ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ಸಾಹಿತ್ಯ ಪ್ರಕಾರಗಳಲ್ಲಿ ಉ.ಕ ಸಾಹಿತಿಗಳ ಸಾಧನೆ

ತಾಯಿ ಪ್ರಕಾಶನದ ರಜತ ಮಹೋತ್ಸವ: ಪುಸ್ತಕ ಬಿಡುಗಡೆ
Last Updated 14 ಮೇ 2019, 14:26 IST
ಅಕ್ಷರ ಗಾತ್ರ

ಕೊಪ್ಪಳ: ಶಿಷ್ಟ ಸಾಹಿತ್ಯದ ಆಚೆಯೂ ಉತ್ತರ ಕರ್ನಾಟಕದ ಸಾಹಿತಿಗಳು ರುಬಾಯಿ, ಗಜಲ್, ಜಪಾನಿ ಸಾಹಿತ್ಯ, ಮರಾಠಿ, ಅನುವಾದ ಸಾಹಿತ್ಯ, ಸಂಶೋಧನೆಯಲ್ಲಿ ವಿಶೇಷ ಸಾಧನೆ ಮಾಡಿದ್ದು, ಅವರನ್ನು ಪರಿಚಯಿಸುವಲ್ಲಿ ನಾವು ಹಿಂದೆ ಬಿದ್ದಿದ್ದೇವೆ ಎಂದು ಹಿರಿಯ ಸಾಹಿತಿ ಡಾ.ಕೆ.ಬಿ.ಬ್ಯಾಳಿ ವಿಷಾದಿಸಿದರು.

ಅವರು ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕುಕನೂರಿನಂತಹಹಿಂದುಳಿದ ಪ್ರದೇಶದಲ್ಲಿ ಜನರಿಗೆ ಸಾಹಿತ್ಯದ ಒಲವು ಹೆಚ್ಚಿಸುವ ದೃಷ್ಟಿಯಿಂದ 25 ವರ್ಷಗಳ ಹಿಂದೆ ತಾಯಿ ಪ್ರಕಾಶನ ಆರಂಭಿಸಲಾಗಿದೆ. 25 ಪುಸ್ತಕಗಳನ್ನು ಬಿಡುಗಡೆ ಮಾಡಿದ್ದೇವೆ. ಅದರಲ್ಲಿ 20 ಪುಸ್ತಕಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆ ನೀಡಿದ್ದೇನೆ. ಇಂತಹ ಪ್ರಕಾಶನದ ರಜತ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಸಾಹಿತ್ಯಿಕ ವಾತಾವರಣ ನಿರ್ಮಾಣ ಮಾಡುವುದು ನಮ್ಮೆಲ್ಲರ ಮಹಾದಾಶೆಯಾಗಿದೆ. ಆದರೆ ಸಹೃದಯರ ಕೊರತೆ ಇದೆ. ಇದರ ಮಧ್ಯೆಯೂ ಉತ್ತಮ ಕಾರ್ಯಕ್ರಮಗಳನ್ನು ಮಾಡಿದ ತೃಪ್ತಿ ಇದೆ ಎಂದು ಹೇಳಿದರು.

ರಜತ ಮಹೋತ್ಸವದ ಪ್ರಯುಕ್ತ ನಾವು ರಚಿಸಿದ ಉಮರನ ಅಧ್ಯಾತ್ಮದಂಗಡಿಯ ರುಬಾಯಿಗಳು (ಅನುವಾದ ಕೃತಿ), ಭಾರತದ ಮೂಲ ನಿವಾಸಿಗಳು, ಮುನಿಯಪ್ಪ ಹುಬ್ಬಳ್ಳಿ ಅವರ ಹಾಯಿಕುಗಳು, ಪ್ರೊ.ಅಲ್ಲಮಪ್ರಭು ಬೆಟದೂರ ಅವರ ರೈತರ ಆತ್ಮಹತ್ಯೆ: ನಾಗರಿಕತೆಗೊಂದು ಕಳಂಕ ಎಂಬ ಪುಸ್ತಕ ಬಿಡುಗಡೆ ಆಗಲಿವೆ ಎಂದು ಹೇಳಿದರು.

ರುಬಾಯಿ ಪಾರ್ಸಿಯ ಅಧ್ಯಾತ್ಮದ ಪ್ರಕಾರವಾಗಿದ್ದು, ಅತ್ಯಂತ ಶ್ರದ್ಧೆಯಿಂದ ಅನುವಾದಿಸಲಾಗಿದೆ. ಈ ಮೊದಲು ಡಿವಿಜಿ, ಬಿ.ಎಂ.ಶ್ರೀಕಂಠಯ್ಯನವರ ಅಳಿಯ ಶಾ ಬಾಬುರಾವ್ ಅವರು ರಚಿಸಿದ್ದರೂ ನಾವು ಪೂರ್ಣಪ್ರಮಾಣದ ರುಬಾಯಿ ಅನುವಾದ ಮಾಡಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ. ಸತತ ಪರಿಶ್ರಮದಿಂದ ರುಬಾಯಿಗಳನ್ನು ಸಂಗ್ರಹಿಸಿ, ಸಂಶೋಧಿಸಿ ನಾನು ಕೃತಿ ರಚನೆ ಮಾಡಿದ್ದೇನೆ ಎಂದು ಹೇಳಿದರು.

19ರಂದು ಕಾರ್ಯಕ್ರಮ: ಮೇ 19ರಂದು ನಗರದ ಹಿಂದಿ ಪ್ರಚಾರ ಸಭಾದ ಬಿಇಡಿ ಕಾಲೇಜಿನ ಸಭಾಂಗಣದಲ್ಲಿ ಬೆಳಿಗ್ಗೆ 11.30 ಗಂಟೆಗೆ ಪುಸ್ತಕ ಬಿಡುಗಡೆ ಕಾರ್ಯಕ್ರಮ ನೆರವೇರಲಿದೆ. ಕಾರ್ಯಕ್ರಮಕ್ಕೆ ಬಳ್ಳಾರಿ ವಲಯ ಐಜಿಪಿ ಎಂ.ನಂಜುಂಡಸ್ವಾಮಿ ಚಾಲನೆ ನೀಡುವರು. ಹಂಪಿ ಕನ್ನಡ ವಿವಿಯ ಬುಡಕಟ್ಟು ಅಧ್ಯಯನ ವಿಭಾಗದ ಡಾ.ಕೆ.ಎಂ.ಮೈತ್ರಿ, ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ರಾಜಶೇಖರ ಮಠಪತಿ ಪುಸ್ತಕ ಬಿಡುಗಡೆ ಮಾಡುವರು. ಸಂಶೋಧಕಿ ಹನುಮಾಕ್ಷಿ ಗೋಗಿ ಅಧ್ಯಕ್ಷತೆ ವಹಿಸುವರು ಎಂದರು.

ಮಧ್ಯಾಹ್ನ 3 ಗಂಟೆಗೆ ಡಾ.ಕೆ.ಬಿ.ಬ್ಯಾಳಿ ಅವರ 'ಮಧು ಮಂದಿರ' ಕೃತಿಯ ಕಾವ್ಯ ಸಂವಾದ ನಡೆಯಲಿದೆ. ಕುಕನೂರಿನ ಮಹಾದೇವ ದೇವರು ಸಾನ್ನಿಧ್ಯ ವಹಿಸಲಿದ್ದಾರೆ. ಹಿರಿಯ ಸಾಹಿತಿ ಎಚ್.ಎಸ್.ಪಾಟೀಲ ಚಾಲನೆ ನೀಡುವರು. ಡಾ.ರಾಜಶೇಖರ ಮಠಪತಿ ಸಂವಾದ ನಡೆಸಿಕೊಡುವರು. ಸಂವಾದದಲ್ಲಿ ಪ್ರೊ.ಗುರುಸ್ವಾಮಿ ಕೊಟ್ಟೂರು, ಪ್ರೊ.ವಿಜಯ ವೈದ್ಯ, ಪ್ರೊ.ಶಿ.ಕಾ.ಬಡಿಗೇರ, ವಿಠ್ಠಪ್ಪ ಗೋರಂಟ್ಲಿ ಪಾಲ್ಗೊಳ್ಳುವರು. ಜಿಲ್ಲೆಯ ಎಲ್ಲ ಹಿರಿಯ, ಕಿರಿಯ ಸಾಹಿತಿಗಳು ಸಂವಾದದಲ್ಲಿ ಭಾಗವಹಿಸುವರು ಎಂದು ಅವರು ವಿವರಿಸಿದರು.

ಬಾಲಪ್ರತಿಭೆ ಅರ್ಜುನ ಇಟಗಿ, ಅಕ್ಷತಾ ಬಣ್ಣದಬಾವಿ, ಅನ್ನಪೂರ್ಣಾ ಮನ್ನಾಪುರ, ಪಾರ್ವತಿ ಮುಲ್ಲಾ, ಮಂಜುನಾಥ ಹರ್ಷಿ ಭಾವಗೀತೆ, ರುಬಾಯಿಗಳನ್ನು ಪ್ರಸ್ತುತ ಪಡಿಸುವರು. ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘ, ಕಾನೂನು ಕಾಲೇಜು, ಎಸ್‌.ಎಸ್‌.ಕಾಲೇಜಿನ, ಅಪ್ಪಳಿಸು ಪತ್ರಿಕಾ ಬಳಗದ ಸಹಕಾರದೊಂದಿಗೆ ಕಾರ್ಯಕ್ರಮ ನಡೆಯಲಿದೆ ಎಂದರು.

ಪತ್ರಕರ್ತ ರುದ್ರಪ್ಪ ಬಂಢಾರಿ, ಹನಮಂತಪ್ಪ ಅಂಡಗಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT