ಸೋಮನಾಳ (ಕೊಪ್ಪಳ ಜಿಲ್ಲೆ): ಕರ್ತವ್ಯದಲ್ಲಿದ್ದಾಗ ಯಾದಗಿರಿಯಲ್ಲಿ ಶಂಕಾಸ್ಪದವಾಗಿ ಮೃತಪಟ್ಟ ಪಿಎಸ್ಐ ಪರಶುರಾಮ್ ಪ್ರಕರಣವನ್ನು ಸಿಬಿಐಗೆ ವಹಿಸುವ ಪ್ರಶ್ನೆಯೇ ಇಲ್ಲ ಎಂದು ಗೃಹಸಚಿವ ಜಿ. ಪರಮೇಶ್ವರ್ ಹೇಳಿದರು.
ಕಾರಟಗಿ ತಾಲ್ಲೂಕಿನ ಸೋಮನಾಳ ಗ್ರಾಮಕ್ಕೆ ಬುಧವಾರ ಭೇಟಿ ನೀಡಿ ಪರಶುರಾಮ್ ಕುಟುಂಬಕ್ಕೆ ಸಾಂತ್ವನ ಹೇಳಿದರು. ಬಳಿಕ ಮಾಧ್ಯಮದವರ ಜೊತೆ ಮಾತನಾಡಿ 'ರಾಜಕೀಯ ಕಾರಣಕ್ಕಾಗಿ ವಿರೋಧ ಪಕ್ಷಗಳು ಸಿಬಿಐ ತನಿಖೆಗೆ ಆಗ್ರಹಿಸುತ್ತಿವೆ. ಸಿಬಿಐಗೆ ವಹಿಸುವಷ್ಟು ಪ್ರಕರಣ ಅರ್ಹವಾಗಿಲ್ಲ' ಎಂದರು.
ಘಟನೆಯ ತನಿಖೆಗಾಗಿ ಈಗಾಗಲೇ ಸಿಒಡಿಗೆ ವಹಿಸಲಾಗಿದೆ. ಅವರು ಪರಿಣಾಮಕಾರಿಯಾಗಿ ತನಿಖೆ ಮಾಡುತ್ತಾರೆ. ಅಧಿಕಾರದಲ್ಲಿದ್ದಾಗ ಸಿಒಡಿ ಸಮರ್ಥವಾಗಿದೆ ಎಂದು ಬಿಜೆಪಿಯವರೇ ಹೇಳಿದ್ದರು. ವಿರೋಧ ಪಕ್ಷದ ಸ್ಥಾನಕ್ಕೆ ಬಂದಾಕ್ಷಣ ಸಿಒಡಿ ದುರ್ಬಲವಾಯಿತೇ? ಎಂದು ಪ್ರಶ್ನಿಸಿದರು.
ಪ್ರಾಮಾಣಿಕ ಅಧಿಕಾರಿಯಾಗಿದ್ದ ಪರಶುರಾಮ್ ಸಾವಿನಿಂದಾಗಿ ವೈಯಕ್ತಿಕವಾಗಿ ನನಗೆ ಬಹಳಷ್ಟು ನೋವಾಗಿದೆ. ಅವರ ಕುಟುಂಬದ ಜೊತೆ ನಾವಿದ್ದೇವೆ. ಅವರ ಕುಟುಂಬಕ್ಕೆ ಪೊಲೀಸ್ ಇಲಾಖೆಯಿಂದ ವಿಶೇಷ ಪರಿಹಾರವಾಗಿ ₹50 ಲಕ್ಷ ನೀಡುವ ಕುರಿತು ಮುಖ್ಯಮಂತ್ರಿ ಜೊತೆ ಚರ್ಚಿಸುವೆ. ಪರಶುರಾಮ್ ಪತ್ನಿಗೆ ಸರ್ಕಾರಿ ನೌಕರಿ ನೀಡಲಾಗುವುದು ಎಂದು ಭರವಸೆ ನೀಡಿದರು.
ಸಿಒಡಿ ತಂಡ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕಲೆ ಹಾಕುತ್ತಿದೆ. ತನಿಖೆಯಿಂದ ಪರಶುರಾಮ್ ಕುಟುಂಬಕ್ಕೆ ಸಂಪೂರ್ಣ ನ್ಯಾಯ ಸಿಗುತ್ತದೆ. ಇದನ್ನು ಅವರ ಕುಟುಂಬದವರಿಗೂ ಮನವರಿಕೆ ಮಾಡಿಕೊಡಲಾಗಿದೆ. ಎಫ್ಐಆರ್‌ನಲ್ಲಿ ಉಲ್ಲೇಖವಾಗಿರುವ ಯಾದಗಿರಿ ಶಾಸಕ ಹಾಗೂ ಅವರ ಪುತ್ರನ ವಿರುದ್ಧದ ಆರೋಪ ಸಾಬೀತಾದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.