ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಳವಂಡಿ: ಪಿಯು ಕಾಲೇಜುಗಳಿಗೆ ಬೇಕು ಇನ್ನಷ್ಟು ಸೌಲಭ್ಯ

ಕೊಪ್ಪಳ ತಾಲ್ಲೂಕಿನ ಸರ್ಕಾರಿ ಪಿಯು ಕಾಲೇಜುಗಳಲ್ಲಿ ಸುಸಜ್ಜಿತ ಶೌಚಾಲಯ ಮರೀಚಿಕೆ, ಉಪನ್ಯಾಸಕರ ಕೊರತೆ
ಜುನಾಸಾಬ ವಡ್ಡಟ್ಟಿ, ಗುರುರಾಜ ಅಂಗಡಿ
Published 29 ಜೂನ್ 2024, 5:43 IST
Last Updated 29 ಜೂನ್ 2024, 5:43 IST
ಅಕ್ಷರ ಗಾತ್ರ

ಅಳವಂಡಿ: ಕೊಪ್ಪಳ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳಿಗೆ ಅಳವಂಡಿ ಭಾಗದಲ್ಲಿರುವ ಪದವಿಪೂರ್ವ ಕಾಲೇಜುಗಳು ಸಾಕಷ್ಟು ಅನುಕೂಲ ಕಲ್ಪಿಸಿಕೊಟ್ಟಿದ್ದರೂ ಹಲವು ಸೌಲಭ್ಯಗಳ ಕೊರತೆ ಕಾಡುತ್ತಿದೆ. 

ಅಳವಂಡಿ ಹೋಬಳಿ ವ್ಯಾಪ್ತಿಯಲ್ಲಿ ಎರಡು ಸರ್ಕಾರಿ ಪದವಿಪೂರ್ವ ಕಾಲೇಜುಗಳಿದ್ದು, ಉಪನ್ಯಾಸಕರು ಹಾಗೂ ಶೌಚಾಲಯ ಕೊರತೆಯಿದೆ. ಹಿರೇಸಿಂದೋಗಿ ಹಾಗೂ ಕಾತರಕಿ ಗುಡ್ಲಾನೂರ ಗ್ರಾಮದಲ್ಲಿ ಸರ್ಕಾರಿ ಪಿಯು ಕಾಲೇಜುಗಳಿವೆ. ಹಿರೇಸಿಂದೋಗಿಯಲ್ಲಿ ವಿಜ್ಞಾನ, ಕಲಾ ಹಾಗೂ ವಾಣಿಜ್ಯ ವಿಭಾಗಗಳಿದ್ದು, ಕಾತರಕಿ ಗುಡ್ಲಾನೂರ ಕಾಲೇಜಿನಲ್ಲಿ ಕಲಾ ಹಾಗೂ ವಾಣಿಜ್ಯ ವಿಭಾಗಗಷ್ಟೇ ಇವೆ. ಈ ಎರಡೂ ಕಾಲೇಜುಗಳಿಗೂ ಪ್ರಭಾರ ಪ್ರಾಚಾರ್ಯರೇ ಆಧಾರ.

ಹಿರೇಸಿಂದೋಗಿ ಕಾಲೇಜಿನಲ್ಲಿ 150ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ನಿಯಮದಂತೆ 11 ಕಾಯಂ ಉಪನ್ಯಾಸಕರು ಇರಬೇಕು. ಒಂಬತ್ತು ಜನ ಕಾಯಂ ಇದ್ದು, ಇಬ್ಬರು ಅತಿಥಿ ಉಪನ್ಯಾಸಕರಿದ್ದಾರೆ. ಡಿ ಗ್ರೂಪ್‌ ಸಿಬ್ಬಂದಿ ಕೊರತೆಯೂ ಕಾಡುತ್ತಿದೆ. ಕಾತರಕಿ ಗುಡ್ಲಾನೂರ ಕಾಲೇಜಿನಲ್ಲಿ 107 ಮಕ್ಕಳಿದ್ದು, ನಿಯಮದ ಪ್ರಕಾರ ಏಳು ಜನ ಕಾಯಂ ಉಪನ್ಯಾಸಕರು ಇರಬೇಕು. ಆದರೆ ಮೂವರು ಮಾತ್ರ ಕಾಯಂ ಇದ್ದು, ನಾಲ್ಕು ಜನ ‘ಅತಿಥಿ’ಗಳ ಮೇಲೆ ಕಾಲೇಜು ಅವಲಂಬಿತವಾಗಿದೆ. ಪ್ರಥಮ ದರ್ಜೆ ಸಹಾಯಕರ ಕೊರತೆಯಿದೆ.

ಶೌಚಾಲಯ ಸಮಸ್ಯೆ: ಈ ಎರಡೂ ಕಾಲೇಜುಗಳಲ್ಲಿ ಶೌಚಾಲಯ ಕೊರತೆಯಿದ್ದು, ಹಿರೇಸಿಂದೋಗಿಯಲ್ಲಿ ಶೌಚಾಲಯ ಇಲ್ಲದೇ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಶೌಚಕ್ಕೆ ಬಯಲನ್ನೇ ಅವಲಂಬಿಸಿದ್ದಾರೆ. ಕಾಲೇಜಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವತಿಯರೇ ಇರುವ ಕಾರಣ ಅವರಿಗೆ ಆವರಣದ ಹೊರಗೆ ಹೋಗಬೇಕಾದ ಪರಿಸ್ಥಿತಿ ಇದೆ. ಕುಡಿಯುವ ನೀರಿನ ಸಮಸ್ಯೆಯೂ ಕಾಡುತ್ತಿದೆ. ಈ ಬಗ್ಗೆ ಸ್ಥಳಿಯ ಜನಪ್ರತಿನಿಧಿಗಳು ಹಾಗೂ ಶಿಕ್ಷಣ ಇಲಾಖೆ ಗಮನ ಹರಿಸಬೇಕು ಎನ್ನುವುದು ಜನರ ಆಗ್ರಹ.

ಕಾತರಕಿ ಗುಡ್ಲಾನೂರ ಪಿಯು ಕಾಲೇಜಿನಲ್ಲಿ ಶೌಚಾಲಯ ಇದ್ದರೂ ಇಲ್ಲದಂತಾಗಿದೆ. ನಿರ್ವಹಣೆ ಕೊರತೆ, ವಿದ್ಯುತ್ ಹಾಗೂ ನೀರಿನ ಸೌಲಭ್ಯ ಇಲ್ಲ.

‘ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ನಗರ ಪ್ರದೇಶಗಳನ್ನು ಬಿಟ್ಟು ಸ್ಥಳೀಯ ಕಾಲೇಜು ಅಥವಾ ಸಮೀಪದ ಸರ್ಕಾರಿ ಕಾಲೇಜಿನಲ್ಲಿ ಪ್ರವೇಶಾತಿ ಪಡೆಯುವುದು ಸಾಮಾನ್ಯವಾಗಿದೆ. ಆದರೆ ಸರ್ಕಾರಿ ಕಾಲೇಜುಗಳು ಮೂಲ ಸೌಕರ್ಯಗಳ ಕೊರತೆಯಿಂದ ಬಳಲುತ್ತಿವೆ. ಸರ್ಕಾರಿ ಪಿಯು ಕಾಲೇಜುಗಳ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಪೂರ್ಣ ಪ್ರಮಾಣದ ಉಪನ್ಯಾಸಕರು, ಸಿಬ್ಬಂದಿ ಹಾಗೂ ಮೂಲ ಸೌಲಭ್ಯ ಒದಗಿಸಲು ಜನಪ್ರತಿನಿಧಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು’ ಎಂದು ಎರಡೂ ಗ್ರಾಮಗಳ ಪ್ರಮುಖರು ಹೇಳುತ್ತಾರೆ.

ಕೊಪ್ಪಳ ತಾಲ್ಲೂಕಿನ ಹಿಟ್ನಾಳ ಗ್ರಾಮದಲ್ಲಿ ಸರ್ಕಾರಿ ಪದವಿ ಕಾಲೇಜಿನಲ್ಲಿರುವ ಪಿಯು ಕಾಲೇಜು
ಕೊಪ್ಪಳ ತಾಲ್ಲೂಕಿನ ಹಿಟ್ನಾಳ ಗ್ರಾಮದಲ್ಲಿ ಸರ್ಕಾರಿ ಪದವಿ ಕಾಲೇಜಿನಲ್ಲಿರುವ ಪಿಯು ಕಾಲೇಜು
ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ ಹಾಗೂ ಶೌಚಾಲಯ ಸೇರಿದಂತೆ ಅನೇಕ ಸಮಸ್ಯೆ ಇದ್ದರೂ ಪ್ರತಿವರ್ಷ ಉತ್ತಮ ಫಲಿತಾಂಶ ಕಾಲೇಜು ನೀಡುತ್ತಿದೆ. ಹಂತಹಂತವಾಗಿ ಸಮಸ್ಯೆಗಳನ್ನು ಪರಿಹರಿಸಲಾಗುವುದು.
ವೀರಣ್ಣ ಜೋಗಿನ್ ಪ್ರಭಾರ ಪ್ರಾಚಾರ್ಯ ಸರ್ಕಾರಿ ಪಿಯು ಕಾಲೇಜು ಹಿರೇ‌ಸಿಂದೋಗಿ

ಕಾಲೇಜಿಗೆ ಸ್ವಂತ ಕಟ್ಟಡದ ಕೊರತೆ

ಮುನಿರಾಬಾದ್‌: ಹೋಬಳಿ ಕೇಂದ್ರ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ತವರೂರು ಹಿಟ್ನಾಳ ಗ್ರಾಮದಲ್ಲಿ 2020-21ನೇ ಸಾಲಿನಲ್ಲಿ ಪದವಿಪೂರ್ವ ಕಾಲೇಜು ಆರಂಭವಾದರೂ  ಸ್ವಂತ ಕಟ್ಟಡದ ಭಾಗ್ಯವಿಲ್ಲ. ಪ್ರಥಮ ದರ್ಜೆ ಕಾಲೇಜಿನ (ಪದವಿ ಕಾಲೇಜು) ಮೊದಲ ಮಹಡಿಯಲ್ಲಿ ಪಿಯು ಕಾಲೇಜು ನಡೆಯುತ್ತಿದ್ದು ಇನ್ನೊಂದು ಕೊಠಡಿ ಅಗತ್ಯವಿದೆ. ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ದಾನಿಗಳ ನೆರವಿನಿಂದ ವಿಜ್ಞಾನ ಪ್ರಯೋಗಾಲಯದ ಸಲಕರಣೆಗಳನ್ನು ಖರೀದಿಸಿ ತರಗತಿ ನಡೆಸಲಾಗುತ್ತಿದೆ. ಪ್ರಾಚಾರ್ಯರು ಸೇರಿ ಒಟ್ಟು 11 ಜನ ಬೋಧಕ ಸಿಬ್ಬಂದಿ ಇದ್ದಾರೆ. ಕಳೆದ ವರ್ಷ ಶೇ 49 ಫಲಿತಾಂಶ ದಾಖಲಿಸಿದ್ದು ಈ ವರ್ಷ 27 ಜನ ವಿದ್ಯಾರ್ಥಿಗಳು ಪ್ರಥಮ ಪಿಯು 42 ವಿದ್ಯಾರ್ಥಿಗಳು ದ್ವಿತೀಯ ಪಿಯು ತರಗತಿಗೆ ದಾಖಲಾಗಿದ್ದಾರೆ. ಹೊಸ ಬಂಡಿಹರ್ಲಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜು 2006-07ನೇ ಸಾಲಿನಲ್ಲಿ ಆರಂಭವಾಗಿದ್ದು ಕಲೆ ವಾಣಿಜ್ಯ ಮತ್ತು ವಿಜ್ಞಾನ ವಿಭಾಗ ಹೊಂದಿದೆ. ಸ್ವಂತ ಕಟ್ಟಡ ಸೇರಿದಂತೆ ಮೂಲ ಸೌಕರ್ಯಗಳನ್ನು ಹೊಂದಿದ್ದು ಕಾಲೇಜು ಉತ್ತಮ ಫಲಿತಾಂಶ ಪಡೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT