ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮಸ್ಥಳ ಸಂಘದ ಕಾರ್ಯ ಶ್ಲಾಘನೀಯ- ಶಾಸಕ ಅಮರೇಗೌಡ ಬಯ್ಯಾಪೂರ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಕೆರೆ ಅಭಿವೃದ್ಧಿಗೆ ಭೂಮಿಪೂಜೆ
Last Updated 22 ಜನವರಿ 2022, 12:44 IST
ಅಕ್ಷರ ಗಾತ್ರ

ಹನುಮಸಾಗರ: ‘ರಾಜ್ಯದ ವಿವಿಧ ಭಾಗಗಳಲ್ಲಿ ಅಂತರ್ಜಲ ವೃದ್ಧಿಗಾಗಿ ಸರ್ಕಾರ ಮಾಡಬೇಕಾದ ಕಾರ್ಯಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮಾಡುತ್ತಿರುವುದು ಶ್ಲಾಘನೀಯ’ ಎಂದು ಶಾಸಕ ಅಮರೇಗೌಡ ಬಯ್ಯಾಪೂರ ಹೇಳಿದರು.

ಸಮೀಪದ ಹಿರೇಗೊಣ್ಣಾಗರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಕೆರೆ ಅಭಿವೃದ್ಧಿ ಸಮಿತಿ, ಹಿರೇಗೊಣ್ಣಾಗರ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಕೈಗೆತ್ತಿಕೊಳ್ಳಲಾದ ಕೆರೆ ಪುನಶ್ಚೇತನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ನಾಲ್ಕು ಎಕರೆ ವಿಸ್ತೀರ್ಣದಲ್ಲಿರುವ ಹಿರೇಗೊಣ್ಣಾಗರ ಕೆರೆ ಪುನಶ್ಚೇತನಕ್ಕಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ₹6.21 ಲಕ್ಷ ನೀಡಿದೆ. ಕೆರೆ ಅಭಿವೃದ್ಧಿ ಸಮಿತಿ ಹಾಗೂ ಗ್ರಾಮ ಪಂಚಾಯಿತಿಯವರು ₹5.79 ಲಕ್ಷ ನೀಡುತ್ತಿರುವುದು ಸಂತಸ ತಂದಿದೆ. ಗ್ರಾಮಾಭಿವೃದ್ಧಿ ಸಂಘ ಹಲವಾರು ವರ್ಷಗಳಿಂದ ಹೈನುಗಾರಿಕೆ, ಕೃಷಿ, ತೋಟಗಾರಿಕೆ, ಉಳಿತಾಯದಂಥ ಉಪಯುಕ್ತ ಯೋಜನೆ ಹಾಕಿಕೊಳ್ಳುವುದರ ಜತೆಗೆ ಜನರಿಗೆ ಆರ್ಥಿಕ ಸಹಾಯ ಮಾಡಿ ಗ್ರಾಮೀಣರ ಅಭಿವೃದ್ಧಿಗೆ ನೆರವಾಗುತ್ತಿದೆ ಎಂದು ಹೇಳಿದರು.

ಈ ಸಂಸ್ಥೆ ಮಾಡುತ್ತಿರುವ ಕೆಲಸಕ್ಕೆ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಸಹಕಾರ ನೀಡಬೇಕು ಎಂದು ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ತಾಲ್ಲೂಕು ಯೋಜನಾಧಿಕಾರಿ ಶೇಖರ್ ನಾಯಕ ಮಾತನಾಡಿ,‘ನಮ್ಮೂರು, ನಮ್ಮ ಕೆರೆ ಯೋಜನೆ ಅಡಿ ಧರ್ಮಸ್ಥಳ ಸಂಘದ ವತಿಯಿಂದ ₹25 ಕೋಟಿ ವೆಚ್ಚದಲ್ಲಿ ರಾಜ್ಯದಲ್ಲಿ 300 ಕ್ಕೂ ಹೆಚ್ಚು ಕೆರೆಗಳನ್ನು ಪುನಶ್ಚೇತನಗೊಳಿಸಲಾಗಿದೆ. ಅನಾದಿ ಕಾಲದಲ್ಲಿ ನಿರ್ಮಾಣವಾದ ಕೆರೆಗಳನ್ನು ಗುರುತಿಸಿ, ಸ್ವಚ್ಛಗೊಳಿಸಿ ಅಲ್ಲಿ ನೀರು ನಿಲ್ಲುವಂತೆ ಮಾಡಲಾಗುತ್ತಿದೆ’ ಎಂದರು.

ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶ್ಯಾಮರಾವ್ ಕುಲಕರ್ಣಿ ಮಾತನಾಡಿ,‘ಕೆರೆಗಳಲ್ಲಿನ ಹೂಳು ತೆಗೆದು ಸ್ವಚ್ಛಗೊಳಿಸುವುದರಿಂದ ಮಳೆ ಬಂದಾಗ ಹೆಚ್ಚಿನ ನೀರು ಸಂಗ್ರಹವಾಗುತ್ತದೆ. ಇದರಿಂದ ಜನ ಜಾನುವಾರುಗಳಿಗೆ, ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುತ್ತದೆ’ ಎಂದು ಹೇಳಿದರು.

ಜನಜಾಗೃತಿ ವೇದಿಕೆ ಅಧ್ಯಕ್ಷ ವೀರೇಶ ಬಂಗಾರಶೆಟ್ಟರ ಮಾತನಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಕಳಕಪ್ಪ ಕಾಡದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಗ್ರಾ.ಪಂ ಸದಸ್ಯರಾದ ಸಂಗಪ್ಪ ಕುಂಬಾರ, ಗೀತಾ ವಾಲಿಕಾರ, ಅಭಿವೃದ್ಧಿ ಅಧಿಕಾರಿ ಪ್ರಶಾಂತ ಹಿರೇಮಠ, ಯೋಜನೆಯ ಎಂಜಿನಿಯರ್ ಹರೀಶ, ಒಕ್ಕೂಟದ ಅಧ್ಯಕ್ಷ ಈಶ್ವರಪ್ಪ, ಕೃಷಿ ಮೇಲ್ವಿಚಾರಕ ರವಿಚಂದ್ರ, ಜ್ಞಾನವಿಕಾಸ ಯೋಜನೆಯ ತಾಲ್ಲೂಕು ಸಮನ್ವಯಾಧಿಕಾರಿ ಶಿವಲೀಲಾ, ವಲಯ ಮೇಲ್ವಿಚಾರಕ ಶಾಂತಮೂರ್ತಿ, ಸೇವಾ ಪ್ರತಿನಿಧಿಗಳಾದ ಸುವರ್ಣಮ್ಮ, ಶರಣಗೌಡ, ಹುಲಿಗೆಮ್ಮ, ಚನ್ನಬಸಯ್ಯ, ಶಿವರಾಜ ಹಾಗೂ ಮಲ್ಲಿಕಾರ್ಜುನ ಇದ್ದರು.

ಶಾಂತಮೂರ್ತಿ ಸ್ವಾಗತಿಸಿದರು. ರವಿಚಂದ್ರ ನಿರ್ವಹಿಸಿದರು ಹಾಗೂ ಸಂಗಪ್ಪ ವಾಲಿಕಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT