ಕೊಪ್ಪಳ: ಏಳು ವರ್ಷದ ಅವಧಿಯಲ್ಲಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸುಮಾರು ₹ 3,000 ಕೋಟಿಗೂ ಹೆಚ್ಚು ಅನುದಾನ ತರಲಾಗಿದೆ. ಕ್ಷೇತ್ರಕ್ಕೆ ಅತ್ಯವಶ್ಯಕವಿರುವ ಮೂಲಸೌಕರ್ಯ ಕಲ್ಪಿಸುವುದರ ಜೊತೆಗೆ ಶಿಕ್ಷಣ, ಆರೋಗ್ಯ, ನೀರಾವರಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಹೇಳಿದರು.
ತಾಲ್ಲೂಕಿನಹಿರೇಸಿಂದೋಗಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಾದ ಕಾತರಕಿ-ಗೂಡ್ಲಾನೂರ, ಬಿಸರಳ್ಳಿ, ಬಿಕನಳ್ಳಿ, ಡಂಬ್ರಳ್ಳಿ, ಬೂದಿಹಾಳ, ಬೇಳೂರು ಹಾಗೂ ಮೈನಳ್ಳಿ ಗ್ರಾಮಗಳಲ್ಲಿ ಅಂದಾಜು ₹ 2 ಕೋಟಿ ವೆಚ್ಚದ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ತಾಲ್ಲೂಕಿನ ಎಲ್ಲ ಗ್ರಾಮಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಪ್ರತಿ ಗ್ರಾಮಕ್ಕೆ ₹ 2 ಕೋಟಿಯಿಂದ ₹ 10 ಕೋಟಿ ವರೆಗೆ ಅನುದಾನ ನೀಡಲಾಗಿದೆ. ಚರಂಡಿ, ಸಮುದಾಯ ಭವನ, ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣ, ಶಾಲಾ ಕೊಠಡಿ, ಪದವಿ ಕಾಲೇಜು ಕೊಠಡಿ ನಿರ್ಮಾಣ ಕಾಮಗಾರಿ ಹಂತ ಹಂತವಾಗಿ ಪೂರ್ಣಗೊಳಿಸಲಾಗಿದೆ ಎಂದರು.
ಕೊಪ್ಪಳ ನಗರಕ್ಕೆ ಜೆ.ಪಿ. ಮಾರುಕಟ್ಟೆ ನಿರ್ಮಾಣ, ಸುಸಜ್ಜಿತ ತಾಲ್ಲೂಕು ಕ್ರೀಡಾಂಗಣ, ಮಹಿಳಾ ಪದವಿ ಕಾಲೇಜು ಕಟ್ಟಡ, ಪಿ.ಜಿ ಸೆಂಟರ್ ಕಟ್ಟಡ ಹಾಗೂ ₹ 106 ಕೋಟಿ ವೆಚ್ಚದ ಒಂದು ಹೈಟೆಕ್ ಮಲ್ಟಿಸ್ಪೆಷಾಲಿಟಿ ಸಾರ್ವಜನಿಕ ಆಸ್ಪತ್ರೆ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಬಿ.ನಾಗರಳ್ಳಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಾಲಚಂದ್ರನ್, ಎಪಿಎಂಸಿ ಅಧ್ಯಕ್ಷ ನಾಗರಾಜ ಚಳ್ಳೊಳ್ಳಿ,ವೆಂಕನಗೌಡ್ರ ಹಿರೇಗೌಡ್ರ, ವಿರೂಪಾಕ್ಷಪ್ಪ ಬಿಸರಳ್ಳಿ, ಅಕ್ಬರ ಪಾಷಾಪಲ್ಟನ್, ನವೋದಯ ವಿರುಪಣ್ಣ, ಕೃಷ್ಣಾರೆಡ್ಡಿ ಗಲಿಬಿ, ಬಸನಗೌಡ್ರ ಕರೆಡ್ಡಿ, ಷಣ್ಮುಖ ರೆಡ್ಡಿ, ಪರುಶರಾಮ ಕೆರೆಹಳ್ಳಿ, ಗವಿಸಿದ್ದಪ್ಪ ಬೇಳೂರು, ಅಂದಪ್ಪ ನಾಯಕ್, ಶಂಕ್ರಪ್ಪ ಮೈನಳ್ಳಿ, ವಕ್ತಾರ ರವಿ ಕುರಗೋಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.