ಗುರುವಾರ , ಆಗಸ್ಟ್ 5, 2021
23 °C
ಉಪನೊಂದಣಾಧಿಕಾರಿಗಳ ನಿರ್ಧಾರಕ್ಕೆ ಸಾರ್ವಜನಿಕರ ಆಕ್ರೋಶ

ಕೊಪ್ಪಳ | ಸಾಮಾಜಿಕ ಅಂತರಕ್ಕೆ ಸಿಮೆಂಟ್‌ ರಿಂಗು: ಬೀಳ್ತಿದ್ದಾರೆ ಸಾರ್ವಜನಿಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಅಂತರ ಕಾಪಾಡಲು ಸರ್ಕಾರ ಸಾಮಾಜಿಕ ಜಾಗೃತಿ ಮೂಡಿಸಲು ಮಾಧ್ಯಮಗಳ ಮೂಲಕ ಪ್ರತಿನಿತ್ಯ ಬಗೆಬಗೆಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ವಿವಿಧ ಸಂಘ, ಸಂಸ್ಥೆಗಳು ಈವರೆಗೆ ಹಲವಾರು ವಿಧದ ಕ್ರಮಗಳನ್ನು ಕೈಗೊಂಡು ಪ್ರಶಂಸೆಗೆ ಒಳಗಾಗಿವೆ. ಇನ್ನೂ ಕೆಲವು ಟೀಕೆಗೂ ಗುರಿಯಾಗಿವೆ.

ಕೋವಿಡ್‌-19 ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸರ್ಕಾರ ಆದೇಶಿಸಿದೆ. ಇದಕ್ಕಾಗಿ ಹೆಚ್ಚು ಜನ ಭೇಟಿ ನೀಡುವ ಅಂಗಡಿಗಳು, ಕಚೇರಿಗಳ ಹೊರಗೆ ಸಾಮಾನ್ಯವಾಗಿ ನೆಲದಲ್ಲಿ ಮೂರು ಅಡಿಗೊಂದರಂತೆ ಬಾಕ್ಸ್‌ಗಳ ಚಿತ್ರ ಬರೆಯುತ್ತಾರೆ. ಜನ ಆ ಬಾಕ್ಸಿನಲ್ಲಿ ನಿಂತು, ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಅಧಿಕಾರಿ ನೆಲದಡಿ ತೊಟ್ಟಿ ನಿರ್ಮಿಸಲು ಬಳಕೆಯಾಗುವ ಸಿಮೆಂಟ್‌ ರಿಂಗ್‌ಗಳನ್ನು ಕಚೇರಿಯ ಒಳಗೇ ಹಾಕಿಸಿ, ಸಾಮಾಜಿಕ ಅಂತರ ಕಾಪಾಡುವಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ. 

ಕೊಪ್ಪಳ ಜಿಲ್ಲೆಯ ಉಪನೊಂದಣಾಧಿಕಾರಿ ಕಚೇರಿ ಅಧಿಕಾರಿ ರುದ್ರಮೂರ್ತಿ ಅಂತರ ಕಾಪಾಡುವ ನಿಟ್ಟಿನಲ್ಲಿ ಬೃಹತ್‌ ಗಾತ್ರದ ಸಿಮೆಂಟ್‌ ರಿಂಗ್‌ಗಳನ್ನು ತಮ್ಮ ಕಚೇರಿಯಲ್ಲಿ ಹಾಕಿಸಿದ್ದಾರೆ. ಇದರಿಂದ ನಗರದ ತಹಶೀಲ್ದಾರ್‌ ಕಚೇರಿ ಆವರಣದಲ್ಲಿರುವ ಈ ಕಚೇರಿಗೆ ಭೇಟಿ ನೀಡುವ ಜನರು ಮೊಣಕಾಲುದ್ದದ ರಿಂಗುಗಳಲ್ಲಿ ನಿಂತು ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.

ಸದಾ ಜನರಿಂದ ತುಂಬಿರುವ ಈ ಕಚೇರಿಯಲ್ಲಿ ಉಪನೊಂದಣಾಧಿಕಾರಿ ತಮ್ಮ ಚೇಂಬರ್‌ನಿಂದ ಕಛೇರಿಯ ಹೊರಹೋಗುವವರೆಗೂ ಸಾಲಾಗಿ ಇಂತಹ ಸಿಮೆಂಟ್‌ ರಿಂಗುಗಳನ್ನು ಹಾಕಿಸಿದ್ದಾರೆ. ಸಾಮಾಜಿಕ ಅಂತರ ಕಾಪಾಡುವುದು ಅವರ ಈ ಕ್ರಮದ ಹಿಂದಿನ ಉದ್ದೇಶವಾಗಿದೆ. ಆದರೆ ಇದರಿಂದ ‌ವಯಸ್ಸಾದವರು, ಅಂಗವಿಕಲರು, ಮಹಿಳೆಯರು ಸಾಕಷ್ಟು ಕಷ್ಟ ಅನುಭವಿಸುತ್ತಿದ್ದಾರೆ.

ಸಾರ್ವಜನಿಕರು ಈ ರಿಂಗುಗಳನ್ನು ದಾಟಲಾಗದೆ ಬಿದ್ದು ಗಾಯಗೊಂಡಿರುವ ಹಲವು ಘಟನೆಗಳು ಈಗಾಗಲೇ ನಡೆದಿವೆ. ಸಾಕಷ್ಟು ಅಪಾಯವನ್ನು ತಂದೊಡ್ಡುತ್ತಿರುವ ಈ ಕ್ರಮವನ್ನು ಸರ್ಕಾರಿ ಅಧಿಕಾರಿ ಮುಂದುವರೆಸಿರುವುದಕ್ಕೆ ಸಾರ್ವಜನಿಕ ವಲಯದಿಂದ ಟೀಕೆಗಳು ಕೇಳಿಬಂದಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು