ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ ಅರಸರ ಕಾಲದಿಂದ ಖ್ಯಾತಿ ಗಳಿಸಿದ್ದ ಕಿನ್ನಾಳ ಗೊಂಬೆಗಳ ತಯಾರಿಕೆ ಸ್ಥಗಿತ

ಸ್ಥಳೀಯವಾಗಿ ಲಭ್ಯವಾಗದ ಪೊಳಕಿ, ಟಣಕಿನ ಮರ; ಕಲೆಯ ಮೂಲ ಸೌಂದರ್ಯಕ್ಕೆ ಆಪತ್ತು
Last Updated 14 ಜನವರಿ 2023, 6:42 IST
ಅಕ್ಷರ ಗಾತ್ರ

ಕೊಪ್ಪಳ: ಕಟ್ಟಿಗೆಯ ತೀವ್ರ ಅಭಾವ ಎದುರಾದ ಕಾರಣ ವಿಜಯನಗರ ಅರಸರ ಕಾಲದಿಂದಲೂ ಖ್ಯಾತಿ ಹೊಂದಿರುವ ಕೊಪ್ಪಳ ತಾಲ್ಲೂಕಿನ ಕಿನ್ನಾಳ ಗ್ರಾಮದ ಪ್ರಮುಖವಾದ ಕಿಸುಗಲ್‌ ಗೊಂಬೆಗಳ ತಯಾರಿಕಾ ಕೆಲಸ ಸ್ಥಗಿತಗೊಂಡಿದೆ.

ಕಿನ್ನಾಳ ಕಲೆಯೆಂದರೆ ಕಿಸುಗಲ್‌ ಗೊಂಬೆಗಳೇ ಪ್ರಮುಖ. ಇವುಗಳನ್ನು ತಯಾರು ಮಾಡಲು ಮೂಲವಾಗಿ ಪೊಳಕಿ ಮರ ಹಾಗೂ ಟಣಕಿನ ಮರದ ಹಗುರವಾದ ಕಟ್ಟಿಗೆಗಳು ಬೇಕು. ಸೆಣಬು ನೆನಸಿ ತುಂಡುಗಳಾಗಿ ಕತ್ತರಿಸಿ, ಒಣಗಿಸಿ ಪುಡಿ ಮಾಡುತ್ತಾರೆ. ಕಟ್ಟಿಗೆಯ ಪುಡಿ ಮತ್ತು ಹುಣಸೆ ಬೀಜದ ಪೇಸ್ಟಿನೊಂದಿಗೆ ಬೆರೆಸಿ ಕಿಟ್ಟಾ ತಯಾರಿಸುತ್ತಾರೆ. ಕಟ್ಟಿಗೆ ಪುಡಿಯನ್ನು ನೀರಿನಲ್ಲಿ ಕಲಿಸಿ ಹದಗೊಳಿಸಿ ಉಂಡೆಗಳಾಗಿ ಮಾಡಿ ಒಣಗಿಸುತ್ತಾರೆ. ಆಕೃತಿಗಳನ್ನು ಜೋಡಿಸಿದ ನಂತರ ಕಿಟ್ಟಾ ಹಚ್ಚಲಾಗುತ್ತದೆ.

ಈ ಮರದ ಕಟ್ಟಿಗೆಗಳು ಜಿಲ್ಲೆಯ ಜಬ್ಬಲಗುಡ್ಡ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಮಾತ್ರ ಸಿಗುತ್ತವೆ. ಅರಣ್ಯ ಇಲಾಖೆ ಇವುಗಳನ್ನು ನೀಡದ ಕಾರಣ ಕಿನ್ನಾಳ ಗೊಂಬೆಗಳನ್ನು ತಯಾರಿಸುವ ಕಲಾವಿದರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೂಲ ಕಲೆಯಾದ ಗೊಂಬೆಗಳ ತಯಾರಿಕೆ ಹೊರತುಪಡಿಸಿ
ಅಲಂಕಾರಿಕ ಕಲಾಕೃತಿಗಳ ತಯಾರಿಕೆ ಮೊರೆ ಹೋಗಿದ್ದಾರೆ. ಎರಡು ವರ್ಷಗಳ ಹಿಂದೆ ಸಂಗ್ರಹಿಸಿಟ್ಟುಕೊಂಡಿದ್ದ ಕಟ್ಟಿಗೆಗಳನ್ನು ಇದುವರೆಗೆ ಆಸರೆಯಾಗಿದ್ದವು.

ಪ್ರಾಣಿಗಳು, ಪಕ್ಷಿಗಳು, ತರಕಾರಿ, ಹಣ್ಣುಹಂಪಲುಗಳ ರಾಮಾಯಣ, ಮಹಾಭಾರತ, ಸ್ಕಂದಪುರಾಣದ ದೃಶ್ಯಗಳು, ನವಗ್ರಹಗಳು, ಗ್ರಾಮದೇವತೆ ಗಳ ಮೂರ್ತಿ, ಪಲ್ಲಕ್ಕಿ, ಛತ್ರಿ, ಚಾಮರ, ದುರ್ಗಾದೇವಿ, ಕೀಲುಗೌರಿ, ಕೀಲು ಗೊಂಬೆ, ಅಲಂಕಾರಕ್ಕೆ ಬಳಸುವ ಆಟಿಕೆ ಸಾಮಗ್ರಿ ಗಳು, ಆಕಳು, ಆನೆ, ಲಕ್ಷ್ಮಿ, ಸರಸ್ವತಿ, ಗಣೇಶ, ಮತ್ಸ್ಯ, ದ್ವಾರಪಾಲಕರು ಹೀಗೆ ಪುರಾಣದ ಚಿತ್ರಣಗಳನ್ನು ಮಾತ್ರ ತಯಾರಿಸುತ್ತಿದ್ದಾರೆ.

ಜಾಗತಿಕ ಸ್ಪರ್ಶ ಸಿಕ್ಕರೂ ಸಂಕಷ್ಟ: ಕಿನ್ನಾಳ ಕಲೆಗೆ ಈಗ ಜಾಗತಿಕ ಸ್ಪರ್ಶ ಲಭಿಸಿದೆ. ನೇರ ಮಾರುಕಟ್ಟೆಗಿಂತಲೂ ಆನ್‌ಲೈನ್ ವಹಿವಾಟಿಯಲ್ಲಿಯೇ ಹೆಚ್ಚು ಬೇಡಿಕೆ ಹಾಗೂ ಲಾಭ ಲಭಿಸುತ್ತಿದೆ.

ಕಿನ್ನಾಳ ಕಲೆ ರಾಜಮಹಾರಾಜರ ಕಾಲದಿಂದಲೇ ಇದ್ದರೂ ಇತ್ತೀಚಿನ ತಲೆಮಾರಿನ ಯುವಜನತೆ ಸಂಪ್ರದಾಯಿಕ ವೃತ್ತಿಗೆ ವಿದಾಯ ಹೇಳಿ ನೌಕರಿ ಅರಸಿ ಬೇರೆ ಊರುಗಳಿಗೆ ಹೋಗಿಬಿಡುತ್ತಿದ್ದರು. ಆದರೆ, ನಾಲ್ಕೈದು ವರ್ಷಗಳಿಂದ ಊರು ಬಿಟ್ಟ ಹೋದ ಯುವಕರೇ ಮಾರುಕಟ್ಟೆಗೆ ಹೊಸ ಆಯಾಮ ಕಂಡುಕೊಂಡಿದ್ದು, ಕೈ ತುಂಬಾ ಕೆಲಸ ಹಾಗೂ ಆರ್ಥಿಕ ಭದ್ರತೆ ಕಂಡುಕೊಂಡಿದ್ದಾರೆ.
ಚಿತ್ರಗಾರ ಸಮಾಜದವರೇ
ಪ್ರಧಾನವಾಗಿ ಮಾಡುತ್ತಿದ್ದ ಕಿನ್ನಾಳ ಕಲೆಯನ್ನು ಆ ಯುವಕರು ಮತ್ತು ಬೇರೆ ಬೇರೆ ಸಂಘ- ಸಂಸ್ಥೆಗಳು ಎಲ್ಲಾ ಸಮಾಜದ ಯುವಜನತೆಗೆ ಹೇಳಿಕೊಡುತ್ತಿದ್ದಾರೆ. ಹೀಗಾಗಿ ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಕಲಾಕೃತಿಗಳನ್ನು ತಯಾರಿಸಲು ಸಾಧ್ಯವಾಗುತ್ತಿದೆ. ಆದರೆ, ಸಂಪನ್ಮೂಲದ ಕೊರತೆ ಯುವ ಕಲಾವಿದರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ಕಿನ್ನಾಳದಲ್ಲಿ ಈ ಕಲೆಯನ್ನೇ ನೆಚ್ಚಿಕೊಂಡ 72 ಕುಟುಂಬಗಳು ಇವೆ. ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವ ಕೆಲ ಬೆರಳೆಣಿಕೆಯಷ್ಟೇ ಕಲಾವಿದರು ಮಾತ್ರ ಅಲ್ಪ ಪ್ರಮಾಣದಲ್ಲಿ ಪೊಳಕಿ ಮರ, ಟಣಕಿನ ಮರಗಳ ಕಟ್ಟಿಗಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದಾರೆ. ಕೆಲ ದಿನಗಳಲ್ಲಿ ಆ ಕಟ್ಟಿಗೆಗಳೂ ಖಾಲಿಯಾದರೆ ಕಿನ್ನಾಳ ಗೊಂಬೆ ಇತಿಹಾಸದ ಪುಟ ಸೇರುವ ಆತಂಕವಿದೆ.

‘ಸಸಿ ಕೊಟ್ಟರೆ ನಾವೇ ಬೆಳೆಸುತ್ತೇವೆ’

ಪೊಳಕಿ ಮರ ಹಾಗೂ ಟಣಕಿನ ಮರದ ಸಸಿಗಳನ್ನು ಅರಣ್ಯ ಇಲಾಖೆಯವರು ಕೊಟ್ಟರೆ ನಾವೇ ಪೋಷಣೆ ಮಾಡಿ ಬೆಳೆಸಿ ಬಳಸಿಕೊಳ್ಳುತ್ತೇವೆ. ಟಾಯ್‌ ಕ್ಲಸ್ಟರ್‌ನಲ್ಲಿ ಈ ಮರದ ಸಸಿಗಳನ್ನು ನೆಡುವ ಕುರಿತು ಆ ಕಂಪನಿಯವರ ಜೊತೆ ಚರ್ಚಿಸಿದ್ದೇವೆ ಎಂದು ಕಿನ್ನಾಳ ಕಲೆಯ ಕಲಾವಿದ ಸಂತೋಷ ಕುಮಾರ್ ಚಿತ್ರಗಾರ ಹೇಳಿದರು.

‘ಕಿನ್ನಾಳ ಗೊಂಬೆಗಳೇ ಜಗತ್ತಿನಾದ್ಯಂತ ಖ್ಯಾತಿ ಹೊಂದಿವೆ. ಮೂಲವಾಗಿ ಅವುಗಳೇ ಸಿಗದಿದ್ದರೆ ಮೂಲ ಕಲೆ ಉಳಿಯುವುದು ಹೇಗೆ? ಕಟ್ಟಿಗಗಳನ್ನು ಒದಗಿಸುವ ಜೊತೆಗೆ ಕಲಾಕೃತಿಗಳನ್ನು ತಯಾ ರಿಸುವ ಕಲಾವಿದರಿಗೆ ಸರ್ಕಾರ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT