ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive| ಗಡ್ಡೆಯ ನಂಟು ಕಳೆದುಕೊಂಡ ವಿದೇಶಿಗರು

ಮರೆಯಾದ ವಿರೂಪಾಫುರ ನಡುಗಡ್ಡೆ
Last Updated 5 ಸೆಪ್ಟೆಂಬರ್ 2020, 1:43 IST
ಅಕ್ಷರ ಗಾತ್ರ

ಕೊಪ್ಪಳ: ಗಂಗಾವತಿ ತಾಲ್ಲೂಕಿನ ಐತಿಹಾಸಿಕ ತಾಣ ಆನೆಗೊಂದಿ. ಗ್ರಾಮದ ಸಮೀಪದಲ್ಲಿ ನೂರಾರು ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿರುವ ಈಗ್ರಾಮ ಜಾಗತಿಕ ಪ್ರಸಿದ್ಧಿಯನ್ನೇ ಪಡೆದಿದೆ.

ಪ್ರಾಗೈತಿಹಾಸಿಕ ನೆಲೆಯಿಂದ ಹಿಡಿದು ಆಧುನಿಕ ರೆಸಾರ್ಟ್‌‌ವರೆಗೆ ತನ್ನ ಛಾಪು ಮೂಡಿಸಿದೆ. ಅಗಳಕೇರಿಯಿಂದ ಹಿಡಿದು ಆನೆಗೊಂದಿವರೆಗೆ ನೂರಾರು ಐತಿಹಾಸಿಕ ತಾಣಗಳು, ಸ್ಮಾರಕಗಳು, ಕಲ್ಲು ಬಂಡೆ, ಬೆಟ್ಟ ಗುಡ್ಡ, ಭತ್ತದ ಗದ್ದೆ ತಮ್ಮ ನಿಸರ್ಗ ಸೌಂದರ್ಯದಿಂದ ದೇಶ, ವಿದೇಶ ಪ್ರವಾಸಿಗರನ್ನು ಕೈ ಮಾಡಿ ಕರೆಯುತ್ತಿವೆ.

ಪ್ರತಿವರ್ಷ ಈ ತಾಣಗಳಿಗೆ ಸುಮಾರು 18 ಸಾವಿರ ವಿದೇಶಿ ಪ್ರವಾಸಿಗರು ಭೇಟಿ ನೀಡುತ್ತಿದ್ದರು ಎಂಬ ಅಂಶದ ಮೇಲೆಯೇ ಈ ಭಾಗದ ಜನಪ್ರಿಯತೆಯನ್ನು ಅಳೆಯಬಹುದು.

ಆಸ್ತಿಕರಿಗೆ ಅಂಜನಾದ್ರಿ, ಪಂಪಾ ಸರೋವರ, ದುರ್ಗಾ ದೇವಾಲಯ, ನವವೃಂದಾವನ ಗಡ್ಡೆ ಪ್ರಮುಖವಾದರೆ, ನಿಸರ್ಗಪ್ರಿಯರಿಗೆ ಇಲ್ಲಿನ ಸಣಾಪುರ ಕೆರೆ, ವಿರುಪಾಪುರಗಡ್ಡೆ, ಕಲಾತ್ಮಕ ರೆಸಾರ್ಟ್‌ಗಳು, ಜನ, ಜೀವನ, ಸೂರ್ಯಾಸ್ತ ವೀಕ್ಷಣೆಯ ಸ್ಥಳಗಳು ಸ್ಫೂರ್ತಿಯ ತಾಣವಾಗಿವೆ.

ಗಡ್ಡೆ ತೆರವು: ವಿದೇಶಿಗರಿಗೆ ಸ್ವರ್ಗ ಸದೃಶ್ಯವಾಗಿದ್ದ ವಿರುಪಾಪುರಗಡ್ಡೆಯಲ್ಲಿನ ಅಕ್ರಮ ರೆಸಾರ್ಟ್‌ಗಳನ್ನು ಕೊಪ್ಪಳ ಜಿಲ್ಲಾಡಳಿತ ಮತ್ತು ಹಂಪಿ ಪ್ರಾಧಿಕಾರ ಜಂಟಿಯಾಗಿ ತೆರವುಗೊಳಿಸಿದರು. 150ಕ್ಕೂ ಹೆಚ್ಚು ಅಕ್ರಮ ರೆಸಾರ್ಟ್‌ಗಳು ಇಲ್ಲಿದ್ದವು. ಗಾಂಜಾ ಮಾರಾಟ, ರೇವ್‌ ಪಾರ್ಟಿ ಸೇರಿದಂತೆ ಕೆಲವು ಅಕ್ರಮಗಳು ಈ ಹಿಂದೆ ನಡೆದಿದ್ದವು ಎನ್ನಲಾಗುತ್ತಿದೆ. ಅಲ್ಲದೆ ಗಡ್ಡೆಯೊಳಗೆಏನು ನಡೆಯುತ್ತಿದೆ ಎಂಬುವುದೇ ಸ್ಥಳೀಯರಿಗೆ ಮಾಹಿತಿ ಇರುತ್ತಿರಲಿಲ್ಲ.

ಸತತ ಹೋರಾಟ: ಕೊಪ್ಪಳದ ಈ ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ಪಿ.ಸುನೀಲ್‌ಕುಮಾರ್ ಹಂಪಿ ಪ್ರಾಧಿಕಾರದ ಆಯುಕ್ತರಾಗಿಯೂ ಕೆಲಸ ಮಾಡಿದ್ದರು. ಇಲ್ಲಿಯ ಅಕ್ರಮಗಳ ಬಗ್ಗೆ ಇಂಚಿಂಚೂ ಗೊತ್ತಿತ್ತು. ಸುಪ್ರೀಂಕೋರ್ಟ್‌ವರೆಗೆ ಹೋರಾಡಿ ರೆಸಾರ್ಟ್ ತೆರವುಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು. ಈ ಮುಂಚೆ ಅಧಿಕಾರಶಾಹಿ ಮತ್ತು ರಾಜಕಾರಣಿಗಳ ಕೃಪಾಕಟಾಕ್ಷದಿಂದ ಉದ್ಯಮ ನಿರಾಂತಕವಾಗಿ ನಡೆದುಕೊಂಡು ಬಂದಿತ್ತು.

ಹಂಪಿ ಪರಿಸರದ ವ್ಯಾಪ್ತಿಯಲ್ಲಿ ಕಟ್ಟಡಗಳು ಇರಬಾರದು ಎಂಬ ನಿಯಮ ಜಾರಿಗೆ ಬಂದ ನಂತರ ಈ ನಡುಗಡ್ಡೆಯ ಮೇಲೆ ತೂಗುಕತ್ತಿ ನೇತಾಡಹತ್ತಿತು. ಆದರೂ ಕೂಡಾ ಯಾರೂ ತೆರವುಗೊಳಿಸುವ ಧೈರ್ಯ ಮಾಡಲಿಲ್ಲ. 11 ಜನ ರೆಸಾರ್ಟ್‌ ಮಾಲೀಕರು ಸುಪ್ರೀಂಕೋರ್ಟ್‌ನಲ್ಲಿ ಕೋಟ್ಯಂತರ ಖರ್ಚು ಮಾಡಿ ಕೊನೆಯವರೆಗೆ ಹೋರಾಟ ಮಾಡಿದರೂ ಲಾಭ ದೊರೆಯಲಿಲ್ಲ.

ತೆರವಿಗೆ ಕಾರಣವೇನು?: ಇಲ್ಲಿನ ಅಕ್ರಮಗಳ ಕುರಿತು ಪೊಲೀಸರಿಗೆ ಮಾಹಿತಿ ಇದ್ದರೂ ಕ್ರಮ ಕೈಗೊಳ್ಳುವ 'ರಿಸ್ಕ್‌' ತೆಗೆದುಕೊಳ್ಳುತ್ತಿರಲಿಲ್ಲ. ಸರ್ಕಾರದ ನಿಯಮಾವಳಿ ಪ್ರಕಾರ ರೆಸಾರ್ಟ್‌ ಆರಂಭಿಸುವವರು ಯಾವುದೇ ತೆರಿಗೆ ಸೇರಿದಂತೆ ಮಾಹಿತಿ ನೀಡದೇ ಸಿಕ್ಕ ತುಂಡು ಭೂಮಿಯಲ್ಲಿ ಗುಡಿಸಲು ಹಾಕಿ ವ್ಯಾಪಾರ ವಹಿವಾಟು ನಡೆಸಿ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದರು.

ಅವರಿಗೆ ಗೈಡ್ ಆಗಿ ಸೈಕಲ್, ಬೈಕ್, ಅಟೋ, ಟಂಟಂ ಕೂಡಾ ಬಾಡಿಗೆ ನೀಡುತ್ತಿದ್ದರು. ದೇಶೀಯ ಶೈಲಿಯ ಇಲ್ಲಿನ ರೆಸಾರ್ಟ್‌ಗಳು ವಿದೇಶಿಗರಿಗೆ ಅತ್ಯಂತ ಆಕರ್ಷಣೀಯವಾಗಿ ಕಾಣುತ್ತಿರುವುದರಿಂದ ಸಾವಿರಾರು ಸಂಖ್ಯೆಯಲ್ಲಿ ಬರುತ್ತಿದ್ದರಲ್ಲದೆ ತಿಂಗಳಾನುಗಟ್ಟಲೆ ಇಲ್ಲಿಯೇ ವಾಸ ಮಾಡುತ್ತಿದ್ದರು.

ಇದನ್ನೇ ದುರಪಯೋಗ ಮಾಡಿಕೊಂಡ ಕೆಲವು ರೆಸಾರ್ಟ್‌ ಮಾಲೀಕರು ಅಕ್ರಮ ಚಟುವಟಿಕೆ ನಡೆಸುತ್ತಿರುವುದು ಕಂಡು ಬಂತು. ಕೆಲವು ವಿದೇಶಿ ಪ್ರಜೆಗಳ ಕಣ್ಮರೆ, ಸಾವುಕೂಡಾ ವರದಿಯಾಗಿದ್ದವು. ಇಲ್ಲಿನ ಸೌಂದರ್ಯಕ್ಕೆ ಮನಸೋತು ನಿಶಬ್ಧ ವಾತಾವರಣದಲ್ಲಿ ತಿಂಗಳುಗಟ್ಟಲೆ ವಾಸ ಮಾಡುತ್ತಿದ್ದ ವಿದೇಶಿಗರ ಮೇಲೆ ನಿಗಾ ಇಡುವುದು ಜಿಲ್ಲಾಡಳಿತಕ್ಕೆ ಸವಾಲಿನ ಕೆಲಸವಾಗಿತ್ತು.

ಇಲ್ಲಿರುವ ಖಾಸಗಿ ಜಮೀನು (ಪಟ್ಟಾ) ಹೊಂದಿರುವ ಮಾಲೀಕರು ಕೃಷಿ ಉತ್ಪನ್ನಗಳಿಗಿಂತ ಪ್ರವಾಸೋದ್ಯಮದಲ್ಲಿ ಲಾಭಗಳಿಸಿದ್ದು ಉಂಟು. ಇಲ್ಲಿನ ಪ್ರವಾಸೋದ್ಯಮ ವ್ಯವಸ್ಥಿತ ರೀತಿಯಾಗಿ ಸಾಗದೇ ಎಲ್ಲೆಂದರಲ್ಲಿ ತಲೆ ಎತ್ತಿದ ಹೊಟೇಲ್‌ಗಳಿಂದ ಮತ್ತಷ್ಟು ಅಧ್ವಾನ ತಲೆ ದೋರಿತು. ಇದರಿಂದ ನಿಧಾನವಾಗಿ ವಿದೇಶಿ ಪ್ರವಾಸಿಗರ ಸಂಖ್ಯೆ ಕಡಿಮೆಯಾದರೆ ಸಾಪ್ಟ್ ವೇರ್ ಉದ್ಯೋಗಿಗಳಿಂದ ಮತ್ತೆ ವ್ಯಾಪಾರ ಕುದುರಿತು.

ನಿಸರ್ಗ, ಇತಿಹಾಸ ಅರಿಯುವ ಹೆಸರಿನಲ್ಲಿನಿರಂತರ ಪಾರ್ಟಿಗಳು ವಿರುಪಾಪುರ ನಡುಗಡ್ಡೆಯ ಕಲ್ಲುಬಂಡೆಗಳ ನಡುವೆ ನಡೆಯ ತೊಡಗಿದವು. ಬೆತ್ತಲೆ ಡ್ಯಾನ್ಸ್ ಕೂಡಾ ಮಾಡುತ್ತಾರೆ ಎಂದು ಹೆದರಿ ಸುತ್ತಲಿನ ಗ್ರಾಮದ ಜನತೆ ಗಡ್ಡೆಯತ್ತ ಕಣ್ಣು ಕೂಡಾ ಹಾಯಿಸುತ್ತಿದ್ದಿಲ್ಲ ಎಂಬ ಮಾತು ಕೇಳಿ ಬಂದವು.

ಕೂಡಿಬಂದ ಕಾಲ: ಇಲ್ಲಿನ ಖಾಸಗಿ ಜಮೀನಿನ ಮಾಲೀಕರು ಗುತ್ತಿಗೆ ಆಧಾರದ ಮೇಲೆ ರೆಸಾರ್ಟ್‌ಗಳನ್ನು ನಡೆಸಿಕೊಂಡು ಹೋಗಲು ಅನುಮತಿಯನ್ನು ನೀಡಿದ್ದರು. ಆದರೆ ತುಂಗಭದ್ರಾ ಜಲಾಶಯದಿಂದ ಕಳೆದ ವರ್ಷ 2.50 ಲಕ್ಷ ಕ್ಯೂಸೆಕ್ ನೀರು ನದಿಗೆ ಹರಿಬಿಟ್ಟಾಗ ಹಂಪಿ, ವಿರುಪಾಪುರಗಡ್ಡೆ ಜಲಾವೃತಗೊಂಡವು.

ಜಿಲ್ಲಾಡಳಿತ ಎಚ್ಚರಿಕೆ ನೀಡಿದರೂ ಇಲ್ಲಿಂದ ತೆರವುಗೊಳ್ಳದೆ ಮೋಜುಮಸ್ತಿಯಲ್ಲಿ ತೊಡಗಿದ ರೆಸಾರ್ಟ್‌ ಮಾಲೀಕರ ವರ್ತನೆ ಆಡಳಿತದ ಕೋಪಕ್ಕೆ ಗುರಿಯಾಯಿತು. ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದವರು ಹೆಲಿಕಾಪ್ಟರ್‌ ಮೂಲಕ ಸುಮಾರು 600 ಜನರನ್ನು ರಕ್ಷಣೆ ಮಾಡಿದರು.

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂಕೋರ್ಟ್ ಇಲ್ಲಿನ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿತು. ಯಾವುದೇ ವ್ಯಾಪಾರ-ವಹಿವಾಟು ನಡೆಸದೇ ತಮ್ಮ ಜಮೀನುಗಳಲ್ಲಿ ಕೃಷಿ ಕಾರ್ಯ ಮಾತ್ರ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಿತು.

ಪರಿಣಾಮವಾಗಿ ಜಿಲ್ಲಾಡಳಿತ ಕಠಿಣ ಕಾನೂನು ಕ್ರಮದ ಮೂಲಕ ಇಲ್ಲಿನ ರೆಸಾರ್ಟ್‌ಗಳನ್ನು ತೆರವುಗೊಳಿಸಿತು.

ಹಿಂದೊಮ್ಮೆ 'ಭಾರತೀಯರಿಗೆ ಪ್ರವೇಶವಿಲ್ಲ' ಎಂಬ ನಾಮಫಲಕ ಹಾಕಿ ಧಾರ್ಷ್ಯ ಮೆರೆದಿದ್ದ ವಿರೂಪಾಪುರ ಗಡ್ಡಿಯ ರೆಸಾರ್ಟ್ ಮಾಲೀಕರು ಈಗ ಅಸ್ತಿತ್ವ ಮತ್ತು ಉದ್ಯೋಗಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT