್ನು ಬಿಡಿಸಿಟ್ಟರು.

‘ಈ ಹಿಂದೆ ಅಧಿಕಾರದಲ್ಲಿದ್ದ ಪುರಸಭೆ ಮಾಜಿ ಅಧ್ಯಕ್ಷರೊಬ್ಬರು ಮುಂದಾಲೋಚನೆ ಇಲ್ಲದೆ ಹೂಳು ತೆಗೆಸುವ ಬದಲು ಚರಂಡಿಯ ಮೇಲಿದ್ದ ಬಂಡೆ, ಸ್ಲ್ಯಾಬ್‌ಗಳನ್ನು ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸಿ ಹಾಳುಗೆಡವಿದರು. ಪುರಸಭೆ ಎಂಜಿನಿಯರ್‌, ಸಿಬ್ಬಂದಿ ಅದಕ್ಕೆ ಸಹಕಾರ ನೀಡಿದರು. ಆದರೆ ಮೊದಲಿದ್ದ ಮುತುವರ್ಜಿ ನಂತರ ಮಾಯವಾಯಿತು. ಈ ಬೇಜವಾಬ್ದಾರಿ ಕೆಲಸದಿಂದ ಜನ ಮತ್ತಷ್ಟು ಪರದಾಡುವಂತಾಗಿದೆ’ ಎಂದು ಪಟ್ಟಣದ ಬಸವರಾಜ, ಮಹೇಶ್, ಸಂಗನಗೌಡ ಇತರರು ಅಸಮಾಧಾನ ವ್ಯಕ್ತಪಡಿಸಿದರು.

ಬದುಕಿದ್ದೇ ಪವಾಡ: ‘ಕೆಲ ದಿನಗಳ ಹಿಂದೆ ಬೈಕ್‌ ದುರಸ್ತಿಗೆ ಬಂದಿದ್ದ ಸವಾರರೊಬ್ಬರು ಆಯ ತಪ್ಪಿ ಬೈಕ್‌ ಸಮೇತ ಚರಂಡಿಗೆ ಬಿದ್ದರು. ಆದರೆ ಅವರ ಅದೃಷ್ಟ ಚೆನ್ನಾಗಿದ್ದ ಕಾರಣ ಸಣ್ಣಪುಟ್ಟ ಗಾಯಗಳೊಂದಿಗೆ ಬಚಾವಾದರು. ಇಂಥ ಅನೇಕ ಘಟನೆಗಳು ನಿತ್ಯ ಸಂಭವಿಸುತ್ತಿವೆ. ಇದರ ಬಗ್ಗೆ ಪುರಸಭೆ ಗಮನಹರಿಸುತ್ತಿಲ್ಲ’ ಎಂದು ಬೈಕ್‌ ದುರಸ್ತಿ ಮೇಸ್ತ್ರಿ ಅಶೋಕ್‌, ಗ್ಯಾರೇಜ್‌ನ ಮಳಿಯಪ್ಪ ಬಡಿಗೇರ ಇತರರು ಆರೋಪಿಸಿದರು.

‘ಎಸ್‌ಎಫ್‌ಸಿ ವಿಶೇಷ ಅನುದಾನದ ₹ 4 ಕೋಟಿ ಮೊತ್ತದಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ ಟಿಪ್ಪು ವೃತ್ತ, ಬಸವೇಶ್ವರ ವೃತ್ತದಿಂದ ದೇಸಾಯಿಯವರ ಹಳ್ಳದವರೆಗಿನ ಗಜೇಂದ್ರಗಡ ರಸ್ತೆಯನ್ನು ಅಭಿವೃದ್ಧಿಪಡಿಸಿದಲಾಗಿದ್ದು ಇನ್ನೂ ಕೆಲಸ ನಡೆಯುತ್ತಿದೆ. ಆದರೆ ಮೊದಲಿನ ಅಂದಾಜು ಪತ್ರಿಕೆಯಲ್ಲಿ ಚರಂಡಿ ನಿರ್ಮಾಣವೂ ಸೇರಿತ್ತು. ಆದರೆ ಈಗ ಅಧಿಕಾರಿಗಳು ಚರಂಡಿ ಕೆಲಸ ಇರಲಿಲ್ಲ ಎಂದು ಹೇಳುತ್ತಿದ್ದಾರೆ. ಒಂದೊಮ್ಮೆ ಅಂದಾಜು ಪತ್ರಿಕೆ ಪರಿಷ್ಕೃತಗೊಂಡಿದ್ದರೆ ಅದರ ಮಾಹಿತಿ ಜನರಿಗೆ ನೀಡಿಲ್ಲ’ ಎಂದು ಸಾರ್ವಜನಿಕರು ದೂರಿದರು.

ಈ ಕುರಿತು ವಿವರಿಸಿದ ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ, ಎಂಜಿನಿಯರ್‌ ಜಹಾಂಗೀರ್‌, ‘ಎಸ್‌ಎಫ್‌ಸಿ ಕಾಮಗಾರಿಯಲ್ಲಿ ಚರಂಡಿ ಕೆಲಸ ಇರಲಿಲ್ಲ. ಅದಕ್ಕೆ ಪ್ರತ್ಯೇಕ ಅಂದಾಜು ಪತ್ರಿಕೆ ಸಿದ್ಧಪಡಿಸಲಾಗುತ್ತಿದ್ದು 15ನೇ ಹಣಕಾಸು ಯೋಜನಯೆ ಅನುದಾನದಲ್ಲಿ ಹೊಸದಾಗಿ ನಿರ್ಮಿಸಲಾಗುತ್ತದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT