ಶುಕ್ರವಾರ, ಜುಲೈ 30, 2021
28 °C
ಅಂತರ್ಜಲ ಚೇತನ ಯೋಜನೆಗೆ ಚಾಲನೆ ನೀಡಿದ ಸಚಿವ ಕೆ.ಎಸ್.ಈಶ್ವರಪ್ಪ

ನೀರಿನ ಸಮಸ್ಯೆ ಪರಿಹಾರಕ್ಕೆ ಆದ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ‘ಕೆರೆ ಅಭಿವೃದ್ಧಿ, ಸಸಿ ನೆಡುವಿಕೆ ಮುಂತಾದ ಅಂತರ್ಜಲ ಅಭಿವೃದ್ಧಿ ಕಾಮಗಾರಿಗಳಿಂದ ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ದೊರೆಯುವುದರ ಜೊತೆಗೆ ಗ್ರಾಮಗಳಿಗೆ ಶಾಶ್ವತ ನೀರಿನ ಪರಿಹಾರವನ್ನು ಒದಗಿಸಬಹುದು‘ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಮಂಗಳವಾರ ಜಿಲ್ಲಾ ಪಂಚಾಯಿತಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆಯಿಂದ  ನರೇಗಾ ಯೋಜನೆ ಅಡಿ ಆರ್ಟ್ ಆಫ್ ಲಿವಿಂಗ್‌ನ ಸಹಭಾಗಿತ್ವದಲ್ಲಿ ನಡೆದ ಅಂತರ್ಜಲ ಚೇತನ ಯೋಜನೆ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. 

ನರೇಗಾ ಯೋಜನೆಯಡಿ ಅತಿ ಹೆಚ್ಚು ಕಾಮಗಾರಿಗಳು, ಹೆಚ್ಚು ಮಾನವ ದಿನಗಳ ಸೃಜನೆ ಮತ್ತು ಹೆಚ್ಚಿನ ಉದ್ಯೋಗ ಸೃಷ್ಟಿಯಲ್ಲಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕು ರಾಜ್ಯದಲ್ಲಿಯೇ ಮೊದಲ ಸ್ಥಾನ ಹಾಗೂ ಯಲಬುರ್ಗಾ ನಾಲ್ಕನೆ ಸ್ಥಾನದಲ್ಲಿ ಇರುವ ಮೂಲಕ ಉತ್ತಮ ಸಾಧನೆ ಮಾಡಿದೆ ಎಂದರು. 

ಬದು ನಿರ್ಮಾಣ, ಚೆಕ್ ಡ್ಯಾಮ್‌ಗಳ ನಿರ್ಮಾಣ, ಕೃಷಿ ಹೊಂಡ ಮುಂತಾದ ರೈತರ ವೈಯಕ್ತಿಕ ಮತ್ತು ಸಮುದಾಯಿಕ ಕಾಮಗಾರಿಗಳ ಮೂಲಕ ರಾಜ್ಯದಲ್ಲಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಜಿಲ್ಲೆಯ ಹೊಲಗಳಲ್ಲಿ ಬದು ನಿರ್ಮಾಣ ಕಾಮಗಾರಿ ಜೊತೆ ಜೊತೆಗೆ ಬದುಗಳ ಪಕ್ಕದಲ್ಲಿ ಸಸಿಗಳನ್ನು ನೆಡಬೇಕು. ಹೆಚ್ಚಿನ ಪ್ರಮಾಣದಲ್ಲಿ ಸಸಿಗಳನ್ನು ನೆಡುವುದರಿಂದ ಅರಣ್ಯೀಕರಣ ಹೆಚ್ಚಾಗಿ ಮಣ್ಣಿನ ಸವಕಳಿ ಕಡಿಮೆಯಾಗುವುದರ ಜೊತೆಗೆ ಮಳೆ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಹಿಡಿದಿಟ್ಟುಕೊಳ್ಳುವುದರಿಂದ ಭೂಮಿಯಲ್ಲಿ ಅಂತರ್ಜಲದ ಮಟ್ಟವೂ ಸಹಜವಾಗಿ ಹೆಚ್ಚಳವಾಗುತ್ತದೆ ಎಂದರು. 

ಆಟ್ ಆಫ್ ಲಿವಿಂಗ್ ಸಂಸ್ಥೆ ಸರ್ಕಾರದಿಂದ ಯಾವುದೇ ಹಣಕಾಸಿನ ನೆರವು ಪಡೆಯದೆ ರಾಜ್ಯಾದ್ಯಂತ ಅಂತರ್ಜಲ ಪುನಶ್ಚೇತನ ಕಾರ್ಯಕ್ಕೆ ಸೂಕ್ತ ರೂಪುರೇಷೆಗಳನ್ನು, ತಾಂತ್ರಿಕ ಸಾಧ್ಯತೆಗಳನ್ನು ಒದಗಿಸಿ ಯೋಜನೆಗೆ ಬೆನ್ನೆಲುಬಾಗಿದ್ದಾರೆ. ಜಿಲ್ಲೆಗೆ ಅಗತ್ಯವಿರುವ ಅಂತರ್ಜಲ ಪುನಶ್ಚೇತನಕ್ಕೆ ಬೇಕಾದ ಎಲ್ಲಾ ಸೂಕ್ತ ಸಲಹೆ, ನೆರವನ್ನು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯವರಿಂದ ಪಡೆಯಿರಿ. ಸಂಸ್ಥೆಯವರ ಅನುಭವವನ್ನು ಅಧಿಕಾರಿಗಳು ಕಾರ್ಯರೂಪಕ್ಕೆ ತರಬೇಕಿದೆ ಎಂದು ಹೇಳಿದರು.

ಅಂತರ್ಜಲ ಚೇತನ ಯೋಜನೆ ಸರ್ಕಾರದ್ದು ಎಂಬ ಭಾವನೆ ಬಿಟ್ಟು ವೈಯಕ್ತಿಕ ಆಸಕ್ತಿಯಿಂದ ನಿಮ್ಮ ವ್ಯಾಪ್ತಿಯ ಗ್ರಾಮ, ತಾಲ್ಲೂಕುಗಳಿಗೆ ಶಾಶ್ವತ ನೀರಿನ ಪರಿಹಾರ ಒದಗಿಸಲು ಶ್ರಮಿಸಬೇಕಿದೆ. ಇದರಲ್ಲಿ ಚುನಾಯಿತ ಪ್ರತಿನಿಧಿಗಳ ಹಸ್ತಕ್ಷೇಪವಿರುವುದಿಲ್ಲ ಎಂದು ಅಧಿಕಾರಿಗಳಿಗೆ ಭರವಸೆ ನೀಡಿದರು. 

ಸಂಸದ ಸಂಗಣ್ಣ ಕರಡಿ ಮಾತನಾಡಿ, ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ನರೇಗಾದ ಆಯುಕ್ತ ಅನಿರುದ್ಧ ಶ್ರವಣ್, ಆರ್ಟ್ ಆಫ್ ಲಿವಿಂಗ್‌ನ ಕಾರ್ಯ ನಿರ್ವಾಹಕ ನಿರ್ದೇಶಕ ನಾಗರಾಜ ಗಂಗೊಳ್ಳಿ ಮಾತನಾಡಿದರು. 

ಕಾರ್ಯಕ್ರಮದಲ್ಲಿ ನರೇಗಾ ಯೋಜನೆ ಯಶಸ್ವಿಯಾಗಿ ನಿರ್ವಹಿಸಿದ ಅಧಿಕಾರಿಗಳಿಗೆ ಸನ್ಮಾನಿಸಲಾಯಿತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ವಿಶ್ವನಾಥ ರೆಡ್ಡಿ, ಶಾಸಕರಾದ ಹಾಲಪ್ಪ ಆಚಾರ್, ಪರಣ್ಣ ಮುನವಳ್ಳಿ, ಬಸವರಾಜ ದಢೇಸೂಗೂರು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಬಾಲಚಂದ್ರನ್, ಜಿಲ್ಲಾ ಪಂಚಾಯಿತಿ ಸಿಇಒ ರಘುನಂದನ್ ಮೂರ್ತಿ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.