ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ- ಅಕಾಲಿಕ ಮಳೆ: ಧರೆಗುರುಳಿದ ಮಾವು

ಆಲಿಕಲ್ಲು ಮಳೆ: ತೋಟಗಾರಿಕೆ ಬೆಳೆಗಳಿಗೆ ತೀವ್ರ ಹಾನಿ
Last Updated 12 ಮೇ 2022, 4:13 IST
ಅಕ್ಷರ ಗಾತ್ರ

ಕೊಪ್ಪಳ: ಅಕಾಲಿಕ ಮತ್ತು ಆಲಿಕಲ್ಲು ಮಳೆಗೆ ಜಿಲ್ಲೆಯ ವಿವಿಧೆಡೆ ತೋಟಗಾರಿಕೆ ಬೆಳೆಗಳಿಗೆ ತೀವ್ರ ಹಾನಿಯಾಗಿದೆ. ಮಂಗಳವಾರ ರಾತ್ರಿ ಆರಂಭವಾದ ಮಳೆ ಬುಧವಾರ ಕೂಡಾ ಜಿಟಿಜಿಟಿ ಸುರಿಯಿತು.

ಈ ಅಕಾಲಿಕ ಮಳೆಯಿಂದ ಬೇಸಿಗೆ ಕಾಲದ ಹಣ್ಣಿನ ರಾಜನೆಂದೇ ಪ್ರಸಿದ್ಧವಾದ ಮಾವಿನ ಕಾಯಿಗಳು ಮಳೆಗೆ ನೆಲಕ್ಕೆ ಬಿದ್ದಿವೆ. ಇನ್ನೂ ಕೆಲವೇ ದಿನಗಳಲ್ಲಿ ಕೊಯ್ಲಿಗೆ ಬರುತ್ತಿದ್ದ ಮಾವಿನ ಕಾಯಿಗಳು ಜೋರಾದ ಗಾಳಿ, ಆಲಿಕಲ್ಲು ಮಳೆಗೆ ಧರೆಗೆ ಉರುಳಿವೆ. ವರ್ಷ ಬಿಟ್ಟು ವರ್ಷ ಬರುವ ಈ ಮಾವಿನ ಫಸಲು ಈ ಸಾರಿ ಕಾಮನೂರು, ಕಲ್ಲತಾವರಗೇರಾ, ಹಟ್ಟಿ ಸೇರಿದಂತೆ ಕುಷ್ಟಗಿ ರಸ್ತೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಹೂವು, ಕಾಯಿಗಳು ಬಿಟ್ಟಿದ್ದವು. ಜೋರಾದ ಮಳೆಗೆ ನೆಲಕ್ಕೆ ಬಿದ್ದಿದ್ದು, ಬೆಳೆಗಾರರು ಕಂಗಾಲಾಗುವಂತೆ ಮಾಡಿದೆ.

ಸುಮಾರು 200 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಮಾವಿನ ಕಾಯಿಗಳು ಉದುರಿ ಬಿದ್ದರೆ ಕೆಲವು ಕಡೆ ಗಿಡಗಳ ಸಮೇತ ಧರೆಗೆ ಉರುಳಿವೆ. ಅಲ್ಲದೆ ಈ ಭಾಗದಲ್ಲಿ ಬೆಳೆಯುವ ಪಪ್ಪಾಯಿ, ದ್ರಾಕ್ಷಿ ಬೆಳೆಗಳು ಮಣ್ಣುಪಾಲಾಗಿವೆ. ಸತತ ಎರಡು ವರ್ಷ ಕೊರೊನಾದಿಂದ ಮಾರುಕಟ್ಟೆ ಇಲ್ಲದೆ ತೊಂದರೆ ಅನುಭವಿಸಿದ್ದ ರೈತರಿಗೆ ಅಕಾಲಿಕ ಮಳೆ ಮತ್ತೆ ಬರೆ ಎಳೆದಿದೆ.

ಭತ್ತಕ್ಕೂ ಸಂಕಷ್ಟ: ಈಗಾಗಲೇ ಬೇಸಿಗೆ ಭತ್ತ ಕೊಯ್ಲಿಗೆ ಬಂದಿದ್ದು, ತೆನೆಹೊತ್ತು ಕೊಂಡ ಭತ್ತಕ್ಕೆ ಜಿಟಿಜಿಟಿ ಮಳೆ ಮತ್ತು ಗಾಳಿ ಸಂಕಷ್ಟ ತಂದಿದೆ. ಗಂಗಾವತಿ ಮತ್ತು ಹಿಟ್ನಾಳ ಹೋಬಳಿಯಲ್ಲಿ ಭತ್ತದ ಬೆಳೆ ನೆಲಕ್ಕೆ ಒರಗಿದರೆ, ಕೊಯ್ಲು ಮಾಡಿದ ಭತ್ತ ಒಣಗಿಸಲು ಪರದಾಡುವಂತೆ ಆಗಿದೆ.

ಕಳೆದ ಎರಡು ದಿನಗಳಿಂದ ಪ್ರಖರ ಬಿಸಿಲು ಇತ್ತು ಏಕಾಏಕಿ ಬಂದ ಮಳೆಗೆ ಅಪಾರ ಹಾನಿಯಾಗಿದೆ.

ರಸ್ತೆ ಸಂಚಾರ ಬಂದ್: ಮಳೆ ಮತ್ತು ಜೋರಾದ ಗಾಳಿಗೆ ದೊಡ್ಡ ಗಾತ್ರದ ಮರಗಳು ನೆಲಕ್ಕೆ ಬಿದ್ದಿವೆ. ಗಿಣಗೇರಾ ಮತ್ತು ಹಟ್ಟಿ-ಕಾಮನೂರು ರಸ್ತೆಯಲ್ಲಿ ಕೆಲ ಹೊತ್ತು ಸಂಚಾರ ಬಂದ್ ಆಗಿತ್ತು. ಮರಗಳನ್ನು ತೆರವುಗೊಳಿಸಿದ ನಂತರ ಸಂಚಾರ ಆರಂಭವಾಯಿತು.

ಭಾಗ್ಯನಗರದ ಬಡಾವಣೆಯೊಂದರಲ್ಲಿ ಮರ ಕಾರಿನ ಮೇಲೆ ಉರುಳಿ ಬಿದ್ದು ಹಾನಿಗೀಡಾಗಿದೆ. ಗ್ರಾಮೀಣ ಭಾಗದಲ್ಲಿ ಪತ್ರಾಸ್‌ ಮನೆಗಳು, ತೋಟದ ಮನೆಗಳ ಶೀಟ್‌ಗಳು ಹಾರಿ ಹೋಗಿವೆ. ಬೇಸಿಗೆಯ ಮೊದಲ ಮಳೆಯಾಗಿರುವುದರಿಂದ ನಗರದ ಎಲ್ಲ ಚರಂಡಿಗಳು ನೀರಿನಿಂದ ಕಟ್ಟಿಕೊಂಡು ರಸ್ತೆಗೆ ಹರಿದರೆ, ಪ್ರತಿವರ್ಷ ಆಗುವ ಸಮಸ್ಯೆಯಂತೆ ಕೇಂದ್ರ ಬಸ್‌ ನಿಲ್ದಾಣದಲ್ಲಿ ನೀರು ತುಂಬಿಕೊಂಡು ನಿಂತು ದಾರಿಹೋಕರಿಗೆ, ಪ್ರಯಾಣಿಕರಿಗೆ ಸಮಸ್ಯೆಯಾಯಿತು.

ಸ್ಥಳೀಯ ಆಡಳಿತ ಮತ್ತು ಜಿಲ್ಲಾಡಳಿತ ಮುಂಗಾರು ಮಳೆ ಮುನ್ಸೂಚನೆಯ ಯಾವುದೇ ಸಿದ್ಧತೆ ಕೈಗೊಳ್ಳದೇ ಇರುವುದರಿಂದ ನಗರದ ಸ್ವಚ್ಛತೆ ಮತ್ತಷ್ಟು ಸಮಸ್ಯೆಯಾಗಿದೆ. ಜೂನ್‌ ಮೊದಲ ಆರಂಭದಲ್ಲಿ ಬರುವ ಮಳೆ ಅವಧಿಪೂರ್ವದಲ್ಲಿಯೇ ಜಿಲ್ಲೆಗೆ ಆಗಮನವಾಗಿದ್ದು, ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT