ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ | ‘ಪ್ರಜಾಪ್ರಭುತ್ವದ ಹಬ್ಬ’ಕ್ಕೆ ಅಣಿಯಾದ ಮತಗಟ್ಟೆಗಳು

ತರಹೇವಾರಿ ಬಣ್ಣ, ಸಂದೇಶಗಳಿಂದ ಅಲಂಕಾರ, ಮತದಾರರ ಕಣ್ಮನ ಸೆಳೆಯುತ್ತಿರುವ ‘ಸಖಿ’
Published 6 ಮೇ 2024, 5:49 IST
Last Updated 6 ಮೇ 2024, 5:49 IST
ಅಕ್ಷರ ಗಾತ್ರ

ಕೊಪ್ಪಳ: ಲೋಕಸಭಾ ಚುನಾವಣೆಯ ಕೊಪ್ಪಳ ಕ್ಷೇತ್ರದ ಮತದಾನಕ್ಕೆ ಒಂದು ದಿನವಷ್ಟೇ ಬಾಕಿ ಉಳಿದಿದ್ದು, ‘ಪ್ರಜಾಪ್ರಭುತ್ವದ ಹಬ್ಬ’ದಲ್ಲಿ ಮತದಾರರು ಸಂಭ್ರಮದಿಂದ ಪಾಲ್ಗೊಳ್ಳಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಮತದಾರರನ್ನು ಸೆಳೆಯಲು ತರಹೇವಾರಿ ಬಣ್ಣಗಳಿಂದ ಅಲಂಕೃತಗೊಂಡ ಮಟ್ಟಗಟ್ಟೆಗಳು ಕೂಡ ಸಜ್ಜುಗೊಂಡಿವೆ.

ಜಿಲ್ಲೆಯಲ್ಲಿ ಐದು ವಿಧಾನಸಭಾ ಕ್ಷೇತ್ರಗಳಿದ್ದು ಪ್ರತಿ ಕ್ಷೇತ್ರ ವ್ಯಾಪ್ತಿಯಲ್ಲಿ ತಲಾ ಐದು ಸಖಿ, ಐದು ಅಂಗವಿಕಲರ, ಐದು ಯುವ ಮತದಾರರ ಮತ್ತು ಐದು ಮಾದರಿ ಮತಗಟ್ಟೆಗಳನ್ನು ನಿರ್ಮಿಸಲಾಗಿದೆ. ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಶೇ. 70ರಷ್ಟು ಮತದಾನವಾಗಿತ್ತು, ಗ್ರಾಮೀಣ ಪ್ರದೇಶದ 424 ಮತ್ತು ನಗರ ಪ್ರದೇಶದ 186 ಮತಗಟ್ಟೆಗಳಲ್ಲಿ ಶೇ. 70ಕ್ಕಿಂತಲೂ ಮತದಾನವಾಗಿದ್ದರಿಂದ ಇವುಗಳನ್ನು ಕೇಂದ್ರೀಕರಿಸಿ ಈ ಬಾರಿ ಜಿಲ್ಲಾ ಪಂಚಾಯಿತಿ ಸ್ವೀಪ್ ಚಟುವಟಿಕೆಗಳನ್ನು ನಡೆಸಿದೆ.

ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರು, ಮಸ್ಕಿ, ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಕೂಡ ಬರುವುದರಿಂದ ಅಲ್ಲಿನ ಮತದಾನದ ಪ್ರಮಾಣವೂ ಕ್ಷೇತ್ರದ ಒಟ್ಟು ಮತದಾನವನ್ನು ನಿರ್ಧರಿಸುತ್ತದೆ. ಆದ್ದರಿಂದ ಜಿಲ್ಲೆಯ ಯುವ ಮತದಾರರ ಮತದಾನ ಪ್ರಮಾಣದ ಪ್ರತಿಶತ ಹೆಚ್ಚಿಸಲು ಪದವಿ ಕಾಲೇಜಿನ ಯುವ ಮತದಾರರಿಂದ ನೈತಕ ಮತ್ತು ಕಡ್ಡಾಯ ಮತದಾನ ಮಾಡುವಂತೆ ವಾಕಾಥಾನ್‌, ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನರೇಗಾ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರರನಿಗೆ, ಸ್ವಸಹಾಯ ಸಂಘಗಳ ಮಹಿಳೆಯರಿಗೆ ಮತದಾನದ ಜಾಗೃತಿಯನ್ನು ಜಿಲ್ಲಾ ಸ್ವೀಪ್‌ ತಂಡ ಮಾಡಿಕೊಂಡಿದೆ.

ಇಲ್ಲಿನ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 18,66,397 ಮತದಾರರ ಪೈಕಿ ಮಹಿಳಾ ಮತದಾರರ ಸಂಖ್ಯೆಯೇ 9,46,763 ಹೆಚ್ಚಿದೆ. ಆದ್ದರಿಂದ ಅವರನ್ನು ಮತಗಟ್ಟೆಗೆ ಸೆಳೆಯಲು ಸ್ವೀಪ್‌ ತಂಡ ಅಂಗನವಾಡಿ, ಆಶಾ ಮತ್ತು ಮಹಿಳಾ ಬಿ.ಇಡಿ ಕಾಲೇಜು ವಿದ್ಯಾರ್ಥಿನಿಯರಿಂದ ಜಿಲ್ಲೆಯ ಹಲವು ಕಡೆ ವಾಕಥಾನ್‌ ಮೂಲಕ ಮತದಾನ ಜಾಗೃತಿ ನಡೆಸಿತ್ತು. ಮೇಣದ ಬತ್ತಿ ಜಾಥಾ, ಬೈಕ್‌ ರ್‍ಯಾಲಿ, ಮಾನವ ಸರಪಳಿ, ಮನೆಮನೆಗೆ ಭೇಟಿ ಮೂಲಕವೂ ಮತದಾನ ಮಾಡುವಂತೆ ಸಂದೇಶ ನೀಡಲಾಗಿದೆ.

ಜಿಲ್ಲೆಯಲ್ಲಿ ಒಟ್ಟು 1,317 ಮತಗಟ್ಟೆಗಳಿದ್ದು, ಅಲ್ಲಿ ನೆರಳಿನ ವ್ಯವಸ್ಥೆ, ಕುಡಿಯುವ ನೀರು, ವಿಶ್ರಾಂತಿ ಕೊಠಡಿ, ಶೌಚಾಲಯ, ರ್‍ಯಾಂಪ್‌ ವ್ಯವಸ್ಥೆ, ಗಾಲಿ ಖುರ್ಚಿ, 570 ಮತಗಟ್ಟೆಗಳಲ್ಲಿ ಶಾಮಿಯಾನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಆಕರ್ಷಣೆ: ಮತದಾರರನ್ನು ಸೆಳೆಯಲು ವಿಶೇಷ ಮತಗಟ್ಟೆಗಳನ್ನು ವಿಶೇಷವಾಗಿ ಅಲಂಕಾರ ಮಾಡಲಾಗಿದೆ. ಸ್ಥಳೀಯ ಸ್ಮಾರಕಗಳು ಹಾಗೂ ಅಲ್ಲಿನ ಕಲಾಕೃತಿಗಳನ್ನು ಚಿತ್ರಗಳ ಮೂಲಕ ಬಿಡಿಸಿ ಮತದಾರರನ್ನು ಆಕರ್ಷಿಸಲಾಗುತ್ತಿದೆ. ಮತಗಟ್ಟೆಗಳ ಗೋಡೆಗಳ ಮೇಲೆ ‘ನಮ್ಮ ಮತ ನಮ್ಮ ಹಕ್ಕು‘, ‘ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ’, ನಮ್ಮ ಮತ ಭವಿಷ್ಯಕ್ಕೆ ಹಿತ’ ಹೀಗೆ ಅನೇಕ ಸಂದೇಶಗಳನ್ನು ಬರೆಯಲಾಗಿದೆ.

ಯಲಬುರ್ಗಾ ತಾಲ್ಲೂಕಿನ ಮುಧೋಳದಲ್ಲಿ ಮಾದರಿ ಸಖಿ ಮತಗಟ್ಟೆ ಕೇಂದ್ರದಲ್ಲಿ ‘ಪ್ರತಿಶತ ಮತದಾನ ಇದುವೇ ನಮ್ಮ ವಾಗ್ದಾನ’ ಎಂದು ಬರೆಯಲಾಗಿದ್ದು, ಕೂಲಿ ಕಾರ್ಮಿಕ ಮಹಿಳೆ, ಕ್ರೀಡಾಸಾಧಕಿ, ವೈದ್ಯೆ, ಟೇಲರ್‌ ಹೀಗೆ ಮಹಿಳೆ ಬೇರೆ ಬೇರೆ ವೃತ್ತಿಗಳಲ್ಲಿ ತೊಡಗಿಕೊಂಡ ಚಿತ್ರಗಳನ್ನು ಬಿಡಿಸಲಾಗಿದೆ.

ಜನರಿಂದಲೂ ಜಾಗೃತಿ: ಜನರಲ್ಲಿ ಮತದಾನದ ಜಾಗೃತಿ ಮೂಡಿಸಲು ಸ್ವೀಪ್‌ ತಂಡ ಮಾತ್ರವಲ್ಲದೆ ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳು ಕೂಡ ತಮ್ಮ ಹಂತದಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಸಾಮಾಜಿಕ ತಾಣಗಳ ಮೂಲಕ ಅರಿವು ಮೂಡಿಸಿದರೆ ಕೊಪ್ಪಳದ ವ್ಯಂಗ್ಯಚಿತ್ರಕಾರ ಬದರಿ ಪುರೋಹಿತ್‌ ಮತದಾನ ಜಾಗೃತಿ ಬಗ್ಗೆ ಹಲವು ವ್ಯಂಗ್ಯಚಿತ್ರಗಳಲ್ಲಿ ರಚಿಸಿ ಹಂಚಿಕೊಂಡಿದ್ದಾರೆ.

ತಾವರಗೇರಾ ಪಟ್ಟಣದ 144ನೇ ಮತಗಟ್ಟೆ ಸಖಿ ಕೇಂದ್ರವನ್ನು ಅಲಂಕಾರ ಮಾಡಿರುವುದು
ತಾವರಗೇರಾ ಪಟ್ಟಣದ 144ನೇ ಮತಗಟ್ಟೆ ಸಖಿ ಕೇಂದ್ರವನ್ನು ಅಲಂಕಾರ ಮಾಡಿರುವುದು
ನಿರ್ಭೀತ ಮತದಾನಕ್ಕಾಗಿ ಜನರಲ್ಲಿ ಜಾಗೃತಿ ಮೂಡಿಸಲು ಕೊಪ್ಪಳದಲ್ಲಿ ಪೊಲೀಸರು ಹಾಗೂ ಆರ್‌ಪಿಎಫ್‌ ಸಿಬ್ಬಂದಿ ಪಥಸಂಚಲನ ನಡೆಸಿದರು
ನಿರ್ಭೀತ ಮತದಾನಕ್ಕಾಗಿ ಜನರಲ್ಲಿ ಜಾಗೃತಿ ಮೂಡಿಸಲು ಕೊಪ್ಪಳದಲ್ಲಿ ಪೊಲೀಸರು ಹಾಗೂ ಆರ್‌ಪಿಎಫ್‌ ಸಿಬ್ಬಂದಿ ಪಥಸಂಚಲನ ನಡೆಸಿದರು
ಕೊಪ್ಪಳದ ವ್ಯಂಗ್ಯಚಿತ್ರಕಾರ ಬಿಡಿಸಿರುವ ಮತದಾನ ಜಾಗೃತಿ ಕುರಿತ ಚಿತ್ರ
ಕೊಪ್ಪಳದ ವ್ಯಂಗ್ಯಚಿತ್ರಕಾರ ಬಿಡಿಸಿರುವ ಮತದಾನ ಜಾಗೃತಿ ಕುರಿತ ಚಿತ್ರ

ಸಾರ್ವಜನಿಕರಿಂದಲೂ ಮತದಾನ ಜಾಗೃತಿ ಮೇ 7ರಂದು ನಡೆಯಲಿರುವ ಲೋಕಸಭಾ ಚುನಾವಣೆಯ ಮತದಾನ ಮನೆ ಮನೆ ಪ್ರಚಾರಕ್ಕೆ ಸೋಮವಾರ ಸಂಜೆ ತನಕ ಅವಕಾಶ ಚುನಾವಣೆಗೆ ಎಲ್ಲ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜನ ಮುಕ್ತವಾಗಿ ಬಂದು ತಮ್ಮ ಹಕ್ಕು ಚಲಾಯಿಸಬಹುದು. ಯಾರಿಗೂ ಯಾವುದೇ ಆತಂಕ ಬೇಡ. ನಲಿನ್‌ ಅತುಲ್‌ ಜಿಲ್ಲಾ ಚುನಾವಣಾಧಿಕಾರಿ

ಜಿಲ್ಲೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಾಕಷ್ಟು ಸ್ವೀಪ್‌ ಚಟುವಟಿಕೆಗಳನ್ನು ನಡೆಸಲಾಗಿದ್ದು ನಮ್ಮ ಶ್ರಮಕ್ಕೆ ಫಲ ಲಭಿಸುವ ವಿಶ್ವಾಸವಿದೆ.
ರಾಹುಲ್‌ ರತ್ನಂ ಪಾಂಡೆಯ, ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷ ಕೊಪ್ಪಳ
ಚುನಾವಣೆಗೆ ಎಲ್ಲ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜನ ಮುಕ್ತವಾಗಿ ಬಂದು ತಮ್ಮ ಹಕ್ಕು ಚಲಾಯಿಸಬಹುದು. ಯಾರಿಗೂ ಯಾವುದೇ ಆತಂಕ ಬೇಡ.
ನಲಿನ್‌ ಅತುಲ್‌, ಜಿಲ್ಲಾ ಚುನಾವಣಾಧಿಕಾರಿ
ಒಟ್ಟು 1538 ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಚುನಾವಣಾ ಕೆಲಸಕ್ಕೆ ನಿಯೋಜಿಸಲಾಗಿದೆ. 750 ಜನ ಹೋಂ ಗಾರ್ಡ್‌ ನಾಗಲ್ಯಾಂಡ್‌ನಿಂದ 216 ನಾಲ್ಕು ಕೆಎಸ್‌ಆರ್‌ಪಿ ಮತ್ತು ಆರು ತಂಡಗಳು ಬಂದೋಬಸ್ತ್‌ ಕೆಲಸ ನಿರ್ವಹಿಸಲಿವೆ.
ಯಶೋಧಾ ವಂಟಗೋಡಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೊಪ್ಪಳ

ಬಹಿರಂಗ ಪ್ರಚಾರಕ್ಕೆ ತೆರೆ ಮೇ 7ರಂದು ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ವಿವಿಧ ಪಕ್ಷಗಳ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು ಸೋಮವಾರ ಮನೆಮನೆ ಪ್ರಚಾರ ಮಾಡಲು ಅವಕಾಶವಿದೆ. ಪ್ರಮುಖ ರಾಷ್ಟ್ರೀಯ ಪಕ್ಷಗಳು ಬಹಿರಂಗ ಪ್ರಚಾರದ ಕೊನೆಯ ದಿನ ವಿವಿಧೆಡೆ ಕಾರ್ಯಕ್ರಮಗಳನ್ನು ನಡೆಸಿ ಮತದಾರರನ್ನು ತಲುಪಲು ಕಸರತ್ತು ನಡೆಸಿದವು. ಬಿಜೆಪಿ ಕೊಪ್ಪಳದಲ್ಲಿ ರೆಡ್ಡಿ ಸಮುದಾಯದ ಸಭೆ ನಡೆಸಿದರೆ ಕಾಂಗ್ರೆಸ್‌ ಹಲವು ಸಮುದಾಯಗಳ ಮುಖಂಡ ಜೊತೆ ಸಭೆ ನಡೆಸಿ ಮತಬುಟ್ಟಿ ಗಟ್ಟಿಮಾಡಿಕೊಳ್ಳಲು ಪ್ರಯತ್ನಿಸಿದವು.

ಲೋಕಸಭಾ ಕ್ಷೇತ್ರದಲ್ಲಿರುವ ಮತಗಟ್ಟೆಗಳು ವಿಧಾನಸಭಾ ಕ್ಷೇತ್ರ;ಮತಗಟ್ಟೆ ಕುಷ್ಟಗಿ;268 ಕನಕಗಿರಿ;266 ಗಂಗಾವತಿ;235 ಯಲಬುರ್ಗಾ;256 ಕೊಪ್ಪಳ;292 ಸಿಂಧನೂರು;269 ಮಸ್ಕಿ;231 ಸಿರಗುಪ್ಪ;228 ಒಟ್ಟು:2045

ಇಂದು ವಿಧಾನಸಭಾ ಕ್ಷೇತ್ರವಾರು ಮಸ್ಟರಿಂಗ್‌ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ಕೇಂದ್ರಗಳಲ್ಲಿ ಸೋಮವಾರ ಮಸ್ಟರಿಂಗ್‌ ಮತ್ತು ಡಿ. ಮಸ್ಟರಿಂಗ್‌ ಕಾರ್ಯ ಜರುಗಲಿದೆ. ಸಿಂಧನೂರು ವಿಧಾನಸಭಾ ಕ್ಷೇತ್ರಕ್ಕೆ ಸರ್ಕಾರಿ ಪದವಿ ಕಾಲೇಜು ಮಸ್ಕಿ ಕ್ಷೇತ್ರಕ್ಕೆ ದೇವನಾಮ ಪ್ರಿಯ ಅಶೋಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕುಷ್ಟಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನಕಗಿರಿ  ಕನಕಗಿರಿಯ ಕರ್ನಾಟಕ ಪಬ್ಲಿಕ್ ಶಾಲೆ ಗಂಗಾವತಿ ಕ್ಷೇತ್ರಕ್ಕೆ ಲಯನ್ಸ್ ಕ್ಲಬ್ ಆವರಣದ ಲಯನ್ಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಯಲಬುರ್ಗಾ ಕ್ಷೇತ್ರಕ್ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೊಪ್ಪಳಕ್ಕೆ  ಗವಿಸಿದ್ದೇಶ್ವರ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಹಾಗೂ ಸಿರಗುಪ್ಪ ಕ್ಷೇತ್ರಕ್ಕೆ ವಿವೇಕಾನಂದ ಪಬ್ಲಿಕ್ ಶಾಲೆಯ ಕೇಂದ್ರಗಳಲ್ಲಿ ಈ ಕೆಲಸ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT